ಶ್ರೀನಗರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮು ಪ್ರಾಂತ್ಯದ ಮಕ್ವಾನ್ ಗಡಿಗೆ ಭೇಟಿ ನೀಡಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು. ಇಂಥದ್ದೊಂದು ಮಾತುಕತೆಯ ವೇಳೆ ಅಮಿತ್ ಶಾ ಒಬ್ಬ ವ್ಯಕ್ತಿಯ ಸಂಪರ್ಕ ಸಂಖ್ಯೆ ಪಡೆದು ತಮ್ಮ ಸಂಖ್ಯೆಯನ್ನೂ ಕೊಟ್ಟರು. ಅಗತ್ಯ ಬಿದ್ದಾಗ ನೇರವಾಗಿ ನನ್ನನ್ನು ಸಂಪರ್ಕಿಸಬಹುದು ಎಂದು ಶಾ ಅವರಿಗೆ ಭರವಸೆ ಕೊಟ್ಟರು.
ವೈರಲ್ ಆಗಿರುವ ಚಿತ್ರದಲ್ಲಿ ಆ ವ್ಯಕ್ತಿಯು ಅಮಿತ್ ಶಾ ಪಕ್ಕದಲ್ಲಿಯೇ ಕುಳಿತಿದ್ದಾರೆ. ಆ ವ್ಯಕ್ತಿಯ ಮೊಬೈಲ್ ಪಡೆದ ಅಮಿತ್ ಶಾ ತಮ್ಮ ಮೊಬೈಲ್ ನಂಬರ್ ಟೈಪ್ ಮಾಡಿಕೊಟ್ಟಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಸಹ ಚಿತ್ರದಲ್ಲಿದ್ದಾರೆ. ಮಕ್ವಾಲ್ ಗಡಿಯ ಭೇಟಿ ವೇಳೆ ಅಮಿತ್ ಶಾ ಕೆಲ ಸೈನಿಕರೊಡನೆ ಸಂವಾದವನ್ನೂ ನಡೆಸಿದರು.
ಜಮ್ಮುವಿನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಟಿ) ಹೊಸ ಕ್ಯಾಂಪಸ್ ಅನ್ನೂ ಅಮಿತ್ ಶಾ ಉದ್ಘಾಟಿಸಿದರು. ಭಗವತಿ ನಗರದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಅಮಿತ್ ಶಾ ಭಾಗವಹಿಸಿದರು. ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆಯಾಗುವ ಮೊದಲು ರಾಜ್ಯದ ಬಗ್ಗೆ ತಾರತಮ್ಯ ನೀತಿ ಅನುಸರಿಸಲಾಗುತ್ತಿತ್ತು. ಈಗ ಎಲ್ಲ ಪ್ರಾಂತ್ಯಗಳ ಅಭಿವೃದ್ಧಿಗೆ ಸರ್ಕಾರ ಸಮಾನ ರೀತಿಯಲ್ಲಿ ಪ್ರಯತ್ನಿಸುತ್ತಿದೆ ಎಂದರು. ಕೆಲವರು ಅಭಿವೃದ್ಧಿಯ ಓಟವನ್ನು ಹಳಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ನಾವು ಇದಕ್ಕೆ ಅವಕಾಶಕೊಡುವುದಿಲ್ಲ. ಇಲ್ಲಿನ ಅಭಿವೃದ್ಧಿಯ ವೇಗ ತಗ್ಗದಂತೆ ಗಮನ ಕೊಡುತ್ತೇವೆ ಎಂದು ಶಾ ಭರವಸೆ ನೀಡಿದರು.
ಆಗಸ್ಟ್ 5, 2019ನೇ ದಿನಾಂಕವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕು ಎಂದು 370ನೇ ವಿಧಿ ರದ್ದತಿ ನಿರ್ಧಾರವನ್ನು ಅಮಿತ್ ಶಾ ಸಮರ್ಥಿಸಿಕೊಂಡರು. ಈ ಪ್ರಾಂತ್ಯದಲ್ಲಿ ಭಯೋತ್ಪಾದನೆ, ವಂಶಪಾರಂಪರ್ಯದ ಆಡಳಿತ ಮತ್ತು ಭ್ರಷ್ಟಾಚಾರಕ್ಕೆ ಇದರಿಂದ ಕಡಿವಾಣ ಬಿತ್ತು. ಜಮ್ಮು ಕಾಶ್ಮೀರದ ಯುವಕರು ಸಹ ಅಭಿವೃದ್ಧಿ ಪ್ರಯತ್ನಗಳಿಗೆ ಸಹಯೋಗ ನೀಡಬೇಕು. ಇದು ಅವರ ಜವಾಬ್ದಾರಿಯೂ ಆಗಿದೆ ಎಂದರು.
ರಾಜ್ಯದಲ್ಲಿ ಪ್ರಸ್ತುತ ನೆಲೆಸಿರುವ ಶಾಂತಿ ಕಾಪಾಡಲು ಕೇಂದ್ರ ಸರ್ಕಾರವು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಶಾಂತಿ ಮತ್ತು ಅಭಿವೃದ್ಧಿ ಪ್ರಯತ್ನಗಳನ್ನು ಹಾಳು ಮಾಡಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು. ಜಮ್ಮು ಕಾಶ್ಮೀರ ಪ್ರವಾಸದ ವೇಳೆ ಉಗ್ರಗಾಮಿಗಳ ದಾಳಿಯಿಂತ ಹುತಾತ್ಮರಾದ ಭದ್ರತಾ ಸಿಬ್ಬಂದಿಯ ಮನೆಗಳಿಗೂ ಭೇಟಿ ನೀಡಿ ಸಾಂತ್ವನ ಹೇಳಿದರು.
#WATCH | J&K: Union Home Minister Amit Shah takes the contact number of a local resident of Makwal border in Jammu, shares his own and tells him that the man can contact him whenever he needs.
The Home Minister visited the forward areas of Makwal border today. pic.twitter.com/KJnI9zEsSD
— ANI (@ANI) October 24, 2021