Womens Reservation Bill; ಐತಿಹಾಸಿಕ ಮಹಿಳಾ ಮೀಸಲಾತಿ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಸರ್ವಾನುಮತದ ಅನುಮೋದನೆ

|

Updated on: Sep 21, 2023 | 10:30 PM

Womens Reservation Bill passed in Rajya Sabha; ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆ ಅಥವಾ ನಾರಿ ಶಕ್ತಿ ವಂದನ್ ಕಾಯ್ದೆಯನ್ನು ರಾಜ್ಯಸಭೆ ಗುರುವಾರ ಭಾರಿ ಬಹುಮತದೊಂದಿಗೆ ಅಂಗೀಕರಿಸಿದೆ. ಇನ್ನು ವಿಧೇಯಕಕ್ಕೆ ರಾಷ್ಟ್ರಪತಿಗಳ ಅಂಕಿತ ಬೀಳಬೇಕಿದೆ. ಅದಾದ ನಂತರ ವಿಧೇಯಕವು ಕಾನೂನಾಗಿ ಜಾರಿಗೆ ಬರಲಿದೆ.

Womens Reservation Bill; ಐತಿಹಾಸಿಕ ಮಹಿಳಾ ಮೀಸಲಾತಿ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಸರ್ವಾನುಮತದ ಅನುಮೋದನೆ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ, ಸೆಪ್ಟೆಂಬರ್ 21: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33 ಸ್ಥಾನಗಳನ್ನು ನೀಡುವ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆಗೆ (Women’s Reservation Bill) ರಾಜ್ಯಸಭೆಯಲ್ಲಿಯೂ ಗುರುವಾರ ರಾತ್ರಿ ಅನುಮೋದನೆ ದೊರೆಯಿತು. ಬುಧವಾರವಷ್ಟೇ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕ ಅಂಗೀಕರಿಸಲಾಗಿತ್ತು.  ‘ನಾರಿ ಶಕ್ತಿ ವಂದನಾ ಅಧಿನಿಯಮಕ್ಕೆ (Nari Shakti Vandan Adhiniyam)’ ರಾಜ್ಯಸಭೆಯು ಸರ್ವಾನುಮತದಿಂದ ಅನುಮೋದನೆ ನೀಡಿದೆ. ವಿಧೇಯಕದ ಪರ 215 ಸಂಸದರು ಮತ ಚಲಾಯಿಸಿದರೆ, ವಿರುದ್ಧ ಯಾವೊಬ್ಬ ಸಂಸದನೂ ಮತ ಚಲಾಯಿಸಿಲ್ಲ. ಎಲ್ಲ ಸದಸ್ಯರು ಮಲ್ಟಿಮೀಡಿಯಾ ಸಾಧನಗಳ ಮೂಲಕ ಮತ ಚಲಾಯಿಸಿದರು.

ಮಸೂದೆಗೆ ಉಭಯ ಸದನಗಳ ಅನುಮೋದನೆ ದೊರೆತಿದ್ದು, ಮುಂದಿನ ಹಂತದಲ್ಲಿ ಇದನ್ನು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಳುಹಿಸಿಕೊಡಲಾಗುತ್ತದೆ. ರಾಷ್ಟ್ರಪತಿಗಳ ಸಹಿ ದೊರೆತ ನಂತರ ‘ನಾರಿ ಶಕ್ತಿ ವಂದನ್ ಕಾಯ್ದೆ’ ಕಾನೂನಾಗಿ ಜಾರಿಗೆ ಬರಲಿದೆ.

ಮತದಾನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿ ಮಾತನಾಡುತ್ತಾ, ಮಸೂದೆಯಿಂದ ಮಾತ್ರ ಮಹಿಳಾ ಶಕ್ತಿಗೆ ವಿಶೇಷ ಗೌರವ ಸಿಗುತ್ತಿಲ್ಲ. ಈ ಮಸೂದೆಯ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳ ಸಕಾರಾತ್ಮಕ ಚಿಂತನೆಯು ನಮ್ಮ ದೇಶದ ಮಹಿಳಾ ಶಕ್ತಿಗೆ ಹೊಸ ಶಕ್ತಿಯನ್ನು ನೀಡುತ್ತದೆ. ಮಹಿಳಾ ನಾಯಕತ್ವವೇ ಉಜ್ವಲ ಭವಿಷ್ಯದ ಭರವಸೆ ಎಂದರು.

