Karnataka News Highlights: ಕರಾವಳಿಯಲ್ಲಿ ಹೊತ್ತಿಕೊಂಡ ಹಿಜಾಬ್(Hijab) ವರ್ಸಸ್ ಕೇಸರಿ ಶಾಲು(Kesari Shawl) ಕಿಡಿ, ಈಗ ದೇಶವ್ಯಾಪಿ ವ್ಯಾಪಿಸಿದೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನಡುವೆ ಸಂಘರ್ಷಗಳು ಉಂಟಾಗಿವೆ. ಇನ್ನೂ ಈ ಹಿಜಾಬ್ ಮತ್ತು ಕೇಸರಿ ಶಾಲು ವಿವಾದದಿಂದ ಸದ್ಯ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದ್ದು ಶಾಲಾ ಕಾಲೇಜುಗಳಲ್ಲಿ ಮೊಬೈಲ್ ನಿಷೇಧಕ್ಕೆ ಚರ್ಚೆ ನಡೆಸುತ್ತಿದೆ. ಈ ಕುರಿತು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ರಾಮನಗರದಲ್ಲಿ ಹೇಳಿಕೆ ನೀಡಿದ್ದು, ವಿದ್ಯಾರ್ಥಿಗಳ ಕಲಿಕೆಗೆ ಮೊಬೈಲ್ ಫೋನ್ ಪೂರಕವಾಗಿದೆ. ಮೊಬೈಲ್ನಿಂದ ಅನುಕೂಲ, ಅನಾನುಕೂಲ ಎರಡೂ ಇದೆ. ಮುಂದೆ ಯಾವ ರೀತಿ ಕ್ರಮಕೈಗೊಳ್ಳಬೇಕೆಂದು ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಸಂಘರ್ಷ ಸದ್ಯ ಹೈಕೋರ್ಟ್ ಅಂಗಳದಲ್ಲಿದೆ. ಇನ್ನೂ ರಾಜ್ಯದಲ್ಲಿ ಸೋಮವಾರದಿಂದ ಶಾಲೆಗಳು ಆರಂಭವಾಗುತ್ತಿದ್ದು, ಈ ಕುರಿತಾಗಿ ಸಿಎಂ ಬಸವರಾಜ ಬೊಮ್ಮಾಯಿ ಜಿಲ್ಲಾಧಿಕಾರಿಗಳ ಜೊತೆ ಇಂದು ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ವಿಡಿಯೋ ಕಾನ್ಫರೆನ್ಸ್ ಸಭೆ ಮಾಡಿದ್ದಾರೆ. ಸಭೆಯಲ್ಲಿ ಮೊದಲಿಗೆ ಸೂಕ್ಷ್ಮ ಪರಿಸ್ಥಿತಿ ಇರುವ ಜಿಲ್ಲೆಗಳಾದ ಉಡುಪಿ, ಬಾಗಲಕೋಟೆ, ಮೈಸೂರು, ಮಂಡ್ಯ ಬೀದರ್ ಬಗ್ಗೆ ಮಾಹಿತಿ ಪಡೆದು ಕೊಂಡಿದ್ದಾರೆ. ನಂತರ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಸಿಎಂ ತಾಕೀತು ಮಾಡಿದ್ದಾರೆ. ಇನ್ನೂ ಸೋಮವಾರ ಹೈಸ್ಕೂಲ್ ಆರಂಭವಾಗಿಲ್ಲಿದ್ದು, ಹೆಚ್ಚು ಜನರನ್ನು ನಿಯೋಜಿಸಿ ಹೈಸ್ಕೂಲ್ ಬಳಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದ್ದಾರೆ. ವಿವಿಧ ಸಂಘಟನೆಗಳ ಮೇಲೆ ನಿಗಾ ಇಡಲು ತಿಳಿಸಿದ್ದು, ಇಲಾಖೆಗಳ ನಡುವೆ ಸಮನ್ವಯತೆ ಇರಲಿ ಎಂದು ಹೇಳಿದ್ದಾರೆ. ಸಭೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಶಿಕ್ಷಣ ಸಚಿವ ಬಿ ಸಿ ನಾಗೇಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ ಸೂದ್, ಗುಪ್ತಚರ ಇಲಾಖೆ ಎಡಿಜಿಪಿ ದಯಾನಂದ, ಗೃಹ ಇಲಾಖೆ ಎಸಿಎಸ್ ರಜನೀಶ ಗೋಯಲ್, ಶಿಕ್ಷಣ ಇಲಾಖೆ ಕಾರ್ಯದರ್ಶಿ ಸೆಲ್ವಕುಮಾರ ಉಪಸ್ಥಿತರಿದ್ದರು.
