TV9 Digital Live | ಅಗತ್ಯ ವಸ್ತುಗಳ ಬೆಲೆ ಏರಿಕೆ, ದುಸ್ತರವಾಗ್ತಿದೆ ಜನಜೀವನ

| Updated By: ganapathi bhat

Updated on: Apr 06, 2022 | 7:58 PM

Petrol Diesel Price Hike: ಇಂಧನ ದರ ಏರಿಕೆಯಿಂದಾಗಿ ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ವಿರುದ್ಧ ಜನರು ತಿರುಗಿ ಬೀಳುವಂತಾಗಿದೆ. ತೈಲ ಬೆಲೆ ಕಡಿಮೆ ಮಾಡಲು ಸರ್ಕಾರಗಳ ಮುಂದಿರುವ ಅವಕಾಶಗಳೇನು?

TV9 Digital Live | ಅಗತ್ಯ ವಸ್ತುಗಳ ಬೆಲೆ ಏರಿಕೆ, ದುಸ್ತರವಾಗ್ತಿದೆ ಜನಜೀವನ
ಬಾಲಾಜಿ, ವಿವೇಕ್ ಮಲ್ಯ ಹಾಗೂ ಶಿವಕುಮಾರ್
Follow us on

ಬೆಂಗಳೂರು: ಕೊರೊನಾ ಬಳಿಕ ಪುನಶ್ಚೇತನದ ಹಾದಿ ತುಳಿದಿರುವ ಸಾಮಾನ್ಯರ ಜೀವನ ಹಾಗೂ ಆರ್ಥಿಕ ಸ್ಥಿತಿಗತಿಯ ಮೇಲೆ ಪೆಟ್ರೋಲ್ ಬೆಲೆ ಏರಿಕೆಯು ಬರೆ ಎಳೆದಂತಾಗಿದೆ. ಗ್ಯಾಸ್ ಸಿಲಿಂಡರ್, ಅಗತ್ಯ ವಸ್ತುಗಳ ದರ ಹೆಚ್ಚಳದಿಂದ ಜನರು ತತ್ತರಿಸಿ ಹೋಗಿದ್ದಾರೆ. ಜೊತೆಗೆ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯೂ ಹೆಚ್ಚಾಗಿರುವುದು ಜೀವನ ನಿರ್ವಹಣೆಗೆ ಕಠಿಣ ಸವಾಲು ಹಾಕಿದಂತಾಗಿದೆ. ಈ ವಿಚಾರಗಳ ಕುರಿತು ಟಿವಿ9 ಕನ್ನಡ ಡಿಜಿಟಲ್ ಇಂದು (ಫೆ.15) ಸಂವಾದ ನಡೆಸಿತು. ಲೆಕ್ಕ ಪರಿಶೋಧಕ ವಿವೇಕ್ ಮಲ್ಯ, ಪೆಟ್ರೋಲಿಯಂ ಅಸೋಸಿಯೇಷನ್ ಅಧ್ಯಕ್ಷ, ಬಾಲಾಜಿ ಮತ್ತು ಜನಸಾಮಾನ್ಯರ ಪರವಾಗಿ ಮೈಸೂರಿನ ಶಿವಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಆ್ಯಂಕರ್ ಆನಂದ್ ಬುರಲಿ ಸಂವಾದ ನಡೆಸಿಕೊಟ್ಟರು.

ಪೆಟ್ರೋಲ್ ಬೆಲೆ ಏರಿಕೆ ಅಥವಾ ಇಳಿಕೆಯ ಬಗ್ಗೆ ಚರ್ಚಿಸುವಾಗ ನಾವು ಒಂದು ವಿಚಾರ ಪ್ರಸ್ತಾಪಿಸಬೇಕು. 2014ರಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿರ್ಧರಿಸಲು, ಸರ್ಕಾರವು ತೈಲ ಮಾರುಕಟ್ಟೆ ಕಂಪೆನಿಗಳಿಗೆ ಅಧಿಕಾರ ನೀಡಿತು. ಸರ್ಕಾರಿ ಸ್ವಾಮ್ಯವನ್ನು ಹಿಂಪಡೆದುಕೊಂಡ ಕೇಂದ್ರ ತೈಲ ಬೆಲೆ ನಿಯಂತ್ರಣ ಅಧಿಕಾರವನ್ನು ಮಾರುಕಟ್ಟೆಗೆ ನೀಡಿತು ಎಂದು ವಿವೇಕ್ ಮಲ್ಯ ತಿಳಿಸಿದರು.

