ದೆಹಲಿ ಮೇ 31: ಬಿಹಾರ, ಜಾರ್ಖಂಡ್ ಮತ್ತು ಒಡಿಶಾದಲ್ಲಿ ಭಾರೀ ಬಿಸಿಲಿನಿಂದಾಗಿ (Heatwave) ಜನರು ತತ್ತರಿಸಿ ಹೋಗಿದ್ದು ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಇತ್ತ ದೆಹಲಿಯ (Delhi) ಜನರು ಕುಡಿಯುವ ನೀರಿನ ಕೊರತೆಯಿಂದ ಬಳಲುತ್ತಿದ್ದಾರೆ. ನೀರಿಗಾಗಿ ವಾಟರ್ ಸಪ್ಲೈ ಟ್ಯಾಂಕರ್ ಹಿಂದೆ ಕೊಡ, ಬಕೆಟ್ ಹಿಡಿದು ದೆಹಲಿಯ ಮಹಿಳೆಯರು ಓಡುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ನೆರೆಯ ರಾಜ್ಯಗಳಿಂದ ಹೆಚ್ಚುವರಿ ಪೂರೈಕೆ ಕೋರಿ ನಗರಾಡಳಿತ ಈಗಾಗಲೇ ಸುಪ್ರೀಂಕೋರ್ಟ್‌ಗೆ (Supreme Court) ಅರ್ಜಿ ಸಲ್ಲಿಸಿದೆ. ಲೋಕಸಭೆ ಚುನಾವಣೆ ಅಂತಿಮ ಹಂತದಲ್ಲಿದ್ದು, ಶನಿವಾರದಂದು ಅಂತಿಮ ಹಂತದ ಮತದಾನ ನಡೆಯಲಿರುವ ಹೊತ್ತಿನಲ್ಲಿ ದೇಶದಲ್ಲಿ ತಾಪಮಾನ ಮತ್ತಷ್ಟು ಏರಿಕೆ ಆಗಲಿದ.
ನಾಗ್ಪುರದ ಸ್ವಯಂಚಾಲಿತ ಹವಾಮಾನ ಕೇಂದ್ರ (AWS) ಗರಿಷ್ಠ ತಾಪಮಾನ 56 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ. ವರದಿಯ ಪ್ರಕಾರ, ರಾಮದಾಸಪೇಠದಲ್ಲಿರುವ ಡಾ. ಪಂಜಾಬರಾವ್ ದೇಶಮುಖ ಕೃಷಿ ವಿದ್ಯಾಪೀಠಕ್ಕೆ ಸೇರಿದ 24 ಹೆಕ್ಟೇರ್ ಮುಕ್ತ ಕೃಷಿ ಕ್ಷೇತ್ರದ ಮಧ್ಯದಲ್ಲಿ ಎಡಬ್ಲ್ಯೂಎಸ್ ಇದೆ. ಆದಾಗ್ಯೂ, ನಾಗ್ಪುರದಲ್ಲಿ ಗರಿಷ್ಠ ತಾಪಮಾನದ ಬಗ್ಗೆ ಐಎಂಡಿ ಯಾವುದೇ ದೃಢೀಕರಣವನ್ನು ನೀಡಿಲ್ಲ.
