ಅಮಿತ್​ ಶಾ ಉತ್ತರ ಪ್ರದೇಶ ಭೇಟಿ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ರನ್ನು ಹೊಗಳಿದ ಗೃಹ ಸಚಿವ

| Updated By: Lakshmi Hegde

Updated on: Aug 01, 2021 | 3:41 PM

ಉತ್ತರಪ್ರದೇಶದಲ್ಲಿ ನಾಯಕತ್ವ ಬದಲಾವಣೆ ಆಗಲಿದೆ ಎಂಬ ಮಾತುಗಳೂ ಕೇಳಿಬಂದಿದ್ದವು. ಆದರೆ ಇತ್ತೀಚೆಗೆ ಅಲ್ಲಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರೂ ಯೋಗಿ ಆದಿತ್ಯನಾಥ್​ರ ಆಡಳಿತವನ್ನು ಮನಸಾರೆ ಹೊಗಳಿದ್ದರು.

ಅಮಿತ್​ ಶಾ ಉತ್ತರ ಪ್ರದೇಶ ಭೇಟಿ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ರನ್ನು ಹೊಗಳಿದ ಗೃಹ ಸಚಿವ
ಅಮಿತ್​ ಶಾರನ್ನು ಬರಮಾಡಿಕೊಂಡ ಯೋಗಿ ಆದಿತ್ಯನಾಥ್​
Follow us on

ದೆಹಲಿ: ಬಿಜೆಪಿ ಸರ್ಕಾರಗಳು (BJP Governments) ಯಾವತ್ತೂ ಜಾತಿ ಆಧಾರದ ಮೇಲೆ ಕೆಲಸ ಮಾಡುವುದಿಲ್ಲ. ಬಡವರ ಅಭಿವೃದ್ಧಿಗಾಗಿ ಮತ್ತು ಕಾನೂನು-ಸುವ್ಯವಸ್ಥೆ (Law And Order) ಕಾಪಾಡುವ ಆದ್ಯತೆಯೊಂದಿಗೆ ಕೆಲಸ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದರು. ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮಾಡಲು ಉತ್ತರ ಪ್ರದೇಶಕ್ಕೆ ತೆರಳಿರುವ ಅವರು, ವಿಧಿ ವಿಜ್ಞಾನ ಸಂಸ್ಥೆ ನಿರ್ಮಾಣಕ್ಕೆ ಅಡಿಗಲ್ಲು ಸ್ಥಾಪನೆ ಮಾಡಿದ ಬಳಿಕ ಮಾತನಾಡಿದರು.

ಈ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ರನ್ನು ಹೊಗಳಿದ ಅಮಿತ್ ಶಾ, ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಉತ್ತರಪ್ರದೇಶವನ್ನು ಯೋಗಿ ಜೀ ಉನ್ನತ ಸ್ಥಾನಕ್ಕೆ ಒಯ್ದಿದ್ದಾರೆ ಎಂದು ಹೇಳಿದರು. ನಾನು 2019ಕ್ಕೂ ಮೊದಲು ಸುಮಾರು 6ವರ್ಷ ಅನೇಕ ಬಾರಿ ಉತ್ತರಪ್ರದೇಶಕ್ಕೆ ಬರುತ್ತಿದ್ದೆ. 2019ಕ್ಕೂ ಮೊದಲಿನ ಯುಪಿ ಹೇಗಿತ್ತು ಎಂಬುದು ನನಗೆ ಸ್ಪಷ್ಟವಾಗಿ ಗೊತ್ತು. ಆದರೀಗ ಉತ್ತರ ಪ್ರದೇಶ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಉನ್ನತ ಸ್ಥಾನದಲ್ಲಿದೆ. ಇದು ಸಿಎಂ ಯೋಗಿ ಆದಿತ್ಯನಾಥ್​ ಮತ್ತು ಅವರ ತಂಡದ ಶ್ರಮ ಎಂದು ಹೇಳಿದರು.

ಉತ್ತರಪ್ರದೇಶದಲ್ಲಿ ಬರುವ ವರ್ಷ ವಿಧಾನಸಭೆ ಚುನಾವಣೆ ಇದೆ. ಅದರ ಬೆನ್ನಲ್ಲೇ ಅಲ್ಲಿ ನಾಯಕತ್ವ ಬದಲಾವಣೆ ಆಗಲಿದೆ ಎಂಬ ಮಾತುಗಳೂ ಕೇಳಿಬಂದಿದ್ದವು. ಆದರೆ ಇತ್ತೀಚೆಗೆ ಉತ್ತರಪ್ರದೇಶಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರೂ ಯೋಗಿ ಆದಿತ್ಯನಾಥ್​ರ ಆಡಳಿತವನ್ನು ಮನಸಾರೆ ಹೊಗಳಿದ್ದರು. ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ಮಾತನಾಡುತ್ತ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಅವರು, ಕೊವಿಡ್​ 19 ನಿರ್ವಹಣೆಯನ್ನು ಉತ್ತಮವಾಗಿ ಮಾಡಿದ್ದಾರೆ. ಹಲವಾರು ಮಾಫಿಯಾಗಳು, ಉಗ್ರರ ಹುಟ್ಟಡಗಿಸಿದ್ದಾರೆ. ಈ ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತವಾಗಿ ಇರುವಂಥ ವಾತಾವರಣ ಸೃಷ್ಟಿಸಲಾಗಿದೆ ಎಂದು ಹೇಳಿದ್ದರು. ಇದೀಗ ಅಮಿತ್ ಶಾ ಕೂಡ ಯೋಗಿಯವರನ್ನು ಹೊಗಳಿದ್ದಾರೆ.

ಇದನ್ನೂ ಓದಿ: ‘ಅರವಿಂದ್ ಬೈಕ್​ ಮಿಸ್​ ಹೊಡೆಯುತ್ತಿದೆ, ಫಿನಾಲೆ ಗೆಲ್ಲೋದು ಮಂಜು ಪಾವಗಡ’

Home Minister Amit Shah praises Uttar Pradesh CM Yogi Adityanath