ಟಿವಿ9 ಕನ್ನಡ ಡಿಜಿಟಲ್ ಲೈವ್ ಬ್ಲಾಗ್ 11-01-2021
LIVE NEWS & UPDATES
-
LACಯಿಂದ 10 ಸಾವಿರ ಸೈನಿಕರನ್ನು ಹಿಂಪಡೆದ ಚೀನಾ
LACಯಿಂದ 10 ಸಾವಿರ ಸೈನಿಕರನ್ನು ಚೀನಾ ಹಿಂಪಡೆದಿದೆ. ಚೀನಾ, ಮಾರ್ಚ್-ಏಪ್ರಿಲ್‌ನಲ್ಲಿ 50 ಸಾವಿರ ಯೋಧರ ನಿಯೋಜನೆ ಮಾಡಿತ್ತು. ಇದೀಗ, 50 ಸಾವಿರ ಯೋಧರ ಪೈಕಿ 10 ಸಾವಿರ ಸೈನಿಕರನ್ನು ವಾಪಸ್ ಕರೆಸಿಕೊಂಡಿದೆ. ನಿರ್ಗಮ ಪ್ರದೇಶದಿಂದ ಸೈನಿಕರನ್ನು ಹಿಂಪಡೆದಿದೆ.
-
ಸ್ಪುಟ್ನಿಕ್ ವಿ ಕೊವಿಡ್ ಲಸಿಕೆ 2ನೇ ಹಂತದ ಪ್ರಯೋಗ ಅಂತ್ಯ
3ನೇ ಹಂತದ ಪ್ರಯೋಗಕ್ಕೆ ಅನುಮತಿ ನೀಡಲು ಮನವಿ
ಸ್ಪುಟ್ನಿಕ್ ವಿ ಕೊವಿಡ್ ಲಸಿಕೆ 2ನೇ ಹಂತದ ಪ್ರಯೋಗ ಅಂತ್ಯಗೊಂಡಿದೆ. 3ನೇ ಹಂತದ ಪ್ರಯೋಗಕ್ಕೆ ಅನುಮತಿ ನೀಡಲು ಮನವಿ ಸಲ್ಲಿಸಲಾಗಿದೆ. ಭಾರತೀಯ ಔಷಧ ಮಹಾನಿಯಂತ್ರಕರಿಗೆ (DCGI) ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ನಿಂದ ಮನವಿ ಸಲ್ಲಿಕೆಯಾಗಿದೆ. ಭಾರತದಲ್ಲಿ 2ನೇ ಹಂತದ ಪ್ರಯೋಗದ ಸುರಕ್ಷತೆ ಬಗ್ಗೆ DCGIಗೆ ಮಾಹಿತಿ ನೀಡಲಾಗಿದೆ.
-
ಆಮ್ ಆದ್ಮಿ ಪಕ್ಷದ ಶಾಸಕ ಸೋಮನಾಥ್ ಮೇಲೆ ಹಲ್ಲೆ
ಉತ್ತರ ಪ್ರದೇಶದ ಅಮೇಥಿಯಲ್ಲಿ ಆಮ್ ಆದ್ಮಿ ಪಕ್ಷದ ಶಾಸಕ ಸೋಮನಾಥ್ ಮೇಲೆ ಹಲ್ಲೆ ನಡೆದಿದೆ. ಅಮೇಥಿಗೆ ಭೇಟಿ ನೀಡಿದ್ದ ವೇಳೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಶಾಸಕನ ಮೇಲೆ ಕಪ್ಪುಮಸಿ ಎರಚಿದ್ದಾರೆ. ಅಮೇಥಿಯ ಶಾಲೆಯೊಂದಕ್ಕೆ ಭೇಟಿಗೆ ತೆರಳುವಾಗ ಕೃತ್ಯ ನಡೆದಿದೆ.
ಸಚಿವ ಸ್ಥಾನ ನೀಡುವ ಬಗ್ಗೆ ಯಡಿಯೂರಪ್ಪ ನಿರ್ಧಾರ
ದಾವಣಗೆರೆಯಲ್ಲಿ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ
ಸಚಿವ ಸ್ಥಾನ ನೀಡುವ ಬಗ್ಗೆ ಮುಖ್ಯಮಂತ್ರಿಗಳಿಗೆ ಪರಮಾಧಿಕಾರ ಇದೆ. ಎಲ್ಲಾ ವಿಚಾರಗಳು ಮುಖ್ಯಮಂತ್ರಿ ಯಡಿಯೂರಪ್ಪ ಗಮನದಲ್ಲಿದೆ. ಅವರು ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳುತ್ತಾರೆ ಎಂದು ದಾವಣಗೆರೆಯಲ್ಲಿ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಜಮ್ಮು-ಕಾಶ್ಮೀರದ ಕೆಲವೆಡೆ ಕಂಪಿಸಿರುವ ಭೂಮಿ
ಜಮ್ಮು-ಕಾಶ್ಮೀರದ ಕೆಲವೆಡೆ ಭೂಕಂಪವಾಗಿದೆ. ಕಿಸ್ತವಾರ್ ಬಳಿ ಭೂಕಂಪನದ ಕೇಂದ್ರ ಬಿಂದು ಗುರುತಿಸಲಾಗಿದೆ. ರಿಕ್ಟರ್ ಮಾಪಕದಲ್ಲಿ 5.1 ರಷ್ಟು ತೀವ್ರತೆ ದಾಖಲಾಗಿದೆ.
