ಕೊರೊನಾ, ಲಾಕ್ಡೌನ್ ನಡುವೆಯೂ ಮುಂಬೈನಲ್ಲಿ ಜುಲೈ ತಿಂಗಳಲ್ಲಿ ಶೇ.239ರಷ್ಟು ಏರಿಕೆ ಕಂಡ ಆಸ್ತಿ ರಿಜಿಸ್ಟ್ರೇಷನ್; ಕಾರಣವೇನು?
ಕೊರೊನಾ ಹಾಗೂ ಲಾಕ್ಡೌನ್ನಿಂದಾಗಿ ಜನರ ಆದಾಯ ಗಳಿಕೆಗೆ ಹೊಡೆತ ಬಿದ್ದಿದೆ. ಜನರ ಕೈಯಲ್ಲಿ ದುಡ್ಡಿಲ್ಲ. ಇನ್ನೂ ಆಸ್ತಿ ಖರೀದಿಸುವುದು ದೂರದ ಮಾತು. ಆದರೆ, ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಮಾತ್ರ ಆಸ್ತಿ ಖರೀದಿ ಭರಾಟೆ ಜೋರಾಗಿದೆ. ಮುಂಬೈನಲ್ಲಿ ಜುಲೈ ತಿಂಗಳಲ್ಲಿ ಆಸ್ತಿ ರಿಜಿಸ್ಟ್ರೇಷನ್ ಶೇ.239 ರಷ್ಟು ಏರಿಕೆಯಾಗಿದೆ. ದಶಕದಲ್ಲೇ ಕಂಡರಿಯದಷ್ಟು ಆಸ್ತಿ ನೋಂದಾಣಿಯಲ್ಲಿ ಏರಿಕೆಯಾಗಿದೆ ಇದಕ್ಕೇನು ಕಾರಣ? ಮುಂಬೈನಲ್ಲಿ ಏನಾದರೂ ಪ್ಲ್ಯಾಟ್, ಅಪಾರ್ಟ್ ಮೆಂಟ್, ವಿಲ್ಲಾಗಳ ಬೆಲೆ ಕುಸಿತ ಆಗಿದೆಯೇ ಎಂಬ ಅನುಮಾನ ಇದ್ದರೇ, ಈ ವರದಿ ನೋಡಿ, ನಿಮಗೆ ಗೊತ್ತಾಗುತ್ತೆ.
ಮುಂಬೈ ದೇಶದ ವಾಣಿಜ್ಯ ರಾಜಧಾನಿ. ಮುಂಬೈ ಜನರ ಪಾಲಿಗೆ ಡ್ರೀಮ್ಸ್ ಸಿಟಿ. ಈ ಸಿಟಿಗೆ ಬಂದು ತಮ್ಮ ಕನಸುಗಳನ್ನು ನನಸಾಗಿಸಿಕೊಂಡ ಲಕ್ಷಾಂತರ ಜನರಿದ್ದಾರೆ. ಮುಂಬೈನಲ್ಲಿ ಭಿಕ್ಷಾಧಿಪತಿಗಳಾಗಿದ್ದವರು, ಕೋಟ್ಯಾಧಿಪತಿಗಳಾಗಿದ್ದಾರೆ. ಇಂಥ ಮುಂಬೈ ನಗರದಲ್ಲಿ ಈಗ ಜುಲೈ ತಿಂಗಳಲ್ಲಿ ಆಸ್ತಿ ಖರೀದಿ, ಮಾರಾಟ ಭರಾಟೆ ಜೋರಾಗಿದೆ. 2021ರ ಜುಲೈ ತಿಂಗಳಲ್ಲಿ ಮುಂಬೈ ಮುನ್ಸಿಪಾಲಿಟಿ ವ್ಯಾಪ್ತಿಯಲ್ಲಿ ಆಸ್ತಿ ರಿಜಿಸ್ಟ್ರೇಷನ್ ಶೇ.239 ರಷ್ಟು ಏರಿಕೆ ಕಂಡಿದೆ. ಹಾಗಂತ, ಮುಂಬೈನಲ್ಲಿ ಏನಾದರೂ, ಆಸ್ತಿಗಳು, ಪ್ಲ್ಯಾಟ್, ಅಪಾರ್ಟ್ ಮೆಂಟ್, ವಿಲ್ಲಾ, ಇಂಡಿಪೆಂಡೆಂಟ್ ಮನೆಗಳ ಬೆಲೆಯಲ್ಲಿ ಕುಸಿತವಾಗಿದೆಯೇ ಅಂತ ನೋಡಿದರೇ ಖಂಡಿತ ಇಲ್ಲ.
