PMMVY Scheme: ಗರ್ಭಿಣಿ, ಬಾಣಂತಿಯರಿಗೆ ಸರ್ಕಾರದ ಆಸರೆ; ಮಾತೃ ವಂದನಾ ಯೋಜನೆಗೆ ನೋಂದಣಿ ಹೇಗೆ?

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 17, 2021 | 4:09 PM

ಅಪೌಷ್ಟಿಕತೆ, ರಕ್ತಹೀನತೆ, ಶಿಶುಮರಣ, ಬಾಣಂತಿಯರ ಮರಣವನ್ನು ತಡೆಯುವ ನಿಟ್ಟಿನಲ್ಲಿ ಭಾರತ ಸರ್ಕಾರ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಜಾರಿಗೆ ತಂದಿದೆ.

PMMVY Scheme: ಗರ್ಭಿಣಿ, ಬಾಣಂತಿಯರಿಗೆ ಸರ್ಕಾರದ ಆಸರೆ; ಮಾತೃ ವಂದನಾ ಯೋಜನೆಗೆ ನೋಂದಣಿ ಹೇಗೆ?
ಗರ್ಭಧಾರಣೆ ಮತ್ತು ಶಿಶುಆರೈಕೆಗಾಗಿ ದಿನಗೂಲಿ ಕಳೆದುಕೊಳ್ಳುವವರಿಗೆ ಸರ್ಕಾರ ಮಾತೃ ವಂದನೆ ಯೋಜನೆಯಡಿ ಆಸರೆ ಒದಗಿಸುತ್ತಿದೆ.
Follow us on

ಅಪೌಷ್ಟಿಕತೆ ಹಲವರಲ್ಲಿ ಕಾಡುತ್ತಿರುವ ಸಮಸ್ಯೆ. ಮಹಿಳೆಯರಲ್ಲಿ ಅಪೌಷ್ಟಿಕತೆಯ ಪರಿಣಾಮ ತೀವ್ರತರನಾಗಿರುತ್ತದೆ. ಇದರ ಜೊತೆಗೆ ರಕ್ತಹೀನತೆಯೂ ಸೇರಿದರೆ ಗರ್ಭಿಣಿಯರು ಮತ್ತು ಬಾಣಂತಿಯರು ಸಂಕಷ್ಟ ಅನುಭವಿಸಬೇಕಾಗುತ್ತದೆ. ಇಂಥ ತಾಯಂದಿರಿಂದ ಜನಿಸುವ ಮಕ್ಕಳೂ ಸಹ ಕಡಿಮೆ ತೂಕ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಅಪೌಷ್ಟಿಕತೆ, ರಕ್ತಹೀನತೆ ಮತ್ತು ಶಿಶು ಆರೋಗ್ಯ ಪರಸ್ಪರ ಬೇರ್ಪಡಿಸಲಾಗದಂತೆ ಬೆಸೆದುಕೊಂಡಿರುವ ಸಮಸ್ಯೆಗಳು. ಭಾರತದ ಹಲವು ಮಹಿಳೆಯರು ಗರ್ಭಾವಸ್ಥೆಯ ಕೊನೆಯ ದಿನಗಳವರೆಗೆ ತಮ್ಮ ಜೀವನ ನಿರ್ವಹಣೆಗಾಗಿ ದುಡಿಯುತ್ತಾರೆ. ಇದು ಅವರ ಆರೋಗ್ಯದ ಮೇಲೆ ಮತ್ತು ಹುಟ್ಟುವ ಮಗುವಿನ ಸುರಕ್ಷೆಯ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲೆಂದು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಜಾರಿಗೊಳಿಸಿದೆ.

ಮಹಿಳೆಯರಿಗೆ ನೆರವಾದ ಪಿಎಂಎಂವಿವೈ ಯೋಜನೆ
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಗೆ ಅನುಗುಣವಾಗಿ ದೇಶದ ಎಲ್ಲಾ ಜಿಲ್ಲೆಗಳಲ್ಲಿ ಭಾರತ ಸರ್ಕಾರ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯನ್ನು ಜಾರಿಗೆ ತಂದಿದೆ. ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಈ ಯೋಜನೆ ಸಹಕಾರಿಯಾಗಿದೆ.  ಅಪೌಷ್ಟಿಕತೆ, ರಕ್ತಹೀನತೆ, ಶಿಶುಮರಣ, ಬಾಣಂತಿಯರ ಮರಣವನ್ನು ತಡೆಯುವ ನಿಟ್ಟಿನಲ್ಲಿ ಭಾರತ ಸರ್ಕಾರ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಜಾರಿಗೆ ತಂದಿದೆ.