ಮೊದಲು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಒಂದಾಗಲಿ
ಮೊದಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಒಂದಾಗಲಿ ಎಂದು ಕಲಬುರಗಿ ಜನಸೇವಕ ಸಮಾವೇಶದಲ್ಲಿ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಪಾತಾಳಕ್ಕೆ ಹೋಗುವ ಸ್ಥಿತಿ ಬಂದಿದೆ. ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರಿಲ್ಲ, ಕೇವಲ ನಾಯಕರಿದ್ದಾರೆ ಎಂದು ಶೆಟ್ಟರ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪುಣೆಯ ಸೆರಮ್ ಇನ್ಸ್‌ಟಿಟ್ಯೂಟ್‌ನಿಂದ ಲಸಿಕೆ ರವಾನೆ
ಪುಣೆಯ ಸೆರಮ್ ಇನ್ಸ್‌ಟಿಟ್ಯೂಟ್‌ನಿಂದ ಲಸಿಕೆ ರವಾನೆಯಾಗಿದೆ. ಪುಣೆಯಿಂದ ವಿವಿಧ ರಾಜ್ಯಗಳಿಗೆ ಕೊವಿಡ್ ಲಸಿಕೆ ರವಾನಿಸಲಾಗಿದೆ. ಒಟ್ಟು 1.1 ಕೋಟಿ ಕೊವಿಶೀಲ್ಡ್ ಡೋಸ್ ರವಾನೆಯಾಗಿದೆ. ರಾತ್ರಿ ವೇಳೆ ಬೆಂಗಳೂರಿಗೆ ಲಸಿಕೆ ತಲುಪುವ ಸಾಧ್ಯತೆ ಅಂದಾಜಿಸಲಾಗಿದೆ.
ಕುಖ್ಯಾತ ಮನೆಗಳ್ಳನ ಬಂಧನ
5:44 pm ಐಷಾರಾಮಿ ಜೀವನಕ್ಕಾಗಿ ಮನೆಗಳ್ಳತನ ಮಾಡುತಿದ್ದ ಸಮೀರ್ ಖಾನ್ ಅಲಿಯಾಸ್ ಶೋಹೇಬ್ ಎಂಬಾತನನ್ನು ಯಲಹಂಕ ಉಪನಗರ ಪೊಲೀಸರು ಬಂಧಿಸಿ, ಬಂಧಿತನಿಂದ 45 ಲಕ್ಷ ಮೌಲ್ಯದ 900 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಜುಲೈ ತಿಂಗಳಲ್ಲಿ ಜೈಲಿನಿಂದ ಹೊರ ಬಂದಿದ್ದ ಆರೋಪಿ, ಜೈಲಿನಿಂದ ಹೊರ ಬಂದ ಬಳಿಕ 10 ಕಡೆ ಮನೆಗಳ್ಳತನ ಮಾಡಿದ್ದ. ತೆಲಂಗಾಣ, ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳಲ್ಲಿ ಮನೆಗಳ್ಳತನ ಮಾಡಿರುವ ಮಾಹಿತಿ ತಿಳಿದುಬಂದಿದೆ.
