ಒಗ್ಗಟ್ಟಿನ ಹೋರಾಟಕ್ಕೆ ಮೋದಿ ಪಂಚ ತಂತ್ರ, ಪಿಎಂ ಭಾಷಣದ ಹೈಲೆಟ್ಸ್

|

Updated on: May 13, 2020 | 2:03 PM

ದೆಹಲಿ: ಇಡೀ ಜಗತ್ತಿನ ಕಣ್ಣು ನಿನ್ನೆ ಭಾರತದ ಮೇಲೆ ನೆಟ್ಟಿತ್ತು. ಜಗತ್ತಿನ ಬಲಾಢ್ಯ ರಾಷ್ಟ್ರಗಳೆಲ್ಲಾ ಭಾರತದತ್ತ ಮತ್ತೊಮ್ಮೆ ತಿರುಗಿ ನೋಡುವಂತಾಗಿತ್ತು. ಇಷ್ಟುದಿನ ಕೊರೊನಾ ನಿಯಂತ್ರಣಕ್ಕೆ ಭಾರತ ಕೈಗೊಂಡ ನಿರ್ಧಾರಗಳು ಹುಬ್ಬೇರುವಂತೆ ಮಾಡಿದ್ದವು. ಆದ್ರೆ ನಿನ್ನೆ ಆರ್ಥಿಕತೆಗೆ ಪ್ರಧಾನಿ ಕೊಟ್ಟ ಟಾನಿಕ್ ಭಾರತದ ಮಿತ್ರ ರಾಷ್ಟ್ರಗಳಿಗೆ ಖುಷಿ ಕೊಟ್ಟಿದ್ದರೆ, ನಮ್ಮ ಶತೃ ರಾಷ್ಟ್ರಗಳಿಗೆ ಒಳಗೊಳಗೆ ಉರಿ ಉರಿ ಹುಟ್ಟಿಸಿತ್ತು. ಇದರ ಜೊತೆಗೆ ಪ್ರಜೆಗಳ ಆತ್ಮವಿಶ್ವಾಸ ಹೆಚ್ಚಿಸುವ ಮಾತನ್ನೂ ದೇಶದ ದೊರೆ ಮನ ಮುಟ್ಟುವಂತೆ ಜನರ ಮುಂದಿಟ್ಟರು. ನನ್ನ ಕಣ್ಣೆದುರೇ […]

ಒಗ್ಗಟ್ಟಿನ ಹೋರಾಟಕ್ಕೆ ಮೋದಿ ಪಂಚ ತಂತ್ರ, ಪಿಎಂ ಭಾಷಣದ ಹೈಲೆಟ್ಸ್
Follow us on

ದೆಹಲಿ: ಇಡೀ ಜಗತ್ತಿನ ಕಣ್ಣು ನಿನ್ನೆ ಭಾರತದ ಮೇಲೆ ನೆಟ್ಟಿತ್ತು. ಜಗತ್ತಿನ ಬಲಾಢ್ಯ ರಾಷ್ಟ್ರಗಳೆಲ್ಲಾ ಭಾರತದತ್ತ ಮತ್ತೊಮ್ಮೆ ತಿರುಗಿ ನೋಡುವಂತಾಗಿತ್ತು. ಇಷ್ಟುದಿನ ಕೊರೊನಾ ನಿಯಂತ್ರಣಕ್ಕೆ ಭಾರತ ಕೈಗೊಂಡ ನಿರ್ಧಾರಗಳು ಹುಬ್ಬೇರುವಂತೆ ಮಾಡಿದ್ದವು. ಆದ್ರೆ ನಿನ್ನೆ ಆರ್ಥಿಕತೆಗೆ ಪ್ರಧಾನಿ ಕೊಟ್ಟ ಟಾನಿಕ್ ಭಾರತದ ಮಿತ್ರ ರಾಷ್ಟ್ರಗಳಿಗೆ ಖುಷಿ ಕೊಟ್ಟಿದ್ದರೆ, ನಮ್ಮ ಶತೃ ರಾಷ್ಟ್ರಗಳಿಗೆ ಒಳಗೊಳಗೆ ಉರಿ ಉರಿ ಹುಟ್ಟಿಸಿತ್ತು. ಇದರ ಜೊತೆಗೆ ಪ್ರಜೆಗಳ ಆತ್ಮವಿಶ್ವಾಸ ಹೆಚ್ಚಿಸುವ ಮಾತನ್ನೂ ದೇಶದ ದೊರೆ ಮನ ಮುಟ್ಟುವಂತೆ ಜನರ ಮುಂದಿಟ್ಟರು.