ರಾಜ್ಯದಲ್ಲಿ ಇಂದು 3976 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 41 ಜನರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಕೊರೊನಾ ಸಕ್ರಿಯ ಕೇಸ್ಗಳ ಸಂಖ್ಯೆ 52,013 ರಷ್ಟಿದ್ದು, ಶೇ.4.25ರಷ್ಟು ಪಾಸಿಟಿವಿಟಿ ರೇಟ್ ಕಂಡುಬಂದಿದೆ. ಇನ್ನೂ ಬೆಂಗಳೂರಿನಲ್ಲಿ ಇಂದು 2,315 ಕೊರೊನಾ ಪ್ರಕರಣ ಪತ್ತೆಯಾಗಿದ್ದು, 17 ಜನ ಬಲಿಯಾಗಿದ್ದಾರೆ. ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದೆ.
ಜಿಲ್ಲಾಧಿಕಾರಿಗಳ ಜೊತೆ ಸಿಎಂ ವಿಡಿಯೋ ಕಾನ್ಫರೆನ್ಸ್ ಆರಂಭವಾಗಿದೆ. ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಾಗುತ್ತಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್, ಡಿಸಿಗಳು, ಎಸ್ಪಿಗಳು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ ಸಿಎಂ ಬೊಮ್ಮಾಯಿ ಸಭೆ ಆರಂಭಗೊಂಡಿದೆ.
ಬೆಂಗಳೂರು: ಡಿಸಿ ಹಾಗೂ ಎಸ್.ಪಿ, ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಇಂದು ಸಿಎಂ ಸಭೆ ಮಾಡಲಿದ್ದಾರೆ. ಸದ್ಯ ಗೃಹ ಕಚೇರಿ ಕೃಷ್ಣಗೆ ಆಗಮಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಕೂಡ ಆಗಮಿಸಿದ್ದಾರೆ. ಇನ್ನು ಕೆಲವೇ ನಿಮಿಷಗಳಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಸಿಎಂ ಸಭೆ ಪ್ರಾರಂಭಿಸಲಿದ್ದಾರೆ.
ಮಂಗಳೂರು: ಹಿಜಾಬ್ ವಿವಾದದ ನಡುವೆ ಶಾಲೆಯಲ್ಲಿ ವಿದ್ಯಾರ್ಥಿಗಳು ನಮಾಜ್ ಮಾಡಿರುವಂತಹ ಘಟನೆ ನಡೆದಿದೆ. ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಅಂಕತ್ತಡ್ಕ ಸರಕಾರಿ ಶಾಲೆಯ ಮಕ್ಕಳು ನಮಾಜ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. 6 ನೇ ಮತ್ತು 7 ನೇ ತರಗತಿ ಮಕ್ಕಳು ಕಳೆದ ಮೂರು ವಾರಗಳಿಂದ ಶಾಲಾ ಕೊಠಡಿಯಲ್ಲಿ ನಮಾಜ್ ಮಾಡುತ್ತಿದ್ದರು, ಶಾಲಾ ಸಿಬ್ಬಂದಿ ಯಾವುದೇ ಕ್ರಮ ಕೈಗೊಂಡಿಲ್ಲ.
ಚಿಕ್ಕಬಳ್ಳಾಪುರ: ರಾಜ್ಯ, ರಾಷ್ಟ್ರದಲ್ಲಿ ಸಾಕಷ್ಟು ಸಮಸ್ಯೆಗಳಿದ್ರೂ ಅದರ ಬಗ್ಗೆ ಗಮನ ಹರಿಸುತ್ತಿಲ್ಲ. ಬಿಜೆಪಿ ಮತ್ತು ಕಾಂಗ್ರೇಸ್ ಜನರಲ್ಲಿ ಕೋಮು ಭಾವನೆ ಕೆರಳಿಸುತ್ತಿದ್ದಾರೆ ಎಂದು ಚಿಂತಾಮಣಿಯಲ್ಲಿ ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಹೇಳಿದ್ದಾರೆ. ಹಿಜಾಬ್ ಕೇಸರಿ ಹೊಸ ವಿಚಾರವೇನು ಅಲ್ಲ. ಎಳೆ ಮಕ್ಕಳಲ್ಲಿ ದ್ವೇಷ ಬಾವನೆ ಉಂಟು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ: ರಾಜ್ಯದಲ್ಲಿ ಹಿಜಾಬ್ ವಿವಾದ ಪ್ರಕರಣದ ಅಂತಿಮ ತಿರ್ಪು ಬರುವವರೆಗೂ ಯಾರ ಮನಸ್ಸಿಗೂ ನೊವುಂಟು ಮಾಡಬಾರದು ಎಂದು ದೇವನಹಳ್ಳಿ ತಾಲೂಕಿನ ವೆಂಕಟಗಿರಿಕೋಟೆ ಗ್ರಾಮದಲ್ಲಿ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡಿದ್ದಾರೆ. ನ್ಯಾಯಾಲಯದ ಅಂತಿಮ ತೀರ್ಪಿಗೆ ಎಲ್ಲರೂ ತಲೆ ಭಾಗಬೇಕು ಮತ್ತು ಹಾಗೇ ನಡೆದುಕೊಳ್ಳಬೇಕು. ಮೊದಲು ನಾವು ಭಾರತೀಯರು ಎನ್ನುವ ಪರಿಕಲ್ಪನೆ ಎಲ್ಲರಿಗೂ ಬರಬೇಕು ಎಂದು ಕಿವಿಮಾತು ಹೇಳಿದ್ದಾರೆ. ಒಬ್ಬರನ್ನ ವೈಭವಿಕರಿಸೋದು, ಇನ್ನೊಬ್ಬರ ಮನಸ್ಸು ಗಾಸಿಗೊಳಿಸೋದು ನಮ್ಮ ಸಂವಿಧಾನದ ಆಶಯವಲ್ಲ, ಪ್ರಜಾಪ್ರಭುತ್ವದ ಮೂಲ ತತ್ವವಲ್ಲ. ಸಮವಸ್ತ್ರ ಎಂದರೇ ಏನು, ಶ್ರೀಮಂತ, ಬಡವ, ಬಲ್ಲಿಗರೆಲ್ಲರಿಗೂ ಸಮಾನತೆ ಕಾಣೋದೆ ಸಮವಸ್ತ್ರ ಎಂದು ಹೇಳಿದ್ದಾರೆ.
