
ಲಕ್ನೋ, ಅಕ್ಟೋಬರ್ 30: ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ‘ಏಕರೂಪ ನಾಗರಿಕ ಸಂಹಿತೆ’ (ಯುಸಿಸಿ)ಯನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ. ಲಕ್ನೋದಲ್ಲಿ ನಡೆದ ಉತ್ತರ ಪ್ರದೇಶ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಪ್ರಮುಖ ಘೋಷಣೆ ಮಾಡಿದ್ದಾರೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಅಮಿತ್ ಶಾ ನೀಡಿರುವ ಈ ಹೇಳಿಕೆಯು ರಾಜ್ಯದ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿಯ ಪ್ರಮುಖ ಚುನಾವಣಾ ವಿಷಯಗಳಲ್ಲಿ ಒಂದಾಗುವ ಸುಳಿವು ನೀಡಿದೆ.
ಯುಸಿಸಿ ಜಾರಿಯ ಭರವಸೆ:
“ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಯುಸಿಸಿ ಜಾರಿಯಲ್ಲಿದೆ. ಉತ್ತರ ಪ್ರದೇಶದಲ್ಲಿ ಜನರು ಬಿಜೆಪಿಗೆ ಮತ್ತೆ ಆಶೀರ್ವದಿಸಿ ಅಧಿಕಾರಕ್ಕೆ ತಂದರೆ, ರಾಜ್ಯಾದ್ಯಂತ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುತ್ತೇವೆ” ಎಂದು ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ. ಯುಸಿಸಿ ಜಾರಿಯಾದರೆ ವಿವಾಹ, ವಿಚ್ಛೇದನ, ಆಸ್ತಿ ಹಕ್ಕು ಮತ್ತು ದತ್ತು ಸ್ವೀಕಾರದಂತಹ ಸಾಮಾಜಿಕ ನಿಯಮಗಳು ಧರ್ಮದ ಹಸ್ತಕ್ಷೇಪವಿಲ್ಲದೆ ಎಲ್ಲರಿಗೂ ಒಂದೇ ರೀತಿಯಾಗಿ ಅನ್ವಯಿಸಲಿವೆ ಎಂದು ಅವರು ಹೇಳಿದ್ದಾರೆ.
ವಿಪಕ್ಷಗಳಿಗೆ ಸವಾಲು:
ವಿಪಕ್ಷಗಳು ಇತ್ತೀಚೆಗೆ ಚುನಾವಣಾ ಆಯೋಗ ಮತ್ತು ಬಿಜೆಪಿಯ ವಿರುದ್ಧ ಮಾಡುತ್ತಿರುವ ಮತ ಕಳವು ಆರೋಪಗಳಿಗೆ ತಿರುಗೇಟು ನೀಡಿದ ಗೃಹ ಸಚಿವ ಅಮಿತ್ ಶಾ, “ಪಂದ್ಯ ಸೋತ ತಂಡವೊಂದು ಅಂಪೈರ್ ಮೇಲೆ ತಪ್ಪು ಹೊರಿಸುವಂತೆ ವಿಪಕ್ಷಗಳು ಸೋಲಿನ ಭಯದಿಂದ ವೋಟ್ ಚೋರಿ ಆರೋಪ ಮಾಡುತ್ತಿವೆ. ಬಿಜೆಪಿ ಈ ವಿಷಯದ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಲು ಸಂಪೂರ್ಣ ಸಿದ್ಧವಾಗಿದೆ. ಧೈರ್ಯವಿದ್ದರೆ ಬನ್ನಿ, ಬೇಕಿದ್ದರೆ ನಾವು ವಿಶೇಷ ಅಧಿವೇಶನ ಕರೆಯುತ್ತೇವೆ. ವಿಪಕ್ಷಗಳ ಪ್ರತಿಯೊಂದು ಚುಚ್ಚುವ ಪ್ರಶ್ನೆಗೂ ಉತ್ತರ ನೀಡಲು ನಾವು ಸಿದ್ಧರಿದ್ದೇವೆ” ಎಂದಿದ್ದಾರೆ.