ಭಾರತ ಹವಾಮಾನ ಇಲಾಖೆ (IMD) ಪ್ರಕಾರ, ದೆಹಲಿಯಲ್ಲಿ ಗರಿಷ್ಠ ತಾಪಮಾನವು ಪ್ರಸ್ತುತ 45.4 ಡಿಗ್ರಿ ಸೆಲ್ಸಿಯಸ್ ಆಗಿದೆ. ಐಎಎಡಿ ಹಗಲು ಹೊತ್ತು ದೆಹಲಿಯಲ್ಲಿ ತುಂತುರು ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ. ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪವರ್ ಡಿಸ್ಕಾಮ್‌ಗಳು ತಮ್ಮ ಸುಧಾರಿತ-ತಂತ್ರಜ್ಞಾನ ಟ್ರಾನ್ಸ್‌ಫಾರ್ಮರ್‌ಗಳ ಮೇಲೆ ನಿರಂತರ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳುತ್ತಿವೆ, ನಗರದಲ್ಲಿ ತಾಪಮಾನ ಏರಿಕೆಯಿಂದಾಗಿ ವಿದ್ಯುತ್ತಿನ ಗರಿಷ್ಠ ಬೇಡಿಕೆಯು ಸುಮಾರು 8,000 MW ಆಗಿದೆ. ನೈಋತ್ಯ ಮಾನ್ಸೂನ್ ಈಶಾನ್ಯ ಬಂಗಾಳ ಕೊಲ್ಲಿಯ ಉಳಿದ ಭಾಗಗಳು ಮತ್ತು ವಾಯುವ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳು, ತ್ರಿಪುರಾ, ಮೇಘಾಲಯ, ಅಸ್ಸಾಂ ಮತ್ತು ಉಪ-ಹಿಮಾಲಯದ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನ ಹೆಚ್ಚಿನ ಭಾಗಗಳಲ್ಲಿ ಮುಂದುವರೆದಿದೆ ಎಂದು ಐಎಂಡಿ ಹೇಳಿದೆ.
ಮುಂದಿನ ಅವಧಿಯಲ್ಲಿ ನೈಋತ್ಯ ಮಾನ್ಸೂನ್ ಮಧ್ಯ ಅರೇಬಿಯನ್ ಸಮುದ್ರದ ಇನ್ನೂ ಕೆಲವು ಭಾಗಗಳು, ದಕ್ಷಿಣ ಅರೇಬಿಯನ್ ಸಮುದ್ರದ ಉಳಿದ ಭಾಗಗಳು, ಲಕ್ಷದ್ವೀಪ ಪ್ರದೇಶ, ಕೇರಳ, ಕರ್ನಾಟಕದ ಕೆಲವು ಭಾಗಗಳು, ತಮಿಳುನಾಡಿನ ಕೆಲವು ಭಾಗಗಳು ಮತ್ತು ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಮತ್ತಷ್ಟು ಮಳೆಗೆ ಕಾರಣವಾಗಲಿದೆ.
ಮಧ್ಯಪ್ರದೇಶವು ತೀವ್ರವಾದ ಶಾಖದ ಅಲೆಯಲ್ಲಿ ತತ್ತರಿಸುತ್ತಲೇ ಇದೆ. ಸಿಧಿ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 48.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಛತ್ತರ್‌ಪುರದ ಖಜುರಾಹೊದಲ್ಲಿ ತಾಪಮಾನ 47 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.ರಾಜ್ಯದಲ್ಲಿ ಬಿಸಿಲಿನ ಬೇಗೆಯಿಂದ ಸಂಭವಿಸಿದ ಸಾವುಗಳ ಕುರಿತು ರಾಜಸ್ಥಾನ ಹೈಕೋರ್ಟ್ ಸ್ವಯಂ ಪ್ರೇರಿತ ವಿಚಾರಣೆಗೆ ಒಳಪಡಿಸಿದೆ. ಶಾಖದ ಅಲೆಗಳು ಮತ್ತು ಶೀತ ಅಲೆಗಳನ್ನು “ರಾಷ್ಟ್ರೀಯ ವಿಪತ್ತುಗಳು” ಎಂದು ಘೋಷಿಸುವ ಅವಶ್ಯಕತೆಯಿದೆ ಎಂದು ನ್ಯಾಯಾಲಯ ಹೇಳಿದೆ.
