ಟಿವಿ9 ಕನ್ನಡ ಡಿಜಿಟಲ್ ಲೈವ್ ಬ್ಲಾಗ್ | 10-01-2021

preethi shettigar
| Updated By: Skanda

Updated on:Jan 12, 2021 | 10:16 AM

ಟಿವಿ9 ಕನ್ನಡ ಡಿಜಿಟಲ್ ಲೈವ್ ಬ್ಲಾಗ್ | 10-01-2021
ಟಿವಿ9 ಕನ್ನಡ ಡಿಜಿಟಲ್

LIVE NEWS & UPDATES

  • 11 Jan 2021 09:26 AM (IST)

    ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಗ್ರೀನ್‌ ಸಿಗ್ನಲ್

    09:28 am ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್​ನಿಂದ  ಗ್ರೀನ್ ‌ಸಿಗ್ನಲ್ ಸಿಕ್ಕಿದ್ದು, ಸಚಿವ ಸಂಪುಟಕ್ಕೆ 7 ಶಾಸಕರ ಸೇರ್ಪಡೆಗೆ ಒಪ್ಪಿಗೆ ನೀಡಲಾಗಿದೆ. ಜ.13ರ ಮಧ್ಯಾಹ್ನ ನೂತನ ಸಚಿವರ ಪ್ರಮಾಣವಚನ ಇರುವ ಹಿನ್ನೆಲೆ ಸಂಪುಟಕ್ಕೆ ಸೇರುವವರ ಹೆಸರು ಇಂದು ಪ್ರಕಟ ಸಾಧ್ಯತೆಯಿದೆ.

  • 10 Jan 2021 08:57 PM (IST)

    ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಹೊಸದಾಗಿ 792 ಜನರಲ್ಲಿ ಕೊರೊನಾ ದೃಢ

    08:57 pm ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಹೊಸದಾಗಿ 792 ಜನರಿಗೆ ಕೊರೊನಾ ದೃಢವಾಗಿದೆ. ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 9,27,559 ಕ್ಕೇರಿದೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸಾವಿನ ಸಂಖ್ಯೆ ಕೂಡ  ಮಿತಿ ಮೀರಿ ಕಡಿಮೆ ಆಗಿದೆ.

  • 10 Jan 2021 08:28 PM (IST)

    ಸಿಎಂ ಸ್ಥಾನದಿಂದ ಯಡಿಯೂರಪ್ಪರನ್ನ ಕೆಳಗಿಳಿಸುವುದು ಸತ್ಯ- ಸಿದ್ದರಾಮಯ್ಯ

    08:28 pm ಸಿಎಂ ಸ್ಥಾನದಿಂದ ಯಡಿಯೂರಪ್ಪರನ್ನ ಕೆಳಗಿಳಿಸುವುದು ಸತ್ಯ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯ ಹೇಳಿಕೆ‌ ನೀಡಿದ್ದಾರೆ. ದೆಹಲಿ ಬೆಳವಣಿಗೆ ಬಗ್ಗೆ ನನಗೆ ಗೊತ್ತಿಲ್ಲ . ಆದರೆ ಬಿಎಸ್​ವೈ ಕೆಳಗಿಳಿಸುವುದು ಪಕ್ಕಾ ಎನ್ನುವ ಮಾಹಿತಿ ನನಗಿದೆ ಎಂದರು.

  • 10 Jan 2021 08:02 PM (IST)

    ಜಲ್ಲಿಕಟ್ಟು ಉತ್ಸವ ಆರಂಭಕ್ಕೂ ಮುನ್ನವೇ ಬಾರಿ ಅವಘಡ

    08:02 pm ತಮಿಳುನಾಡಿನ ಸಾಂಪ್ರದಾಯಿಕ ಉತ್ಸವವಾಗಿರುವ ಜಲ್ಲಿಕಟ್ಟು ಉತ್ಸವ ಆರಂಭಕ್ಕೂ ಮುನ್ನವೇ ಬಾರಿ ಅವಘಡ ಸಂಭವಿಸಿದೆ. ‌ಕೃಷ್ಣಗಿರಿ ಜಿಲ್ಲೆ‌ಯ ನೆರಲಗಿರಿ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬಕ್ಕೂ ಮುನ್ನವೇ ಯಾವುದೇ ಅನುಮತಿ ಪಡೆಯದೇ ಜಲ್ಲಿಕಟ್ಟು ಅಯೋಜಿಸಿದ್ದರು. ಉತ್ಸವ ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಬಂದಿದ್ದ ಜನ‌ ರಸ್ತೆ ಬದಿ, ಕಟ್ಟಡಗಳ‌ ಮೇಲೆ ನಿಂತಿದ್ದರು. ಯಾವಾಗ ಹೋರಿ ಹೊರ ಬಂತೋ‌ ನೋಡಲು ನುಕುನುಗ್ಗಲು ಉಂಟಾಯಿತು.‌ ಈ ವೇಳೆ ಅಡ್ಡ ಗೋಡೆ ಕುಸಿದು ಹತ್ತನ್ನೇರೆಡು ಅಡಿ ಮೇಲಿದ್ದ ಗೋಡೆ ಸಮೇತ ಕೆಳಗೆ ಬಿದ್ದಿದ್ದಾರೆ ಹಾಗೂ ಕೆಳಗೆ ನಿಂತಿದ್ದವರ ಮೇಲೂ ಇಟ್ಟಿಗೆಗಳು ಬಿದ್ದ ಪರಿಣಾಮ‌ ಸ್ಥಳದಲ್ಲೇ ಪುಟ್ಟ ಬಾಲಕಿ ಮೇಘಾಶ್ರೀ (8) ಮತ್ತು ಮುನಿಬಾಲ (65) ಮೃತಪಟ್ಟಿದ್ದಾರೆ.

  • 10 Jan 2021 07:09 PM (IST)

    ವಾಹನದಲ್ಲಿ ಒಬ್ಬಂಟಿಯಾಗಿ ಪ್ರಯಾಣಿಸುವಾಗ ಮಾಸ್ಕ್​ ಬೇಡ

    07:09 pm ವಾಹನದಲ್ಲಿ ಒಬ್ಬಂಟಿಯಾಗಿ ಪ್ರಯಾಣಿಸುವಾಗ ಮಾಸ್ಕ್​ ಬೇಡ ಎಂದು. ಈ ರೀತಿ ನಿರ್ದೇಶಿಸುವ ಯಾವುದೇ ಮಾರ್ಗಸೂಚಿಗಳನ್ನು ಹೊರಡಿಸಿಲ್ಲ ಎಂದು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

  • 10 Jan 2021 07:02 PM (IST)

    ಸುರಿನಾಮ್​ ಗಣರಾಜ್ಯದ ಅಧ್ಯಕ್ಷ ಗಣರಾಜ್ಯೋತ್ಸವದ ಮುಖ್ಯ ಅತಿಥಿ

    07:01 pm  ಸುರಿನಾಮ್​ ಗಣರಾಜ್ಯದ ಅಧ್ಯಕ್ಷ ಚಂದ್ರಿಕಾಪ್ರಸಾದ್​​ ಸಂತೋಕಿ ಅವರು ಈ ಬಾರಿಯ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಇಂಗ್ಲೆಡ್​ ಪ್ರಧಾನಿ​ ಬೋರಿಸ್ ಜಾನ್​​ಸನ್​​ ಭಾರತ ಪ್ರವಾಸ ರದ್ದು ಮಾಡಿದ ಹಿನ್ನೆಲೆಯಲ್ಲಿ ಚಂದ್ರಿಕಾಪ್ರಸಾದ್​ಗೆ ಆಹ್ವಾನ ನೀಡಲಾಗಿತ್ತು.

  • 10 Jan 2021 06:55 PM (IST)

    ಆಧಾರ್ ತೀರ್ಪು ಪುನರ್​ ಪರಿಶೀಲನೆ ಮಾಡಲು ಮುಂದಾದ ಸುಪ್ರೀಂಕೋರ್ಟ್​

    06:53 pm ಆಧಾರ್​ ವಿಚಾರವಾಗಿ ನೀಡಿದ ತೀರ್ಪನ್ನು ಸೋಮವಾರ ಸುಪ್ರೀಂಕೋರ್ಟ್​ನ ಐದು ಸದಸ್ಯರ ಪೀಠ ಮರುಪರಿಶೀಲನೆ ಮಾಡಲಿದೆ. ರಾಜ್ಯ ಸಭಾ ಸಂಸದ ಎಂಪಿ ಜೈರಾಮ್​ ರಮೇಶ್​ ಸೇರಿ ಸಾಕಷ್ಟು ಜನರು ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಅರ್ಜಿ ಸಲ್ಲಿಕೆ ಮಾಡಿದ್ದರು. ಬಡವರಿಗೆ ಘನತೆ ತಂದುಕೊಡುವುದು ಸರ್ಕಾರದ ಶಾಸನಬದ್ಧ ಗುರಿ. ಅದನ್ನು ಸಾಕಾರಗೊಳಿಸುವ ಉದ್ದೇಶದಿಂದ ವ್ಯಕ್ತಿಗಳ ಖಾಸಗಿ ಸಂಗತಿಗಳನ್ನು ಆಧಾರ್​ ಕನಿಷ್ಠಮಟ್ಟದಲ್ಲಿ ನಿಯಂತ್ರಿಸುತ್ತದೆ ಎಂದು ಕೋರ್ಟ್​ ಈ ಮೊದಲು ಹೇಳಿತ್ತು.

  • 10 Jan 2021 06:07 PM (IST)

    ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚೆ

    ಅಮಿತ್ ಶಾರ ನಿವಾಸಕ್ಕೆ ಭೇಟಿ ನೀಡಿ ಹೊರಬಂದ ಬಳಿಕ ಮಾತಾಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಾಯಕತ್ವ ಬದಲಾವಣೆ ವಿಚಾರದ ಚರ್ಚೆಯ ಸಂದರ್ಭದಲ್ಲಿ ಅಮಿತ್‌ ಶಾ ಅವರು ಸೂಚನೆ ನೀಡಿದ್ದು, ಗುರುವಾರದ ಒಳಗೆ ತಮ್ಮ ಅಭಿಪ್ರಾಯ ತಿಳಿಸಲು ಯಡಿಯೂರಪ್ಪಗೆ ಅಮಿತ್‌ ಶಾ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ .

  • 10 Jan 2021 06:03 PM (IST)

    50 ದಿನಗಳನ್ನು ಕಂಪ್ಲೀಟ್ ಮಾಡಿದ ಆ್ಯಕ್ಟ್ – 1978 ಸಿನಿಮಾ

    ಲಾಕ್​ಡೌನ್​ ನಂತರ ಬಿಡುಗಡೆಯಾದ ಆ್ಯಕ್ಟ್ – 1978 ಸಿನಿಮಾ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಆ ಮೂಲಕ ಲಾಕ್​ಡೌನ್ ನಂತರ ಚಿತ್ರಮಂದಿರಗಳಲ್ಲಿ ತೆರೆಕಂಡ ದಕ್ಷಿಣ ಭಾರತದ ಮೊದಲ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದ್ದು, ನವೆಂಬರ್ 20 ರಂದು ತೆರೆ ಕಂಡಿದ್ದ ಈ ಚಿತ್ರ ಹಿರಿಮೆಗೆ ಪಾತ್ರವಾಗಿದೆ.

