ಜೈಪುರ: ದೇಶದ ವಿವಿಧ ಕಡೆಯಲ್ಲಿ ಭಾರಿ ಮಳೆಯಾಗಿದ್ದು, ಭಾರತದ ಉತ್ತರ ಭಾಗ ಅಪಾಯಕ್ಕೆ ಸಿಲುಕಿಕೊಂಡಿದೆ. ಹಿಮಾಚಲ ಪ್ರದೇಶ, ಗುಜರಾತ್, ರಾಜಸ್ಥಾನ ಕರ್ನಾಟಕ ಸೇರಿದಂತೆ, ಅನೇಕ ರಾಜ್ಯಗಳಲ್ಲಿ ಭಾರೀ ಮಳೆಯಾಗಿದ್ದು, ಅಪಾರ ನಷ್ಟ ಉಂಟಾಗಿದೆ, ಇದರ ಜತೆಗೆ ಸಾವು- ನೋವುಗಳು ಸಂಭವಿಸಿದೆ. ಇದೀಗ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ರಾಜಸ್ಥಾನ ತತ್ತರಿಸಿದೆ. ಇಲ್ಲಿ ಗುಡ್ಡಗಳು ಕುಸಿದು, ಮನೆಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ. ಪೂರ್ವ ಮತ್ತು ಮಧ್ಯ ರಾಜಸ್ಥಾನದ ಹಲವಾರು ಭಾಗಗಳಲ್ಲಿ ಜನಜೀವನ ಅಸ್ಥವ್ಯಸ್ಥವಾಗಿದ್ದು, ರಸ್ತೆಗಳು, ರೈಲು ಹಳಿಗಳು, ತಗ್ಗು ಪ್ರದೇಶದ ವಸತಿ ಪ್ರದೇಶಗಳು ಮತ್ತು ಆಸ್ಪತ್ರೆಗಳು ಕುಸಿದು ಬಿದ್ದಿದೆ. ಈಗಾಗಲೇ ಮರುಣ ಆರ್ಭಟಕ್ಕೆ ಏಳು ಜೀವವನ್ನು ಬಲಿ ತೆಗೆದುಕೊಂಡಿದೆ. ಮಂಗಳವಾರ ಸುಮಾರು ಹನ್ನೆರಡು ಜಿಲ್ಲೆಗಳಲ್ಲಿ ಹೆಚ್ಚು ತುಂತುರು ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಮಾನ ಇಲಾಖೆ ಹೇಳಿದೆ. ರಾಜ್ಯದ ರಾಜಧಾನಿ ಜೈಪುರದ ಮುರಳಿಪುರ ಪ್ರದೇಶದಲ್ಲಿ ತುಂಬಿ ಹರಿಯುತ್ತಿರುವ ಚರಂಡಿಯ ನೀರಿನ ರಭಸಕ್ಕೆ ಏಳು ವರ್ಷದ ಬಾಲಕ ಸೋಮವಾರ ಕೊಚ್ಚಿ ಹೋಗಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಅಜ್ಮೀರ್‌ನಲ್ಲಿ ಮೂರು, ನಾಗೌರ್‌ನಲ್ಲಿ ಇಬ್ಬರು ಮತ್ತು ಟೋಂಕ್‌ನಿಂದ ಒಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಸಿರೋಹಿ, ಅಜ್ಮೀರ್, ಪಾಲಿ ಮತ್ತು ಕರೌಲಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ ಆದರೆ ಪ್ರವಾಹದಂತಹ ಪರಿಸ್ಥಿತಿ ಇಲ್ಲ ಎಂದು ವಿಪತ್ತು ನಿರ್ವಹಣೆ ಮತ್ತು ಪರಿಹಾರ ಇಲಾಖೆಯ ಕಾರ್ಯದರ್ಶಿ ಪಿಸಿ ಕಿಶನ್ ಹೇಳಿದ್ದಾರೆ. ಜೈಪುರ, ಜಲೋರ್, ಭರತ್‌ಪುರ, ಉದಯಪುರ ಮತ್ತು ಅಜ್ಮೀರ್ ಸೇರಿದಂತೆ 10 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ರಕ್ಷಣಾ ತಂಡಗಳು ರಕ್ಷಣಾ ಕಾರ್ಯ ಮಾಡುತ್ತಿದೆ ಎಂದು ಹೇಳಿದ್ದಾರೆ. ಸಿರೋಹಿ, ಅಜ್ಮೀರ್, ಪಾಲಿ, ಕರೌಲಿ, ಜೈಪುರ, ಜಲೋರ್, ಟೋಂಕ್ ಮತ್ತು ಸಿಕರ್‌ನ ಹಲವಾರು ಸ್ಥಳಗಳು ಜಲಾವೃತಗೊಂಡಿವೆ. ರಾಜ್ಯದ ಅತಿದೊಡ್ಡ ಸರ್ಕಾರಿ ಆಸ್ಪತ್ರೆ ಸವಾಯಿ ಮಾನ್ ಸಿಂಗ್ ಆಸ್ಪತ್ರೆ ಮತ್ತು ಅಜ್ಮೀರ್‌ನ ಜೆಎಲ್‌ಎನ್ ಆಸ್ಪತ್ರೆಯ ವಾರ್ಡ್‌ಗಳಿಗೂ ಮಳೆ ನೀರು ನುಗ್ಗಿದೆ. ಇನ್ನೂ ಅಜ್ಮೀರ್ ರೈಲು ನಿಲ್ದಾಣದಲ್ಲಿ ರೈಲು ಹಳಿಗಳು ಜಲಾವೃತಗೊಂಡಿವೆ. ವಾಯವ್ಯ ರೈಲ್ವೆ 18 ರೈಲುಗಳನ್ನು ರದ್ದುಗೊಳಿಸಿದ್ದು, ಏಳು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ.
