ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ (Himachal Pradesh) ಭಾರೀ ಮಳೆಯಿಂದ ಉಂಟಾದ ಪ್ರವಾಹ (Flood) ಮತ್ತು ಭೂಕುಸಿತದ (Landslide) ಘಟನೆಗಳಲ್ಲಿ 6 ಜನರು ಸಾವನ್ನಪ್ಪಿದ್ದಾರೆ. ಇನ್ನೂ 13 ಮಂದಿ ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿಮಾಚಲ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಹಠಾತ್ ಪ್ರವಾಹದ ನಂತರ ಸಿಲುಕಿಕೊಂಡಿದ್ದ 22 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಪ್ರವಾಹದಿಂದ ಸಾವನ್ನಪ್ಪಿದವರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಆಡಳಿತವು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ ಎಂದು ಹೇಳಿದ್ದಾರೆ. ಅಧಿಕಾರಿಗಳ ಪ್ರಕಾರ, ಚಂಬಾ ಜಿಲ್ಲೆಯಲ್ಲಿ ಮಳೆಯಿಂದ ಉಂಟಾದ ಭೂಕುಸಿತದ ನಂತರ ಮನೆ ಕುಸಿದು ಮೂವರು ಸಾವನ್ನಪ್ಪಿದ್ದಾರೆ. ಇಂದು ಬೆಳಿಗ್ಗೆ 4.30ರ ಸುಮಾರಿಗೆ ಚೌವರಿ ತೆಹಸಿಲ್‌ನ ಬಾನೆಟ್ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದೆ. ನಂತರ ಮನೆ ಕುಸಿದು 3 ಜನರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: Kullu Cloudburst: ಹಿಮಾಚಲದ ಕುಲುವಿನಲ್ಲಿ ಮೇಘಸ್ಫೋಟ; ಪ್ರವಾಹದಲ್ಲಿ ಕೊಚ್ಚಿ ಹೋಯ್ತು ಅಂಗಡಿ, ವಾಹನಗಳು
ಮಂಡಿಯಲ್ಲಿ, ಭಾರೀ ಮಳೆಯಿಂದ ಉಂಟಾದ ಭೂಕುಸಿತ ಮತ್ತು ಪ್ರವಾಹದಲ್ಲಿ ಬಾಲಕಿಯೊಬ್ಬರು ಸಾವನ್ನಪ್ಪಿದ್ದಾರೆ. ಶುಕ್ರವಾರ ರಾತ್ರಿ ಮಂಡಿ-ಕಟೋಲಾ-ಪ್ರಶಾರ್ ರಸ್ತೆಯ ಬಾಘಿ ನುಲ್ಲಾ ಎಂಬಲ್ಲಿನ ಮನೆಯಿಂದ ಸುಮಾರು ಅರ್ಧ ಕಿಮೀ ದೂರದಲ್ಲಿ ಬಾಲಕಿಯ ಶವ ಪತ್ತೆಯಾಗಿದ್ದು, ಆಕೆಯ ಕುಟುಂಬದ ಐವರು ಕೊಚ್ಚಿಕೊಂಡು ಹೋಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
#HimachalPradesh #2022 #Monsoon2022 #mandi #pandoh pic.twitter.com/VOSifjyDCu
— Varun sharma Roxy (@VaruNRoxy) August 20, 2022
ಇದಲ್ಲದೆ, ಗೋಹರ್ ಡೆವಲಪ್‌ಮೆಂಟ್ ಬ್ಲಾಕ್‌ನ ಕಶನ್ ಗ್ರಾಮದಲ್ಲಿ ಭೂಕುಸಿತದ ನಂತರ ಮತ್ತೊಂದು ಕುಟುಂಬದ 8 ಸದಸ್ಯರು ತಮ್ಮ ಮನೆಯ ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದಾರೆ. ಆದರೆ, ಮೃತದೇಹಗಳನ್ನು ಇನ್ನೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಪ್ರವಾಹ ಮತ್ತು ಭೂಕುಸಿತದ ನಂತರ ಮಂಡಿ ಜಿಲ್ಲೆಯ ಹಲವಾರು ರಸ್ತೆಗಳನ್ನು ಸಹ ನಿರ್ಬಂಧಿಸಲಾಗಿದೆ.
ಹಿಮಾಚಲ ಪ್ರದೇಶದ ವಿಪತ್ತು ನಿರ್ವಹಣಾ ಇಲಾಖೆಯು ರಾಜ್ಯದಲ್ಲಿ ಆಗಸ್ಟ್ 25ರವರೆಗೆ ಭಾರೀ ಮಳೆಯ ಮುನ್ಸೂಚನೆಯಿಂದಾಗಿ ಭೂಕುಸಿತದ ಎಚ್ಚರಿಕೆಯನ್ನು ನೀಡಿದೆ. ಕಂಗ್ರಾ, ಚಂಬಾ, ಮಂಡಿ, ಕುಲು, ಶಿಮ್ಲಾ, ಸಿರ್ಮೌರ್, ಸೋಲನ್, ಹಮೀರ್‌ಪುರ್, ಉನಾ ಮತ್ತು ಬಿಲಾಸ್‌ಪುರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮುಂದಿನ ಮೂರು-ನಾಲ್ಕು ದಿನಗಳಲ್ಲಿ ಮಳೆಯ ಪ್ರಮಾಣವು ಹೆಚ್ಚಾಗುವ ಸಾಧ್ಯತೆಯಿದೆ.