  • 10 Jan 2021 05:59 PM (IST)

    ಕೊರೊನಾ ಮುಗಿಯಿತು ಈಗ ಹಕ್ಕಿ ಜ್ವರದ ಕಾಟ

    ಕೆಲವು ರಾಜ್ಯಗಳಲ್ಲಿ ಹಕ್ಕಿ ಜ್ವರ ಹರಡುವಿಕೆಯ ಕಾರಣದಿಂದಾಗಿ ಕೇರಳದ ತಿರುವನಂತಪುರಂನಲ್ಲಿ ಕೋಳಿ ಮಾರಾಟದ ಮೇಲೆ ಪರಿಣಾಮ ಬೀರಿದೆ. ಮೊದಲೇ ಕೊರೊನಾ ಕಾರಣದಿಂದಾಗಿ ವ್ಯಾಪಾರವು ಕಡಿಮೆಯಾಗಿತ್ತು, ಈಗ ಕಳೆದ ಎರಡು ವಾರಗಳಿಂದ ಹಕ್ಕಿ ಜ್ವರ ಕಂಡುಬಂದಿದ್ದು, ಮತ್ತಷ್ಟು ನಷ್ಟವಾಗಿದೆ ಎಂದು ತಿರುವನಂತಪುರಂನ ಮಾರಾಟಗಾರರೊಬ್ಬರು ಹೇಳಿದ್ದಾರೆ.

  • 10 Jan 2021 05:52 PM (IST)

    ಸರಕು ವಿತರಣಾ ಸೇವೆಯನ್ನು ವಿಸ್ತರಿಸಲು 11 ವಿಮಾನಗಳನ್ನು ಖರೀದಿಸಿದ ಅಮೇಜಾನ್

    ಇ-ಕಾಮರ್ಸ್ ದೈತ್ಯ ಅಮೇಜಾನ್ ಸರಕು ವಿತರಣಾ ಸೇವೆಯನ್ನು ವಿಸ್ತರಿಸುವ ಉದ್ದೇಶದಿಂದ ಮೊದಲ ಹಂತದಲ್ಲಿ 11 ಬೋಯಿಂಗ್ 767-300 ಸರಕು ಸಾಗಾಣಿಕಾ ವಿಮಾನಗಳನ್ನು ಖರೀದಿಸಿದೆ. 2022ರ ವೇಳೆಗೆ 85 ವಿಮಾನಗಳಲ್ಲಿ ಸರಕು ವಿತರಣೆ ಸೇವೆ ಒದಗಿಸುವ ಯೋಜನೆ ಹೊಂದಿರುವ ಅಮೇಜಾನ್ 2016ರಲ್ಲೇ ವಾಯುಮಾರ್ಗದ ಮೂಲಕ ಸರಕು ವಿತರಣೆ ಸೇವೆ ನೀಡುವ ಯೋಜನೆ ರೂಪಿಸಿತ್ತು.ಆ ಮೂಲಕ ಮನೆಮನೆಗೆ ಸರಕು ವಿತರಿಸಲು ವಿಮಾನಗಳನ್ನು ಬಳಸಿಕೊಳ್ಳುವ ಯೋಜನೆಗಳು ಮುನ್ನೆಲೆಗೆ ಬರುತ್ತಿವೆ. ಈ ಕ್ಷೇತ್ರದಲ್ಲೂ ತಾನೇ ಸ್ಥಾನ ಬಲಪಡಿಸಿಕೊಳ್ಳುವ ಇಚ್ಛೆ ಹೊಂದಿರುವ ಅಮೇಜಾನ್ ಲೀಸ್ ಮತ್ತು ಸ್ವಂತ ವಿಮಾನಗಳನ್ನು ಹೊಂದುವ ಮೂಲಕ ಈ ಸೇವೆಗಳನ್ನು ಒದಗಿಸಲಿದೆ. ಆದರೆ, ಈ ಸೇವೆ ಸದ್ಯ ಅಮೆರಿಕಾಕ್ಕೆ ಮಾತ್ರ ಸೀಮಿತವಾಗಿರಲಿದೆ.

  • 10 Jan 2021 05:49 PM (IST)

    ಅಂಜನಾದ್ರಿ ಪರ್ವತದಿಂದ ಶಿಲೆಕೊಂಡೊಯ್ದ ರಾಜ್ಯಪಾಲರಾದ ವಜುಭಾಯಿ ವಾಲ

    ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತಕ್ಕೆ ‌ಇಂದು ರಾಜ್ಯಪಾಲ ವಜುಭಾಯಿ ವಾಲ ಭೇಟಿ ನೀಡಿದ್ದು, ಗುಜರಾತ್ ರಾಜ್ಯದ ಲಂಬವೇಲ್ ಎಂಬಲ್ಲಿ ನಿರ್ಮಾಣವಾಗುತ್ತಿರುವ ಹನುಮ ದೇವಸ್ಥಾನಕ್ಕೆ, ಅಂಜನಾದ್ರಿ ಪರ್ವತದಿಂದ ಶಿಲೆ ಕೊಂಡೊಯ್ಯಲು ರಾಜ್ಯಪಾಲರು ಇಲ್ಲಿಗೆ ಆಗಮಿಸಿದ್ದಾರೆ. ಶಿಲೆಗೆ ವಿಶೇಷ ಪೂಜೆ ನೆರವೇರಿಸಿದ ಬಳಿಕ, ಶಿಲೆಯನ್ನು ಗುಜರಾತ್​ನ ಲಂಬವೇಲ್​ಗೆ ಕೊಂಡೊಯ್ದಿದ್ದಾರೆ.

  • 10 Jan 2021 05:46 PM (IST)

    ಇಂಗ್ಲೆಡ್​ ಟೆಸ್ಟ್​​ನಿಂದ ರವೀಂದ್ರ ಜಡೇಜಾ ಹೊರಗುಳಿಯುವ ಸಾಧ್ಯತೆ

    ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್​​​ನಲ್ಲಿ ಭಾರತದ ಆಲ್​ರೌಂಡರ್ ರವೀಂದ್ರ ಜಡೇಜಾ ಕೈ ಬೆರಳು ಗಾಯಕ್ಕೆ ತುತ್ತಾಗಿದ್ದಾರೆ. ಗಾಯದ ತೀವ್ರತೆ ಹೆಚ್ಚಿದ್ದು, ಮುಂಬರುವ ಇಂಗ್ಲೆಡ್​ ಟೆಸ್ಟ್​​ನಿಂದ ರವೀಂದ್ರ ಜಡೇಜಾ ಹೊರಗುಳಿಯುವ ಸಾಧ್ಯತೆ ಇದೆ. ಮೊದಲ ಇನ್ನಿಂಗ್ಸ್​ನಲ್ಲಿ ರವೀಂದ್ರ ಜಡೇಜಾ ಬ್ಯಾಟಿಂಗ್​ ಮಾಡುತ್ತಿದ್ದ ವೇಳೆ, ಮಿಚೆಲ್​ ಸ್ಟಾರ್ಕ್​ ಎಸೆದ ಬಾಲ್​ ಬ್ಯಾಟ್​ಗೆ ತಾಗದೆ ಅವರ ಗ್ಲೌಸ್​ಗೆ ತಾಗಿತ್ತು. ಈ ವೇಳೆ ಕೈ ನೋವಿನಿಂದ ಅಲ್ಲಿಯೇ ಚಿಕಿತ್ಸೆ ಪಡೆದರು. ಈಗ  ವೈದ್ಯರು ರವೀಂದ್ರ ಜಡೇಜಾಗೆ ಒಂದೂವರೆ ತಿಂಗಳು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರಂತೆ.

  • 10 Jan 2021 05:40 PM (IST)

    ತಮಿಳು ನಾಮಫಲಕ ಅಳವಡಿಕೆ ಬಗ್ಗೆ ಆಕ್ರೊಶ

    ಚಾಮರಾಜನಗರ ತಾಲೂಕಿನ ಕೋಳಿಪಾಳ್ಯದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ತಮಿಳುನಾಡು ನಾಮ ಫಲಕ ಹಾಕಿದ ಹಿನ್ನೆಲೆಯಲ್ಲಿ, ತಮಿಳು ನಾಮಫಲಕ ಕಿತ್ತೊಗೆದು ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದ್ದು, ಕರ್ನಾಟಕದಲ್ಲಿ ಕನ್ನಡ ನಾಮಫಲಕ ಹಾಕುವಂತೆ ಆಗ್ರಹಿಸಲಾಗಿದೆ.

  • 10 Jan 2021 05:38 PM (IST)

    ಜಲ್ಲಿಕಟ್ಟು ವೇಳೆ ಮನೆ ಕುಸಿತ: ಮಗು ಸೇರಿ ಮೂವರು ಸ್ಥಳದಲ್ಲೇ ಸಾವು

    ಜಲ್ಲಿಕಟ್ಟು ವೇಳೆ ಮನೆ ಗೋಡೆ ಕುಸಿದು ಮಗು ಸೇರಿ ಮೂವರು ಸಾವನ್ನಪ್ಪಿದ ಘಟನೆ ಕರ್ನಾಟಕ ಗಡಿ ಭಾಗದ ತಮಿಳುನಾಡಿನ ಹೊಸೂರು ಸಮೀಪದ ನೆರ್ಲಗಿರಿ ಗ್ರಾಮದಲ್ಲಿ ನಡೆದಿದೆ. ತಮಿಳುನಾಡಿನಲ್ಲಿ ಸಂಕ್ರಾಂತಿ ಹಬ್ಬದ ವೇಳೆಯಲ್ಲಿ ಶುರುವಾಗುವ ಹೋರಿ ಬೆದರಿಸುವ ಆಟ ಜಲ್ಲಿಕಟ್ಟಾಗಿದ್ದು, ಈ ವರ್ಷದ ಮೊದಲ ಜಲ್ಲಿಕಟ್ಟು ವೇಳೆ ಮಗು ಸೇರಿ 20 ಕ್ಕೂ ಹೆಚ್ಚು ಜನರ ಮೇಲೆ ಮನೆ ಗೋಡೆ ಕುಸಿದಿದೆ.

  • 10 Jan 2021 05:33 PM (IST)

    ಜಿಟಿಡಿಗೆ ಟಾಂಗ್ ಕೊಟ್ಟ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಕೆ. ಕುಮಾರಸ್ವಾಮಿ

    ಜಿ.ಟಿ.ದೇವೇಗೌಡರನ್ನು ನಾವು ಉಚ್ಛಾಟನೆ ಮಾಡುತ್ತೇವೆ ಎಂದು ಹೇಳಿಲ್ಲ. ಅವರು ಉಚ್ಛಾಟನೆ ಮಾಡಲಿ ಎಂದು ಕಾಯುತ್ತಿದ್ದಾರೆ. ಪಕ್ಷದಲ್ಲಿ ಗೆದ್ದ ಮೇಲೆ ಅವಧಿ ಮುಗಿಯುವವರೆಗೂ ನಿಷ್ಠರಾಗಿ ಇರಬೇಕು. ಉಚ್ಛಾಟನೆಗೆ ಅವರು ಹೆದರಲ್ಲ, ಮೆಂಬರ್ ಶಿಪ್ ಹೋಗಲ್ಲ ಅದಕ್ಕೆ ಎಲ್ಲವನ್ನೂ ಮಾಡುತ್ತಿದ್ದಾರೆ ಎಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಸಮೀಪದ ಹಾಂದಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

  • 10 Jan 2021 05:23 PM (IST)

    ಉಹಾಪೋಹಗಳಿಗೆ ಬ್ರೇಕ್ ಹಾಕಿದ ಜೆಡಿಯುನ ರಾಜೀವ್ ರಂಜನ್ ಸಿಂಗ್

    ನಮ್ಮ ಪಕ್ಷದ ಮುಖಂಡ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಬಗ್ಗೆ ಸಾಕಷ್ಟು ಉಹಾಪೋಹಗಳು ನಡೆಯುತ್ತಿದೆ. ಆದರೆ ನಮ್ಮ ಪಕ್ಷವು ಎನ್‌ಡಿಎಯೊಂದಿಗೆ ಬಲವಾಗಿ ನಿಂತಿದೆ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ಜೆಡಿಯುನ ಬಿಹಾರ ಸಂಸತ್ತಿನ ಸದಸ್ಯ ರಾಜೀವ್ ರಂಜನ್ ಸಿಂಗ್ ತಿಳಿಸಿದ್ದಾರೆ.

