Heeraben Modi Obituary: ಬಡತನದಲ್ಲೇ ಜೀವನ ಕಳೆದು, ಸಾರ್ಥಕ 100 ವರ್ಷಗಳ ಅನುಭವ ಹೊತ್ತು ಸಾಗಿದ ಹೀರಾಬೆನ್ ಮೋದಿ

| Updated By: ಸುಷ್ಮಾ ಚಕ್ರೆ

Updated on: Dec 30, 2022 | 7:54 AM

Heeraben Modi Death: 1 ಶತಮಾನದ ಜೀವನಾನುಭವವನ್ನು ಹೊತ್ತ ಹೀರಾಬೆನ್ ಮೋದಿ ಅವರ ಕುರಿತ ಆಸಕ್ತಿಕರ ಸಂಗತಿಗಳು ಮತ್ತು ಅವರು ತಮ್ಮ ಜೀವನದಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ.

Heeraben Modi Obituary: ಬಡತನದಲ್ಲೇ ಜೀವನ ಕಳೆದು, ಸಾರ್ಥಕ 100 ವರ್ಷಗಳ ಅನುಭವ ಹೊತ್ತು ಸಾಗಿದ ಹೀರಾಬೆನ್ ಮೋದಿ
ಹೀರಾಬೆನ್
Follow us on

ಅಹಮದಾಬಾದ್: ವಯೋಸಹಜ ಅನಾರೋಗ್ಯದಿಂದ 2 ದಿನಗಳ ಹಿಂದೆ ಗುಜರಾತ್​ನ ಅಹಮದಾಬಾದ್​​ನಲ್ಲಿರುವ ಆಸ್ಪತ್ರೆಗೆ ಸೇರಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ (PM Narendra Modi Mother) ಹೀರಾಬೆನ್ ಮೋದಿ (Heeraben Modi) ಇಂದು ಕೊನೆಯುಸಿರೆಳೆದಿದ್ದಾರೆ. ಕಳೆದ ಜೂನ್ 18ರಂದು 100ನೇ ವರ್ಷಕ್ಕೆ ಕಾಲಿಟ್ಟಿದ್ದ ಹೀರಾಬೆನ್ ಮೋದಿ ಅವರ ಆರೋಗ್ಯದಲ್ಲಿ ನಿನ್ನೆ ಚೇತರಿಕೆ ಕಂಡುಬಂದಿತ್ತು. ಇನ್ನೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವುದಾಗಿಯೂ ಗುಜರಾತ್ ಮುಖ್ಯಮಂತ್ರಿಗಳ ಕಚೇರಿ ತಿಳಿಸಿತ್ತು. ಆದರೆ, ಇಂದು ಮುಂಜಾನೆ ಅವರು ಇಹಲೋಕ ತ್ಯಜಿಸಿದ್ದಾರೆ. 1 ಶತಮಾನದ ಜೀವನಾನುಭವವನ್ನು ಹೊತ್ತ ಹೀರಾಬೆನ್ ಮೋದಿ ಅವರ ಕುರಿತ ಆಸಕ್ತಿಕರ ಸಂಗತಿಗಳು ಮತ್ತು ಅವರು ತಮ್ಮ ಜೀವನದಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ.

ಹೀರಾಬೆನ್ ಮೋದಿ 100ನೇ ವರ್ಷಕ್ಕೆ ಕಾಲಿಟ್ಟಾಗ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಾಯಿಯ ಜೊತೆಗೆ ಕಳೆದ ಜೀವನದ ಅನನ್ಯ ಕ್ಷಣಗಳನ್ನು ಬ್ಲಾಗ್​​ನಲ್ಲಿ ಬರೆದುಕೊಂಡಿದ್ದರು. ಅಮ್ಮ ಎಂಬುದು ಕೇವಲ ಪದವಲ್ಲ ಆದರೆ ಇದು ಭಾವನೆಗಳ ವ್ಯಾಪ್ತಿಯನ್ನು ಸೆರೆಹಿಡಿಯುತ್ತದೆ. ಮೋದಿ ಅವರ ತಾಯಿ ಹೀರಾಬೆನ್ ಬಹಳ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ಸಂಸಾರದ ನೊಗ ಹೊತ್ತಿದ್ದರು. ಅವರ ಜೀವನ ಬಹಳ ಬಡತನದಲ್ಲೇ ಕಳೆದಿತ್ತು. ಆದರೂ ತಮ್ಮ ಮಗ ಮುಖ್ಯಮಂತ್ರಿಯಾದಾಗಲಾಗಲಿ, ಪ್ರಧಾನಿಯಾದಾಗಲಾಗಲಿ ಅವರು ನರೇಂದ್ರ ಮೋದಿಯವರೊಂದಿಗೆ ಐಷಾರಾಮಿ ಜೀವನ ನಡೆಸುವ ಅವಕಾಶವಿದ್ದರೂ ತಮ್ಮ ಇತರೆ ಮಕ್ಕಳೊಂದಿಗೆ ಗುಜರಾತ್​​ನ ಹಳ್ಳಿಯಲ್ಲೇ ಉಳಿದರು.