ಪಿಎಂಎಂವಿವೈ ಅಡಿಯಲ್ಲಿ ಪ್ರಯೋಜನಗಳು

  1. ಅರ್ಹ ಗರ್ಭಿಣಿ ಮತ್ತು ಬಾಣಂತಿಯರಿಗೆ ಮೂರು ಕಂತುಗಳಲ್ಲಿ 5000 ರೂಪಾಯಿ ನಗದು ಸಹಾಯಧನ. ಫಲಾನುಭವಿಯ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗುತ್ತದೆ.
  2. ಅಂಗನವಾಡಿ ಕೇಂದ್ರದಲ್ಲಿ (ಎಡಬ್ಲ್ಯೂಸಿ) ನೋಂದಣಿ ಮಾಡಿಸಿದ ಗರ್ಭಿಣಿಯರಿಗೆ 150 ದಿನದೊಳಗಾಗಿ ಮೊದಲನೇ ಕಂತಿನಲ್ಲಿ 1000 ರೂಪಾಯಿ ಪಾವತಿಸಲಾಗುತ್ತದೆ.
  3. ಎರಡನೇ ಕಂತಿನ 2000 ರೂಪಾಯಿ ಸಹಾಯಧನವನ್ನು ಗರ್ಭಧಾರಣೆಯ 6 ತಿಂಗಳ ನಂತರ ಕನಿಷ್ಠ ಒಂದು ಬಾರಿ ವೈದ್ಯಕೀಯ ತಪಾಸಣೆ ಮಾಡಿದ ನಂತರ ಪಾವತಿಸಲಾಗುತ್ತದೆ.
  4. ಮೂರನೇ ಕಂತಿನ 2000 ರೂಪಾಯಿಯನ್ನು ಮಗುವಿನ ಜನನ ಅಧಿಕೃತವಾಗಿ ನೋಂದಣಿಯ ನಂತರ ಮತ್ತು ಮಗುವಿಗೆ ಮೊದಲ ಸುತ್ತಿನ ಬಿಸಿಜಿ, ಒಪಿವಿ, ಡಿಪಿಟಿ ಮತ್ತು ಹೆಪಟೈಟಿಸ್ ಹಾಕಿಸಿದ ನಂತರ ಪಾವತಿಸಲಾಗುವುದು.

ಮಾಹಿತಿ ಪಡೆಯಲು ಹೀಗೆ ಮಾಡಿ
ಪ್ರಧಾನ ಮಂತ್ರಿ ಮಾತೃ ಯೋಜನೆಯ ವಿವರವಾದ ಮಾಹಿತಿ ಪಡೆಯಲು ನಿಮ್ಮ ಸಮೀಪದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ. ಆಶಾ ಕಾರ್ಯಕರ್ತೆಯರ ಸಹಾಯ ಪಡೆಯಿರಿ. ನಿಮ್ಮ ತಾಲ್ಲೂಕು ಅಥವಾ ಜಿಲ್ಲಾ ಕೇಂದ್ರದಲ್ಲಿರುವ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ.

ಇದನ್ನೂ ಓದಿ: ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ: ರಾಮನಗರ ಜಿಲ್ಲೆಗೆ ಸತತ ಏಳನೇ ಬಾರಿಗೆ ಪ್ರಥಮ ಸ್ಥಾನ

ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ

ಯಾರೆಲ್ಲಾ ನೋಂದಣಿ ಮಾಡಿಕೊಳ್ಳಬಹುದು?

  1. ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು.
  2. ಗರ್ಭಪಾತಕ್ಕೆ ಸಂಬಂಧಿಸಿದಂತೆ ಫಲಾನುಭವಿಯು ಈ ಯೋಜನೆಯಡಿ ಒಮ್ಮೆ ಮಾತ್ರ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
  3. ಶಿಶು ಮರಣವಾಗಿದ್ದರೆ ಫಲಾನುಭವಿಯು ಯೋಜನೆಯಡಿ ಒಮ್ಮೆ ಮಾತ್ರ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಅಂದರೆ, ಶಿಶು ಮರಣದ ಸಂದರ್ಭದಲ್ಲಿ, ಮೊದಲು ಪಿಎಂಎಂವಿವೈ ಅಡಿಯಲ್ಲಿ ಮಾತೃತ್ವ ಲಾಭದ ಎಲ್ಲಾ ಕಂತುಗಳನ್ನು ಆಕೆ ಈಗಾಗಲೇ ಪಡೆದಿದ್ದರೆ, ಈ ಯೋಜನೆಯಡಿಯಲ್ಲಿ ಮತ್ತೊಮ್ಮೆ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುವುದಿಲ್ಲ.
  4. ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯ ಅಡಿಯಲ್ಲಿ (ಮಹಿಳಾ ಸರ್ಕಾರಿ ನೌಕರರನ್ನು ಹೊರತುಪಡಿಸಿ) ಬಿಪಿಎಲ್ ಮತ್ತು ಎಪಿಎಲ್​ ಪಡಿತರ ಚೀಟಿದಾರರು ಕುಟುಂಬದ ಮೊದಲ ಮಗುವಿಗೆ ಮಾತ್ರ ರೂಪಾಯಿ 5000 ಪಡೆಯಲು ಅರ್ಹರಾಗಿರುತ್ತಾರೆ.