ಗೋ ಶಾಪ ಕಾಂಗ್ರೆಸ್ಗೆ ತಟ್ಟಿದೆ: ನಳಿನ್ ಕುಮಾರ್
5:32 pm ಮಹಾತ್ಮ ಗಾಂಧಿಯವರಿಂದ ಕಾಂಗ್ರೆಸ್ ಗೆ ಮೂರು ಶಾಪ ತಟ್ಟಿದೆ. ರಾಮರಾಜ್ಯ ಸ್ವರಾಜ್ಗೆ ಕಾಂಗ್ರೆಸ್ ಬೆಂಕಿ ಇಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ರಾವಣರನ್ನು ನಿರ್ಮಾಣ ಮಾಡಿದೆ. ಕಾಂಗ್ರೆಸ್ ಎಂದೂ ಅಂಬೇಡ್ಕರ್ನ್ನು ಮಂತ್ರಿ ಮಾಡಿಲ್ಲ. ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಪಕ್ಷ. ಆದರೆ ಅಂಬೇಡ್ಕರ್ ಭಾವಚಿತ್ರ ಹಾಕಿ ಕಾಂಗ್ರೆಸ್ ಪಕ್ಷ ಮತ ಕೇಳಿದೆ. ಹಾಗಾಗಿ ಡಾ.ಬಿ.ಆರ್ ಅಂಬೇಡ್ಕರ್ ಶಾಪ ಕಾಂಗ್ರೆಸ್ ಗೆ ತಟ್ಟಿದೆ. ಅಲ್ಲದೇ ಹಸು ಮತ್ತು ಕರು, ಜೋಡೆತ್ತು ಚಿಹ್ನೆಯಿಂದ ಮತ ಪಡೆದಿತ್ತು. ಗೋಹತ್ಯೆ ಮಾಡಿದವರ ಬೆಂಗಾವಲಾಗಿ ನಿಂತಿದ ಕಾಂಗ್ರೆಸ್ಗೆ ಆ ಗೋವುಗಳ ಶಾಪ ತಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಕಾಂಗ್ರೆಸ್ ಪಕ್ಷವನ್ನು ಜನರು ತಿರಸ್ಕಾರ ಮಾಡಿದ್ದಾರೆ: ನಳಿನ್ ಕುಮಾರ್
5:24 pm ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಜನರು ತಿರಸ್ಕಾರ ಮಾಡಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜನರ ತಿರಸ್ಕಾರದ ಯೋಜನೆ ಮಾಡಿದ್ದಾರೆ. ಹೀಗಾಗಿ ಇಡೀ ರಾಜ್ಯದ ಜನರು ಸಿದ್ದರಾಮಯ್ಯ ಅವರನ್ನು ತಿರಸ್ಕಾರ ಮಾಡಿದ್ದಾರೆ ಎಂದು ಚಾಮರಾಜನಗರದಲ್ಲಿನ ಜನಸೇವಕ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.
ಪರಾಮರ್ಶೆ ಮಾಡ್ತೀನಿ: ಮೋದಿ
5:15 pm ಅರ್ಧದಷ್ಟು ಲಸಿಕೆ ವಿತರಣೆ ಪೂರ್ಣಗೊಂಡ ನಂತರ ಮತ್ತೊಮ್ಮೆ ಪರಾಮರ್ಶೆ ಮಾಡ್ತೀನಿ.
ಹಕ್ಕಿ ಜ್ವರದ ಬಗ್ಗೆ ಎಚ್ಚರಿಕೆ ವಹಿಸಿ: ಮೋದಿ
5:14 pm ಹಕ್ಕಿ ಜ್ವರಕ್ಕೆ ಸಂಬಂಧಿಸಿದಂತೆ ಹಲವು ರಾಜ್ಯಗಳಲ್ಲಿ ಈಗಾಗಲೇ ಮಾರ್ಗಸೂಚಿಗಳನ್ನು ನೀಡಲಾಗಿದೆ. ಜಿಲ್ಲಾಧಿಕಾರಿಗಳು ಅವನ್ನು ಜಾರಿ ಮಾಡುತ್ತಿದ್ದಾರೆ. ಅವುಗಳು ಮುಂದುವರಿಯಬೇಕು. ಅದರ ಬಗ್ಗೆಯೂ ನಾವು ಬಹಳ ಎಚ್ಚರಿಕೆಯಿಂದ ಇರಬೇಕು. ಪೌಲ್ಟ್ರಿ ಫಾರಂ, ಕೊಳಗಳಿಗೆ ನೀರು ಕುಡಿಯಲು ಬರುವ ಹಕ್ಕಿಗಳ ಬಗ್ಗೆ ಎಚ್ಚರವಿರಬೇಕು. ಸ್ಥಳೀಯ ಆಡಳಿತ ಯಂತ್ರ ಎಚ್ಚರಿಕೆಯಿಂದ ವರ್ತಿಸಬೇಕು.