ನನ್ನ ಕಣ್ಣೆದುರೇ ಕಛ್ ಭೂಕಂಪ ಕಂಡಿದ್ದೇನೆ:
ನಿನ್ನೆ ಪಿಎಂ ಮೋದಿ ಭಾಷಣ ಪ್ರತಿಯೊಬ್ಬ ಪ್ರಜೆಯ ಮನ ಮುಟ್ಟುವಂತಿತ್ತು. ಅಂದಹಾಗೆ ಆರ್ಥಿಕವಾಗಿ ಭಾರಿ ಸಂಕಷ್ಟ ಎದುರಾಗಿರುವ ಈ ಸಂದರ್ಭದಲ್ಲೇ, ದೇಶದ ಪ್ರಜೆಗಳನ್ನು ಹುರಿದುಂಬಿಸುವ ಮಾತುಗಳನ್ನ ಪ್ರಧಾನಿ ಮೋದಿ ಆಡಿದ್ರು. ಸದ್ಯದ ಸಂಕಷ್ಟದ ಪರಿಸ್ಥಿತಿಯನ್ನು ಕಛ್ ಭೂಕಂಪದ ಉದಾಹರಣೆ ಜೊತೆ ವಿವರಿಸಿದ ಪ್ರಧಾನಿ, ಇದನ್ನೆಲ್ಲಾ ಎದುರಿಸುವ ಸಂಕಲ್ಪ ಶಕ್ತಿ ಭಾರತೀಯರಲ್ಲಿದೆ ಅಂದ್ರು.

ಜಗತ್ತನ್ನು ಸಂಕಷ್ಟದಿಂದ ಪಾರು ಮಾಡಿದ್ದು ನಾವು:
ಜಾಗತಿಕ ಸಮಸ್ಯೆಗಳು ಎದುರಾಗಿದ್ದಾಗ ಭಾರತ ಸಹಾಯಕ್ಕೆ ಧಾವಿಸಿದ್ದ ಘಟನೆಗಳನ್ನ ಮೆಲುಕು ಹಾಕಿದ ಪಿಎಂ, ‘ವೈ2ಕೆ’ ಸಮಸ್ಯೆಯನ್ನು ಉದಾಹರಣೆಯಾಗಿ ನೀಡಿದ್ರು. 2000ನೇ ಇಸವಿಯಲ್ಲಿ ಸಾಫ್ಟ್‌ವೇರ್‌ ಪ್ರೋಗ್ರಾಮ್‌ನಲ್ಲಿ ಉಂಟಾಗಿದ್ದ ಗೊಂದಲ ಇಡೀ ಜಗತ್ತನ್ನೇ ಕಾಡಿತ್ತು. ಇಂತಹ ಮಹಾ ವಿಪತ್ತಿನಿಂದ ಪಾರಾಗಲು, ಭಾರತದ ತಂತ್ರಜ್ಞರು ಜಗತ್ತಿಗೆ ಸಹಾಯ ಮಾಡಿದ್ದರು ಅನ್ನೋದನ್ನ ಸಾರಿ ಹೇಳಿದ್ರು.

ಈ ಸಹಸ್ರಮಾನದ ಆರಂಭದಲ್ಲಿ ವೈ2ಕೆ ಸಂಕಷ್ಟ ಎದುರಾಗಿತ್ತು. ಭಾರತದ ತಂತ್ರಜ್ಞರು ಜಗತ್ತನ್ನ ಈ ಸಂಕಷ್ಟದಿಂದ ಪಾರು ಮಾಡಿದ್ದರು. ಈಗ ನಮ್ಮ ಬಳಿ ಸಾಮರ್ಥ್ಯ ಇದೆ, ಸಾಧನಗಳೂ ಇವೆ. ನಮ್ಮ ಬಳಿ ಜಗತ್ತಿನ ಅತ್ಯುತ್ತಮ ಬುದ್ಧಿಶಾಲಿಗಳಿದ್ದಾರೆ. ನಾವು ಅತ್ಯುತ್ತಮ ಗುಣಮಟ್ಟದ ವಸ್ತುಗಳನ್ನು ತಯಾರಿಸೋಣ. ನಮ್ಮ ವಸ್ತುಗಳ ಗುಣಮಟ್ಟವನ್ನ ಮತ್ತಷ್ಟು ಉತ್ತಮಗೊಳಿಸೋಣ. ಸಪ್ಲೈ ಚೈನ್ ಅನ್ನ ಮತ್ತಷ್ಟು ಆಧುನಿಕ ಮಾಡೋಣ. ಇದನ್ನು ನಾವು ಮಾಡಬಹುದು ಹಾಗೂ ಸಾಧಿಸಿ ತೋರಿಸುತ್ತೇವೆ ಎಂದ್ರು.

