ಸದಾ ಹೊಳೆಯುತ್ತಿರಲಿ ಮೈಕಾಂತಿ; ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಇಲ್ಲಿವೆ ಸರಳ ಉಪಾಯಗಳು

ಚಳಿಗಾಲದಲ್ಲಿ ಚರ್ಮದ ಆರೋಗ್ಯಕ್ಕಾಗಿ ಆಹಾರದಲ್ಲೂ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಒಳ್ಳೆಯದು. ಕ್ಯಾರೆಟ್​, ಬಾದಾಮಿ, ಬೀಟ್​ರೂಟ್, ಬಸಳೆಸೊಪ್ಪು, ಗ್ರೀನ್​ಟೀಗಳ ಸೇವನೆ ಉತ್ತಮ.

ಸದಾ ಹೊಳೆಯುತ್ತಿರಲಿ ಮೈಕಾಂತಿ; ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಇಲ್ಲಿವೆ ಸರಳ ಉಪಾಯಗಳು
ಚಳಿಗಾಲದ ಚರ್ಮದ ಆರೈಕೆಗೆ ಹೆಚ್ಚು ಲಕ್ಷ್ಯ ಕೊಡಬೇಕು

ಚಳಿಗಾಲ ಬಂತೆಂದರೆ ಸಾಕು ನಮ್ಮ ಚರ್ಮದ ಆರೋಗ್ಯ ಕಾಪಾಡಿಕೊಳ್ಳುವುದೇ ಒಂದ ತಲೆನೋವಾಗಿಬಿಡುತ್ತದೆ. ಚರ್ಮ ತೇವಾಂಶ ಕಳೆದುಕೊಂಡು ಒಣಗುತ್ತದೆ. ಬಿರುಕು ಮೂಡುತ್ತದೆ. ಉರಿಯಲು ಶುರುವಾಗುತ್ತದೆ. ಚಳಿಗಾಲದಲ್ಲಿ ಬಹುತೇಕ ಎಲ್ಲರೂ ಚರ್ಮದ ಆರೈಕೆ ಮಾಡಿಕೊಳ್ಳಲೇಬೇಕು. ಬೀಸುವ ಚಳಿಗಾಳಿಯಿಂದಾಗಿ ನಮ್ಮ ಚರ್ಮ ಶುಷ್ಕವಾಗಿ, ಸತ್ವ ಕಳೆದುಕೊಳ್ಳುತ್ತದೆ. ಒರಟಾಗಿ, ಹೊಟ್ಟು ಏಳಲು ಶುರುವಾಗುತ್ತದೆ. ಹಾಗಾಗಿ ನಮ್ಮ ಚರ್ಮವನ್ನು ಕಾಳಜಿ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಚರ್ಮಕ್ಕೆ ನೀರಿನ ಅಂಶವನ್ನು ಹೆಚ್ಚು ಒದಗಿಸಬೇಕು. ತೇವಾಂಶವನ್ನು ದೇಹದಲ್ಲಿ ಕಾಪಾಡಿಕೊಳ್ಳಬೇಕು.

ಹಾಗಿದ್ದರೆ ಚಳಿಗಾಲದಲ್ಲಿ ಚರ್ಮದ ಆರೋಗ್ಯಕ್ಕಾಗಿ ಸರಳವಾಗಿ ಏನು ಮಾಡಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ

ಮಾಯಿಶ್ಚರೈಸರ್​ ಬಳಸಿ
ಚಳಿಗಾಲದಲ್ಲಿ ನಿಮ್ಮ ಚರ್ಮದಲ್ಲಿನ ತೇವಾಂಶವನ್ನು ಕಾಪಾಡಿಕೊಳ್ಳಬೇಕು. ಹೀಗಾಗಿ ಮಾಯಿಶ್ಚರೈಸರ್ ಲೇಪಿಸಬೇಕು. ಕೆಲವು ನೈಸರ್ಗಿಕ ಎಣ್ಣೆಗಳನ್ನೂ ಮಾಯಿಶ್ಚರೈಸರ್​ ಆಗಿ ಬಳಸಬಹುದು. ಹೀಗೆ ಪ್ರತಿದಿನವೂ ಮಾಯಿಶ್ಚರೈಸರ್​ಗಳನ್ನು ನಿಯಮಿತವಾಗಿ ಬಳಕೆ ಮಾಡುತ್ತಿದ್ದರೆ ಚಳಿಗಾಲದಲ್ಲಿ ಉಂಟಾಗುವ ಒಣ ಚರ್ಮ ಸಮಸ್ಯೆಯಿಂದ ಮುಕ್ತರಾಗಬಹುದು.

