ದೆಹಲಿ: ಭಾರತದಲ್ಲಿ ಕೊರೊನಾ ಲಸಿಕೆ ವಿತರಣೆ ಆರಂಭವಾಗಿ ಎರಡು ತಿಂಗಳಾಗುತ್ತಾ ಬಂದಿದೆ. ಇತ್ತೀಚೆಗಷ್ಟೇ ಮತ್ತೊಂದು ಹಂತದ ಲಸಿಕೆ ಅಭಿಯಾನ ಆರಂಭಿಸಲಾಗಿದ್ದು, ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಲಸಿಕೆ ಪಡೆಯುವ ಮೂಲಕ ಜನಸಾಮಾನ್ಯರಿಗೆ ಧೈರ್ಯ ತುಂಬಿದ್ದಾರೆ. ಇದೀಗ ಪ್ರಧಾನಿಯವರ ತಾಯಿ ಹೀರಾಬೆನ್ ಸಹ ಕೊರೊನಾ ಲಸಿಕೆ ಸ್ವೀಕರಿಸಿದ್ದು, ಈ ವಿಷಯವನ್ನು ನರೇಂದ್ರ ಮೋದಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.
ನನ್ನ ತಾಯಿ ಕೊರೊನಾ ಲಸಿಕೆಯ ಮೊದಲ ಡೋಸ್ ಸ್ವೀಕರಿಸಿದ್ದಾರೆ ಎಂಬ ವಿಷಯವನ್ನು ಹಂಚಿಕೊಳ್ಳಲು ಸಂತಸವಾಗುತ್ತಿದೆ. ನೀವೂ ನಿಮ್ಮ ಸುತ್ತಮುತ್ತಲಿರುವ ಅರ್ಹ ವ್ಯಕ್ತಿಗಳಿಗೆ ಕೊರೊನಾ ಲಸಿಕೆ ಸ್ವೀಕರಿಸುವಂತೆ ಪ್ರೇರೇಪಿಸಬೇಕು ಎಂದು ಎಲ್ಲರ ಬಳಿ ಕೋರಿಕೊಳ್ಳುತ್ತೇನೆ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಪ್ರಧಾನ ಮಂತ್ರಿಗಳ ಈ ಸಂದೇಶಕ್ಕೆ ಹಲವರು ಮೆಚ್ಚುಗೆ ಸೂಚಿಸಿದ್ದು, ಮೋದಿ ಮತ್ತು ಅವರ ತಾಯಿ ಜೊತೆಯಲ್ಲಿ ಇರುವ ಫೋಟೋಗಳನ್ನು ಕಮೆಂಟ್ನಲ್ಲಿ ಹಂಚಿಕೊಂಡಿದ್ದಾರೆ.
ಕೊವ್ಯಾಕ್ಸಿನ್ಗೆ ‘ವೈದ್ಯಕೀಯ ಪ್ರಯೋಗ ಹಂತ’ ಪಟ್ಟದಿಂದ ಮುಕ್ತಿ
ಭಾರತೀಯ ಸಂಸ್ಥೆ ಭಾರತ್ ಬಯೋಟೆಕ್ ತಯಾರಿಸಿದ ಕೊವ್ಯಾಕ್ಸಿನ್ ಲಸಿಕೆಗೆ ಅಂತಿಮವಾಗಿ ವೈದ್ಯಕೀಯ ಪ್ರಯೋಗ ಹಂತದಲ್ಲಿರುವ ಲಸಿಕೆ ಎಂಬ ಪಟ್ಟದಿಂದ ಮುಕ್ತಿ ಸಿಕ್ಕಿದೆ. ಕೊವ್ಯಾಕ್ಸಿನ್ ಲಸಿಕೆ ವಿತರಣೆಗೆ ಸರ್ಕಾರ ಅನುಮತಿ ಸೂಚಿಸಿದ ಸಂದರ್ಭದಲ್ಲಿ ಇದೇ ವಿಚಾರವನ್ನಿಟ್ಟುಕೊಂಡು ಹಲವರು ಕಟುವಾಗಿ ಟೀಕಿಸಿದ್ದರು ಹಾಗೂ ಲಸಿಕೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದರು. ವೈದ್ಯಕೀಯ ಪ್ರಯೋಗ ಹಂತದಲ್ಲಿರುವ ಲಸಿಕೆಯನ್ನು ಜನರಿಗೆ ನೀಡಿದ ನಂತರ ಏನಾದರೂ ಹೆಚ್ಚೂಕಡಿಮೆ ಆದರೆ ಯಾರು ಗತಿ ಎಂಬ ಆತಂಕ ಅನೇಕರನ್ನು ಕಾಡಿತ್ತು. ಆದರೂ ಸರ್ಕಾರ, ಸಂಸ್ಥೆ ಮತ್ತು ಕೆಲ ತಜ್ಞರು ಲಸಿಕೆಯ ವಿಶ್ವಾಸಾರ್ಹತೆ ಬಗ್ಗೆ ಅನುಮಾನ ಬೇಡ ಎಂದು ಪದೇ ಪದೇ ಧೈರ್ಯ ತುಂಬುತ್ತಲೇ ಬಂದಿದ್ದರು.
ಇದೀಗ, ಕೊವ್ಯಾಕ್ಸಿನ್ ಲಸಿಕೆಯನ್ನು ವೈದ್ಯಕೀಯ ಪ್ರಯೋಗ ಹಂತದಿಂದ ತೆಗೆಯಲು ಮಾಡಿದ್ದ ವಿಷಯ ತಜ್ಞರ ಸಮಿತಿ ಶಿಫಾರಸನ್ನು ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನ (DCGI) ಒಪ್ಪಿಕೊಂಡಿದೆ. ಈ ಬಗ್ಗೆ ಭಾರತ್ ಬಯೋಟೆಕ್ ಸಂಸ್ಥೆಗೆ ಮಾಹಿತಿಯನ್ನೂ ನೀಡಲಾಗಿದ್ದು, ಕೊವ್ಯಾಕ್ಸಿನ್ ಲಸಿಕೆ ವೈದ್ಯಕೀಯ ಪ್ರಯೋಗದ ಹಂತದಲ್ಲಿದೆ ಎನ್ನುವುದನ್ನು ತೆಗೆಯಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿರುವುದಾಗಿ ತಿಳಿಸಲಾಗಿದೆ.
Happy to share that my mother has taken the first dose of the COVID-19 vaccine today. I urge everyone to help and motivate people around you who are eligible to take the vaccine.
— Narendra Modi (@narendramodi) March 11, 2021
ಇದನ್ನೂ ಓದಿ:
ಜಾಹೀರಾತು ಫಲಕ ಅಳವಡಿಸಿ ಭಾರತ, ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಅರ್ಪಿಸಿದ ಕೆನಡಾ