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಅಥವಾ ಸರ್ಕಾರಿ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಈ ಯೋಜನೆಯ ಸವಲತ್ತುಗಳು ಸಿಗುವುದಿಲ್ಲ. ಇತರ ಸರ್ಕಾರಿ ಯೋಜನೆಗಳಡಿ ಸಮಾನ ಪ್ರಯೋಜನಗಳನ್ನು ಪಡೆಯುತ್ತಿರುವವರೂ ಈ ಯೋಜನೆಯ ಫಲಾನುಭವಿಗಳಾಗುವಂತಿಲ್ಲ.

ಮಾತೃ ವಂದನಾ ಯೋಜನೆಯ ಉದ್ದೇಶ

  1. ಪ್ರಸವಕ್ಕೆ ಕೆಲ ದಿನಗಳ ಮೊದಲು ಮತ್ತು ನಂತರದ ತಿಂಗಳುಗಳಲ್ಲಿ ಮಹಿಳೆ ವಿಶ್ರಾಂತಿ ಪಡೆಯಬೇಕಾಗುತ್ತದೆ. ವಿಶ್ರಾಂತಿಯಿಂದಾಗಿ ಆಕೆಗೆ ಆಗುವ ಕೂಲಿ ಹಣದ ನಷ್ಟವನ್ನು ಸಹಾಯಧನದ ಮೂಲಕ ತುಂಬಿಕೊಡಲು ಸರ್ಕಾರ ಯೋಜನೆ ರೂಪಿಸಿದೆ.
  2. ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡಲು ಸಹಕರಿಸುವುದರ ಜೊತೆಗೆ ಅಪೌಷ್ಟಿಕತೆ ಮತ್ತು ರಕ್ತಹಿನತೆ, ಶಿಶುಮರಣ ತಡೆಯುವುದು.
  3. ನಗದು ಸಹಾಯಧನ ಪ್ರೋತ್ಸಾಹವು ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರ ಆರೋಗ್ಯ ಸುಧಾರಣೆಗೆ ನೆರವಾಗುತ್ತದೆ.

ತಾಯಿ ಕಾರ್ಡ್ (ಸಂಗ್ರಹ ಚಿತ್ರ)

ಅರ್ಜಿ ಸಲ್ಲಿಸುವುದು ಹೇಗೆ?