ಇದನ್ನೂ ಓದಿ: PM Modi’s Mother ಮಗ ಪ್ರಧಾನಿಯಾಗಿದ್ದರೂ ಹೀರಾಬೆನ್ ತಮ್ಮ ಹಳ್ಳಿಯಲ್ಲೇ ಇರಲು ಬಯಸಿದ್ದಕ್ಕೆ ಕಾರಣ ಇಲ್ಲಿದೆ

ಹೀರಾಬೆನ್ ಮೋದಿ ವಡ್ನಗರದಲ್ಲಿರುವ ಮಣ್ಣಿನ ಗೋಡೆಗಳು ಮತ್ತು ಛಾವಣಿಗೆ ಮಣ್ಣಿನ ಹೆಂಚುಗಳನ್ನು ಹೊಂದಿರುವ ಪುಟ್ಟ ಮನೆಯಲ್ಲಿ ಮಕ್ಕಳ ಜೊತೆ ವಾಸವಾಗಿದ್ದರು. ಮನೆಯ ಎಲ್ಲಾ ಕೆಲಸಗಳನ್ನು ತಾನೇ ಮಾಡುತ್ತಿದ್ದರು. ಕೆಲವು ಮನೆಗಳಲ್ಲಿ ಪಾತ್ರೆಗಳನ್ನು ಕೂಡ ತೊಳೆಯುತ್ತಿದ್ದರು. ಹೀರಾಬೆನ್ ಮೋದಿ ಗುಜರಾತ್​ನ ಮೆಹ್ಸಾನಾದ ವಿಸ್ನಗರದಲ್ಲಿ ಜನಿಸಿದರು. ಆಕೆಗೆ ಸ್ವಂತ ತಾಯಿಯ ವಾತ್ಸಲ್ಯ ಸಿಗಲಿಲ್ಲ. ಆಕೆ ಎಳೆ ವಯಸ್ಸಿನಲ್ಲಿಯೇ ತನ್ನ ತಾಯಿಯನ್ನು ಸ್ಪ್ಯಾನಿಷ್ ಫ್ಲೂ ಸಾಂಕ್ರಾಮಿಕ ರೋಗದಿಂದಾಗಿ ಕಳೆದುಕೊಂಡರು. ಆಕೆಗೆ ತನ್ನ ತಾಯಿಯ ಮುಖವಾಗಲಿ, ಅವಳ ಮಡಿಲಿನ ನೆಮ್ಮದಿಯಾಗಲಿ ನೆನಪಿರಲಿಲ್ಲ. ಆಕೆ ತನ್ನ ಇಡೀ ಬಾಲ್ಯವನ್ನು ತನ್ನ ತಾಯಿಯಿಲ್ಲದೆ ಕಳೆದರು. ಆಕೆ ಶಾಲೆಗೆ ಹೋಗಿ ಓದು ಬರಹ ಕಲಿಯಲೂ ಆಗಲಿಲ್ಲ. ಆಕೆಯ ಬಾಲ್ಯವು ಬಡತನ ಮತ್ತು ಕಷ್ಟದಿಂದ ಕೂಡಿತ್ತು ಎಂದು ಮೋದಿ ಹೇಳಿಕೊಂಡಿದ್ದರು.

ತಮ್ಮ ತಾಯಿಯ ಅತ್ಯಂತ ಸರಳ ಜೀವನಶೈಲಿಯ ಬಗ್ಗೆ ಬರೆದುಕೊಂಡಿದ್ದ ಪ್ರಧಾನಿ ಮೋದಿ, ತಮ್ಮ ತಾಯಿಯ ಹೆಸರಿನಲ್ಲಿ ಯಾವುದೇ ಆಸ್ತಿ ಇಲ್ಲ. ಅಮ್ಮ ಯಾವುದೇ ಚಿನ್ನದ ಆಭರಣಗಳನ್ನು ಧರಿಸಿರುವುದನ್ನು ನಾನು ನೋಡಿಲ್ಲ. ಅವರಿಗೆ ಅದರಲ್ಲಿ ಆಸಕ್ತಿಯೂ ಇರಲಿಲ್ಲ. ಅವರು ಕೊನೆಯವರೆಗೂ ತನ್ನ ಸಣ್ಣ ಕೋಣೆಯಲ್ಲಿ ಅತ್ಯಂತ ಸರಳವಾದ ಜೀವನವನ್ನು ನಡೆಸಿದರು ಎಂದು ಬರೆದುಕೊಂಡಿದ್ದರು.