ಗಾಳಿಸುದ್ದಿ ಮತ್ತು ತಪ್ಪು ಅಭಿಪ್ರಾಯಗಳಿಗೆ ಪುಷ್ಟಿ ಸಿಗದಂತೆ ರಾಜ್ಯ ಸರ್ಕಾರಗಳು ನೋಡಿಕೊಳ್ಳಬೇಕು: ಮೋದಿ
5:13 pm ಲಸಿಕೆಗೆ ಸಂಬಂಧಿಸಿದಂತೆ ಗಾಳಿಸುದ್ದಿ ಮತ್ತು ತಪ್ಪು ಅಭಿಪ್ರಾಯಗಳಿಗೆ ಪುಷ್ಟಿ ಸಿಗದಂತೆ ರಾಜ್ಯ ಸರ್ಕಾರಗಳು ನೋಡಿಕೊಳ್ಳಬೇಕು. ಪ್ರತಿಯೊಬ್ಬ ನಾಗರಿಕನಿಗೂ ಸರಿಯಾದ ವಿವರ ತಲುಪಿಸಬೇಕು. ಸ್ವಸಹಾಯ ಗುಂಪು, ಎನ್ಎಸ್ಎಸ್, ಎನ್ಸಿಸಿ, ಸಾಮಾಜಿಕ ಕಾರ್ಯಕರ್ತರ ನೆರವಿನಿಂದ ಸುಳ್ಳುಸುದ್ದಿಗಳಿಗೆ ಸ್ಪಷ್ಟನೆ ನೀಡಬೇಕು. ಇದೇ ವೇಳೆ ನಡೆಯುತ್ತಿರುವ ಬೇರೆಬೇರೆ ಲಸಿಕಾ ಅಭಿಯಾನಗಳಿಗೆ ತೊಂದರೆಯಾಗದಂತೆ ಗಮನ ಕೊಡಬೇಕು.
ಕೋವಿಡ್ ಶಿಷ್ಟಾಚಾರಗನ್ನು ಮುಂದುವರಿಸಬೇಕು: ಮೋದಿ
5:12 pm ಸಾರ್ವತ್ರಿಕ ಲಸಿಕಾ ಅಭಿಯಾನದ ಅನುಭವ ನಮಗಿದೆ. ಕೋವಿಡ್ ಶಿಷ್ಟಾಚಾರಗನ್ನು ಮುಂದುವರಿಸಬೇಕು. ಲಸಿಕೆ ಪಡೆದವರೂ ಅಂತರ ಪಾಲನೆ, ಮಾಸ್ಕ್ ಧರಿಸುವುದನ್ನು ಮುಂದುವರಿಸಬೇಕು.
ಕಳೆದ ಕೆಲ ತಿಂಗಳುಗಳಿಂದ ಪೂರ್ವ ತಯಾರಿ ಮಾಡಿಕೊಂಡಿದ್ದೇವೆ: ಮೋದಿ
5:11 pm ವಿಶ್ವದ 50 ದೇಶಗಳಲ್ಲಿ ಈಗಾಗಲೇ ಬೇರೆಬೇರೆ ಲಸಿಕೆಗಳನ್ನು ನೀಡಲಾಗುತ್ತಿದೆ. ಮುಂದಿನ ಕೆಲ ತಿಂಗಳಲ್ಲಿ 30 ಕೋಟಿ ಮಂದಿಗೆ ಲಸಿಕೆ ನೀಡುತ್ತೇವೆ. ಕಳೆದ ಕೆಲ ತಿಂಗಳುಗಳಿಂದ ಪೂರ್ವ ತಯಾರಿ ಮಾಡಿಕೊಂಡಿದ್ದೇವೆ.
ಕೋವಿನ್ ಆ್ಯಪ್ನಲ್ಲಿ ಲಸಿಕೆ ನೀಡುವ ವಿವರ ತತ್ಕ್ಷಣಕ್ಕೆ ಅಪ್ಡೇಟ್ ಆಗಬೇಕು: ಮೋದಿ
5:10 pm ಇತರ ಲಸಿಕೆ ವಿತರಣೆ ಸಂದರ್ಭದಲ್ಲಿ ಬೂತ್ ಮಟ್ಟದಲ್ಲಿ ಲಸಿಕೆಗಳನ್ನು ಜನರಿಗೆ ಕೊಡಲು ಗಮನ ಕೊಟ್ಟಿದ್ದೇವೆ. ಅದೇ ಅನುಭವದಿಂದ ಕಲಿತ ಪಾಠಗಳನ್ನು ಈಗ ಬಳಸಿಕೊಳ್ಳುತ್ತೇವೆ. ಕೋವಿನ್ ಆ್ಯಪ್ನಲ್ಲಿ ಲಸಿಕೆ ನೀಡುವ ವಿವರ ತತ್ಕ್ಷಣಕ್ಕೆ ಅಪ್ಡೇಟ್ ಆಗಬೇಕು. ಅದರಲ್ಲಿ ಡಿಜಿಟಲ್ ವ್ಯಾಕ್ಸಿನೇಶನ್ ಪ್ರಮಾಣಪತ್ರ ಬರುತ್ತದೆ. ಅದಕ್ಕಾಗಿ ಹೊರೆಗೆಲ್ಲೂ ಓಡಾಡಬೇಕಿಲ್ಲ. ಎರಡನೇ ಡೋಸ್ ಪಡೆದವರಿಗೆ ಫೈನಲ್ ಪ್ರಮಾಣ ಪತ್ರ ಬರುತ್ತೆ. ಈ ವಿಚಾರದಲ್ಲಿ ಉಳಿದ ದೇಶಗಳು ನಮ್ಮನ್ನು ಅನುಸರಿಸುತ್ತಿವೆ.