  • 10 Jan 2021 05:12 PM (IST)

    ಯುವರಾಜ್ ಜೊತೆ ಪೋಟೋ ತೆಗೆಸಿಕೊಂಡಿದ್ದರೆ ತಪ್ಪಿಲ್ಲ: ಸಚಿವ ರಮೇಶ್ ಜಾರಕಿಹೊಳಿ

    ಯುವರಾಜ್ ಅಲಿಯಾಸ್ ಸ್ವಾಮಿಯಿಂದ ವಂಚನೆ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಳಗಾವಿಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದು, ಒಂದೆರಡು ಬಾರಿ ನನ್ನನ್ನು ಯುವರಾಜ್ ದೆಹಲಿಯ ಕರ್ನಾಟಕ ಭವನದಲ್ಲಿ ಭೇಟಿಯಾಗಿದ್ದ .​ ಆದರೆ ಅವನ ಜೊತೆ ನಾನು ಫೋಟೋ ತೆಗೆಸಿಕೊಂಡಿರಲಿಲ್ಲ, ಯುವರಾಜ್​ ಜೊತೆಗೆ ಫೋಟೋ ತೆಗೆಸಿಕೊಂಡಿದ್ದರೆ ತಪ್ಪಿಲ್ಲ ಕಾರಣ ಉನ್ನತ ಹುದ್ದೆಯಲ್ಲಿದ್ದಾಗ ಜನ ಫೋಟೋ ತೆಗೆಸಿಕೊಳ್ಳುತ್ತಾರೆ ಎಂದು ಜಾರಕಿಹೊಳಿ ಹೇಳಿದ್ದಾರೆ.

  • 10 Jan 2021 05:03 PM (IST)

    ಹೈಕೋರ್ಟ್‌ನ ಮೊರೆ ಹೋದ ಬಾಲಿವುಡ್ ನಟ ಸೋನು ಸೂದ್

    ಮುಂಬೈನ ಜುಹುದಲ್ಲಿನ ತನ್ನ ಜಮೀನಿನಲ್ಲಿನ ವಸತಿ ಕಟ್ಟಡವೊಂದನ್ನು ಅನುಮತಿ ಇಲ್ಲದೆ ಹೋಟೆಲ್ ಆಗಿ ನಿರ್ಮಾಣ ಮಾಡಿರುವ ಆರೋಪದ ಮೇಲೆ ಬೃಹತ್ ಮುಂಬೈ ಮಹಾನಗರ ಪಾಲಿಕೆಯು (ಬಿಎಂಸಿ) ನೋಟಿಸ್ ನೀಡಿರುವುದನ್ನು ಪ್ರಶ್ನಿಸಿ ಬಾಲಿವುಡ್ ನಟ ಸೋನು ಸೂದ್ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ನಾಳೆ ಈ ಕುರಿತು ವಿಚಾರಣೆಯನ್ನು ನಿಗದಿಪಡಿಸಲಾಗಿದೆ.

  • 10 Jan 2021 04:52 PM (IST)

    ಮಂತ್ರಿ ಮಂಡಲದ ಬಗ್ಗೆ ಗುಡ್ ನ್ಯೂಸ್ ಸಿಗಲಿದೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

    ತೃಪ್ತಿಕರವಾದ ಚರ್ಚೆಗಳು ನಡೆದಿದೆ. ರಾಷ್ಟ್ರ ನಾಯಕರ ಜೊತೆಗಿನ ಸಭೆ ಸಂತೋಷಕರವಾಗಿದ್ದು, ಆದಷ್ಟು ಬೇಗ ರಾಷ್ಟ್ರ ನಾಯಕರು ಮಂತ್ರಿ ಮಂಡಲದ ಬಗ್ಗೆ ಶುಭ ಸುದ್ದಿಯನ್ನು ಕೊಡುತ್ತಾರೆ ಎನ್ನುವ ವಿಶ್ವಾಸವಿದೆ. ಗ್ರಾಮ ಪಂಚಾಯತಿ ಚುನಾವಣೆ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದು, ಉಪಚುನಾವಣೆ ಬಗ್ಗೆ ಹೆಸರು ಕಳುಹಿಸಿ ಎಂದು ಸೂಚಿಸಿರುವುದಾಗಿ  ಒಂದು ಗಂಟೆಗಳ ಕಾಲ ಅಮಿತ್ ಶಾ ಮನೆಯಲ್ಲಿ ಚರ್ಚೆ ನಡೆಸಿ ಹೊರಬಂದ ಬಳಿಕ ದೆಹಲಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

  • 10 Jan 2021 04:41 PM (IST)

    ಸನ್ಮಾನದ ಶಾಲು, ಹಾರಗಳಿಗೆ ಮುಗಿಬಿದ್ದ ಗ್ರಾಮ ಪಂಚಾಯತಿ ಸದಸ್ಯರು

    ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ನಡೆದ ನೂತನ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಶಾಲ್ ಹಾಗೂ ಹಾರಗಳಿಗಾಗಿ ಪಂಚಾಯತಿ ಸದಸ್ಯರು ಪರದಾಟ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಸಮ್ಮುಖದಲ್ಲಿ ಶಾಲ್ ಹಾಗೂ ಮುತ್ತಿನ ಹಾರಕ್ಕಾಗಿ ಮುಗಿಬಿದ್ದ ಘಟನೆ ನಡೆದಿದೆ.

  • 10 Jan 2021 04:30 PM (IST)

    ಜನಾಂಗೀಯ ನಿಂದನೆ ವಿರುದ್ಧ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಿಡಿ

    ಸಿಡ್ನಿ ಟೆಸ್ಟ್ ವೇಳೆ ಅಭಿಮಾನಿಗಳಿಂದ ಜನಾಂಗೀಯ ನಿಂದನೆಯಾಗಿದ್ದು, ಇದರ ವಿರುದ್ಧ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕಿಡಿಕಾರಿದ್ದಾರೆ. ಜನಾಂಗೀಯ ನಿಂದನೆಯನ್ನು ಖಂಡಿತವಾಗಿಯೂ ಸಹಿಸಿಕೊಳ್ಳುವುದಿಲ್ಲ. ಮೈದಾನದಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಬೇಸರದ ಸಂಗತಿಯಾಗಿದ್ದು, ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ನಿಂದನೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

  • 10 Jan 2021 04:21 PM (IST)

    ಹಕ್ಕಿ ಜ್ವರ ಭೀತಿ: ಕೋಳಿ ವ್ಯಾಪಾರಕ್ಕೆ ಬೆಂಗಳೂರಿನಲ್ಲಿ ಹಿನ್ನಡೆ

    ಹಕ್ಕಿ ಜ್ವರ ಹರಡುವ ಭೀತಿಯಿಂದಾಗಿ ಬೆಂಗಳೂರಿನ ಕೋಳಿ ವ್ಯವಹಾರದಲ್ಲಿ ಶೇ. 30ರಷ್ಟು ಇಳಿಕೆಯಾಗಿದ್ದು, ಮಾರಾಟಗಾರರು ಈ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕರ್ನಾಟಕದಲ್ಲಿ ಹಕ್ಕಿ ಜ್ವರ ಪ್ರಕರಣಗಳಿಲ್ಲ ಎಂದು ಹೇಳುತ್ತಾರೆ.

  • 10 Jan 2021 04:12 PM (IST)

    ದೆಹಲಿಯ ಕರ್ನಾಟಕ ಭವನಕ್ಕೆ ಹಿಂದಿರುಗಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ

    ಅಮಿತ್​ ಶಾ ನಿವಾಸದಿಂದ ತೆರಳಿದ ನಂತರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ದೆಹಲಿಯ ಕರ್ನಾಟಕ ಭವನಕ್ಕೆ ಹಿಂದಿರುಗಿದ್ದಾರೆ.

  • 10 Jan 2021 04:07 PM (IST)

    ಬಿಜೆಪಿ ವರಿಷ್ಠರ ಜೊತೆಗಿನ ಬಿ.ಎಸ್ ಯಡಿಯೂರಪ್ಪ ಭೇಟಿ ಅಂತ್ಯ

    ದೆಹಲಿಯ ಕೃಷ್ಣ ಮೆನನ್ ಮಾರ್ಗದಲ್ಲಿರುವ ಅಮಿತ್ ಶಾ ಮನೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ, ಗೃಹ ಸಚಿವ ಅಮಿತ್ ಶಾ, ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್​ ಜೊತೆ ಚರ್ಚೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಅಮಿತ್ ಶಾ ಮನೆಯಿಂದ ತೆರಳಿದ್ದಾರೆ.

  • 10 Jan 2021 03:59 PM (IST)

    ಅಮಿತ್ ಶಾ ನಿವಾಸಕ್ಕೆ ಜಗತ್ ಪ್ರಕಾಶ್ ನಡ್ಡಾ

    ಕೇಂದ್ರ ಗೃಹ ಸಚಿವ ಅಮಿತ್ ಶಾ ನಿವಾಸಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭೇಟಿ ನೀಡಿದ್ದು, ಅಮಿತ್​ ಶಾ ಜೊತೆಗೆ ಚರ್ಚೆ ನಡೆಸುತ್ತಿದ್ದಾರೆ. ಸದ್ಯ ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಕೂಡ ದೆಹಲಿಯ ಕೃಷ್ಣ ಮೆನನ್ ಮಾರ್ಗದಲ್ಲಿರುವ ಅಮಿತ್ ಶಾ ಮನೆಗೆ ಆಗಮಿಸಿದ್ದಾರೆ.

  • 10 Jan 2021 03:41 PM (IST)

    ಅಕಾಲಿಕ ಮಳೆಯಿಂದ ಬೆಳೆ ನಷ್ಟ

    ಅಕಾಲಿಕ ಮಳೆಯಿಂದಾಗಿ ಕೊಡಗು ಮತ್ತು ಚಿಕ್ಕಮಗಳೂರಿನ ಕಾಫಿ ಬೆಳೆ ಸಂಪೂರ್ಣವಾಗಿ ಹಾಳಾಗಿದ್ದು, ರೈತನ್ನು ಆತಂಕಕ್ಕೆ ಗುರಿಮಾಡಿದೆ.

  • 10 Jan 2021 03:34 PM (IST)

    ಮುಂಬರುವ ಚುನಾವಣೆಗೆ ಈಗಲೇ ಆಶ್ವಾಸನೆ ನೀಡಿದ ಹೆಚ್​.ಡಿ ಕುಮಾರಸ್ವಾಮಿ

    ಅಧಿಕಾರಕ್ಕೆ ಬಂದ ಮೊದಲನೆ ವರ್ಷದಲ್ಲೇ ರಾಜ್ಯದಲ್ಲಿ ಹೊಸದಾಗಿ 50 ಲಕ್ಷ ಮನೆ ನಿರ್ಮಾಣ, 2ನೇ ವರ್ಷದಲ್ಲಿ ಪ್ರತಿ ಗ್ರಾಮ ಪಂಚಾಯತಿಗೆ ಮುಖ್ಯ ಕೇಂದ್ರದಲ್ಲಿ ಒಂದು ಪಬ್ಲಿಕ್ ಶಾಲೆ, 5,600 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಸಜ್ಜಿತ ಶಾಲೆಗಳ ನಿರ್ಮಾಣ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸುಸಜ್ಜಿತ ಆಸ್ಪತ್ರೆಗಳು ಮತ್ತು ಅಗತ್ಯ ಸಿಬ್ಬಂದಿಯನ್ನು ನೇಮಿಸುವ ಭರವಸೆ ನೀಡಿದ್ದು, ಇವಿಷ್ಟೇ ಅಲ್ಲ, ಇನ್ನೂ ಸಾಕಷ್ಟಿದೆ. ಚುನಾವಣೆ ಘೋಷಣೆಯಾಗಲಿ ಎಲ್ಲವನ್ನೂ ಹೇಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಿರೀಕ್ಷೆ ಹುಟ್ಟುಹಾಕಲು ಯತ್ನಿಸಿದ್ದಾರೆ.