ಮಾಯಿಶ್ಚರೈಸರ್​ ಬಳಕೆ ಮಾಡುವಾಗಲೂ ಎಚ್ಚರಿಕೆ ಇರಬೇಕು. ಒಳ್ಳೆ ಗುಣಮಟ್ಟದ ಕ್ರೀಮ್​, ತೈಲಗಳಿರಲಿ. ನೈಸರ್ಗಿಕವಾಗಿಯೇ ಸಿಗುವ ಮಾಯಿಶ್ಚರೈಸರ್​ಗಳನ್ನು ಆಯ್ಕೆ ಮಾಡಿಕೊಂಡರೆ ಇನ್ನೂ ಉತ್ತಮ. ಅದರಲ್ಲೂ ಮುಖ್ಯವಾಗಿ ತೆಂಗಿನಎಣ್ಣೆ, ಹರಳೆಣ್ಣೆ, ಆಲಿವ್​ ಎಣ್ಣೆ, ಹಾಲು, ಜೇನುತುಪ್ಪಗಳು ಉತ್ತಮ ಮಾಯಿಶ್ಚರೈಸರ್​ಗಳು ಎನ್ನುತ್ತಾರೆ ತಜ್ಞರು.

ಬೆಚ್ಚಗಿನ ನೀರಿಗೆ ಆದ್ಯತೆ
ಚಳಿಗಾಲದಲ್ಲಿ ತಣ್ಣೀರಿನಿಂದ ಮುಖ ತೊಳೆಯುವ ಬದಲು ಸ್ವಲ್ಪ ಬೆಚ್ಚಗಿನ ನೀರನ್ನು ಬಳಕೆ ಮಾಡಿ. ಇನ್ನು ಸ್ನಾನಕ್ಕೂ ಸಹ ಬಿಸಿ ನೀರೇ ಇರಲಿ. ಬಿಸಿ ಎಂದು ತುಂಬ ಬಿಸಿ ನೀರು ಹಾಕಿದರೂ ಚರ್ಮಕ್ಕೆ ಹಾನಿಯಾಗುತ್ತದೆ. ಹಾಗಾಗಿ ಉಗುರುಬೆಚ್ಚಗಿನ ನೀರನ್ನು ಬಳಸುವುದು ತುಂಬ ಉತ್ತಮ. ಇನ್ನು ತಣ್ಣೀರಿನಲ್ಲಿ ಸ್ನಾನ, ಮುಖತೊಳೆಯುವುದನ್ನು ಮಾಡಿದರೆ ಚರ್ಮ ಇನ್ನಷ್ಟು ಒರಟಾಗುತ್ತದೆ. ಚರ್ಮದ ಮೇಲ್ಪದರ ಪುಡಿಪುಡಿಯಾಗಿ ಏಳಲು ಶುರುವಾಗುತ್ತದೆ. ಅದೇ ಬೆಚ್ಚನೆ ನೀರು ಚರ್ಮದಲ್ಲಿ ತಾಜಾತನ ಉಳಿಸುತ್ತದೆ.

ಸೂಕ್ತ ಡಯಟ್ ಮಾಡಿ
ಇನ್ನು ಚಳಿಗಾಲದಲ್ಲಿ ಚರ್ಮದ ಆರೋಗ್ಯಕ್ಕಾಗಿ ಆಹಾರದಲ್ಲೂ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಒಳ್ಳೆಯದು. ಕ್ಯಾರೆಟ್​, ಬಾದಾಮಿ, ಬೀಟ್​ರೂಟ್, ಬಸಳೆಸೊಪ್ಪು, ಗ್ರೀನ್​ಟೀಗಳ ಸೇವನೆ ಉತ್ತಮ. ಇವು ನಿಮ್ಮ ಚರ್ಮಕ್ಕೆ ಸಹಜವಾಗಿ ಹೊಳಪು ನೀಡುತ್ತವೆ.