ತುಮಕೂರು: ರಾಜ್ಯ ಸರ್ಕಾರ ರೈತ ವಿರೋಧಿ ಕಾಯ್ದೆ ವಾಪಸ್ ಪಡೆಯಲು ವಿಳಂಬ ಖಂಡಿಸಿ ಫೆ.14ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ತುಮಕೂರು ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಹೇಳಿದ್ದಾರೆ. ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನ ವಾಪಸ್ ಪಡೆಯಲು ವಿಳಂಬ ಮಾಡ್ತಿರುವ ಹಿನ್ನೆಲೆ, ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ವಿಧಾನಸೌಧ ಮುತ್ತಿಗೆ ಹಾಕಲು ನಿರ್ಧರಸಿದೆ. ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಯನ್ನ ಸುಗ್ರಿವಾಜ್ಞೆ ಮೂಲಕ ಜಾರಿಗೆ ತಂದಿದೆ. ಆದರೆ ರಾಜ್ಯ ಸರ್ಕಾರ ಕಾಯಿದೆಯನ್ನ ಹಿಂಪಡೆಯಲು ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಿಸುವಂತ ಒತ್ತಾಯಿಸಿ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ. ಟಿಪ್ಪು ಎಕ್ಸ್ ಪ್ರೆಸ್ ಬದಲು ಮೈಸೂರಿಗೆ ರೈಲು ಸಂಪರ್ಕ ತಂದ ಮಹಾರಾಜರ ಕೊಡುಗೆಯ ಪ್ರತೀಕವಾಗಿ ಒಡೆಯರ್ ಎಕ್ಸ್‌ಪ್ರೆಸ್ ಎಂದು ಹೆಸರಿಡುವಂತೆ ಮನವಿ ಮಾಡಲಾಗಿದೆ. ಬೆಂಗಳೂರು ಮೈಸೂರು ನಡುವಿನ ಎಕ್ಸ್‌ಪ್ರೆಸ್ ಟ್ರೇನ್ಗೆ ಒಡೆಯರ್ ಎಕ್ಸ್‌ಪ್ರೆಸ್ ಎಂದು ಹೆಸರಿಡುವಂತ್ತೆ ಕೇಂದ್ರದ ರೈಲ್ವೆ ಸಚಿವ ಅಶ್ವಿನಿ ವೈಷ್ಣವಗೆ ಸಂಸದ ಪ್ರತಾಪ್ ಸಿಂಹ ಲಿಖಿತ ಮನವಿ ಸಲ್ಲಿಸಿದ್ದಾರೆ.