  • 10 Jan 2021 03:27 PM (IST)

    ಕಾಂಗ್ರೆಸ್ ಗ್ರಾಮೀಣ ಕುಲಕಸುಬನ್ನೇ ಕಸಿದುಕೊಂಡಿದೆ: ಗೋವಿಂದ ಕಾರಜೋಳ

    ಹುಬ್ಬಳ್ಳಿಯಲ್ಲಿ ನಡೆದ ಜನಸೇವಕ ಸಮಾವೇಶದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ 60 ವರ್ಷಗಳ ಕಾಲ ದೇಶದಲ್ಲಿ ಕಾಂಗ್ರೆಸ್ ಅಧಿಕಾರ ಮಾಡಿದೆ. ರೈತರು ದೇಶದ ಬೆನ್ನೆಲುಬು ಎನ್ನುತ್ತಾರೆ. ಇಂತಹ ಬೆನ್ನೆಲುಬನ್ನೇ ಕಾಂಗ್ರೆಸ್ ಮುರಿದಿದ್ದು, ಗ್ರಾಮೀಣ ಭಾಗದ ಜನರ ಕುಲಕಸುಬನ್ನು ಕಾಂಗ್ರೆಸ್ ಕಸಿದುಕೊಂಡಿದೆ. ನಮ್ಮ ಸರ್ಕಾರ ಬಡವರ ಪರ, ಗ್ರಾಮೀಣ ಜನರಿಗೆ ಉಪಯೋಗವಾಗುವಂತಹ ಯೋಜನೆಗಳನ್ನ ತಂದಿದ್ದು, ಗ್ರಾಮವನ್ನ ಅಭಿವೃದ್ಧಿ ಮಾಡಲು ನೂತನ ಸದಸ್ಯರು ಶ್ರಮಿಸಬೇಕು ಎಂದು ಕಾಂಗ್ರೆಸ್ ವಿರುದ್ಧ ಕಾರಜೋಳ ಹರಿಹಾಯ್ದಿದ್ದಾರೆ.

  • 10 Jan 2021 03:16 PM (IST)

    ರಾಧಿಕಾ ಕುಮಾರಸ್ವಾಮಿ ವಿಚಾರವಾಗಿ ಪ್ರತಿಕ್ರಿಯೆಗೆ ನಕಾರ

    ಸಿಸಿಬಿಯಿಂದ ರಾಧಿಕಾ ಕುಮಾರಸ್ವಾಮಿ ವಿಚಾರಣೆ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿಯವರನ್ನು ಪತ್ರಕರ್ತರು ಪ್ರಶ್ನಿಸಿದಾಗ ಯಾರಪ್ಪ ಅವರೆಲ್ಲ? ,ಅದ್ಯಾರೋ ನನಗೆ ಗೊತ್ತಿಲ್ಲ. ಸಂಬಂಧಪಡದ ವಿಚಾರವನ್ನು ಕೇಳಬೇಡಿ ಎಂದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ನೇರಳಕೆರೆಯಲ್ಲಿ ಮಾಜಿ ಸಿಎಂ ಹೆಚ್​ಡಿಕೆ ಹೇಳಿಕೆ ನೀಡಿದ್ದಾರೆ.

  • 10 Jan 2021 03:08 PM (IST)

    ಸಂತಾಪ ವ್ಯಕ್ತಪಡಿಸಿದ ನರೇಂದ್ರ ಮೋದಿ

    ಇಂಡೋನೇಷ್ಯಾದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಉಂಟಾದ ಪ್ರಾಣಹಾನಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.

  • 10 Jan 2021 03:00 PM (IST)

    ನಟಿ ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್​ರನ್ನು ವಿಚಾರಣೆ ನಡೆಸಿದ ಸಿಸಿಬಿ

    ವಂಚಕ ಯುವರಾಜ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ, ನಟಿ ರಾಧಿಕಾ ಕುಮಾರಸ್ವಾಮಿ ಅವರ ಸಹೋದರ ರವಿರಾಜ್​ರನ್ನು ವಿಚಾರಣೆಗೆ ಒಳಪಡಿಸಿದ್ದು, ಯುವರಾಜ್ ಜತೆ ಹಣದ ವ್ಯವಹಾರ ಸಂಬಂಧ ತನಿಖೆ ನಡೆಸಲಾಗಿದೆ. ಸತತ 3 ಗಂಟೆಗಳ ಕಾಲ ಚಾಮರಾಜಪೇಟೆ ಸಿಸಿಬಿ ಕಚೇರಿಯಲ್ಲಿ ತನಿಖಾಧಿಕಾರಿ ಎಸಿಪಿ ನಾಗರಾಜ್‌ರಿಂದ ರವಿರಾಜ್ ವಿಚಾರಣೆ ಮಾಡಲಾಗಿದ್ದು, ಸದ್ಯ ರವಿರಾಜ್ ಸಿಸಿಬಿ ವಿಚಾರಣೆ ಮುಗಿಸಿ ಹೊರಬಂದಿದ್ದಾರೆ.

  • 10 Jan 2021 02:51 PM (IST)

    ಅಮಿತ್ ಶಾ ನಿವಾಸಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

    ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿದ್ದು, ದೆಹಲಿಯ ಕೃಷ್ಣ ಮೆನನ್ ಮಾರ್ಗದಲ್ಲಿರುವ ಅಮಿತ್ ಶಾ ನಿವಾಸಕ್ಕೆ ಬಿಎಸ್​ವೈ ಆಗಮಿಸಿದ್ದಾರೆ.

  • 10 Jan 2021 02:47 PM (IST)

    ಕೈ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಗೋಕಾಕ್ ಸಾಹುಕಾರ್ ಶಕ್ತಿ ಪ್ರದರ್ಶನ

    ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ, ಗೋಕಾಕ್ ಕ್ಷೇತ್ರದ ಶಾಸಕ ಸಚಿವ ರಮೇಶ್ ಶಕ್ತಿ ಪ್ರದರ್ಶನ ಮಾಡಲು ಹೊರಟ್ಟಿದ್ದು, ಹಿಂದೂ ಕಾರ್ಯಕರ್ತರ ಹೆಸರಿನಲ್ಲಿ ಸ್ನೇಹಭೋಜನ ಸಮಾವೇಶ ಕೈಗೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ‌ ಗ್ರಾಮೀಣ ಕ್ಷೇತ್ರದಲ್ಲಿ ಹಿಂದೂ ಮತದಾರರನ್ನು ಸೆಳೆಯಲು ಪ್ಲ್ಯಾನ್‌ ಮಾಡಿದ್ದು, ಬೆಳಗಾವಿ ತಾಲೂಕಿನ ನಾವಗೆ ಗ್ರಾಮದಲ್ಲಿ ಕಾರ್ಯಕ್ರಮ ಆಯೋಜಿಸಿದ್ದಾರೆ. 3000ಕ್ಕೂ ಹೆಚ್ಚು ಹಿಂದೂಪರ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಶಾಸಕ ಅನಿಲ ಬೆನಕೆ, ಮುಖ್ಯ ಸಚೇತಕ ಕವಟಗಿಮಠ, ಮಾಜಿ ಶಾಸಕ ಸಂಜಯ್ ಪಾಟೀಲ್ ಸೇರಿ ಹಲವರು ಇಲ್ಲಿ ಭಾಗವಹಿಸಲಿದ್ದಾರೆ.

  • 10 Jan 2021 02:39 PM (IST)

    ಹರಿಯಾಣ ಮುಖ್ಯಮಂತ್ರಿಯ ಭಾಷಣಕ್ಕೆ ಪ್ರತಿಭಟನಾ ನಿರತ ರೈತರಿಂದ ಅಡ್ಡಿ

    ಹರಿಯಾಣದ ಕೈಮ್ಲಾ ಗ್ರಾಮದಲ್ಲಿ‌ ನಡೆದ ಘಟನೆ ಕಿಸಾನ್ ಮಹಾ ಸಮಾವೇಶ ಸಂದರ್ಭದಲ್ಲಿ ಮುಖ್ಯಮಂತ್ರಿ ಮನೊಹರಲಾಲ್ ಕಟ್ಟರ್ ಭಾಷಣಕ್ಕೆ ಪ್ರತಿಭಟನಾನಿರತ ರೈತರು ಅಡ್ಡಿಪಡಿಸಿದ್ದು, ಪೊಲೀಸರು ಪರಿಸ್ಥಿತಿ ಹತೋಟಿಗೆ ತೆಗೆದುಕೊಳ್ಳಲು ಲಾಠಿ ಚಾರ್ಜ್, ಅಶ್ರುವಾಯು ಪ್ರಯೋಗ ಮಾಡಿದ್ದು, ಪೊಲೀಸರ ವಿರುದ್ಧ ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • 10 Jan 2021 02:29 PM (IST)

    ಬಿಜೆಪಿಯವರು ಎಷ್ಟು ದಿನ ಗೋಪೂಜೆ ಮಾಡುತ್ತಾರೆ: ವಿಪಕ್ಷ ನಾಯಕ ಸಿದ್ದರಾಮಯ್ಯ

    ಸಗಣಿ ಎತ್ತದಿರುವವರು, ಬೆರಣಿ ತಟ್ಟದಿರುವವರು, ಗಂಜಲ ಮುಟ್ಟದಿರುವ ಎಷ್ಟು ದಿನ ಗೋಪೂಜೆ ಮಾಡ್ತಾರೆ ?,ಹಾಲು ಕರೆಯದಿರುವ ಹಸುಗಳನ್ನು ಏನು ಮಾಡಬೇಕು ?, ಎಮ್ಮೆ, ಕೋಣಗಳನ್ನು ತಿನ್ನಬಹುದು ಎಂದು ಬಿಟ್ಟಿದ್ದಾರೆ.ದೇಶದಲ್ಲಿ ಬೀಫ್ ನಿಷೇಧಿಸಿ, ವಿದೇಶಗಳಿಂದ ಆಮದು ಮಾಡಿಕೊಳ್ಳುವ ವ್ಯವಸ್ಥೆ ಜಾರಿಯಲ್ಲಿದೆ. ಹಾಗಿದ್ದರೆ ವಿದೇಶಗಳ ಹಸುಗಳು ಗೋಮಾತೆ ಅಲ್ವಾ ? ಗೋಹತ್ಯೆ ನಿಷೇಧ ಕಾಯ್ದೆ ಜಾರಿಯನ್ನ ಇಡೀ ದೇಶದಲ್ಲೇ ಜಾರಿಗೆ ತನ್ನಿ, ಕೇರಳದಲ್ಲಿ ಏಕೆ ಬಿಟ್ಟಿದ್ದೀರಿ ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದು, ಗ್ರಾಮೀಣ ಆದಾಯದ ಮೇಲೆ, ರೈತರ ಮೇಲೂ ಇದು ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.