ಎಲ್ಲರಿಗೂ ಲಸಿಕೆ ವಿತರಿಸಲು ನಾವು ಸಿದ್ಧತೆ ಮಾಡಿಕೊಂಡಿದ್ದೇವೆ: ಮೋದಿ
5:09 pm ದೇಶದ ಎಲ್ಲರಿಗೂ ಲಸಿಕೆ ವಿತರಿಸಲು ನಾವು ಸಿದ್ಧತೆ ಮಾಡಿಕೊಂಡಿದ್ದೇವೆ. ಡ್ರೈರನ್ ಮಾಡಿ ಯಶಸ್ಸು ಕಂಡಿದ್ದೇವೆ. ಹಿಂದಿನ ಅನುಭವ ಆಧರಿಸಿ ಈ ವಿತರಣೆಯನ್ನೂ ನಿರ್ವಹಿಸುತ್ತೇವೆ ಎಂದು ಪ್ರಧಾನಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರಗಳಿಗೆ ಯಾವುದೇ ಆರ್ಥಿಕ ಹೊರೆಯಿಲ್ಲ: ಮೋದಿ
5:07 pm ಮೊದಲ ಹಂತದ ಲಸಿಕೆ ವಿತರಣೆಯಲ್ಲಿ ರಾಜ್ಯ ಸರ್ಕಾರಗಳಿಗೆ ಯಾವುದೇ ಆರ್ಥಿಕ ಹೊರೆಯಿಲ್ಲ. ಆರೋಗ್ಯ ಕಾರ್ಯಕರ್ತರು, ಸಫಾಯಿ ಕರ್ಮಚಾರಿಗಳು, ಸೈನಿಕರು, ಪೊಲೀಸರು, ಸಿವಿಲ್ ಡಿಫೆನ್ಸ್ ಸಿಬ್ಬಂದಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುವುದು.
ಎರಡೂ ಲಸಿಕೆಗಳು ದುಬಾರಿಯಲ್ಲ: ಮೋದಿ
5:05 pm ಬೆಲೆ ವಿಚಾರದಲ್ಲಿ ಈ ಎರಡೂ ಲಸಿಕೆಗಳು ದುಬಾರಿಯಲ್ಲ. ನಮ್ಮ ಸ್ಥಿತಿಗತಿಗೆ ತಕ್ಕಂತೆ ಈ ಲಸಿಕೆಗಳನ್ನು ರೂಪಿಸಲಾಗಿದೆ. ಲಸಿಕೆ ರೂಪಿಸುವ ನಮ್ಮ ಹಿಂದಿನ ಅನುಭವ ಈಗ ನಮ್ಮ ಅನುಕೂಲಕ್ಕೆ ಒದಗಿಬಂದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ವಿಜ್ಞಾನಿಗಳ ಮಾತೇ ಅಂತಿಮ: ಮೋದಿ
5:04 pm ಕೊರೊನಾ ಲಸಿಕೆ ವಿಚಾರದಲ್ಲಿ ವಿಜ್ಞಾನಿಗಳ ಮಾತೇ ಅಂತಿಮ. ಸುರಕ್ಷೆಯ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದು ಪ್ರಧಾನಿ ತಿಳಿಸಿದ್ದಾರೆ.
ನಾಲ್ಕೈದು ಲಸಿಕೆಗಳೂ ಅಂತಿಮ ಸ್ಥಿತಿಗೆ ಬರುವ ಸಾಧ್ಯತೆ: ಮೋದಿ
5:03 pm ನಾಲ್ಕು ಲಸಿಕೆಗಳು ತಯಾರಿಕಾ ಪೂರ್ವ ಹಂತದಲ್ಲಿದೆ. 50 ವರ್ಷದ ಮೇಲಿನವರಿಗೆ ನಾವು ಲಸಿಕೆ ನೀಡುವ ಹೊತ್ತಿಗೆ ಉಳಿದ ನಾಲ್ಕೈದು ಲಸಿಕೆಗಳೂ ಅಂತಿಮ ಸ್ಥಿತಿಗೆ ಬರುವ ಸಾಧ್ಯತೆಯಿದೆ.