‘0’ಯಿಂದ ಅನಂತದೆಡೆಗೆ ನಮ್ಮ ಪಯಣ!
ಅಂದಹಾಗೆ ಕೊರೊನಾ ಸೋಂಕು ಹರಡುತ್ತಿದ್ದ ಆರಂಭದಲ್ಲಿ ಭಾರತದಲ್ಲಿ ಕಿಟ್​ಗಳ ಸಮಸ್ಯೆ ಎದುರಾಗಿತ್ತು. ಈ ಸಂದರ್ಭದಲ್ಲಿ ಒಂದೇ ಒಂದು ಕಿಟ್ ಕೂಡ ಭಾರತದಲ್ಲಿ ತಯಾರಾಗುತ್ತಿರಲಿಲ್ಲ. ಆದ್ರೆ ಈಗ ನಿತ್ಯ 2 ಲಕ್ಷ ಕಿಟ್​ಗಳನ್ನ ಉತ್ಪಾದನೆ ಮಾಡ್ತಿದ್ದೇವೆ ಅನ್ನೋದನ್ನೂ ಪ್ರಧಾನಿ ಸ್ಮರಿಸಿದ್ರು.

ಯಾವಾಗ ಕೊರೊನಾ ಸಂಕಷ್ಟ ಶುರುವಾಗಿತ್ತೋ ಆಗ ಭಾರತದಲ್ಲಿ ಒಂದೇ ಒಂದು ಪಿಪಿಇ ಕಿಟ್ ಕೂಡ ತಯಾರಾಗುತ್ತಿರಲಿಲ್ಲ. N95 ಮಾಸ್ಕ್​ಗಳ ಉತ್ಪಾದನೆ ಕೂಡ ಹೆಸರಿಗೆ ಮಾತ್ರ ಎಂಬಂತೆ ಇತ್ತು. ಆದರೆ ಇವತ್ತು ಭಾರತದಲ್ಲೇ 2 ಲಕ್ಷ ಪಿಪಿಇ ಕಿಟ್​ಗಳು ಹಾಗೂ 2 ಲಕ್ಷ N95 ಮಾಸ್ಕ್​ಗಳನ್ನು ಉತ್ಪಾದನೆ ಮಾಡಲಾಗುತ್ತಿದೆ ಎಂದ್ರು.

5 ಸ್ತಂಭಗಳ ಸೂತ್ರ ಹೇಳಿದ ಪ್ರಧಾನಿ ಮೋದಿ:
ಅಂದಹಾಗೆ ಭಾರತದ ಶಾಸ್ತ್ರಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ‘ಆತ್ಮ ನಿರ್ಭರ ಭಾರತ’ ಚಿಂತನೆಯನ್ನು ಪ್ರತಿಪಾದಿಸಿದ್ರು. ಇದಕ್ಕಾಗಿ 5 ಸ್ತಂಭಗಳ ಸೂತ್ರ ಹೇಳಿದ ಪಿಎಂ ಮೋದಿ ಆರ್ಥಿಕತೆ, ಮೂಲಸೌಕರ್ಯ, ತಂತ್ರಜ್ಞಾನ ಆಧಾರಿತ ವ್ಯವಸ್ಥೆ, ಡೆಮೋಗ್ರಫಿ ಹಾಗೂ ಬೇಡಿಕೆಯನ್ನ ವಿವರಿಸಿದ್ರು.

ಒಟ್ನಲ್ಲಿ ‘ಕೊರೊನಾ’ ಸೋಂಕಿನ ಸಂಕಷ್ಟದ ನಡುವೆ, ಪಾತಾಳ ಸೇರುತ್ತಿರುವ ಆರ್ಥ ವ್ಯವಸ್ಥೆಗೆ ಪಿಎಂ ಮೋದಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ. ಜಾಗತಿಕ ಮಟ್ಟದಲ್ಲೂ ಬಹುದೊಡ್ಡದಾದ ಪ್ಯಾಕೇಜ್ ಅನ್ನು ಭಾರತದ ಆರ್ಥಿಕ ಸ್ಥಿತಿ ಸುಧಾರಣೆಗಾಗಿ ಘೋಷಿಸಿದ್ದಾರೆ. ಇನ್ನು ಪ್ರಧಾನಿ ನಿನ್ನೆ ಆಡಿದ ಮಾತುಗಳು ಆರ್ಥಿಕತೆಗೆ ಸೀಮಿತವಾಗದೇ, ಪ್ರಜೆಗಳ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸವನ್ನೂ ಮಾಡಿದೆ. ಭಾರತ ವಿಶ್ವಗುರುವಾಗುವತ್ತ ಮುನ್ನಡೆಸುವ ಶಕ್ತಿ ತುಂಬಿದೆ.

Published On - 7:07 am, Wed, 13 May 20