ಚೀನಾ ಮೂಲದ ಶಿಯೋಮಿ ಕಂಪನಿಯ 5,551.27 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.
ಶಿಯೋಮಿ ಕಂಪನಿ ಮೊಬೈಲ್ ಫೋನ್, ಸ್ಮಾರ್ಟ್ಫೋನ್ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಕಂಪನಿ. ಇದು ಭಾರತದಲ್ಲಿ 2014ರಿಂದ ಕೆಲಸ ಪ್ರಾರಂಭ ಮಾಡಿದೆ.
ಭಾರತದಲ್ಲಿರುವ ಚೀನಾ ಮೂಲದ ಶಿಯೋಮಿ ಇಂಡಿಯಾ (Xiaomi India) ಕಂಪನಿಗೆ ಸೇರಿದ 5,551.27 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ED) ಜಪ್ತಿ ಮಾಡಿದೆ. ಚೀನಾ ಮೂಲದ ಶಿಯೋಮಿ ಗ್ರೂಪ್ನ ಒಡೆತನದಲ್ಲಿರುವ ಶಿಯೋಮಿ ಇಂಡಿಯಾ ಕಂಪನಿ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) 1999ರ ನಿಯಮಗಳನ್ನು ಉಲ್ಲಂಘನೆ ಮಾಡಿದೆ ಎಂಬ ಆರೋಪದಡಿ ಇ.ಡಿ. ಆಸ್ತಿಯನ್ನು ಮುಟ್ಟುಗೋಲು ಹಾಕಿದೆ. ಈ ವರ್ಷದ ಫೆಬ್ರವರಿಯಲ್ಲಿ ಶಿಯೋಮಿ ಇಂಡಿಯಾ ಕಂಪನಿ ಕಾನೂನು ಬಾಹಿರವಾಗಿ ಹಣ ವರ್ಗಾವಣೆ ಮಾಡಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ತನಿಖೆ ಪ್ರಾರಂಭ ಮಾಡಿತ್ತು.
ಶಿಯೋಮಿ ಕಂಪನಿ ಮೊಬೈಲ್ ಫೋನ್, ಸ್ಮಾರ್ಟ್ಫೋನ್ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಕಂಪನಿ. ಇದು ಭಾರತದಲ್ಲಿ 2014ರಿಂದ ಕೆಲಸ ಪ್ರಾರಂಭ ಮಾಡಿದೆ. 2015ರಿಂದಲೇ ಹಣ ವರ್ಗಾವಣೆ ಕಾರ್ಯ ಪ್ರಾರಂಭ ಮಾಡಿದೆ. ಈ ಕಂಪನಿ 5551.27 ಕೋಟಿಗಳಷ್ಟು ಹಣವನ್ನು ರಾಯಧನದ ರೂಪದಲ್ಲಿ ಶಿಯಾಮಿ ಗ್ರೂಪ್ ಸೇರಿ ಒಟ್ಟು ಮೂರು ವಿದೇಶಿ ಮೂಲದ ಘಟಕಗಳಿಗೆ ರವಾನೆ ಮಾಡಿದೆ ಎಂದು ಹೇಳಲಾಗಿದೆ. ಚೀನಾದಲ್ಲಿರುವ ಮಾತೃಸಂಸ್ಥೆಯ ಸೂಚನೆಯ ಮೇರೆಗೇ ಈ ಹಣವರ್ಗಾವಣೆಯಾಗಿದೆ ಎನ್ನಲಾಗಿದೆ.
ಶಿಯೋಮಿ ಇಂಡಿಯಾವು ಭಾರತದಲ್ಲಿ ಎಂಐ ಎಂಬ ಹೆಸರಿನಲ್ಲಿ ಮೊಬೈಲ್ ಫೋನ್ಗಳ ವ್ಯಾಪಾರ, ವಿತರಣೆ ಮಾಡುತ್ತಿದೆ. ಇದು ಭಾರತದ ಉತ್ಪಾದನಾ ಘಟಕಗಳೇ ತಯಾರಿಸಿದ ಮೊಬೈಲ್ ಸೆಟ್ ಮತ್ತು ಅದಕ್ಕೆ ಸಂಬಂಧಪಟ್ಟ ಉತ್ಪನ್ನಗಳನ್ನು ಖರೀದಿಸುತ್ತಿತ್ತು. ಶಿಯೋಮಿ ಇಂಡಿಯಾ ಯಾವ ಮೂರು ವಿದೇಶಿ ಘಟಕಗಳಿಗೆ ಹಣ ವರ್ಗಾವಣೆ ಮಾಡಿದೆಯೋ, ಅವುಗಳಿಂದ ಯಾವುದೇ ಸೇವೆಯನ್ನೂ ಪಡೆದಿಲ್ಲ, ಏನನ್ನೂ ಖರೀದಿ ಮಾಡಿಲ್ಲ ಎಂದೂ ಇ.ಡಿ. ಹೇಳಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಕೊವಿಡ್-19 ಪ್ರಕರಣಗಳು ಹೆಚ್ಚಳ ಹಿನ್ನೆಲೆ: ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಸರ್ಕಾರದಿಂದ ಗೈಡ್ಲೈನ್ಸ್ ಜಾರಿ
Published On - 3:56 pm, Sat, 30 April 22