  • 10 Jan 2021 02:19 PM (IST)

    ಕಟೀಲು ನಮ್ಮ ನಿರೀಕ್ಷೆ ಮೀರಿ ಕೆಲಸ ಮಾಡುತ್ತಿದ್ದಾರೆ: ಎಂ. ಪಿ ರೇಣುಕಾಚಾರ್ಯ

    ನಮ್ಮ ಬಿಜೆಪಿ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲು ಬಿಜೆಪಿಯ ಸಮರ್ಥ ಅಧ್ಯಕ್ಷ. ನಳಿನ್ ಕುಮಾರ್ ಕಟೀಲು ರಾಜ್ಯಾಧ್ಯಕ್ಷರಾಗುವ ಸಂದರ್ಭದಲ್ಲಿ ಅನುಮಾನಪಟ್ಟಿದ್ದೆ, ಕಟೀಲು ಮಂಗಳೂರಿಗೆ ಮಾತ್ರ ಸೀಮಿತರಾಗುತ್ತಾರೆ ಎಂದುಕೊಂಡಿದ್ದೆ. ಆದರೆ ಕಟೀಲು ನಮ್ಮ ನಿರೀಕ್ಷೆ ಮೀರಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನವನ್ನು ಗೆಲ್ಲುತ್ತದೆ ಎಂದು ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ಬಿಜೆಪಿ ಶಾಸಕ ಎಂ. ಪಿ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.

  • 10 Jan 2021 02:12 PM (IST)

    ಸತೀಶ್ ಜಾರಕಿಹೊಳಿ ಸಿಎಂ ಆಗುವ ಹಗಲುಗನಸು ಕಾಣುತ್ತಿದ್ದಾರೆ: ರೇಣುಕಾಚಾರ್ಯ

    ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ, ಡಿಕೆಶಿ ನಡುವೆ ಅಧಿಕಾರಕ್ಕಾಗಿ ತಿಕ್ಕಾಟ ನಡೆಯುತ್ತಿತ್ತು, ಈಗ ಸತೀಶ್ ಜಾರಕಿಹೊಳಿ ಇವರ ಮಧ್ಯೆ ಬಂದಿದ್ದಾರೆ. ಸತೀಶ್ ಮುಖ್ಯಮಂತ್ರಿಯಾಗುವ ಹಗಲು‌ಗನಸು ಕಾಣುತ್ತಿದ್ದಾರೆ ಎಂದು ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.

  • 10 Jan 2021 02:06 PM (IST)

    ನಾವು ಜನರಿಗಷ್ಟೇ ಹೆದರುವುದು ಯಾರೂ ಸಹ ನಮ್ಮ ಬಗೆಗೆ ಅನುಮಾನ ಪಡಬೇಡಿ: ಹೆಚ್.ಡಿ ಕುಮಾರಸ್ವಾಮಿ

    ಮೋದಿ 2000 ರೂಪಾಯಿಯನ್ನ ರೈತರ ಖಾತೆಗೆ ಹಾಕಿದ್ದೇ ಬಿಜೆಪಿಯವರು ದೊಡ್ಡ ಸಾಧನೆ ಎನ್ನುತ್ತಾರೆ. ನಾನು ಜಿಲ್ಲೆಗೆ 9000 ಕೋಟಿ ರೂಪಾಯಿ ಯೋಜನೆ ಘೋಷಿಸಿದ್ದರೆ ನನ್ನನ್ನು ಸರ್ಕಾರದಿಂದ ಇಳಿಸಿದ್ದರು. ಮಂಡ್ಯದ ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡುತ್ತಿದ್ದಾರೆ. ನಾನು ಹೊಸದಾಗಿ ಸಕ್ಕರೆ ಕಾರ್ಖಾನೆ ಮಾಡಲು ಹಣ ಮೀಸಲಿಟ್ಟಿದ್ದರೆ ಅದನ್ನ ಬೇರೆ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ನಾವು ಜನರಿಗಷ್ಟೇ ಹೆದರುವುದು ಯಾರೂ ಸಹ ನಮ್ಮ ಬಗೆಗೆ ಅನುಮಾನ ಪಡಬೇಡಿ ಎಂದು ಮಂಡ್ಯ ಜಿಲ್ಲೆ ನೇರಳಕೆರೆ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

  • 10 Jan 2021 01:56 PM (IST)

    ನಾಳೆಯಿಂದ ನೂತನ ಬಿಬಿಎಂಪಿ ಕಾಯ್ದೆ ಜಾರಿ

    ಬೆಂಗಳೂರಿನಲ್ಲಿ ನಾಳೆಯಿಂದ ಬಿಬಿಎಂಪಿ ನೂತನ ಕಾಯ್ದೆ ಜಾರಿಗೆ ಬರಲಿದ್ದು, ಹಲವು ಬದಲಾವಣೆಗಳಾಗಲಿದೆ. ಹಿಂದೆ ವರ್ಷಕ್ಕೊಮ್ಮೆ ಮೇಯರ್ ಬದಲಾವಣೆಯಾಗುತ್ತಿತ್ತು. ಆದರೆ ಹೊಸ ಕಾಯ್ದೆ ಪ್ರಕಾರ 5 ವರ್ಷದಲ್ಲಿ ಕೇವಲ ಇಬ್ಬರು ಮೇಯರ್​ಗಳು ಬದಾವಣೆಯಾಗಲಿದ್ದು, ಆ ಮೂಲಕ ಬಿಬಿಎಂಪಿ ಮೇಯರ್ ಅವಧಿ ವಿಸ್ತರಣೆಯಾಗಲಿದೆ.ಇದಲ್ಲದೇ ಪಾಲಿಕೆಯ 8 ವಲಯಗಳು 15 ವಲಯಗಳಾಗಿ ಏರಿಕೆಯಾಗಲಿದೆ. ಇನ್ನೂ ಪ್ರತಿ ವಿಧಾನಸಭಾ ಕ್ಷೇತ್ರಕ್ಕೊಂದು ಸಲಹಾ ಸಮಿತಿ, ಮುಖ್ಯ ಆಯುಕ್ತರ ಅವಧಿ ಎರಡು ವರ್ಷಕ್ಕೆ ನಿಗದಿಯಾಗಲಿದೆ ಎಂದು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಶ್ ಸಿಂಗ್ ಟಿವಿ9ಗೆ ಮಾಹಿತಿ‌ ನೀಡಿದ್ದಾರೆ.

  • 10 Jan 2021 01:13 PM (IST)

    ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್​ನ ನಾಲ್ಕನೇ ದಿನದ ಆಟ ಅಂತ್ಯ

    ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್​ನ ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ ಪ್ರಮುಖ 2 ವಿಕೆಟ್​ಗಳನ್ನು ಕಳೆದುಕೊಂಡು 98 ರನ್ ಗಳಿಸಿದೆ. ನಾಳೆ ಕೊನೆಯ ದಿನವಾಗಿದ್ದು, ಭಾರತಕ್ಕೆ ಗೆಲ್ಲಲು 309 ರನ್​ಗಳ ಅವಶ್ಯಕತೆ ಇದೆ. ಭಾರತ ನಾಳಿನ ಪಂದ್ಯದಲ್ಲಿ ಮ್ಯಾಚ್ ಡ್ರಾ ಮಾಡಿಕೊಳ್ಳಬೇಕಾದರೆ ಎಚ್ಚರಿಕೆಯ ಆಟವಾಡಬೇಕಾಗಿದ್ದು, ಗೆಲ್ಲಬೇಕಾದರೆ 309 ರನ್ ಬಾರಿಸಬೇಕು.

  • 10 Jan 2021 01:11 PM (IST)

    ಮೂರನೇ ದಿನವೂ ಮುಂದುವರಿದ ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸಾಮಿ ಧರಣಿ

    ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸಾಮಿ ಅವರು ಮೂರನೇ ದಿನವೂ ರಾಜ್ ನಿವಾಸ್ ಬಳಿ ಧರಣಿ ಪ್ರತಿಭಟನೆಯನ್ನು ಮುಂದುವರೆಸಿದ್ದು, ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರನ್ನು ವಾಪಸ್ ಕರೆಸಿಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ.

  • 10 Jan 2021 12:53 PM (IST)

    ರಾಷ್ಟ್ರೀಯ ಯುವ ಸಂಸತ್ತಿನ ಉತ್ಸವದಲ್ಲಿ ಪ್ರಧಾನ ಮಂತ್ರಿ ಭಾಗಿ

    ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2021 ಜನವರಿ 12 ರಂದು ಎರಡನೇ ರಾಷ್ಟ್ರೀಯ ಯುವ ಸಂಸತ್ತಿನ ಉತ್ಸವದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ಮಾಹಿತಿ ನೀಡಿದೆ.

  • 10 Jan 2021 12:47 PM (IST)

    ವ್ಯಾಕ್ಸಿನ್ ಸ್ಟೋರೇಜ್ ಕೇಂದ್ರಕ್ಕೆ ಭೇಟಿ ನೀಡಿದ ಡಾ.ಕೆ.ಸುಧಾಕರ್‌

    ವ್ಯಾಕ್ಸಿನ್ ಸ್ಟೋರೇಜ್ ಸಿದ್ಧತೆಯ ಬಗ್ಗೆ ಪರಿಶೀಲನೆ ನಡೆಸುವ ನಿಟ್ಟಿನಲ್ಲಿ ಆನಂದ್‌ ರಾವ್ ಸರ್ಕಲ್ ಬಳಿಯಿರುವ ಔಷಧ ಉಗ್ರಾಣಕ್ಕೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಭೇಟಿ ನೀಡಿದ್ದು, ಔಷಧ ಉಗ್ರಾಣದಲ್ಲಿನ ಲಸಿಕೆ ಶೇಖರಣೆ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಈ ಉಗ್ರಾಣದಲ್ಲಿ 25 ಲಕ್ಷ ವಯಲ್ಸ್​ಗಳಷ್ಟು ಲಸಿಕೆ ಶೇಖರಿಸುವ ಕೆಪ್ಯಾಸಿಟಿ ಇದ್ದು, ಒಂದು ವಯಲ್​ನಲ್ಲಿ‌ 10 ಜನರಿಗೆ ಲಸಿಕೆ ನೀಡಬಹುದಾಗಿದೆ.

  • 10 Jan 2021 12:39 PM (IST)

    ಸಂಪುಟ ವಿಸ್ತರಣೆ ಸಿಎಂ ವಿವೇಚನೆಗೆ ಬಿಟ್ಟಿದ್ದು: ನಳೀನ್ ಕುಮಾರ ಕಟೀಲ್

    ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಮಿತ್‌ ಶಾರನ್ನು ಭೇಟಿ ಮಾಡುತ್ತಿದ್ದು, ಕೊವಿಡ್‌ ಹಾಗೂ ಚುನಾವಣೆಯಿದ್ದ ಹಿನ್ನೆಲೆಯಲ್ಲಿ ಭೇಟಿ ಸಾಧ್ಯವಾಗಿರಲಿಲ್ಲ ಆದರೆ ಈಗ ಸಂಪುಟ ವಿಸ್ತರಣೆ, ಪುನಾರಚನೆಗೆ ಸಂಬಂಧಪಟ್ಟಂತೆ ಅಮಿತ್ ಶಾ ಅವರನ್ನು ಸಿಎಂ ಭೇಟಿ ಮಾಡಲಿದ್ದಾರೆ ಎಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಹೇಳಿಕೆ ನೀಡಿದ್ದಾರೆ. ಯತ್ನಾಳ್ ಯಾವಾಗಲೂ ಹೊಸ ಸುದ್ದಿಯನ್ನ ಕೊಡುತ್ತಿರುತ್ತಾರೆ ಎಂದು ಯತ್ನಾಳ್ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ವ್ಯಂಗ್ಯ ಮಾಡಿದ್ದಾರೆ.