ಲೋಕಸಭೆ ಚುನಾವಣೆ ಕರ್ತವ್ಯದಲ್ಲಿದ್ದ ಕಾರ್ಮಿಕ ಸೇರಿದಂತೆ ಬಿಹಾರದಲ್ಲಿ ಕನಿಷ್ಠ 19 ಜನರು ಬಿಸಿಗಾಳಿಯಿಂದ ಸಾವಿಗೀಡಾಗಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ. ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಿರ್ಸತ್ ಕಪಿಲ್ ಅಶೋಕ್, “ನಾಳೆ 43 ಲಕ್ಷಕ್ಕೂ ಹೆಚ್ಚು ಮತದಾರರು ಮತದಾನ ಮಾಡಲಿದ್ದಾರೆ. ಬಿಸಿಗಾಳಿಯ ಹಿನ್ನೆಲೆಯಲ್ಲಿ ವಿವಿಧೆಡೆ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ತೀವ್ರವಾದ ಶಾಖದ ಅಲೆಯಿಂದಾಗಿ, ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಮೆಲ್ಘಾಟ್ ಪ್ರದೇಶದ ಹಲವಾರು ಹಳ್ಳಿಗಳು ತೀವ್ರ ನೀರಿನ ಬಿಕ್ಕಟ್ಟನ್ನು ಅನುಭವಿಸುತ್ತಿವೆ. ನಿವಾಸಿಗಳು ಕಲುಷಿತ ಮೂಲಗಳಿಂದ ನೀರನ್ನು ಸಂಗ್ರಹಿಸಲು ಒತ್ತಾಯಿಸುತ್ತಿದ್ದಾರೆ. ಮರಿಯಂಪುರ ಗ್ರಾಮದ ನಿವಾಸಿಗಳು ಕಲುಷಿತ ಕೊಳದ ದಡದಲ್ಲಿ ಹೊಂಡ ತೋಡಿ ಕುಡಿಯುವ ನೀರು ಸಂಗ್ರಹಿಸಲು ಒತ್ತಾಯಿಸಲಾಗಿದೆ ಎಂದು ಎಎನ್‌ಐಗೆ ತಿಳಿಸಿದ್ದಾರೆ
ರಾಜ್ಯದಲ್ಲಿ 100 ಕ್ಕೂ ಹೆಚ್ಚು ಜನರು ಬಿಸಿಲಿನ ಝಳಕ್ಕೆ ಸಾವಿಗೀಡಾಗುತ್ತಿದ್ದಾರೆ ಎಂದು ಹೇಳುತ್ತಿರುವಾಗ ರಾಜ್ಯದಲ್ಲಿ ಬಿಸಿಲಿನ ತೀವ್ರತೆಯಿಂದ ಉಂಟಾದ ಸಾವಿನ ಸಂಖ್ಯೆಯನ್ನು ಬಿಜೆಪಿ ನೇತೃತ್ವದ ರಾಜಸ್ಥಾನ ಸರ್ಕಾರವು ತಿರುಚುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಐವರು ಬಿಸಿಲಿನಿಂದಾಗಿ ಸಾವಿಗೀಡಾಗಿದ್ದಾರೆ ಎಂದು ರಾಜಸ್ಥಾನ ಸರ್ಕಾರ ಗುರುವಾರ ಪ್ರಕಟಿಸಿದ್ದು ಮತ್ತು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಹೆಚ್ಚಿನ ವರದಿಗಳು ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದೆ.
ಇದನ್ನೂ ಓದಿ: Lok Sabha Elections: ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿ ನನ್ನ ಆಯ್ಕೆ; ಮಲ್ಲಿಕಾರ್ಜುನ ಖರ್ಗೆ
ಒಡಿಶಾದಲ್ಲಿನ ಬಿಸಿಗಾಳಿ ಪರಿಸ್ಥಿತಿಗಳ ಕುರಿತು ರಾಜ್ಯದ ವಿಶೇಷ ಪರಿಹಾರ ಆಯುಕ್ತ ಸತ್ಯಬ್ರತ ಸಾಹು ಅವರು, “ಸಂಬಲ್‌ಪುರ್, ಬಲಂಗೀರ್, ಸುರೇಂದರ್‌ಗಢ, ಅಂಗುಲ್, ಧೆಂಕನಲ್ ಇತ್ಯಾದಿಗಳಲ್ಲಿ ಉರಿ ಬಿಸಿಲು ಇದೆ. ನಾವು ಈ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ನಾವು ಈ ಬಗ್ಗೆ ಜಾಗೃತಿ ಮೂಡಿಸುತ್ತೇವೆ, ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ರೂರ್ಕೆಲಾದಲ್ಲಿ 12 ಮಂದಿ ಸೇರಿದಂತೆ ಕನಿಷ್ಠ 41 ಜನರು ಕಳೆದ 24 ಗಂಟೆಗಳಲ್ಲಿ ಒಡಿಶಾದಲ್ಲಿ ಬಿಸಿಲಿನಿಂದಾಗಿ ಸಾವಿಗೀಡಾಗಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