ಬೆಳಗಾವಿ: ಯುವತಿಯನ್ನು ಚುಡಾಯಿಸುತ್ತಿದ್ದ 19 ವರ್ಷದ ಯುವಕನಿಗೆ ಸಾರ್ವಜನಿಕರು ಥಳಿಸಿರುವಂತಹ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆ ಖಾನಾಪುರ ಪಟ್ಟಣದ ಶಿವ ಸ್ಮಾರಕ ಬಳಿ ಈ ಘಟನೆ ನಡೆದಿದ್ದು, ರಾಜಸ್ಥಾನ ಮೂಲದ ಯುವಕನಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಟೇಲರಿಂಗ್ ಕ್ಲಾಸ್ಗೆ ಹೋಗುತ್ತಿದ್ದ ಯುವತಿಯರಿಗೆ ಚುಡಾಯಿಸಿದ್ದು, ತಕ್ಷಣವೇ ಯುವಕನ ಕೃತ್ಯವನ್ನ ಸ್ಥಳೀಯರ ಗಮನಕ್ಕೆ ಯುವತಿಯರು ತಂದಿದ್ದಾರೆ. ಯುವಕನಿಗೆ ಥಳಿಸಿದ ಸಾರ್ವಜನಿಕರು ಬುದ್ಧಿವಾದ ಹೇಳಿ ಕಳುಹಿಸಿಕೊಟ್ಟಿದ್ದಾರೆ. ಸ್ಥಳೀಯರು ಯುವಕನನ್ನ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸದ್ಯ ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ನೆಲಮಂಗಲ: ಕೌಟುಂಬಿಕ ಕಲಹಕ್ಕೆ ಬೇಸತ್ತು ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನೆಲಮಂಗಲದಲ್ಲಿ ನಡೆದಿದೆ. ಗಂಗೊಂಡಹಳ್ಳಿ ನಿವಾಸಿ ಶಶಿಧರ್(33)ಮೃತ ದುರ್ದೈವಿ. ಮನೆ ಕಟ್ಟಲು ಬ್ಯಾಂಕ್ನಿಂದ ಶಶಿಧರ್ ಸಾಲ ಪಡೆದಿದ್ದು, ಪ್ರತಿ ತಿಂಗಳು ಇಎಮ್ಐ ಕಟ್ಟುವಂತೆ ಬ್ಯಾಂಕ್ನಿಂದ ಒತ್ತಡ ಹೇರಲಾಗುತ್ತಿತ್ತು. ಹಾಗಾಗಿ ಪ್ರತಿದಿನ ಮನೆಯಲ್ಲಿ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದ. ಸದ್ಯ ಪ್ರಕರಣ ಮಾದನಾಯಕನ ಹಳ್ಳಿಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಬೆಂಗಳೂರು:ನರೇಗಾ ಯೋಜನೆಯಡಿ 32.41 ಲಕ್ಷ ಕುಟುಂಬಗಳ 60.87 ಲಕ್ಷ ಜನರಿಗೆ ಉದ್ಯೋಗ ನೀಡಲಾಗಿದ್ದು, ನೇರವಾಗಿ ಫಲಾನುಭವಿಗಳ ಖಾತೆಗೆ ಒಟ್ಟು 4.064 ಕೋಟಿ ಕೂಲಿ ಮೊತ್ತ ವರ್ಗಾವಣೆ ಮಾಡಲಾಗಿದೆ ಎಂದು ಬೆಂಗಳೂರಿನಲ್ಲಿ ಸಚಿವ ಈಶ್ವರಪ್ಪ ಹೇಳಿದ್ದಾರೆ. ದೇಶದಲ್ಲೇ ನಾವು ಮೊದಲನೇ ಸ್ಥಾನದಲ್ಲಿ ಇದ್ದೇವೆ. ಜಲಶಕ್ತಿ ಅಭಿಯಾನದಲ್ಲಿ 8.92 ಲಕ್ಷ ಕಾಮಗಾರಿ ಕೈಗೆತ್ತಿಕೊಂಡು 4.87 ಲಕ್ಷ ಕಾಮಗಾರಿ ಪೂರ್ಣಗೊಳಿಸಲಾಗಿದೆ. ದೇಶದಲ್ಲೇ ನಾವು ಮೊದಲನೇ ಸ್ಥಾನದಲ್ಲಿ ಇದ್ದೇವೆ. ಮನ್ರೇಗಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅನುದಾನದಿಂದ ಕಳೆದ 6 ವರ್ಷದಲ್ಲಿ 3,275 ಅಂಗನವಾಡಿ ಕಟ್ಟಡ ನಿರ್ಮಾಣ ಕೈಗೆತ್ತಿಕೊಂಡು 2,335 ಕಟ್ಟಡ ಪೂರ್ಣಗೊಳಿಸಲಾಗಿದೆ ಎಂದರು.
ದಾವಣಗೆರೆ: ವದಂತಿಗೆ ಯಾರೂ ಕಿವಿಗೊಡಬೇಡಿ, ದಾವಣಗೆರೆಯಲ್ಲಿ ಯಾವುದೇ ಗಂಭೀರ ಸಮಸ್ಯೆ ಆಗಿಲ್ಲ. ಹಿಜಾಬ್, ಕೇಸರಿ ಶಾಲು ವಿಚಾರವಾಗಿ ಚರ್ಚೆಗಳು ಶುರುವಾಗಿರುವ ಇಂತಹ ಪರಿಸ್ಥಿತಿಯಲ್ಲಿ ಜನರು ಶಾಂತಿ ಹಾಗೂ ಸಂಯಮದಿಂದ ವರ್ತಿಸಬೇಕು ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ದಾವಣಗೆರೆ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ವಿಜಯಪುರ: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಹಿನ್ನಲೆ, ಗುಮ್ಮಟನಗರಿ ವಿಜಯಪುರದಲ್ಲಿ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಸಜ್ಜಾಗಿರೋ ಪೊಲೀಸರು ನಗರದಾದ್ಯಂತ ಪಥ ಸಂಚಲನ ನಡೆಸಿದ್ದಾರೆ. ಎಸ್ಪಿ ಎಚ್ ಡಿ ಆನಂದಕುಮಾರ್ ನೇತೃತ್ವದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ಮಾಡಲಾಯಿತು. ಜೊತೆಗೆ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ಚಿಕ್ಕೋಡಿ: ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ಸಂಘರ್ಷ ವಿಚಾರವಾಗಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಗವಾಡದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ಹೈಕೋರ್ಟ್ನಲ್ಲಿ ವಾದ ವಿವಾದ ಪ್ರಾರಂಭಗಿದ್ದು, ನಿನ್ನೆ ಮಧ್ಯಂತರ ಆದೇಶ ಕೂಡ ಬಂದಿದೆ. ನಾವು ಸಂವಿಧಾನಕ್ಕೆ ನ್ಯಾಯಾಲಯಕ್ಕೆ ಗೌರವ ಕೊಡುತ್ತೇವೆ. ಕೋರ್ಟಿನ ಕೊನೆ ಆದೇಶ ಬರೋವರೆಗೂ ಎರಡೂ ಕೊಮಿನ ಜನ ಸಾಂಪ್ರದಾಯಿಕ ಉಡುಪು ತೊಡಬಾರದು. ಮೊದಲು ಇರತಕ್ಕಂತ ವ್ಯವಸ್ಥೆಯಲ್ಲೆ ಮುಂದುವರೆಯುವಂತೆ ಕೋರ್ಟನ ಮಧ್ಯಂತರ ಆದೇಶ ಬಂದಿದೆ ಎಂದು ಹೇಳಿದರು.