  • 10 Jan 2021 12:27 PM (IST)

    ಲಂಡನ್​ನಿಂದ ಬಂದ ಅನಿವಾಸಿ ಭಾರತೀಯರ ಬಗ್ಗೆ ಸ್ಪಷ್ಟನೆ ನೀಡಿದ ಆರೋಗ್ಯ ಸಚಿವ ಸುಧಾಕರ್

    ಯುಕೆಯಿಂದ 289 ಜನ ಬೆಂಗಳೂರಿಗೆ ಬಂದಿದ್ದು, 4 ಜನರ ವರದಿ ಬಗ್ಗೆ ಅನುಮಾನವಿರುವ ಹಿನ್ನೆಲೆ ಯಾರಿಗೆ ಪಾಸಿಟಿವ್ ಇದೆ ಎಂದು ನೋಡಬೇಕಿದೆ. ಈ ನಿಟ್ಟಿನಲ್ಲಿ 4 ಜನರಿಗೂ ಮತ್ತೊಮ್ಮೆ ಟೆಸ್ಟ್ ಮಾಡಲಾಗುತ್ತಿದ್ದು, ಟೆಸ್ಟ್ ವರದಿ ಬಂದ ಬಳಿಕ ದೃಢವಾಗಲಿದೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಸುಧಾಕರ್ ಹೇಳಿಕೆ ನೀಡಿದ್ದಾರೆ.

  • 10 Jan 2021 12:22 PM (IST)

    ಮನೆಗೆ ಕಡೆ ತೆರಳಿದ ಲಂಡನ್​ನಿಂದ ಬಂದ ಅನಿವಾಸಿ ಭಾರತೀಯರು

    ಲಂಡನ್​ನಿಂದ ಬೆಂಗಳೂರಿಗೆ ಬಂದ ಅನಿವಾಸಿ ಭಾರತೀಯರು ಸದ್ಯ ಟ್ಯಾಕ್ಸಿ, ಒಲಾ, ಉಬರ್ ಮತ್ತು ಬಸ್​ನಲ್ಲಿ ಪ್ರಯಾಣ ನಡೆಸಿದ್ದಾರೆ. ಕೊವಿಡ್ ಟೆಸ್ಟ್​ನಲ್ಲಿ ನೆಗೆಟಿವ್ ಬಂದವರಿಗೆ ಆರೋಗ್ಯ ಸಿಬ್ಬಂದಿಗಳು ಮನೆಗೆ ಕಳುಹಿಸುತ್ತಿದ್ದು, ಮನೆಗೆ ಹೋದ ಮೇಲೆ ಸೋಂಕು ಉತ್ಪತ್ತಿಯಾದರೆ ಯಾರು ಹೊಣೆ?, ಸೋಂಕಿತರ ಸಂಪರ್ಕದಲ್ಲಿರುವ ಓಲಾ, ಉಬರ್, ಬಸ್ ಚಾಲಕರ ಕಥೆ ಏನು? ಎಂಬ ಆತಂಕ ಸದ್ಯ ಎಲ್ಲರಲ್ಲೂ ಕಾಡುತ್ತಿದೆ.

  • 10 Jan 2021 12:13 PM (IST)

    ಕಾಸಪುರ ಹನುಮನ ಅನುಗ್ರಹ ದೊರೆತರೆ ಸಚಿವ ಸ್ಥಾನ: ಸೋಮಶೇಖರ ರೆಡ್ಡಿ

    ನನಗೆ ಸಚಿವ ಸ್ಥಾನ ಸಿಗುತ್ತದೆ. ಹೀಗಾಗಿ ನಾನು ಈ ಸ್ಥಾನಕ್ಕಾಗಿ ಲಾಬಿ ಮಾಡುವುದಿಲ್ಲ. ಹೈಕಮಾಂಡ್ ಗುರುತಿಸಿ ಸಚಿವ ಸ್ಥಾನ ನೀಡಿದರೆ ಸ್ವೀಕಾರ ಮಾಡುತ್ತೇನೆ ಎಂದು ಬಳ್ಳಾರಿಯಲ್ಲಿ ಶಾಸಕ ಸೋಮಶೇಖರ ರೆಡ್ಡಿ ಹೇಳಿಕೆ ನೀಡಿದ್ದು, ನನ್ನ ಮಗ ರಾಜಕೀಯಕ್ಕೆ ಬರುವುದು ನನಗೆ ಇಷ್ಟ ಇಲ್ಲ, ಆದರೆ ಪುತ್ರ ರಾಜಕೀಯಕ್ಕೆ ಬರುವುದಕ್ಕೆ ಇಷ್ಟಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.

  • 10 Jan 2021 12:05 PM (IST)

    ಕರ್ನಾಟಕ ಭವನಕ್ಕೆ ಆಗಮಿಸಿದ ಮುಖ್ಯಮಂತ್ರಿ ಯಡಿಯೂರಪ್ಪ

    ಬಿಜೆಪಿ ವರಿಷ್ಠರ ಭೇಟಿಗೆ ಆಗಮಿಸಿರುವ ಸಿಎಂ ಬಿ.ಎಸ್ ಯಡಿಯೂರಪ್ಪ ಕರ್ನಾಟಕ ಭವನವನ್ನು ತಲುಪಿದ್ದಾರೆ.

  • 10 Jan 2021 11:59 AM (IST)

    ಕಾಂಗ್ರೆಸ್ ಬಗ್ಗೆ ಮಾತನಾಡುವುದು ಅಪ್ರಸ್ತುತ ಹಾಗೂ ಅಪಹಾಸ್ಯ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

    ಸಂಪುಟ ವಿಸ್ತರಣೆ ಯಾವಾಗ ಮಾಡಬೇಕೆಂದು ವರಿಷ್ಠರಿಗೆ ಗೊತ್ತು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ದೆಹಲಿಗೆ ಹೋಗಿದ್ದಾರೆ. ರಾಷ್ಟ್ರೀಯ ನಾಯಕರ ಜೊತೆ ಸಿಎಂ ಚರ್ಚಿಸಿ ತೀರ್ಮಾನಿಸುತ್ತಾರೆ ಎಂದು ಕಾಂಗ್ರೆಸ್ ಆರೋಪಕ್ಕೆ ಟಾಂಗ್ ಕೊಟ್ಟು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದಾರೆ.

  • 10 Jan 2021 11:50 AM (IST)

    ಲಂಡನ್ ವಿಮಾನದಲ್ಲಿ ಆಗಮಸಿದ ನಾಲ್ವರ ವರದಿ ಬಗ್ಗೆ ಅನುಮಾನ

    ಲಂಡನ್‌ನಿಂದ ವಾಪಸಾದ ನಾಲ್ವರ ವರದಿ ಬಗ್ಗೆ ಅನುಮಾನ ಉಂಟಾಗಿದ್ದು, ಈ 4 ಜನರನ್ನು ಮತ್ತೆ ಕೊವಿಡ್ ಟೆಸ್ಟ್​ಗೆ ಒಳಪಡಿಸಲು ನಿರ್ಧರಿಸಿದ್ದು, ಅವರನ್ನು ಏರ್‌ಪೋರ್ಟ್‌ನಲ್ಲಿಯೇ ಉಳಿಸಿಕೊಂಡಿದ್ದಾರೆ. 289 ಜನರ ಪೈಕಿ 285 ಜನರ ಕೊವಿಡ್ ವರದಿ ನೆಗೆಟಿವ್ ಬಂದಿದ್ದು, ಎಲ್ಲರನ್ನೂ ಹೋಂ ಕ್ವಾರಂಟೈನ್‌ಗೆ ಕಳಿಸಲಾಗಿದೆ.

  • 10 Jan 2021 11:45 AM (IST)

    ರಾಬರ್ಟ್ ಸಿನಿಮಾ ರಿಲೀಸ್‌ ಗುಟ್ಟು ಬಿಚ್ಚಿಟ್ಟ ದರ್ಶನ್

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಫೇಸ್‌ಬುಕ್ ಲೈವ್​ ನಲ್ಲಿ ರಾಬರ್ಟ್ ಸಿನಿಮಾ ರಿಲೀಸ್‌ ಬಗ್ಗೆ ತಿಳಿಸಿದ್ದು, ಮಾರ್ಚ್ 11ರಂದು ಸಿನಿಮಾ ಬಿಡುಗಡೆಗೆ ನಿರ್ಧಾರ ಮಾಡಲಾಗಿದ್ದು, ಸಿನಿಮಾ ರಿಲೀಸ್​ಗೆ 1 ವಾರ ಹೆಚ್ಚು ಕಡಿಮೆ ಆಗಬಹುದು ಎಂದು ತಿಳಿಸಿದ್ದಾರೆ.

  • 10 Jan 2021 11:40 AM (IST)

    ನವದೆಹಲಿ ತಲುಪಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ

    ಮುಖ್ಯಮಂತ್ರಿ ಯಡಿಯೂರಪ್ಪ ನವದೆಹಲಿ ತಲುಪಿದ್ದು, ಪುತ್ರ ವಿಜಯೇಂದ್ರ ಬಿಎಸ್​ವೈಗೆ ಸಾಥ್‌ ನೀಡಿದ್ದಾರೆ. ಏರ್‌ಪೋರ್ಟ್‌ನಿಂದ ನೇರವಾಗಿ ಕರ್ನಾಟಕ ಭವನಕ್ಕೆ ಸಿಎಂ ಬಿ.ಎಸ್ ಯಡಿಯೂರಪ್ಪ ತೆರಳಲಿದ್ದು, ಮಧ್ಯಾಹ್ನದ ಬಳಿಕ ಅಮಿತ್ ಶಾ ಅವರನ್ನು ಬಿಎಸ್​ವೈ ಭೇಟಿಯಾಗಲಿದ್ದಾರೆ.

  • 10 Jan 2021 11:35 AM (IST)

    ಶುಲ್ಕ ಪಾವತಿಗೆ ಖಾಸಗಿ ಶಾಲೆಗಳ ಒತ್ತಡ ಖಂಡಿಸಿ ಧರಣಿ

    ಬೆಂಗಳೂರಿನ ಮೌರ್ಯ ಸರ್ಕಲ್‌ನಲ್ಲಿ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ಖಂಡಿಸಿ ಪೋಷಕರು ಪ್ರತಿಭಟನೆ ನಡೆಸುತ್ತಿದ್ದು, ಖಾಸಗಿ ಶಾಲೆಗಳ ಶುಲ್ಕವನ್ನು ಸರ್ಕಾರವೇ ನಿಗದಿ ಮಾಡಲಿ. ಶಿಕ್ಷಣ ಸಚಿವರು ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಹೀಗೆ ಆದರೆ ಬಿಬಿಎಂಪಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • 10 Jan 2021 11:32 AM (IST)

    ಆನೆಗೊಂದಿಗೆ ಆಗಮಿಸಿದ ರಾಜ್ಯಪಾಲರು

    ರಾಜ್ಯಪಾಲ ವಾಜುಭಾಯಿ ವಾಲಾ ಅವರು ಕೊಪ್ಪಳದ ಆನೆಗೊಂದಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದು, ಅಲ್ಲಿಂದ ಅಂಜನಾದ್ರಿಗೆ ಹೊರಟಿದ್ದಾರೆ. ಆನೆಗೊಂದಿಯಲ್ಲಿ ರಾಜ್ಯಪಾಲರನ್ನು ಸಂಸದ ಕರಡಿ ಸಂಗಣ್ಣ, ಶಾಸಕ ಪರಣ್ಣ ಮುನವಳ್ಳಿ, ಡಿಸಿ ವಿಕಾಸ್ ಕಿಶೋರ್ ಸ್ವಾಗತಿಸಿದರು.

  • 10 Jan 2021 11:22 AM (IST)

    ನಾಲ್ಕನೇ ದಿನ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಅಲೆನ್ ಟ್ರೋಫಿಯ ಮೂರನೇ ಟೆಸ್ಟ್

    ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಅಲೆನ್ ಟ್ರೋಫಿಯ ಮೂರನೇ ಟೆಸ್ಟ್​ನ ನಾಲ್ಕನೇ ದಿನ ಆಸ್ಟ್ರೇಲಿಯಾ 312 ರನ್‌ಗಳಿಗೆ ತನ್ನ 2ನೇ ಇನ್ನಿಂಗ್ಸ್ ಮುಗಿಸಿದೆ. ಈ ಮೂಲಕ ಭಾರತಕ್ಕೆ 407 ರನ್‌ಗಳ ಗುರಿ ನೀಡಿದೆ.