ಜೂನ್‌ನ ಬಿಸಿಲಿನಲ್ಲಿ ಹೀರಾಬೆನ್ ತನ್ನ ಮಣ್ಣಿನ ಮನೆಯ ಛಾವಣಿಯ ಮೇಲೆ ಹತ್ತಿ ಮತ್ತು ಹೆಂಚುಗಳನ್ನು ಸರಿಪಡಿಸುತ್ತಿದ್ದರು. ಮಳೆಗಾಲದಲ್ಲಿ ಅವರ ಮನೆ ಸೋರುತ್ತಿತ್ತು. ಮನೆಗೆ ನೀರು ನುಗ್ಗುತ್ತಿತ್ತು. ಮಳೆನೀರನ್ನು ಸಂಗ್ರಹಿಸಲು ಅವರು ಬಕೆಟ್ ಮತ್ತು ಪಾತ್ರೆಗಳನ್ನು ಮಳೆ ನೀರು ಸುರಿಯುವ ಜಾಗದಲ್ಲಿ ಇಡುತ್ತಿದ್ದರು. ಆ ನೀರನ್ನು ಬಹಳ ದಿನಗಳವರೆಗೆ ಉಪಯೋಗಿಸುತ್ತಿದ್ದರು.

ಇದನ್ನೂ ಓದಿ: Condolences on Heeraben Modi: ಹೀರಾಬೆನ್ ಮೋದಿ ನಿಧನಕ್ಕೆ ಅಮಿತ್​ ಶಾ, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರ ಸಂತಾಪ

ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ದೆಹಲಿಯಿಂದ ತಮ್ಮ ತಾಯಿ ಹೀರಾಬೆನ್ ಅವರನ್ನು ಭೇಟಿಯಾಗಲು ತೆರಳಿದ್ದರು. ಅವರು ಆಸ್ಪತ್ರೆಯಲ್ಲಿ ತಾಯಿಯನ್ನು ಭೇಟಿ ಮಾಡಿ, 1 ಗಂಟೆಗೂ ಹೆಚ್ಚು ಕಾಲ ಅವರೊಂದಿಗೆ ಇದ್ದರು. ಹೀರಾಬೆನ್ ಮೋದಿ ಅವರು ಪ್ರಧಾನಿ ಮೋದಿಯವರ ಕಿರಿಯ ಸಹೋದರ ಪಂಕಜ್ ಮೋದಿ ಜೊತೆ ಗಾಂಧಿನಗರ ಬಳಿಯ ರೈಸನ್ ಗ್ರಾಮದಲ್ಲಿ ವಾಸಿಸುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಆಗಾಗ ರೈಸನ್‌ಗೆ ಭೇಟಿ ನೀಡುತ್ತಿದ್ದರು. ಗುಜರಾತ್​ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ತಮ್ಮ ತಾಯಿಯೊಂದಿಗೆ ಸಮಯ ಕಳೆಯುತ್ತಿದ್ದರು.

ಹೀರಾಬೆನ್ ಅವರ ಆರೋಗ್ಯದಲ್ಲಿ ಬುಧವಾರ ಬೆಳಿಗ್ಗೆ ಏರುಪೇರಾಗಿತ್ತು. ಹೀಗಾಗಿ ಅವರನ್ನು ಅಹಮದಾಬಾದ್​ನ ಯುಎನ್​ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಹಿಂದೆ 2016ರಲ್ಲಿ ಒಮ್ಮೆ ಹೀರಾಬೆನ್ ಅವರ ಆರೋಗ್ಯ ಹದಗೆಟ್ಟಿತ್ತು. 108 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಗಾಂಧಿನಗರದ ಸಿವಿಲ್ ಆಸ್ಪತ್ರೆಗೆ ದಾಖಲಾಗಿ ಅವರು ಚಿಕಿತ್ಸೆ ಪಡೆದಿದ್ದರು. ಸಾಮಾನ್ಯ ರೋಗಿಗಳಂತೆ ಆಸ್ಪತ್ರೆಯ ಸಾಮಾನ್ಯ ವೈದ್ಯರ ಬಳಿ ತಪಾಸಣೆಗೆ ಒಳಗಾಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