ನಿರ್ಣಾಯಕ ಘಟ್ಟ ತಲುಪಿದ್ದೇವೆ: ಮೋದಿ
5:02 pm ಕೊರೊನಾ ವಿರುದ್ಧದ ಹೋರಾಟದಲ್ಲಿ ಈಗ ನಿರ್ಣಾಯಕ ಘಟ್ಟ ತಲುಪಿದ್ದೇವೆ. 16 ಜನವರಿಯಿಂದ ವಿಶ್ವದ ಅತಿದೊಡ್ಡ ಲಸಿಕೆ ವಿತರಣೆ ಅಭಿಯಾನ ಆರಂಭವಾಗಲಿದೆ. ಎರಡೂ ಲಸಿಕೆ ಭಾರತದಲ್ಲಿಯೇ ತಯಾರಾಗಿದೆ.
ಕೊರೊನಾ ಬಗ್ಗೆ ಎಚ್ಚರ ಹೊಂದಿದ್ದೆವು: ಮೋದಿ
5:01 pm ಭಾರತದಲ್ಲಿ ಕೊರೊನಾ ಬೇರೆ ದೇಶಗಳಲ್ಲಿ ಬೆಳೆದಂತೆ ಬೆಳೆಯಲಿಲ್ಲ. ನಾವು ಆರಂಭದಿಂದಲೂ ಅದನ್ನು ನಿಯಂತ್ರಿಸಲು ಯತ್ನಿಸಿದೆವು. ಆರ್ಥಿಕವಾಗಿಯೂ ಹೆಚ್ಚು ಹಾನಿಯಾಗದಂತೆ ಎಚ್ಚರವಹಿಸಿದೆವು ಎಂದು ಪ್ರಧಾನಿ ತಿಳಿಸಿದ್ದಾರೆ.
ಲಾಲ್ ಬಹದ್ದೂರ್ ಶಾಸ್ತ್ರಿ ಮಾರ್ಗದರ್ಶನದಲ್ಲಿ ಸಾಗುತ್ತೇವೆ: ಮೋದಿ
4:59 pm ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿಯೇ ನಾವು ಮುಂದುವರಿಯುತ್ತೇವೆ. ದೇಶದ ಜನರಲ್ಲಿ ನಿರಂತರ ಜಾಗೃತಿ ಮೂಡಿಸಲು ಯತ್ನಿಸುತ್ತೇವೆ.
ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂವಾದ ಮತ್ತು ಸಹಕಾರ ನಿಯಮಿತವಾಗಿ ನಡೆಯುತ್ತಲೇ ಇದೆ : ಮೋದಿ
4:58 pm ಕೊರೊನಾ ವಿರುದ್ಧದ ಹೋರಾಟದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂವಾದ ಮತ್ತು ಸಹಕಾರ ನಿಯಮಿತವಾಗಿ ನಡೆಯುತ್ತಲೇ ಇದೆ. ಲಸಿಕೆ ವಿತರಣೆಯಲ್ಲಿಯೂ ಇದು ಮುಂದುವರಿಯುತ್ತದೆ ಎಂದು ದೇಶದ ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ರಾಜಕಾರಿಣಿಗಳಿಗೆ ಮೊದಲು ವ್ಯಾಕ್ಸಿನ್ ಇಲ್ಲ: ಮೋದಿ
4:56 pm ಚುನಾಯಿತ ಪ್ರತಿನಿಧಿಗಳು ಕೊರೊನಾ ವಾರಿಯರ್ಸ್ ಅಲ್ಲ. ನಾವು ಈ ವರ್ಗದಲ್ಲಿ ಬರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿಯಲ್ಲಿ ಲಸಿಕೆ ಸಂಗ್ರಹಕ್ಕೆ ಸಿದ್ಧತೆ
4:50 pm ಬೆಳಗಾವಿ ನಗರಕ್ಕೆ ಕೊರೊನಾ ಲಸಿಕೆ ಏರ್‌ಲಿಫ್ಟ್ ಆಗುವ ಸಾಧ್ಯತೆಯಿದೆ. ಪುಣೆಯಿಂದ ನಾಳೆ ಬೆಳಗ್ಗೆ ಲಸಿಕೆ ಬರುವ ಬಗ್ಗೆ ಹೇಳಲಾಗಿದೆ. ಆ ಹಿನ್ನೆಲೆಯಲ್ಲಿ, ನಗರದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಬೆಳಗಾವಿಯಲ್ಲಿರುವ 2 ವಾಕ್ ಇನ್ ಕೂಲರ್ನಲ್ಲಿ ಲಸಿಕೆ ಸಂಗ್ರಹಕ್ಕೆ ಸಿದ್ಧತೆ ನಡೆಯುತ್ತಿದೆ.