ಮುಂಬೈ ಮಹಾನಗರದಲ್ಲಿ 2020ರ ಜುಲೈ ತಿಂಗಳಲ್ಲಿ 2,662 ಆಸ್ತಿಗಳ ಮಾರಾಟವಾಗಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಣಿಯಾಗಿದ್ದವು. ಆದರೆ, 2021ರ ಜುಲೈ ತಿಂಗಳಲ್ಲಿ ಬರೋಬ್ಬರಿ 9,037 ಆಸ್ತಿಗಳ ಮಾರಾಟವಾಗಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಣಿಯಾಗಿವೆ. ಅಂದರೇ, ಕಳೆದ ವರ್ಷದ ಜುಲೈ ತಿಂಗಳಿಗೆ ಹೋಲಿಸಿದರೇ, ಈ ವರ್ಷದ ಜುಲೈ ತಿಂಗಳಿನಲ್ಲಿ ಶೇ.239 ರಷ್ಟು ಆಸ್ತಿ ನೋಂದಣಿಯಲ್ಲಿ ಏರಿಕೆಯಾಗಿದೆ. 2019ರ ಜುಲೈ ತಿಂಗಳಿಗೆ ಹೋಲಿಸಿದರೇ, ಶೇ.59 ರಷ್ಟು ಏರಿಕೆಯಾಗಿದೆ ಎಂದು ಪ್ರಾಪರ್ಟಿ ಕನ್ಸಲ್ಟೆಂಟ್ ನೈಟ್ ಫ್ರಾಂಕ್ ವರದಿ ಮಾಡಿದೆ. ಮುಂಬೈನಲ್ಲಿ ಕಳೆದೊಂದು ದಶಕದಲ್ಲಿ ಇದು ಬಾರಿ ಏರಿಕೆ.
ಮುಂಬೈನಲ್ಲಿ ಈಗ ಆಸ್ತಿ ನೋಂದಾಣಿಯಲ್ಲಿ ಬಾರಿ ಏರಿಕೆಯಾಗಲು ಮಹಾರಾಷ್ಟ್ರ ರಾಜ್ಯ ಸರ್ಕಾರ ಆಸ್ತಿ ನೋಂದಣಿ ವೇಳೆ ಪಾವತಿಸಬೇಕಾದ ಸ್ಟಾಂಪ್ ಡ್ಯೂಟಿಯನ್ನು ಕಡಿತ ಮಾಡಿತ್ತು. ಜೊತೆಗೆ ಸ್ಟಾಂಪ್ ಡ್ಯೂಟಿಯನ್ನು ಮೊದಲೇ ಪಾವತಿಸಲ ಅವಕಾಶ ನೀಡಿತ್ತು. ಸ್ಟಾಂಪ್ ಡ್ಯೂಟಿ ಪಾವತಿಸಿದ ನಾಲ್ಕು ತಿಂಗಳವರೆಗೂ ಆಸ್ತಿ ನೋಂದಣಿಗೆ ಅವಕಾಶ ಕೊಟ್ಟಿತ್ತು. ಇದರಿಂದಾಗಿ ಮನೆ, ಪ್ಲ್ಯಾಟ್ ಖರೀದಿ ಮಾಡುವ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದೇ ಅಡ್ಡ ಗೋಡೆ ಮೇಲೆ ಕುಳಿತಿದ್ದವರು ಆಸ್ತಿ ಖರೀದಿ ನಿರ್ಧಾರ ಮಾಡಿದ್ದಾರೆ. ಮಿಲೇನಿಯಲ್ಸ್ ಕೂಡ ಆಸ್ತಿ ಖರೀದಿ ಮಾಡಲು ಮುಗಿ ಬಿದ್ದಿದ್ದಾರೆ. ಜೊತೆಗೆ ಮುಂಬೈನಲ್ಲಿರುವ ಸೆಲೆಬ್ರಿಟಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿಗಳನ್ನ ಖರೀದಿ ಮಾಡಿದ್ದಾರೆ. ಇದೆಲ್ಲದರಿಂದ ಮುಂಬೈನಲ್ಲಿ ಆಸ್ತಿ ನೋಂದಾಣಿಯಲ್ಲಿ ಬಾರಿ ಏರಿಕೆಯಾಗಿದೆ.
ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ 2021ರ ಮಾರ್ಚ್ ತಿಂಗಳೊಳಗೆ ಸ್ಟಾಂಪ್ ಡ್ಯೂಟಿ ಪಾವತಿಸಿದ್ದವರಿಗೆ ಆಸ್ತಿ ನೋಂದಣಿಗೆ ನಾಲ್ಕು ತಿಂಗಳ ಕಾಲವಕಾಶ ನೀಡುವುದಾಗಿ ಮಹಾರಾಷ್ಟ್ರ ಸರ್ಕಾರ ಘೋಷಿಸಿತ್ತು. ಈ ನಾಲ್ಕು ತಿಂಗಳ ಅವಧಿಯೂ ಜುಲೈ ತಿಂಗಳಿಗೆ ಮುಗಿಯುತ್ತಿದೆ. ಹೀಗಾಗಿ ಮಾರ್ಚ್ ತಿಂಗಳೊಳಗೆ ಆಸ್ತಿ ನೋಂದಣಿಗೆ ಸ್ಟಾಂಪ್ ಡ್ಯೂಟಿ ಪಾವತಿಸಿದ್ದವರು ಈಗ ಆಸ್ತಿ ನೋಂದಣಿ ಮಾಡಿಕೊಂಡಿದ್ದಾರೆ.
2021ರ ಜುಲೈ ತಿಂಗಳಲ್ಲಿ ನೋಂದಾಣಿಯಾದ ಆಸ್ತಿಗಳ ಪೈಕಿ ಶೇ.53 ರಷ್ಟು ಹೊಸ ಪ್ಲ್ಯಾಟ್ , ಮನೆಗಳು ನೋಂದಾಣಿಯಾಗಿವೆ. 2021ರ ಜುಲೈ ತಿಂಗಳಲ್ಲಿ 4,821ಅಪಾರ್ಟ್ ಮೆಂಟ್ ಹೊಸ ಪ್ಲ್ಯಾಟ್ಗಳು ನೋಂದಾಣಿಯಾಗಿವೆ. 2021ರ ಮಾರ್ಚ್ 8ರಂದು ಮಹಾರಾಷ್ಟ್ರ ಸರ್ಕಾರ ಮಹಿಳಾ ದಿನದ ಅಂಗವಾಗಿ ಆಸ್ತಿ ಖರೀದಿಗೆ ಸ್ಟಾಂಪ್ ಡ್ಯೂಟಿಯಲ್ಲಿ ಮಹಿಳೆಯರಿಗೆ ಶೇ.1 ರಷ್ಟು ವಿನಾಯಿತಿ ನೀಡುವುದಾಗಿ ಹೇಳಿತ್ತು. ಇದರಿಂದಾಗಿ ಏಪ್ರಿಲ್ ತಿಂಗಳಲ್ಲಿ ಶೇ.6.6 ರಷ್ಟು ಮಹಿಳೆಯರು ಆಸ್ತಿ ಖರೀದಿಸಿದ್ದಾರೆ. ಆದರೆ, ವಿನಾಯಿತಿ ಅವಧಿ ಮುಗಿದ ಬಳಿಕ ಮೇ ತಿಂಗಳಲ್ಲಿ ಮಹಿಳೆಯರಿಂದ ಆಸ್ತಿ ಖರೀದಿಯು ಶೇ.1.7 ಕ್ಕೆ ಕುಸಿದಿತ್ತು. ಜೂನ್ ನಲ್ಲಿ ಶೇ.4.7 ರಷ್ಟು ಮಹಿಳೆಯರು ಆಸ್ತಿ ಖರೀದಿಸಿದ್ದಾರೆ. ಜುಲೈ ತಿಂಗಳಲ್ಲಿ ಶೇ.3 ರಷ್ಟು ಮಹಿಳೆಯರು ಆಸ್ತಿ ಖರೀದಿಸಿದ್ದಾರೆ.
ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಸ್ಟಾಂಪ್ ಡ್ಯೂಟಿಯನ್ನು ಕಡಿತ ಮಾಡಿತ್ತು. ಬಳಿಕ ಡಿಸೆಂಬರ್ ನಲ್ಲಿ ಶೇ.2 ರಷ್ಟು ಸ್ಟಾಂಪ್ ಡ್ಯೂಟಿಯನ್ನು ಕಡಿತ ಮಾಡಿತ್ತು. ಈ ವರ್ಷದ ಮಾರ್ಚ್ ವರೆಗೂ ಶೇ.3 ರಷ್ಟು ಸ್ಟಾಂಪ್ ಡ್ಯೂಟಿಯನ್ನು ಕಡಿತ ಮಾಡಿತ್ತು. ಇದರಿಂದಾಗಿ ಮುಂಬೈನಲ್ಲಿ ಆಸ್ತಿ ಖರೀದಿ ಬಗ್ಗೆ ಗೊಂದಲದಲ್ಲಿದ್ದವರು, ಅಡ್ಡಗೋಡೆ ಮೇಲೆ ಕುಳಿತಿದ್ದವರು ಆಸ್ತಿ ಖರೀದಿಸಲು ಪ್ರಚೋದನೆ, ಪೋತ್ಸಾಹ ಸಿಕ್ಕಂತಾಗಿದೆ. ಹೀಗಾಗಿ ಜುಲೈ ತಿಂಗಳಲ್ಲಿ ಕಳೆದೊಂದು ದಶಕದಲ್ಲೇ ಅತಿ ಹೆಚ್ಚಿನ ಆಸ್ತಿ ಖರೀದಿಯಾಗಿದೆ. ಅಮಿತಾಬ್ ಬಚ್ಚನ್, ಶಾರೂಖ್ ಖಾನ್, ಅಜಯ ದೇವಗನ್ ರಂಥ ಸೆಲಿಬ್ರೆಟಿ ಗಳು ಈ ಅವಧಿಯಲ್ಲೇ ಆಸ್ತಿ ಖರೀದಿಸಿದ್ದಾರೆ. ಹೀಗಾಗಿ ಮಹಾರಾಷ್ಟ್ರ ಸರ್ಕಾರ ಮತ್ತೆ ಈ ಪೋತ್ಸಾಹಕಾರಿ ಕ್ರಮಗಳನ್ನು ಘೋಷಿಸಬೇಕು ಅಂತ ರಿಯಲ್ ಎಸ್ಟೇಟ್ ವಲಯ ಆಗ್ರಹಿಸಿದೆ.
ಇದನ್ನೂ ಓದಿ: Delta Varient: ಲಸಿಕೆ ಪಡೆದ ವ್ಯಕ್ತಿಗಳಲ್ಲಿ ಡೆಲ್ಟಾ ರೂಪಾಂತರಿ ವೈರಸ್; ವರದಿ ಹೇಳುತ್ತಿರುವುದೇನು?