  • 10 Jan 2021 11:19 AM (IST)

    ಪಶ್ಚಿಮ ಬಂಗಾಳ ರಾಜ್ಯದ ಎಲ್ಲಾ ಜನರಿಗೆ ಉಚಿತ ಲಸಿಕೆ ವಿತರಣೆ

    ಕೊವಿಡ್ ಲಸಿಕೆಯನ್ನು ರಾಜ್ಯದ ಎಲ್ಲಾ ಜನರಿಗೆ ಅನುಕೂಲವಾಗುವಂತೆ ಉಚಿತವಾಗಿ ನಮ್ಮ ಸರ್ಕಾರ ನೀಡುತ್ತಿದೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

  • 10 Jan 2021 11:13 AM (IST)

    ಫೇಸ್​ಬುಕ್​ ಲೈವ್​ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ

    ಈ ವರ್ಷ ನಾನು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ. ಫೆಬ್ರವರಿ 16ರಂದು ಯಾರು ಮನೆ ಹತ್ತಿರ ಬರಬೇಡಿ ಎಂದು ಫೇಸ್​ಬುಕ್ ಲೈವ್​ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಿಳಿಸಿದ್ದಾರೆ.

  • 10 Jan 2021 11:04 AM (IST)

    ಕಾಂಗ್ರೆಸ್‌ ಯುವ ಘಟಕದ ಚುನಾವಣೆಯಲ್ಲಿ ಜಿದ್ದಾಜಿದ್ದಿ ಇಲ್ಲ: ಡಿ.ಕೆ.ಶಿವಕುಮಾರ್‌

    ಸ್ಪರ್ಧೆಯಿಂದ ಹಿಂದೆ ಸರಿಯಲು ಮಿಥುನ್‌ ರೈಗೆ ನಾನೇ ಹೇಳಿದ್ದೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿಕೆ ನೀಡಿದ್ದಾರೆ. ಮಂಗಳೂರು ಭಾಗದಲ್ಲಿ ಪಕ್ಷವನ್ನು ಸಂಘಟನೆ ಮಾಡಬೇಕಿದೆ ಜೊತೆಗೆ ಈ ಹಿಂದೆ ಮಿಥುನ್‌ ರೈ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಎಂದು ಡಿಕೆಶಿ ಹೇಳಿದ್ದು, ಪಂಚಾಯತ್​ನಿಂದ ಪಾರ್ಲಿಮೆಂಟ್ ವರೆಗೂ ಯುವಕರು ಬೆಳೆಯಬೇಕು ಸುಮನ್ನೆ ಈ ವಿಚಾರದಲ್ಲಿ ನನ್ನ ಹೆಸರು ದುರುಪಯೋಗ ಮಾಡಬಾರದು ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

  • 10 Jan 2021 10:58 AM (IST)

    ಅಧಿಕಾರದ ಬಗ್ಗೆ ಸ್ಪಷ್ಟನೆ ನೀಡಿದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌

    ಜೆಡಿಯು ಪಕ್ಷದ ಸಭೆಯಲ್ಲಿ ಮಾತನಾಡಿದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನನ್ನ ನೇತೃತ್ವದ ಸರ್ಕಾರ 5 ವರ್ಷ ಪೂರೈಸುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.

  • 10 Jan 2021 10:54 AM (IST)

    ದೇವರಾಜ ಅರಸು ಮೆಡಿಕಲ್ ಕಾಲೇಜಿನಲ್ಲಿ ಮುಂದುವರಿದ ಕೊರೊನಾ ಅಬ್ಬರ

    ಕೋಲಾರದ ದೇವರಾಜ ಅರಸು ನರ್ಸಿಂಗ್ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿಗಳು, ಸಿಬ್ಬಂದಿಗಳು ಸೇರಿ ಒಟ್ಟು 93 ಜನರಿಗೆ ಕೊರೊನಾ ಧೃಡಪಟ್ಟಿದೆ. ಒಟ್ಟು 503 ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, ಕೊರೊನಾ ಸೋಂಕಿತರಿಗೆ ಕಾಲೇಜಿನ ಹಾಸ್ಟೆಲ್‌ನಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಿಂದ ಕ್ವಾರಂಟೈನ್ ಮಾಡಲಾಗಿದೆ.

  • 10 Jan 2021 10:48 AM (IST)

    ಇಂದಿನಿಂದ ಮೂರು ದಿನಗಳ ಕಾಲ‌ ಯುವ ಕಾಂಗ್ರೆಸ್ ಚುನಾವಣೆ

    ಆನ್‌ಲೈನ್ ಓಟಿಂಗ್ ಮೂಲಕ ಇಂದಿನಿಂದ ಮೂರು ದಿನ‌ ಯುವ ಕಾಂಗ್ರೆಸ್ ಚುನಾವಣೆ ನಡೆಯಲಿದ್ದು, ಬೆಂಗಳೂರು ದಕ್ಷಿಣ ಸೇರಿದಂತೆ 12 ಜಿಲ್ಲೆಗಳಲ್ಲಿ ಆನ್‌ಲೈನ್ ಮತದಾನ ಪ್ರಕ್ರಿಯೆ ನಡೆಯಲಿದೆ. ಸದ್ಯ ಕಣದಲ್ಲಿ ವಿದ್ಯಾರ್ಥಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಹೆಚ್‌.ಎಸ್ ಮಂಜುನಾಥ್, ನಲ್ಪಾಡ್ ಹ್ಯಾರಿಸ್ ಮತ್ತು ರಕ್ಷಾ ರಾಮಯ್ಯ ಸ್ಪರ್ಧಿಸಲಿದ್ದಾರೆ.

  • 10 Jan 2021 10:41 AM (IST)

    ಜಾಫ್ನಾ ವಿಶ್ವವಿದ್ಯಾಲಯದಲ್ಲಿನ ಯುದ್ಧ ಸ್ಮಾರಕ ತೆರವುಗೊಳಿಸಲು ನಿರ್ಧಾರ

    ಜಾಫ್ನಾ ವಿಶ್ವವಿದ್ಯಾಲಯದಲ್ಲಿನ ಯುದ್ಧ ಸ್ಮಾರಕವನ್ನು (2009 ರ ಮುಲ್ಲಿವೈಕಲ್ ಹತ್ಯಾಕಾಂಡದ ಸ್ಮರಣಾರ್ಥ) ತೆಗೆದುಹಾಕುವ ನಿರ್ಧಾರವನ್ನು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊಫೆಸರ್ ಶ್ರೀಸತ್ಕುನರಾಜ ತೆಗೆದುಕೊಂಡಿದ್ದು, ಈ ಸ್ಮಾರಕ ಏಕತೆ ಮತ್ತು ಸಾಮರಸ್ಯಕ್ಕೆ ಅಡ್ಡಿಯಾಗಿದೆ ಎಂದು ತಿಳಿಸಿದ್ದಾರೆ.

  • 10 Jan 2021 10:37 AM (IST)

    ಪಂಚಮಸಾಲಿ ಸಮಾಜದ ಮಾನ್ಯತೆ ವಿರೋಧವನ್ನು ತಳ್ಳಿಹಾಕಿದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ

    ಲಿಂಗಾಯತ ಪಂಚಮಸಾಲಿ ಸಮಾಜದ 2 ಎ ಮೀಸಲಾತಿಗೆ ಗಂಗಾದೇವಿ ವಿರೋಧಕ್ಕೆ ಸಂಬಂಧಪಟ್ಟಂತೆ ಕೂಡಲಸಂಗಮದಲ್ಲಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು, ಮೀಸಲಾತಿ ಕೊಟ್ಟರೆ ಕೊಡಲಿ, ಯಾರು ಬೇಡ ಎನ್ನುತ್ತಾರೆ ಅದು ಧರ್ಮಾಧಾರಿತ ಎಂದು ಹೇಳಿಕೆ ನೀಡಿದ್ದಾರೆ.

  • 10 Jan 2021 10:21 AM (IST)

    ಅಂಜನಾದ್ರಿ ಪರ್ವತಕ್ಕೆ ನೀಡಲಿದ್ದಾರೆ ರಾಜ್ಯಪಾಲ ವಜುಭಾಯಿ ವಾಲಾ

    ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಇಂದು ಬೆಳಿಗ್ಗೆ 11.30ಕ್ಕೆ ಭೇಟಿ ನೀಡಲಿದ್ದು, ಶಿಲಾ ಪೂಜೆ ನೆರವೆರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಂಜನಾದ್ರಿ ಪರ್ವತದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ.

  • 10 Jan 2021 10:14 AM (IST)

    ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‌ಗೆ ಇಡಿಯಿಂದ ಸಮನ್ಸ್

    ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್​ಮೋಹನ್​ ರೆಡ್ಡಿಗೆ ಇಡಿ ಸಮನ್ಸ್ ನೀಡಿದ್ದು, ಜನವರಿ 11ರಂದು ವಿಚಾರಣೆಗೆ ಹಾಜರಾಗಲು ಸೂಚಸಿದೆ. ಅಕ್ರಮವಾಗಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಇಡಿ ಜಗನ್​ಗೆ ಸಮನ್ಸ್ ನೀಡಿದೆ ಎಂದು ತಿಳಿದು ಬಂದಿದೆ.

  • 10 Jan 2021 10:08 AM (IST)

    ತಮಿಳುನಾಡು ವಿದ್ಯಾರ್ಥಿಗಳಿಗೆ ಉಚಿತ ಇಂಟರ್‌ನೆಟ್

    ತಮಿಳುನಾಡು ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತ ಇಂಟರ್‌ನೆಟ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರತಿನಿತ್ಯ ವಿದ್ಯಾರ್ಥಿಗಳಿಗೆ ಉಚಿತವಾಗಿ 2 ಜಿಬಿ ಡಾಟಾವನ್ನು ನೀಡಲು ನಿರ್ಧರಿಸಲಾಗಿದೆ. ಏಪ್ರಿಲ್‌ನಲ್ಲಿ ಪರೀಕ್ಷೆಗಳು ನಡೆಯಲಿರುವ ಹಿನ್ನೆಲೆಯಲ್ಲಿ 4 ತಿಂಗಳ ಕಾಲ ವಿದ್ಯಾರ್ಥಿಗಳಿಗೆ ಉಚಿತ ಇಂಟರ್‌ನೆಟ್ ನೀಡಿದ್ದು, ಆನ್‌ಲೈನ್ ಕ್ಲಾಸ್‌ಗೆ ಅನುಕೂಲವಾಗಲಿದೆ.

  • 10 Jan 2021 09:59 AM (IST)

    ಚೆನ್ನೈನಲ್ಲಿ ರಜಿನೀಕಾಂತ್ ಅಭಿಮಾನಿಗಳಿಂದ ಇಂದು ಪ್ರತಿಭಟನೆ

    ರಜಿನೀಕಾಂತ್ ರಾಜಕೀಯ ಪ್ರವೇಶದಿಂದ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ರಜನೀಕಾಂತ್ ಅಭಿಮಾನಿಗಳು ಇಂದು ಚೆನ್ನೈನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ರಾಜಕೀಯ ಪ್ರವೇಶಕ್ಕೆ ಆಗ್ರಹಿಸಿ ಸಾವಿರಾರು ಅಭಿಮಾನಿಗಳು ಧರಣಿ ಮಾಡುತ್ತಿದ್ದಾರೆ.

  • 10 Jan 2021 09:55 AM (IST)

    ದೆಹಲಿಗೆ ಪ್ರಯಾಣ ಬೆಳೆಸುತ್ತಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ

    ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ದೆಹಲಿ ತಲುಪಲಿದ್ದು, ಏರ್‌ಪೋರ್ಟ್‌ನಿಂದ ನೇರವಾಗಿ ಅಮಿತ್ ಶಾ ನಿವಾಸಕ್ಕೆ ಬಿಎಸ್​ವೈ ಭೇಟಿ ನೀಡುವ ಸಾಧ್ಯತೆ ಇದೆ.