ಬೀದರ್: ಹಿಜಾಬ್ ಹಾಕಿಕೊಂಡು ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ನೀಡದೆ ತಡೆದಿರುವ ಘಟನೆ ನಡೆದಿದೆ. ಬೀದರ್ ನ ಬ್ರೀಮ್ಸ್ ನ ಮೆಡಿಕಲ್ ಕಾಲೇಜ್ನಲ್ಲಿ ನಿನ್ನೆ ನಡೆದ ಘಟನೆಯ ವಿಡಿಯೋ ವೈರಲ್ ಆಗಿದೆ. ನಿನ್ನೆ ಬಿಎಸ್ಸಿ ನರ್ಸಿಂಗ್ ಪರೀಕ್ಷೆ ವೇಳೆ ಹಿಜಾಬ್ ಹಾಕಿಕೊಂಡು ಪರೀಕ್ಷೆ ಬರೆಲು ಅವಕಾಶಕೊಟ್ಟಿಲ್ಲ. ಈ ಗಲಾಟೆಯ ವಿಡಿಯೋ ಇವಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಎಸ್ಸಿ ನರ್ಸಿಂಗ್ ಪರೀಕ್ಷಾ ಕೊಠಡಿಯಲ್ಲಿ ಪ್ರವೇಶ ನಿರಾಕರಿಸಿದ ಮೇಲ್ವಿಚಾರಕ, ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರೆಯಲು ಕಾಲೇಜು ಮೇಲ್ವಿಚಾರಕ ಒತ್ತಡ ಹೇರಿದ್ದಾರೆ. ಈ ಕುರಿತು ಸ್ಪಷ್ಟನೆ ಕೊಟ್ಟ ಪರೀಕ್ಷಾ ಮೇಲ್ವಿಚಾರಕ ಡಾ. ಪ್ರದೀಪ್ ರಾಠೋಡ, ಹಿಜಾಬ್ ಧರಸಿ ಪರೀಕ್ಷೆ ಬರೆದರೆ ನಕಲು ಸಾಧ್ಯತೆ ಹಿನ್ನೆಲೆ ಹಿಜಾಬ್ಗೆ ಅನುಮತಿ ಕೊಟ್ಟಿಲ್ಲ. ಹಾಲ್ ಟಿಕೇಟ್ ನೋಡಿ ಪರೀಕ್ಷೆ ಬರೆಯೋ ಅಭ್ಯರ್ಥಿ ಅವರೆ ಎಂದು ಖಚಿತ ಪಡಿಸಿಕೊಂಡ ಬಳಿಕ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ.