ಎರಡನೇ ಹಂತದಲ್ಲಿ ಪೊಲೀಸ್ ಹಾಗೂ ಫ್ರೆಂಟ್ ಲೈನ್ ವಾರಿಯರ್ಸ್ಗೆ ಲಸಿಕೆ
4:47 pm ಎರಡನೇ ಹಂತದಲ್ಲಿ ಪೊಲೀಸ್ ಹಾಗೂ ಫ್ರೆಂಟ್ ಲೈನ್ ವಾರಿಯರ್ಸ್ ಮತ್ತು ಸಾರಿಗೆ ನಿಗಮಗಳ ನೌಕರರಿಗೆ ಲಸಿಕೆ ನೀಡಲು ಸರ್ಕಾರ ಒಲವು.
ಮೊದಲ ಹಂತದ ಲಸಿಕೆ ಉಚಿತ
4:44 pm ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡಿದ್ದ ಮೂರು ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಉಚಿತವಾಗಿ ಲಸಿಕೆಯನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ
4:43 pm ಮೊದಲ ಹಂತದಲ್ಲಿ ಮೂರು ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಣೆ
ಪುಣೆಯಿಂದ ವಿವಿಧ ರಾಜ್ಯಗಳಿಗೆ ಲಸಿಕೆ ರವಾನೆ
4:41 pm ದೇಶದ ವಿವಿಧ ರಾಜ್ಯಗಳಿಗೆ ಪುಣೆಯಿಂದ ಒಂದು ಕೋಟಿ ಡೋಸ್ ಕೊವಿಶೀಲ್ಡ್ ಲಸಿಕೆ ರವಾನೆಗೆ ಸಿದ್ದತೆ. ಇಂದು ರಾತ್ರಿಯೇ ಬೆಂಗಳೂರಿಗೆ ಲಸಿಕೆ ತಲುಪುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.
ಕೊವಿಶೀಲ್ಡ್ಗೆ ದರ ನಿಗದಿ
4: 38 pm ಕೊವಿಶೀಲ್ಡ್ ಒಂದು ಡೋಸ್ ದರ 200 ರೂಪಾಯಿ ನಿಗದಿಯಾಗಿದ್ದು, ಸೆರಮ್ ಇನ್ಸ್‌ಟಿಟ್ಯೂಟ್‌ನಿಂದ 1.1 ಕೋಟಿ ಲಸಿಕೆ ಖರೀದಿಗೆ ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಂಡಿದೆ.
ಮೀಸಲಾತಿ ಹೆಚ್ಚಳ ಮಾಡೋಕೆ ಯಾರಿಂದಲೂ ಆಗಿಲ್ಲ: ಶ್ರೀರಾಮುಲು
4:32 pm ಎಸ್ಸಿ ಮತ್ತು ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡುವುದಕ್ಕೆ ಯಾರಿಂದಲೂ ಆಗಿಲ್ಲ. ಆದರೆ ಎಸ್ಟಿ ಮೀಸಲಾತಿ ಮೂರರಿಂದ ಏಳೂವರೆ ಫರ್ಸೆಂಟೇಜ್ ಮತ್ತು ಎಸ್ಸಿ ಮೀಸಲಾತಿ ಹದಿನೈದರಿಂದ ಹದಿನೇಳು ಫರ್ಸೆಂಟೇಜ್ ಮಾಡುತ್ತೇವೆ ಎಂದು ಹಾವೇರಿ ನಗರದ ಮಾಗಾವಿ ಕಲ್ಯಾಣ ಮಂಟಪದಲ್ಲಿ ನಡೆದ ಜನಸೇವಕ ಸಮಾವೇಶದಲ್ಲಿ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ಕೊರೊನಾ ಲಸಿಕೆ ಖರೀದಿ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಅನುಮತಿ
4:26 pm ಕೊವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆ ಖರೀದಿಗೆ ಭಾರತ್ ಬಯೋಟೆಕ್, ಎಸ್‌ಐಐ ಜೊತೆ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಿದೆ.
ವಿರಾಟ್ ಕೊಹ್ಲಿ ದಂಪತಿಗೆ ಹೆಣ್ಣು ಮಗು ಜನನ
4:18 pm 2017 ಡಿಸೆಂಬರ್ನಲ್ಲಿ ವಿವಾಹವಾಗಿದ್ದ ಕೊಹ್ಲಿ-ಅನುಷ್ಕಾ ದಂಪತಿಗೆ ಹೆಣ್ಣು ಮಗು ಜನನವಾಗಿದೆ. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಅನುಷ್ಕಾ ಮಗುವಿಗೆ ಜನ್ಮ ನೀಡಿದ್ದಾರೆ.