ಜೊತೆಗೆ, ಕಚ್ಚಾ ತೈಲದ ಬೆಲೆ ಇಳಿಕೆಯಾದಾಗಲೂ ಕೇಂದ್ರ ಶೇ. 20ರಷ್ಟು ತೆರಿಗೆ ವಿಧಿಸಿತು. ರಾಜ್ಯ ಸರ್ಕಾರ ಶೇ. 35ರಷ್ಟು ತೆರಿಗೆಯನ್ನು ಪೆಟ್ರೋಲ್ ಮೇಲೆ ಹಾಗೂ ಶೇ 22ರಷ್ಟು ತೆರಿಗೆಯನ್ನು ಡೀಸೆಲ್ ಮೇಲೆಯೂ ವಿಧಿಸಿತು. ಅದರಂತೆ ಗಮನಿಸಿದರೆ, ನಾವು 100 ರೂ. ಪೆಟ್ರೋಲ್ ಹಾಕಿಸಿಕೊಂಡರೆ ಸುಮಾರು 55 ರೂ.ಗಳನ್ನು ನಾವು ತೆರಿಗೆಯಾಗಿ ನೀಡುತ್ತೇವೆ. (ಶೇ 55ರಷ್ಟು ಎನ್ನಬಹುದು) ಎಂದು ಮಲ್ಯ ಇಂಧನ ದರ ಹೆಚ್ಚಳದ ಹಿಂದಿನ ಲೆಕ್ಕಾಚಾರವನ್ನು ವಿವರಿಸಿದರು.

ನಮ್ಮ ದೇಶಕ್ಕೆ ಶೇ 80ರಷ್ಟು ಪ್ರಮಾಣದಲ್ಲಿ ಇಂಧನ ಆಮದಾಗುತ್ತದೆ. ಹೀಗಾಗಿ, ಡಾಲರ್ ಮೌಲ್ಯ ಅಥವಾ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಸ್ವಲ್ಪ ಹಣ ಹೆಚ್ಚಾದರೂ ಅದರ ಪರಿಣಾಮ ಭಾರತದ ಮೇಲಾಗುತ್ತದೆ. ಕಚ್ಚಾ ತೈಲದ ಬೆಲೆ ಬ್ಯಾರಲ್​ಗೆ 70 ಡಾಲರ್​ನಷ್ಟಾದರೂ, ನಮ್ಮಲ್ಲಿ ಪೆಟ್ರೋಲ್ ದರ 100 ರೂಪಾಯಿ ತಲುಪುತ್ತದೆ. ಹಾಗಾಗಿ, ತೆರಿಗೆ ಇಳಿಸುವವರೆಗೆ ಪೆಟ್ರೋಲ್ ಬೆಲೆ ಕಡಿಮೆ ಆಗುವುದು ಕಷ್ಟ ಎಂದು ವಿವೇಕ್ ಮಲ್ಯ ತಿಳಿಸಿದರು.

ತೆರಿಗೆ ಪಡೆಯುವ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕಳೆದ ಅವಧಿಯಲ್ಲಿ ₹ 2.67 ಲಕ್ಷ ಕೋಟಿ ಅಬಕಾರಿ ಸುಂಕ ಸಂಗ್ರಹವಾಗಿದ್ದರೆ, ಈ ಬಾರಿ ₹ 3.61 ಲಕ್ಷ ಕೋಟಿ ಅಬಕಾರಿ ಸುಂಕ ಸಂಗ್ರಹವಾಗಿದೆ. ತೆರಿಗೆಯಿಂದ ಸರ್ಕಾರಕ್ಕೆ ಲಾಭವೇ ಆಗುತ್ತಿದೆ ಎಂದು ಹೇಳಬಹುದು. ಹಾಗಾಗಿ, ತೆರಿಗೆ ಮೊತ್ತವನ್ನು ಕಡಿತಗೊಳಿಸುವುದರಿಂದ ಬೆಲೆ ಏರಿಕೆಗೆ ಪರಿಹಾರ ಒದಗಬಹುದು ಎಂದು ಹೇಳಿದರು.