ಉಡುಪಿ: ಒಂದೂವರೆ ತಿಂಗಳಿಂದ 6 ವಿದ್ಯಾರ್ಥಿನಿಯರ ಚಲನವಲನದಲ್ಲಿ ಅನುಮಾನವಿದ್ದು, 6 ಜನ ವಿದ್ಯಾರ್ಥಿನಿಯರು ಸಾಕಷ್ಟು ಸುಳ್ಳು ಹೇಳುತ್ತಿದ್ದಾರೆ ಎಂದು ಟಿವಿ9ಗೆ ಸರ್ಕಾರಿ ಬಾಲಕಿಯರ ಕಾಲೇಜು ಪ್ರಾಂಶುಪಾಲ ರುದ್ರೇಗೌಡ ಹೇಳಿಕೆ ನೀಡಿದ್ದಾರೆ. ಎಷ್ಟು ಉತ್ತಮವಾಗಿದ್ದ ವಿದ್ಯಾರ್ಥಿಗಳನ್ನ ಬದಲಾಯಿಸಿದ್ದಾರೆ. ಇಲ್ಲಿ ಕ್ಲಾಸ್ ರೂಂನಲ್ಲಿ ಹಿಂದೆ ಯಾರು ಕೂಡ ಹಿಜಬ್ ಅಥವಾ ಬುರ್ಖಾ ಹಾಕುತ್ತಿರಲಿಲ್ಲ. ಅವರ ಸೀನಿಯರ್ಸ್ ಸೂಪರ್ ಸೀನಿಯರ್ಸ್ ಅಮ್ಮಂದಿರು ಚಿಕ್ಕಮ್ಮಂದಿರು ಯಾರು ಹಾಕುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಹಿಜಾಬ್ ಮತ್ತು ಕೇಸರಿ ಶಾಲು ವಿವಾದದಲ್ಲಿ ಮಂಡ್ಯದ ವಿದ್ಯಾರ್ಥಿನಿ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದಳು. ಸದ್ಯ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಮನೆಗೆ ಶಾಸಕರು ಭೇಟಿ ನೀಡುತ್ತಿದ್ದಾರೆ. ಮಂಡ್ಯದ ಪಿಇಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಸ್ಕಾನ್ ಓದುತ್ತಿದ್ದಾಳೆ. ಮಂಡ್ಯದ ಗುತ್ತಲು ಬಡಾವಣೆಯಲ್ಲಿರುವವ ಮುಸ್ಕಾನ್ ನಿವಾಸಕ್ಕೆ, ಮುಂಬೈನ ಬಾಂದ್ರಾ ಕ್ಷೇತ್ರದ ಶಾಸಕ ಜಿಶಾನ್ ಸಿದ್ದಿಕ್ ಭೇಟಿ ನೀಡಿದ್ದಾರೆ. ಭೇಟಿ ನೀಡಿ ಐ ಫೋನ್, ಸ್ಮಾರ್ಟ್ವಾಚ್ ಉಡುಗೊರೆಯಾಗಿ ನೀಡಿದ್ದಾರೆ. ಬಳಿಕ ಮಾತನಾಡಿದ ಶಾಸಕ ಜಿಶಾನ್ ಸಿದ್ದಿಕ್, ಮುಸ್ಕಾನ್ ಘೋಷಣೆ ಕೂಗಿರುವುದು ನನಗೆ ಗರ್ವ ಅನಿಸಿದೆ. ಮಂಡ್ಯದಿಂದ ಇಂಡಿಯಾವರೆಗೂ ಆಕೆ ಬಗ್ಗೆ ಗರ್ವಪಡುತ್ತಿದೆ. ಹಿಜಾಬ್ ಧರಿಸುವುದು ಮುಸ್ಲಿಂ ಹೆಣ್ಣುಮಕ್ಕಳ ಹಕ್ಕು. ಹೆಣ್ಣುಮಕ್ಕಳು ತಮ್ಮ ಹಕ್ಕಿನ ಬಗ್ಗೆ ಧೈರ್ಯದಿಂದ ಧ್ವನಿ ಎತ್ತಿದ್ದಾರೆ ಎಂದು ಹೇಳಿದ್ದಾರೆ.
ಧಾರವಾಡ: ಕರ್ನಾಟಕ ಕಾಲೇಜು ಪ್ರಾಚಾರ್ಯರಿಗೆ ಅರೆಸ್ಟ್ ವಾರೆಂಟ್ ನೀಡಲಾಗಿದೆ. ಧಾರವಾಡದ ಪ್ರತಿಷ್ಠಿತ ಕರ್ನಾಟಕ ಕಾಲೇಜು ಪ್ರಾಚಾರ್ಯರಾದ ದುರಗಪ್ಪ ಕರಡೋಣಿಗೆ ಬೆಳಗಾವಿ ಜಿಲ್ಲೆಯ ಗೋಕಾಕ್ ನ ಜೆ.ಎಂ.ಎಫ್.ಸಿ. ಕೋರ್ಟ್ನಿಂದ ವಾರೆಂಟ್ ನೀಡಲಾಗಿದೆ. ಗೋಕಾಕ್‌ನ ವಿಠ್ಠಲ್ ಅನ್ನುವವರ ಬಳಿ 3 ಲಕ್ಷ ಹಣ ಪಡೆದಿದ್ದ ಕರಡೋಣಿ, ಹಣ ಹಿಂತಿರುಗಿಸಲು ಚೆಕ್ ನೀಡಿದ್ದಾರೆ ಆದರೆ ಖಾತೆಯಲ್ಲಿ ಹಣವಿಲ್ಲದಿರುವುದರಿಂದ ಚೆಕ್ ಬೌನ್ಸ್ ಆಗಿದೆ. ಹಾಗಾಗಿ ಹು-ಧಾ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ ಕೋರ್ಟ್, ಎಪ್ರಿಲ್ 22 ರಂದು ಹಾಜರುಪಡಿಸಲು ಸೂಚನೆ ನೀಡಿದೆ.