ಜಾಸ್ತಿ ನೀರು ಕುಡಿಯಬೇಕು
ಚಳಿಗಾಲದಲ್ಲಿ ನಮ್ಮ ಮೈಯಲ್ಲಿನ ನೀರಿನ ಅಂಶ ಬೇಗನೇ ಒಣಗುತ್ತದೆ. ಹಾಗಾಗಿ ಚರ್ಮದ ಆರೋಗ್ಯಕ್ಕಷ್ಟೇ ಅಲ್ಲ, ಒಟ್ಟಾರೆ ಆರೋಗ್ಯದ ದೃಷ್ಟಿಯಿಂದ ನೀರು ಜಾಸ್ತಿ ಅಗತ್ಯ ಇರುತ್ತದೆ. ಚಳಿಗಾಲದಲ್ಲಿ ಕಡಿಮೆ ನೀರು ಕುಡಿದರೆ ತುಂಬ ರೀತಿಯ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ದೇಹದ ಉಷ್ಣತೆಯೂ ಹೆಚ್ಚುತ್ತದೆ. ನೀರು ಜಾಸ್ತಿ ಕುಡಿಯುವುದರಿಂದ ಚರ್ಮದಲ್ಲಿಯೂ ತೇವಾಂಶ ಹೆಚ್ಚಿ, ಹೊಳಪು ಮೂಡುತ್ತದೆ. ಚರ್ಮ ಒಣಗುವುದಿಲ್ಲ.

ಚರ್ಮವನ್ನು ಎಕ್ಸ್‌ಫೋಲಿಯೇಟ್ ಮಾಡಿ
ಇದು ಮತ್ತೇನಲ್ಲ, ಮುಖವನ್ನು ಸ್ಕ್ರಬ್​ ಮಾಡಬೇಕು. ಅಂದರೆ ಚರ್ಮದ ಹೊರಪದರದ ಜೀವಕೋಶಗಳು ಸಾಯುತ್ತವೆ. ಅವು ಚರ್ಮದ ಮೇಲ್ಭಾಗದಲ್ಲಿ ಪುಡಿಯಾಗಿ ಅಂಟಿಕೊಂಡಿರುತ್ತವೆ. ಅದು ಸುಮ್ಮನೆ ನಿವಾರಣೆಯಾಗುವುದಿಲ್ಲ. ಸ್ಕ್ರಬ್​ ಮಾಡಿ ತೆಗೆಯಬೇಕಾಗುತ್ತದೆ. ಚಳಿಗಾಲದಲ್ಲಂತೂ ಈ ಪ್ರಕ್ರಿಯೆಯನ್ನು ಮಾಡಲೇಬೇಕಾಗುತ್ತದೆ. ಚರ್ಮದ ಸ್ಕ್ರಬ್​ಗೆ ಸಕ್ಕರೆ, ಕಾಫಿ, ಆಕ್ರೋಡ್​ ಮತ್ತು ಓಟ್ ಮೀಲ್​​ಗಳನ್ನು ಬಳಸಬಹುದು. ವಾರದಲ್ಲಿ 2-3 ಬಾರಿ ಮಾಡುವುದರಿಂದ ಚಳಿಗಾಲದಲ್ಲೂ ನಿಮ್ಮ ಚರ್ಮ ಆರೋಗ್ಯದಿಂದ ಇರುತ್ತದೆ.

ಕಫ-ಜ್ವರದಿಂದ ಮುಕ್ತರಾಗಬೇಕೆ? ಚಳಿಗಾಲದಲ್ಲಿ ತಪ್ಪದೇ ಇವನ್ನು ಸೇವಿಸಿ

Read Full Article

Click on your DTH Provider to Add TV9 Kannada