  • 10 Jan 2021 09:50 AM (IST)

    24ಗಂಟೆಗಳಲ್ಲಿ ದಾಖಲಾದ ಕೊವಿಡ್ ಪ್ರಕರಣಗಳು

    ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಭಾರತವು ಕಳೆದ 24 ಗಂಟೆಗಳಲ್ಲಿ 18,645 ಹೊಸ ಕೊವಿಡ್ -19 ಪ್ರಕರಣಗಳು ದಾಖಲಾಗಿದ್ದು, 19,299 ಜನರು ಗುಣಮುಖರಾಗಿದ್ದಾರೆ ಮತ್ತು 201 ಜನರು ಸಾವನ್ನಪ್ಪಿದ್ದಾರೆ. ಆ ಮೂಲಕ ಒಟ್ಟು 1,04,50,284 ಕೊವಿಡ್ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳು 2,23,335, ಗುಣಮುಖರಾದವರ ಸಂಖ್ಯೆ 1,00,75,950 ಆಗಿದ್ದು, ಸಾವಿನ ಸಂಖ್ಯೆ 1,50,999 ಏರಿಕೆಯಾಗಿದೆ.

  • 10 Jan 2021 09:41 AM (IST)

    ಜಕಾರ್ತದಿಂದ ಹೊರಟಿದ್ದ ಖಾಸಗಿ ವಿಮಾನ ಬೋಯಿಂಗ್ 737-500 ಸಮುದ್ರದಲ್ಲಿ ಪತನ

    ಇಂಡೋನೇಷ್ಯಾದಲ್ಲಿ ಮತ್ತೊಂದು ಘೋರ ದುರಂತ ಸಂಭವಿಸಿದ್ದು, ರಾಜಧಾನಿ ಜಕಾರ್ತದಿಂದ ಹೊರಟಿದ್ದ ಖಾಸಗಿ ವಿಮಾನ ಬೋಯಿಂಗ್ 737-500 ಟೇಕ್ ಆಫ್ ಆದ 4 ನಿಮಿಷದಲ್ಲೇ ಸಮುದ್ರಕ್ಕೆ ಬಿದ್ದಿದೆ. ಈ ವಿಮಾನದಲ್ಲಿ 62 ಜನರಿದ್ದು, ಘಟನೆಯಲ್ಲಿ ಪ್ರಾಣಹಾನಿ ಸಂಭವಿಸಿರುವ ಕುರಿತು ಇಂಡೋನೇಷಿಯಾ ಅಧಿಕೃತವಾಗಿ ಇನ್ನೂ ಮಾಹಿತಿ ನೀಡಿಲ್ಲ. ಆದರೆ ಸುಮಾರು 10 ಸಾವಿರ ಅಡಿ ಎತ್ತರದಿಂದ ವಿಮಾನ ಸಮುದ್ರಕ್ಕೆ ಬಿದ್ದ ಹಿನ್ನೆಲೆ 62 ಜನ ಬದುಕುಳಿಯುವುದು ಅನುಮಾನ ಎನ್ನಲಾಗುತ್ತಿದೆ.

  • 10 Jan 2021 09:37 AM (IST)

    ದರ್ಶನ್ ಅಭಿಮಾನಿಗಳಿಗೆ ಖುಷಿಯ ವಿಚಾರ

    ಇಂದು ಬೆಳಿಗ್ಗೆ 11 ಗಂಟೆಗೆ, ಚಾಲೆಂಜಿಗ್ ಸ್ಟಾರ್​ ದರ್ಶನ್​ ಫೇಸ್​ಬುಕ್​ ಲೈವ್​ಗೆ ಬರ್ತಿದ್ದಾರಂತೆ. ಈ ನಿಟ್ಟಿನಲ್ಲಿ ಈ ವರ್ಷದ ಫೆಬ್ರವರಿ 16ಕ್ಕೆ ದರ್ಶನ್​ ಬರ್ತ್​ಡೇ ಸೆಲೆಬ್ರೇಶನ್​ಗೆ ಕುರಿತು ಹೇಳ್ತಾರಾ? ಅಥವಾ ರಾಬರ್ಟ್ ಸಿನಿಮಾದ ರಿಲೀಸ್ ಬಗ್ಗೆ ಮಾತನಾಡುತ್ತಾರಾ ಎನ್ನುವುದರ ಬಗ್ಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

  • 10 Jan 2021 09:32 AM (IST)

    ಸಂಪುಟ ವಿಸ್ತರಣೆಯ ಬಗ್ಗೆ ವರಿಷ್ಠರ ಜೊತೆ ಚರ್ಚೆ ನಡೆಸುತ್ತೇನೆ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ

    ಮುಂಬರುವ ಉಪಚುನಾವಣೆಗಳಲ್ಲಿ ಅಭ್ಯರ್ಥಿಗಳು ಯಾರಾಗಬೇಕು ಎಂಬ ಬಗ್ಗೆ ಚರ್ಚೆ ಮಾಡುತ್ತೇವೆ ಹಾಗೂ ಗ್ರಾಮ ಪಂಚಾಯತಿ ಚುನಾವಣೆಯ ಗೆಲುವಿನ ಬಗ್ಗೆ ವರಿಷ್ಠರಿಗೆ ಮಾಹಿತಿ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದು, ಸಂಪುಟ ವಿಸ್ತರಣೆ ವಿಚಾರದ ಬಗ್ಗೆಯೂ ವರಿಷ್ಠರ ಜೊತೆ ಮಾತುಕತೆ ನಡೆಸುತ್ತೇನೆ ಎಂದು ಬಿಎಸ್​ವೈ ದೆಹಲಿಗೆ ಹೊರಡುವ ಮುನ್ನ ಹೇಳಿಕೆ ನೀಡಿದ್ದಾರೆ.

  • 10 Jan 2021 09:24 AM (IST)

    ಮಣ್ಣು ಲೂಟಿ ಮಾಡುತ್ತಿರುವ ಸದ್ಭವ ಕನ್‌ಸ್ಟ್ರಕ್ಷನ್‌ ಕಂಪನಿ

    ಗದಗ ಜಿಲ್ಲೆಯಲ್ಲಿ ಎಗ್ಗಿಲ್ಲದೇ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದು, ಸದ್ಭವ ಕನ್‌ಸ್ಟ್ರಕ್ಷನ್‌ ಸಂಸ್ಥೆ ವಿರುದ್ಧ ಮಣ್ಣು ಲೂಟಿ ಆರೋಪ ಕೇಳಿ ಬಂದಿದೆ. ಈ ಕಂಪನಿ ಗದಗ-ಹೊನ್ನಳ್ಳಿ ಹೆದ್ದಾರಿ ಕಾಮಗಾರಿಯ ಗುತ್ತಿಗೆ ಪಡೆದಿದೆ. ಸರ್ಕಾರದಿಂದ ಮಣ್ಣು ಗಣಿಗಾರಿಕೆಗೆ ಅನುಮತಿ ಒಂದು ಕಡೆ ಪಡೆದು, ಲೂಟಿ ಮಾಡುತ್ತಿರುವುದು ಹಲವು ಕಡೆ ಎಂಬ ಆರೋಪ ಸದ್ಯ ಈ ಕಂಪನಿ ಮೇಲೆ ಕೇಳಿಬಂದಿದೆ.

  • 10 Jan 2021 09:08 AM (IST)

    ಪಾಕಿಸ್ತಾನದಲ್ಲಿ ವಿದ್ಯುತ್ ಸಂಪರ್ಕ ಕಡಿತ

    ರಾಷ್ಟ್ರೀಯ ಪವರ್ ಗ್ರಿಡ್‌ನಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

  • 10 Jan 2021 09:04 AM (IST)

    ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಲಂಡನ್​ನಿಂದ ಬಂದ​ ವಿಮಾನ

    ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮುಂಜಾನೆ 4.30ರ ವೇಳೆಗೆ ಲಂಡನ್​ನಿಂದ ಮೊದಲ ವಿಮಾನ ಆಗಮಿಸಿದೆ. ರೂಪಾಂತರಿ ಕೊರೊನಾ ಹಿನ್ನೆಲೆ ಲಂಡನ್​ನಲ್ಲಿ ಸಿಲುಕಿದ್ದ 240 ಮಂದಿ ಅನಿವಾಸಿ ಭಾರತೀಯರು ಕೆಐಎಗೆ ಬಂದಿದ್ದು, ಏರ್‌ಪೋರ್ಟ್‌ನಲ್ಲಿಯೇ ಎಲ್ಲಾ ಪ್ರಯಾಣಿಕರಿಗೆ ಕೊವಿಡ್ ಟೆಸ್ಟ್ ಮಾಡಲಾಗಿದೆ.

  • 10 Jan 2021 08:52 AM (IST)

    ಕಾಂಗ್ರೆಸ್‌ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಸ್ಪರ್ಧೆಯಿಂದ ಹಿಂದೆ ಸರಿದ ಡಿಕೆಶಿ ಆಪ್ತ ಮಿಥುನ್ ರೈ

    ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಡಿಕೆಶಿ ಆಪ್ತ ಮಿಥುನ್ ರೈ ಹಿಂದೆ ಸರಿದಿದ್ದು, ಈ ಕುರಿತು ಸ್ವತಃ ಮಿಥುನ್ ರೈ ತಮ್ಮ ಫೇಸ್​ಬುಕ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಾನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತನಾದ ಕಾರಣ ಅಧ್ಯಕ್ಷರ ಸೂಚನೆಯಂತೆ ಕಣದಿಂದ ಹಿಂದೆ ಸರಿಯುತ್ತಿದ್ದೇನೆ ಚುನಾವಣೆಯಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಲು ವಿನಂತಿಸುತ್ತಿದ್ದೇನೆ ಎಂದು ಮಿಥುನ್​ ರೈ ತಿಳಿಸಿದ್ದಾರೆ.

  • ಜಗತ್ತಿನೆಲ್ಲೆಡೆಯ ಸುದ್ದಿ ಕ್ಷಣಾರ್ಧದಲ್ಲಿ ಹರಿದು ಬಂದು ಅಂಗೈ ಸೇರುವಾಗ ಯಾವುದರತ್ತ ಕಣ್ಣು ಹಾಯಿಸಬೇಕು ಎಂಬ ಗೊಂದಲ ಸಹಜ.. ಎಷ್ಟೋ ಬಾರಿ ಸುದ್ದಿಯ ಹೆಸರಿನಲ್ಲಿ ಅಪ್ರಸ್ತುತ ಸಂಗತಿಗಳೂ ತೇಲಿ ಬರುತ್ತವೆ. ಅವುಗಳನ್ನು ಸೋಸುವುದೇ ಹರಸಾಹಸ. ನಮ್ಮ ಓದುಗರನ್ನು ಇಂತಹ ಗೊಂದಲಗಳಿಂದ ಪಾರು ಮಾಡಲೆಂದೇ ಪ್ರತಿನಿತ್ಯ Live Blog ಮೂಲಕ ಆಯಾ ಕ್ಷಣದ ಮುಖ್ಯಾಂಶಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಇದು ನಿಮಗಿಷ್ಟವಾಗಿದೆ ಎನ್ನುವ ನಂಬಿಕೆ ನಮ್ಮದು.. ಬನ್ನಿ ಇಂದಿನ ಸುದ್ದಿಯ ಹರಿವನ್ನು ನೋಡೋಣ.

    Published On - Jan 11,2021 9:26 AM

    Follow us
    ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
    ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
    ‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
    ‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
    ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
    ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
    ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
    ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
    ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
    ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
    ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
    ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
    ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
    ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
    ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
    ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
    ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
    ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
    Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
    Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