ಇದನ್ನೂ ಓದಿ: ಪಕ್ಷಾತೀತವಾಗಿ ಧನ್ಯವಾದಗಳು; ಮಹಿಳಾ ಮೀಸಲಾತಿ ಮಸೂದೆ ಬೆಂಬಲಿಸಿದವರಿಗೆ ನಮೋ ಎಂದ ಪ್ರಧಾನಿ ಮೋದಿ

ಮಹಿಳೆಯರ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡುವುದಿಲ್ಲ; ನಿರ್ಮಲಾ ಸೀತಾರಾಮನ್

ರಾಜ್ಯಸಭೆಯಲ್ಲಿ ನಡೆದ ಚರ್ಚೆಯ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ಮಹಿಳೆಯರ ವಿಷಯದಲ್ಲಿ ಬಿಜೆಪಿ ಯಾವುದೇ ರೀತಿಯ ರಾಜಕೀಯ ಮಾಡುವುದಿಲ್ಲ. ಪಂಚಾಯತಿಗಳಲ್ಲಿ ಶೇ 33ರಷ್ಟು ಮೀಸಲಾತಿಯು ತಳಮಟ್ಟದಲ್ಲಿ ಉತ್ತಮ ಫಲಿತಾಂಶವನ್ನು ಕಂಡಿದೆ ಎಂದರು.

ಪಂಚಾಯತ್​ಗಳನ್ನು ಗಮನಿಸಿದರೆ ಈ ಮಸೂದೆಯ ಕರಡನ್ನು ಬಹಳ ಚಿಂತನಶೀಲವಾಗಿ ಸಿದ್ಧಪಡಿಸಲಾಗಿದೆ ಎಂದು ಹೇಳಬಹುದು. ಈ ಮಸೂದೆಯನ್ನು ಬಹಳ ದಿನಗಳಿಂದ ನಿರೀಕ್ಷಿಸಲಾಗಿದೆ. ಜನಗಣತಿಯ ನಂತರ ಸೀಮೆ ವಿಂಗಡಣೆ ಪ್ರಕ್ರಿಯೆ ಮುಗಿದ ನಂತರವಷ್ಟೇ ಮಹಿಳೆಯರಿಗೆ ಲೋಕಸಭೆ ಮತ್ತು ವಿಧಾನಸಭೆ ಸ್ಥಾನಗಳನ್ನು ಮೀಸಲಿಡಲು ಸಾಧ್ಯ ಎಂದರು. ಈ ಕಾನೂನು ಹದಿನೈದು ವರ್ಷಗಳವರೆಗೆ ಜಾರಿಯಲ್ಲಿರುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಇದನ್ನೂ ಓದಿ: Women’s Reservation Bill: ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆ ಅಂಗೀಕಾರ

ಮಹಿಳಾ ಮೀಸಲಾತಿ ಮಸೂದೆ ಅಂಗೀಕೃತಗೊಂಡ ಬಗ್ಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಮಸೂದೆ ಅಂಗೀಕಾರಗೊಂಡಿರುವುದು ಭಾರತೀಯ ರಾಜಕೀಯದಲ್ಲಿ ಒಂದು ಮೈಲಿಗಲ್ಲಾಗಿದೆ ಎಂದು ಹೇಳಿದರು. ನಾರಿ ಶಕ್ತಿ ವಂದನ್ ಕಾಯ್ದೆಯಡಿ 2029ರ ಲೋಕಸಭೆ ಚುನಾವಣೆಯಲ್ಲಿ ಶೇ 33ರಷ್ಟು ಮಹಿಳೆಯರ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಲಾಗುವುದು. ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿ ಕಲ್ಪಿಸಲು ಕೇಂದ್ರ ಸರ್ಕಾರ ಆರಿಸಿಕೊಂಡ ಮಾರ್ಗ ಸರಿಯಾದದ್ದಾಗಿದೆ ಎಂದು ಅವರು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:13 pm, Thu, 21 September 23