  1. ಈ ಯೋಜನೆಯಡಿ ಪ್ರಯೋಜನ ಪಡೆಯಲು ಇಚ್ಛಿಸುವವರು ನಿಮ್ಮ ಗ್ರಾಮದ ಅಥವಾ ಸುತ್ತಮುತ್ತಲಿನ ಅಂಗನವಾಡಿ ಶಿಕ್ಷಕಿಯರು ಅಥವಾ ಆಶಾ ಕಾರ್ಯಕರ್ತೆಯರ ಬಳಿ ಅರ್ಜಿ ಸಲ್ಲಿಸಬೇಕಾಗುತ್ತದೆ.
  2. ನೋಂದಣಿಗಾಗಿ, ಫಲಾನುಭವಿಯು ನಿಗದಿತ ಅರ್ಜಿ ನಮೂನೆ 1ಎ ಅನ್ನು ಭರ್ತಿ ಮಾಡಿ ಸಂಬಂಧಿತ ದಾಖಲೆಗಳೊಂದಿಗೆ ಪತಿಯ ಸಹಿ ಸಹಿತ ಸಲ್ಲಿಸಬೇಕು.
  3. ಆಧಾರ್ ಕಾರ್ಡ್ ವಿವರ, ಲಿಖಿತ ಒಪ್ಪಿಗೆ, ತನ್ನ ಅಥವಾ ಪತಿಯ ಅಥವಾ ಕುಟುಂಬ ಸದಸ್ಯರ ಮೊಬೈಲ್ ಸಂಖ್ಯೆ ಮತ್ತು ಆಕೆಯ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಖಾತೆ ವಿವರಗಳನ್ನು ಸಲ್ಲಿಸಬೇಕು.
  4. ನಿಗದಿತ ನಮೂನೆಗಳನ್ನು AWC (ಅಂಗನವಾಡಿ ಕೇಂದ್ರ) ಅಥವಾ ಅನುಮೋದಿತ ಆರೋಗ್ಯ ಸೌಲಭ್ಯದಿಂದ ಉಚಿತವಾಗಿ ಪಡೆಯಬಹುದು. ಅರ್ಜಿಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ವೆಬ್​ಸೈಟ್​ನಿಂದ ಡೌನ್​ಲೋಡ್ ಸಹ ಮಾಡಿಕೊಳ್ಳಬಹುದು.
  5. ಮೊದಲ ಕಂತಿನ ನೋಂದಣಿ ಮತ್ತು ಕ್ಲೈಮ್ ಮಾಡಲು, ಸರಿಯಾಗಿ ಭರ್ತಿ ಮಾಡಿದ ಫಾರ್ಮ್​ 1 ಎ ಜೊತೆಗೆ ಎಂಸಿಪಿ ಕಾರ್ಡ್, ಇತರ ವಿವರಗಳನ್ನು ಸಲ್ಲಿಸಬೇಕಾಗುತ್ತದೆ.
  6. ಎರಡನೇ ಕಂತು ಪಡೆಯಲು ಗರ್ಭಧಾರಣೆಯ 6 ತಿಂಗಳ ನಂತರ ಭರ್ತಿ ಮಾಡಿದ ಫಾರ್ಮ್ 1 ಬಿ ಜೊತೆಗೆ ಎಂಸಿಪಿ ಕಾರ್ಡ್ ಸಲ್ಲಿಸಬೇಕಾಗುತ್ತದೆ.
  7. 3ನೇ ಕಂತು ಪಡೆಯಲು, ಫಾರ್ಮ್ 1 ಸಿ ಜೊತೆಗೆ ಮಗುವಿನ ಜನನ ನೋಂದಣಿಯ ಪ್ರತಿ ಮತ್ತು ಎಂಸಿಪಿ ಕಾರ್ಡ್​ನ (The Mother and Child Protection Card – MCP) ನಕಲನ್ನು ಒದಗಿಸಬೇಕು.
  8. ಫಲಾನುಭವಿಗಳು ಯಾವುದೇ ಸಮಯದಲ್ಲಿ ಅರ್ಜಿ ಸಲ್ಲಿಸಬಹುದು. ಆದರೆ ಗರ್ಭಧಾರಣೆಯ 730 ದಿನಗಳ (2 ವರ್ಷ) ನಂತರ ಅರ್ಜಿ ಸಲ್ಲಿಸುವಂತಿಲ್ಲ.

ಮಾತೃವಂದನಾ ಸೌಲಭ್ಯ ಪಡೆಯಲು ಈ ದಾಖಲೆಗಳು ಬೇಕು

  1. ತಾಯಿ ಕಾರ್ಡ್ ( ಎಂಸಿಪಿ ಕಾರ್ಡ್- ತಾಯಿ ಮತ್ತು ಮಕ್ಕಳ ಸಂರಕ್ಷಣಾ ಕಾರ್ಡ್ ಸಲ್ಲಿಸಬೇಕು).
  2. ಭರ್ತಿ ಮಾಡಿದ ಫಾರ್ಮ್ 1ಎ.
  3. ಫಲಾನುಭವಿಯ ಗುರುತಿನ ಪುರಾವೆ.
  4. ಫಲಾನುಭವಿಯ ಪತಿಯ ಆಧಾರ್ ಕಾರ್ಡ್ ಅಥವಾ ಪರ್ಯಾಯ ದಾಖಲಾತಿ.
  5. ಬ್ಯಾಂಕ್ ಅಥವಾ ಪೋಸ್ಟ್ ಕಚೇರಿ ಖಾತೆ ವಿವರ.

 

ಇದನ್ನೂ ಓದಿ: ಸದಾ ಹೊಳೆಯುತ್ತಿರಲಿ ಮೈಕಾಂತಿ; ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಇಲ್ಲಿವೆ ಸರಳ ಉಪಾಯಗಳು

Published On - 3:40 pm, Wed, 17 February 21