ಅಲ್ವಾರ್, ಬನ್ಸ್ವಾರಾ, ಬರಾನ್, ಭರತ್‌ಪುರ್, ದೌಸಾ, ಧೋಲ್‌ಪುರ್, ಡುಂಗರ್‌ಪುರ್, ಕರೌಲಿ, ಸವಾಯಿ ಮಾಧೋಪುರ್, ಸಿರೋಹಿ ಮತ್ತು ಉದಯಪುರದಲ್ಲಿ ಮತ್ತು ಬರನ್, ಬುಂದಿ, ಡುಂಗರ್‌ಪುರ್, ಜಲಾವರ್, ಕೋಟಾ, ಪ್ರತಾಪ್‌ಗಢದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೋಮವಾರ ಯೆಲ್ಲೋ ಅಲರ್ಟ್ ನೀಡಿದೆ. ಮತ್ತು ಇಂದು ಸವಾಯಿ ಮಾಧೋಪುರ್ ಸೇರಿದಂತೆ ರಾಜ್ಯದ 33 ಜಿಲ್ಲೆಗಳನ್ನು ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ ಇನ್ನೂ ಈ ಮಳೆಯಿಂದ 24 ಗಂಟೆಗಳಲ್ಲಿ ಏಳು ಜನ ಸಾವನ್ನಪ್ಪಿದ್ದಾರೆ. ಸೋಮವಾರ ಜೈಪುರದ ಮುರಳಿಪುರ ಪ್ರದೇಶದಲ್ಲಿ 7 ವರ್ಷದ ರಿಷಿ ಎಂಬ ಹುಡುಗ ತನ್ನ ಚಪ್ಪಲಿ ಚರಂಡಿ ಒಳಗೆ ಬಿದ್ದಿದೆ ಎಂದು ತೆಗೆಯಲು ಹೋಗಿ ಚರಂಡಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಮೃತದೇಹವನ್ನು ಪತ್ತೆ ಮಾಡಿದ್ದು, ಮರಣೋತ್ತರ ಪರೀಕ್ಷೆಗಾಗಿ ಕನ್ವಾಟಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ:ಉತ್ತರ ಭಾರತದಲ್ಲಿ ವರುಣನ ರೌದ್ರಾವತಾರ, ಮಳೆಯಲ್ಲಿ ಸಿಲುಕಿ ಇದುವರೆಗೆ 37 ಮಂದಿ ಸಾವು
ಜೈಪುರ ಜಿಲ್ಲಾಧಿಕಾರಿ ಪ್ರಕಾಶ್ ರಾಜಪುರೋಹಿತ್ ಅವರು ಸಿಕರ್ ರಸ್ತೆ, ದೇಹಾರ್‌ನ ಬಾಲಾಜಿ, ನಿವಾರು ರಸ್ತೆ, ಝೋತ್ವಾರಾ, ಪಂಚ್ಯವಾಲಾ, ಸಿರ್ಸಿ ರಸ್ತೆ, ಗಿರ್ಧಾರಿಪುರ, ಅಜ್ಮೀರ್ ರಸ್ತೆ, ಜವಾಹರ್ ನಗರ ಸೇರಿದಂತೆ ಜಲಾವೃತವಾಗಿರುವ ಪ್ರದೇಶಗಳನ್ನು ಪರಿಶೀಲಿಸಿದರು. ಜಲಾವೃತ ಪ್ರದೇಶಗಳಲ್ಲಿನ ಒಳಚರಂಡಿ ಸಮಸ್ಯೆಗೆ ತಕ್ಷಣ ಪರಿಹಾರ ಹಾಗೂ ಸಾರ್ವಜನಿಕರಿಗೆ ಪರಿಹಾರ ಒದಗಿಸುವಂತೆ ಜೈಪುರ ಹೆರಿಟೇಜ್ ಮುನ್ಸಿಪಲ್ ಕಾರ್ಪೊರೇಷನ್, ಜೈಪುರ ಮಹಾನಗರ ಪಾಲಿಕೆ ಮತ್ತು ಜೈಪುರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಅಜ್ಮೀರ್‌ನಲ್ಲಿ, ರಾಜಸ್ಥಾನ ಲೋಕಸೇವಾ ಆಯೋಗದ (ಆರ್‌ಪಿಎಸ್‌ಸಿ) ಅಧಿಕಾರಿಯೊಬ್ಬರು ಕಳೆದ ರಾತ್ರಿ ಅಲ್ವಾರ್ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚರಂಡಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸೋಮವಾರ ದಿಲೀಪ್ ಸಿಂಗ್ ಮೃತದೇಹ ಪತ್ತೆಯಾಗಿದೆ ಎಂದು ಎಸ್‌ಎಚ್‌ಒ ಶ್ಯಾಮ್ ಸಿಂಗ್ ತಿಳಿಸಿದ್ದಾರೆ.ಅಜ್ಮೀರ್ ಜಿಲ್ಲೆಯ ವಿಜಯ್ ನಗರ ಪ್ರದೇಶದಲ್ಲಿ ಸೋಮವಾರ 40 ವರ್ಷದ ಮಹಿಳೆ ಗುಲಾಬಿ ದೇವಿ ಮತ್ತು ಅವರ ಮಗಳು ಮೀನಾ (15) ಆಕಸ್ಮಿಕವಾಗಿ ಕೊಳಕ್ಕೆ ಬಿದ್ದಿದ್ದಾರೆ. ಇದೀಗ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅವರ ದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