ಈ ಮೊದಲು ಇರಾನ್​ನಿಂದ ಕಚ್ಚಾ ತೈಲ ಆಮದಾಗುತ್ತಿದ್ದಾಗ, ಇರಾನ್ ದೇಶವು ಭಾರತಕ್ಕೆ ಶೇ 10ರಷ್ಟು ರಿಯಾಯಿತಿ ದರದಲ್ಲಿ ತೈಲ ಪೂರೈಕೆ ಮಾಡುತ್ತಿತ್ತು. ಜೊತೆಗೆ, ಆಮದು ಮಾಡಿಕೊಂಡ ಇಂಧನಕ್ಕೆ ಹಣ ಪಾವತಿಸಲು ಆರು ತಿಂಗಳ ಕಾಲಾವಧಿಯೂ ಸಿಗುತ್ತಿತ್ತು. (ಅಮೆರಿಕ ನಿರ್ಬಂಧದಿಂದ) ಈಗ ಇರಾನ್​ನಿಂದ ಕಚ್ಚಾತೈಲದ ಆಮದು ನಿಂತಿದೆ ಎಂದು ಮಲ್ಯ ವಿವರಣೆ ನೀಡಿದರು.

ಸರಕು ಮತ್ತು ಸೇವಾ ತೆರಿಗೆ (GST) ವ್ಯಾಪ್ತಿಗೆ ಪೆಟ್ರೋಲ್-ಡೀಸೆಲ್ ತಂದರೆ, ಸರ್ಕಾರಕ್ಕೆ ತೆರಿಗೆ ಸಂಗ್ರಹದಲ್ಲಿ ಸ್ವಲ್ಪ ಕಡಿತ ಉಂಟಾದರೂ, ಗ್ರಾಹಕರಿಗೆ ಅನುಕೂಲವಾಗುತ್ತದೆ. ಅದಕ್ಕೂ ಮೊದಲು, ರಾಜ್ಯ ಸರ್ಕಾರ ಇಂಧನದ ಮೇಲೆ ವಿಧಿಸಿರುವ ಮೌಲ್ಯವರ್ಧಿತ ತೆರಿಗೆಯನ್ನು (VAT) ಮುಂಬರುವ ರಾಜ್ಯ ಬಜೆಟ್​ನಲ್ಲಿ ಕಡಿಮೆ ಮಾಡಬೇಕು. ಈ ನಿರ್ಧಾರ ಕೈಗೊಳ್ಳಲು ದೇಶದಲ್ಲಿ ಕರ್ನಾಟಕವೇ ಮುಂದಡಿ ಇಡಬೇಕು ಎಂದು ಮಲ್ಯ ಅಪೇಕ್ಷೆ ಪಟ್ಟರು.