ಹಿಜಾಬ್ ವಿಚಾರ ನ್ಯಾಯಾಲಯದಲ್ಲಿ ಇರೋದ್ರಿಂದ ಹೆಚ್ಚು ಮಾತಾಡೋದು ಸರಿಯಾಗಲ್ಲ ಎಂದು ಕಾರವಾದಲ್ಲಿ ಸಚಿವ ಶಿವರಾಮ ಹೆಬ್ಬಾರ್ಹೇ ಳಿದ್ದಾರೆ. ನ್ಯಾಯಾಲಯದ ತ್ರಿಸದಸ್ಯ ಪೀಠದಲ್ಲಿ ಗಂಭೀರವಾದ ವಿಸ್ತೃತವಾದ ಚರ್ಚೆ ನಡೆಯುತ್ತಿದ್ದು, ಹೈ ಕೋರ್ಟ್‌ನ ತೀರ್ಪು ಎಲ್ಲರೂ ಗೌರವಿಸಬೇಕಾಗಿದೆ. ನ್ಯಾಯಾಲಯದ ಪೀಠದ ನಿರ್ಣಯಕ್ಕೆ ಪ್ರತಿಯೊಬ್ಬರೂ ಒಪ್ಪಿಕೊಳ್ಳಬೇಕಾಗಿದೆ ಎಂದರು. ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ತಮ್ಮ ಮೂಗಿನ ನೇರಕ್ಕೆ ಆಪಾದನೆ ಮಾಡುತ್ತಿದ್ದಾರೆ. ಆ ಕಾರಣಕ್ಕೆ ಹೈ ಕೋರ್ಟ್ ಮುಖ್ಯನ್ಯಾಯಮೂರ್ತಿ ಮಧ್ಯ ಪ್ರವೇಶ ಮಾಡಿ ಮೂವರು ನ್ಯಾಯಮೂರ್ತಿಗಳ ಪೀಠ ಮಾಡಿದೆ. ವಿಸ್ತೃತವಾದ ಚರ್ಚೆ ಮಾಡಿ ನ್ಯಾಯ ನೀಡಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಹಿಜಾಬ್, ಕೇಸರಿ ಶಾಲು ವಿಚಾರದಲ್ಲಿ ಸಂಘರ್ಷ ವಿಚಾರವಾಗಿ, ಶಾಲಾ ಕಾಲೇಜುಗಳಿಗೆ ಸರ್ಕಾರ ರಜೆ ನೀಡಿದ್ದು ಸರಿಯಲ್ಲ. ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ವಿಮುಖವಾಗಿದೆ. ಈ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ಬದ್ಧತೆ ಇಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹುಬ್ಬಳ್ಳಿಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ರಾಮನ ಭಕ್ತರೇ ಇರಲಿ, ಹನುಮನ ಭಕ್ತರೇ ಇರಲಿ. ವಿದ್ಯಾರ್ಥಿಗಳ ಭವಿಷ್ಯದ ಜತೆ ರಾಜಕೀಯ ಮಾಡಬಾರದು. ಹಿಜಾಬ್, ಕೇಸರಿ ಅಂತ ಹಲ್ಕಟ್ ರಾಜಕೀಯ ಮಾಡುತ್ತಿದ್ದು, ಈ ರೀತಿ ಮಾಡುವುದು ಒಂದೇ ಕೊಲೆ ಮಾಡುವುದು ಒಂದೇ ಎಂದು ಹೇಳಿದ್ದಾರೆ.
ಹಿಜಾಬ್- ಕೇಸರಿ ಶಾಲು ಕದನದ ನಂತರ ಎಚ್ಚೆತ್ತ ಶಿಕ್ಷಣ ಇಲಾಖೆ, ಸ್ಕೂಲ್ ಕಾಲೇಜು ಆವರಣದಲ್ಲಿ ಮೊಬೈಲ್‌ಬಳಕೆ ಸಂಪೂರ್ಣ ನಿಷೇಧಕ್ಕೆ ಚರ್ಚೆ ನಡೆಸಲಾಗುತ್ತಿದೆ. ಸ್ಕೂಲ್ ಕಾಲೇಜಿನಲ್ಲಿ ನಡೆಯುವ ಸಣ್ಣ ಪುಟ್ಟ ಘಟನೆಗಳನ್ನ ಚಿತ್ರೀಕರಿಸಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡ ಲಾಗುತ್ತಿದ್ದು, ವಿದ್ಯಾರ್ಥಿಗಳು ಸೋಶಿಯಲ್ ಮೀಡಿಯಾದಲ್ಲಿ ಅಗತ್ಯವಿಲ್ಲದ ವಿಡಿಯೋ ವೈರಲ್ ಮಾಡುತ್ತಿದ್ದಾರೆ. ಹಾಗಾಗಿ ಶಾಲಾ ಕಾಲೇಜು ಆವರಣದಲ್ಲಿ ಮೊಬೈಕ್ ಬಳಕೆ ನಿಷೇಧ ಮಾಡಲು ತಜ್ಞರ ಸಲಹೆ ನೀಡಿದ್ದು, ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಈಗಾಗಲೇ ತರಗತಿ ಒಳಗೆ ಮೊಬೈಲ್ ನಿಷೇಧವಿದ್ದು, ಇದನ್ನ ಕಟ್ಟುನಿಟ್ಟಾಗಿ ಜಾರಿಗೆ ತರಲು ಚರ್ಚೆ ಮಾಡಲಾಗುತ್ತಿದೆ. ಪರೀಕ್ಷೆ ವೇಳೆ ವಿದ್ಯಾರ್ಥಿಗಳನ್ನ ಪರಿಶೀಲನೆ ಮಾಡುವ ಹಾಗೆ, ಇನ್ಮುಂದೆ ತಪಾಸಣೆ ಮಾಡಿ ಒಳ ಬಿಡುವುದರ ಬಗ್ಗೆ ಕೂಡ ಚರ್ಚೆ ಮಾಡಲಾಗುವುದು.
ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಕುರಿತಾಗಿ ಹೈಕೋರ್ಟ್ ನ ಮೌಖಿಕ ಸೂಚನೆ ವಿರುದ್ಧ ಸದ್ಯ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಅರ್ಜಿಯನ್ನು ಪ್ರಸ್ತಾಪಿಸಲು ನಿರ್ಧರಿಸಲಾಗಿದೆ. ಸಿಜೆ ಪೀಠದಲ್ಲಿ ಪ್ರಸ್ತಾಪಕ್ಕೆ ವಕೀಲ ದೇವದತ್ತ ಕಾಮತ್ ನಿರ್ಧರಿಸಿದ್ದಾರೆ. ಇನ್ನೂ ಕೆಲವೇ ಹೊತ್ತಿನಲ್ಲಿ ಅರ್ಜಿ ಬಗ್ಗೆ ಪ್ರಸ್ತಾಪ ಮಾಡಲಾಗುತ್ತಿದ್ದು, ಮೇಲ್ಮನವಿಯನ್ನು ಸಿಜೆ ಪೀಠದಲ್ಲಿ ಪ್ರಸ್ತಾಪಿಸಿ ತುರ್ತಾಗಿ ವಿಚಾರಣೆಗೆ ಕೋರಲಾಗಿದೆ.
ನಿನ್ನೆ ಹೈಕೋರ್ಟ್ ಮೌಖಿಕ ಮಧ್ಯಂತರ ಆದೇಶ ನೀಡಿದೆ. ಜೊತೆಗೆ ವಿದ್ಯಾರ್ಥಿಗಳಿಗೆ ಯಾವುದೇ ಧಾರ್ಮಿಕ ಡ್ರೆಸ್ ಧರಿಸದಂತೆ ಸೂಚನೆ ನೀಡಿದೆ. ಇದು ಧಾರ್ಮಿಕ ನಂಬಿಕೆಗೆ ಸಂಬಂಧಿಸಿದಂತೆ ದೂರಗಾಮಿ ಪರಿಣಾಮ ಬೀರಬಹುದು. ಸಂವಿಧಾನದ 25 ನೇ ವಿಧಿಯಡಿ ನೀಡಿರುವ ಹಕ್ಕು ಸಿಗಲ್ಲ ಎಂದು
ದೇವದತ್ತ ಕಾಮತ್ ವಾದ ಮಂಡಿಸಿದ್ದಾರೆ.
ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ಸಂಘರ್ಷ ವಿಚಾರವು ಸದ್ಯ ದೇಶ ವ್ಯಾಪಿವಾಗಿದೆ. ನಿನ್ನೆ ವಿಚಾರಣೆ ನಡೆಸಿದ್ದ ಹೈಕೋರ್ಟ್ ಮಧ್ಯಂತರ ಮೌಖಿಕ ಆದೇಶ ನೀಡಿದೆ. ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ವಿಚಾರಣೆ ಮುಂದಿನ ಆದೇಶದವರೆಗೂ ವಿದ್ಯಾರ್ಥಿಗಳು ಧಾರ್ಮಿಕ ಡ್ರೆಸ್ ಧರಿಸದಂತೆ ಸೂಚನೆ ನೀಡಿದೆ. ಸಂವಿಧಾನದ 25ನೇ ವಿಧಿಯಡಿ ನೀಡಿರುವ ಹಕ್ಕು ಸಿಗಲ್ಲ ಎಂದು ಹಿಜಾಬ್ ಅರ್ಜಿದಾರರ ಪರ ವಕೀಲ ದೇವದತ್ತ ಕಾಮತ್ ವಾದ ಮಂಡಿಸಿದ್ದಾರೆ. ಯಾವುದಾದರೂ ಪರೀಕ್ಷೆಗೆ ತೊಂದರೆ ಆಗುವುದಾದರೆ, ಸೂಕ್ತ ಸಂದರ್ಭದಲ್ಲಿ ವಿಚಾರಣೆ ನಡೆಸುತ್ತೇವೆ ಎಂದು ಸಿಜೆಐ ಹೇಳಿದೆ. ಇದನ್ನ ದೊಡ್ಡ ವಿಷಯ ಮಾಡದಂತೆ ‘ಸುಪ್ರೀಂ’ ಗೆ ಕಿವಿಮಾತು ಹೇಳಲಾಗಿದ್ದು, ನೀವೂ ಕೂಡ ಆಲೋಚಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಲಾಗಿದೆ.
Published On - 11:08 am, Fri, 11 February 22