ಬಿಜೆಪಿ ಸರ್ಕಾರ ಅಂಗದನ ಕಾಲಿದ್ದಂತೆ ಎಂದ ಅಮಿತ್ ಶಾ:
ಉತ್ತರ ಪ್ರದೇಶದಲ್ಲಿ ಬಿಜೆಪಿಯ ಆಡಳಿತವನ್ನು ರಾಮಾಯಣದ ಭಕ್ತ ಅಂಗದನ ಕಾಲಿಗೆ ಹೋಲಿಸಿದ ಅಮಿತ್ ಶಾ, “ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಂಗದನ ಕಾಲಿನಂತೆ ಗಟ್ಟಿಯಾಗಿ ನೆಲೆನಿಂತಿದೆ. ಅದನ್ನು ಅಧಿಕಾರದಿಂದ ಅಲ್ಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಮೂರನೇ ಬಾರಿಗೆ ಬಿಜೆಪಿ ಸರ್ಕಾರ ರಚನೆಯಾಗುವುದು ನಿಶ್ಚಿತ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, 1990ರ ಅಕ್ಟೋಬರ್ 30ರಂದು ಅಯೋಧ್ಯೆಯಲ್ಲಿ ರಾಮಭಕ್ತರ ಮೇಲೆ ನಡೆದ ಗುಂಡಿನ ದಾಳಿಯನ್ನು ಸ್ಮರಿಸಿದ ಅಮಿತ್ ಶಾ, ವಿಪಕ್ಷಗಳು ರಾಮನ ಭಕ್ತರ ಮೇಲೆ ಗುಂಡು ಹಾರಿಸಿದ್ದರೆ, ಬಿಜೆಪಿ ಭವ್ಯ ರಾಮಮಂದಿರ ನಿರ್ಮಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
“ಯಾವ ಆಧಾರದ ಮೇಲೆ ನೀವು ಉತ್ತರ ಪ್ರದೇಶದಲ್ಲಿ ಸರ್ಕಾರ ರಚಿಸುವ ಮಾತುಗಳನ್ನಾಡುತ್ತಿದ್ದೀರಿ ಎಂದು ನಾನು ವಿಪಕ್ಷಗಳನ್ನು ಕೇಳಲು ಬಯಸುತ್ತೇನೆ. ನೀವು ರಾಮಭಕ್ತರ ಮೇಲೆ ಗುಂಡು ಹಾರಿಸಿದ್ದೀರಿ, ಆದರೆ ನಾವು ಅದೇ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರವನ್ನು ನಿರ್ಮಿಸಿದ್ದೇವೆ. ಜನಸಾಮಾನ್ಯರು ಹಾಗೂ ಸಮಾಜ ನಿಮ್ಮ ಮೂರನೇ ತಲೆಮಾರನ್ನೂ ಈ ಕೃತ್ಯಕ್ಕಾಗಿ ಕ್ಷಮಿಸುವುದಿಲ್ಲ” ಎಂದು ವಿಪಕ್ಷಗಳ ವಿರುದ್ಧ ಅಮಿತ್ ಶಾ ಕಿಡಿಕಾರಿದ್ದಾರೆ.
ಇದೇ ವೇಳೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ಕಲ್ಯಾಣ್ ಸಿಂಗ್ ಅವರನ್ನು ಸ್ಮರಿಸಿದ ಶಾ, ವಿವಾದಿತ ಕಟ್ಟಡ ನೆಲಸಮಗೊಂಡಾಗ ಕಲ್ಯಾಣ್ ಸಿಂಗ್ ಅವರು ತಮ್ಮ ಸರ್ಕಾರವನ್ನು ಲೆಕ್ಕಿಸದೆ ಧರ್ಮದ ಪರವಾಗಿ ನಿರ್ಧಾರ ತಳೆದಿದ್ದರು ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