ಇಂಧನ ದರ ಏರಿಕೆಯ ಕುರಿತಾಗಿ ಪೆಟ್ರೋಲಿಯಂ ಅಸೋಸಿಯೇಷನ್ ಅಧ್ಯಕ್ಷ, ಬಾಲಾಜಿ ಮಾತನಾಡಿದರು. ಕಳೆದ ಕೆಲ ದಿನಗಳಿಂದ ಇಂಧನ ದರದಲ್ಲಿ ಆಗುತ್ತಿರುವ ಏರಿಕೆ ಗಮನಿಸಿದರೆ, ಪೆಟ್ರೋಲ್ ಬೆಲೆ ₹ 100ರ ಗಡಿ ತಲುಪುವುದು ವಿಶೇಷ ಅನಿಸುತ್ತಿಲ್ಲ. ಇವೆಲ್ಲವೂ ಈಗ ಮುಕ್ತ ಮಾರುಕಟ್ಟೆಯ ಏರುಪೇರುಗಳನ್ನು ಅವಲಂಬಿಸಿವೆ. ತೈಲವನ್ನು ಯಾವ ದರಕ್ಕೆ ನೀಡಬೇಕು ಎಂದು ಆಯಿಲ್ ಮಾರ್ಕೆಟಿಂಗ್ ಕಂಪೆನಿಗಳು (OMC) ನಿರ್ಧರಿಸುತ್ತವೆ. ಅವರು ಹೇಳಿರುವ ಬೆಲೆಗೆ ನಾವು ಕೊಂಡುಕೊಳ್ಳಬೆಕಾಗಿದೆ. ಕಚ್ಚಾ ತೈಲದ ಬೆಲೆ ಈಗ 61 ಡಾಲರ್ ಆಗಿದೆ ಎಂದು ಹೇಳಿದರು.

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್​ ದರ ಏರಿಕೆ ಖಂಡಿಸಿ ಫೆಬ್ರವರಿ 26ರಂದು ದೇಶಾದ್ಯಂತ ಧರಣಿ; ಲಾರಿ ಮಾಲೀಕರ ಬೆಂಬಲ

ಇಂಧನ ದರದಲ್ಲಿ ರಾಜ್ಯ ತೆರಿಗೆಯ ಮೊತ್ತ ಹೆಚ್ಚಿದೆ. ಇದನ್ನು ಸ್ವಲ್ಪ ಕಡಿಮೆ ಮಾಡಬಹುದು. ವಿವೇಕ್ ಮಲ್ಯ ತಿಳಿಸಿದಂತೆ ರಾಜ್ಯ ಬಜೆಟ್​ನಲ್ಲಿ ತೆರಿಗೆ ಇಳಿಕೆ ಮಾಡಬೇಕು ಎಂದು ಬಾಲಾಜಿ ತಿಳಿಸಿದರು.

ದೇಶದ ಜನತೆಯ ಶೇ 70ರಷ್ಟು ಭಾಗ ಗ್ರಾಮೀಣ ಹಾಗೂ ಬಡ ವರ್ಗದ ಜನರಿದ್ದಾರೆ. ದುಡಿಯುವ ಬಹುಪಾಲು ಮೊತ್ತ ಮಕ್ಕಳ ವಿದ್ಯಾಭಾಸಕ್ಕೆ ಖರ್ಚಾಗುತ್ತದೆ. ಈ ನಡುವೆ, ಕೊರೊನಾ ಮತ್ತು ಲಾಕ್​ಡೌನ್ ಪರಿಣಾಮ ಜನರನ್ನು ಹಲವು ಕಷ್ಟ ಎದುರಿಸುವಂತೆ ಮಾಡಿದೆ. ಪೆಟ್ರೋಲ್ ಬೆಲೆ ಏರಿಕೆ, ದಿನಬಳಕೆ ವಸ್ತುಗಳು ತುಟ್ಟಿಯಾಗಿರುವುದು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರಿ ನೌಕರನೂ ಸಂಸಾರ ಸರಿದೂಗಿಸುವುದು ಕಷ್ಟ ಎಂಬಂತಾಗಿದೆ. ಸರ್ಕಾರಕ್ಕೆ ಜನಸಾಮಾನ್ಯನ ಜೀವನ ಕಾಣಿಸುತ್ತಿಲ್ಲ ಎಂದು ಜನಸಾಮಾನ್ಯರ ಪ್ರತಿನಿಧಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಿವಕುಮಾರ್ ತಿಳಿಸಿದರು.

ಇದನ್ನೂ ಓದಿ: Petrol Diesel Price | ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಯ್ತು… ಈಗ ಹಣ್ಣು-ತರಕಾರಿ ಬೆಲೆಯೂ ಏರುತ್ತಿದೆ!

Published On - 8:14 pm, Mon, 15 February 21