ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಅದರಲ್ಲೂ ವಿಶೇಷವಾಗಿ ಚಿತ್ತೂರು ಮತ್ತು ಕಡಪ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ಆಂಧ್ರ ಪ್ರದೇಶದಲ್ಲಿ ಉಂಟಾದ ಮಳೆ ಅನಾಹುತದಿಂದ ಮೂವರು ಮೃತಪಟ್ಟಿದ್ದಾರೆ.
ಭಾರಿ ಮಳೆಗೆ ಆಂಧ್ರದ ಕಡಪ ಜಿಲ್ಲೆಯಲ್ಲಿ 30 ಜನ ನಾಪತ್ತೆಯಾಗಿದ್ದಾರೆ. ನಿರಂತರ ಮಳೆಯಿಂದಾಗಿ ಅನೇಕ ಗ್ರಾಮಗಳು ಜಲಾವೃತಗೊಂಡಿವೆ. ಚಿತ್ತೂರು ಜಿಲ್ಲೆಯ ತಿರುಪತಿಯಲ್ಲಿ ಸಾಕಷ್ಟು ಭಕ್ತಾದಿಗಳು ಸಿಲುಕಿಕೊಂಡಿದ್ದಾರೆ. ತಿರುಪತಿ ರಸ್ತೆಯಲ್ಲಿ ಪ್ರವಾಹದಂತೆ ಮಳೆ ನೀರು ಹರಿಯುತ್ತಿದೆ. ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ಪ್ರವಾಹದ ನೀರಿನಲ್ಲಿ ಜನ ಮೀನು ಹಿಡಿಯುತ್ತಿದ್ದಾರೆ.
ಮಳೆಯಿಂದ ತತ್ತರಿಸಿದ ರಾಯಲಸೀಮಾ ಪ್ರಾಂತ್ಯದ ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆಗೆ ಸಿಎಂ ಜಗನ್ ಮೋಹನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ತಿರುಮಲ ತಿರುಪತಿಯಲ್ಲಿ ದೇವಾಲಯವನ್ನು ಎರಡು ದಿನಗಳ ಕಾಲ ಬಂದ್ ಮಾಡಲಾಗಿದ್ದು, ತೀವ್ರ ಮುನ್ನೆಚ್ಚರಿಕೆ ಘೋಷಿಸಲಾಗಿದೆ. ಮಳೆಯಿಂದ ತಿರುಪತಿಯ ಎರಡು ಘಾಟ್ಗಳು ಬಂದ್ ಆಗಿದ್ದು, ದುರಸ್ತಿ ಕಾರ್ಯ ನಡೆಯುತ್ತಿದೆ. ಮಳೆಯಿಂದ ಯಾತ್ರಾರ್ಥಿಗಳಿಗೆ, ಸ್ಥಳೀಯರಿಗೆ ಬಹಳ ಸಮಸ್ಯೆಯಾಗಿದ್ದು, ಆಡಳಿತ ಮಂಡಳಿ ಯಾತ್ರಾರ್ಥಿಗಳಿಗೆ ಉಚಿತ ಆಹಾರ ಮತ್ತು ವಸತಿಯನ್ನು ನೀಡುತ್ತಿದೆ. ತೀವ್ರ ಮಳೆಯ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿದ್ದು, ತಿರುಪತಿಗೆ ಜಲದಿಗ್ಭಂದನವಾಗಿದೆಯೇ ಎಂಬ ಭಾವ ಮೂಡಿಸುವಂತಿದೆ. ಆಂಧ್ರಪ್ರದೇಶದಲ್ಲಿ ಮತ್ತಷ್ಟು ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ಇದನ್ನೂ ಓದಿ: Tamil Nadu Rain: ತಮಿಳುನಾಡಿನಲ್ಲಿ ಮಳೆಯ ರೌದ್ರಾವತಾರ; ವೆಲ್ಲೂರಿನಲ್ಲಿ ಮನೆ ಒಂದೇ ಕುಟುಂಬದ 9 ಜನ ಸಾವು