ಲಸಿಕೆ ವಿತರಣೆ ಸಂಬಂಧ ಪ್ರಧಾನಿ ಸಭೆ ಆರಂಭ
4:15 pm ಕೊರೊನಾ ಲಸಿಕೆ ವಿತರಣೆಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಸಭೆ ಆರಂಭವಾಗಿದ್ದು, ಎಲ್ಲ ರಾಜ್ಯಗಳ ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸುತ್ತಿದ್ದಾರೆ.
ಸುಗ್ರೀವಾಜ್ಞೆ ಯಾವಾಗಲೂ ಡೆಮಾಕ್ರಟಿಕ್ ಅಲ್ಲ: ಕೋಡಿಹಳ್ಳಿ ಚಂದ್ರಶೇಖರ್
4:08 pm ಭಾರತ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಕಿವಿ ಹಿಂಡುವ ಕೆಲಸ ಮಾಡಿದೆ. ಯಾವುದೇ ಕಾನೂನು ತರುವುದಕ್ಕಿಂತ ಮುಂಚೆ ದೇಶದೊಳಗೆ ಚರ್ಚೆಗೆ ಒಳಪಡಿಸಬೇಕು. ವಿಧಾನ ಸಭೆ ಮತ್ತು ಪಾರ್ಲಿಮೆಂಟ್ನಲ್ಲಿ ಚರ್ಚೆ ಬಳಿಕ ಅದು ಕಾನೂನು ಆಗಬೇಕೆಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತುಮಕೂರಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ಸಂಜೆ 4.30ಕ್ಕೆ ಮೋದಿ ಭಾಷಣ
4:02 pm ಲಸಿಕೆ ವಿತರಣಗೆ ಸಂಬಂಧಿಸಿ ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಜೊತೆ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಸಭೆ ಇಂದು ಸಂಜೆ 4.30ಕ್ಕೆ ಆರಂಭವಾಗುತ್ತದೆ.
ಕೊರೊನಾ ಆತಂಕ: ಕೇಂದ್ರ ಬಜೆಟ್ ಪ್ರತಿ ಮುದ್ರಣಕ್ಕೆ ಬ್ರೇಕ್
4:01 pm ಕೊರೊನಾ ಹಿನ್ನೆಲೆ ಪ್ರಸಕ್ತ ವರ್ಷದ ಕೇಂದ್ರ ಬಜೆಟ್ ಪ್ರತಿ ಮುದ್ರಣ ಮಾಡದಂತೆ ಕೇಂದ್ರ ಸರ್ಕಾರ ತೀರ್ಮಾನಿಸಿದೆ . ಬಜೆಟ್ ಪ್ರತಿ ಮುದ್ರಣಕ್ಕೆ ಏಕಕಾಲಕ್ಕೆ 100 ಜನರು ಬೇಕಾಗುತ್ತದೆ. ಆದರೆ ಈ ಬಾರಿ ಇದು ಕೊರೊನಾ ಭೀತಿ ಇರುವುದರಿಂದ ನೂರು ಜನರು ಒಂದೇ ಕಡೆ ಸೇರುವುದು ಒಳ್ಳೆಯದಲ್ಲ ಎಂದು ಯೋಚಿಸಿ ಕೇಂದ್ರ ಸರ್ಕಾರ ಬಜೆಟ್ ಪ್ರತಿಯನ್ನು ಮುದ್ರಣ ಮಾಡದಂತೆ ನಿರ್ಧರಿಸಿದೆ.
ಕೇಂದ್ರ ಬಜೆಟ್‌ನಲ್ಲಿ ಕೊರೊನಾ ಸೆಸ್ ಘೋಷಣೆ ಸಾಧ್ಯತೆ
3:45 pm ಕೇಂದ್ರ ಸಕಾರ್ರದ ಬಜೆಟ್‌ನಲ್ಲಿ ಕೊರೊನಾ ಸೆಸ್ ಘೋಷಿಸುವ ಸಾಧ್ಯತೆ ಹೆಚ್ಚಿದ್ದು, ಕೇಂದ್ರ ಹಣಕಾಸು ಇಲಾಖೆಯಿಂದ ಈ ಬಗ್ಗೆ ಗಂಭೀರ ಚರ್ಚೆ ನಡೆದಿದೆ.
ರಾಮ ಮಂದಿರ ನಮ್ಮ ಕನಸು :ಸಂಸದೆ ಶೋಭಾ ಕರಂದ್ಲಾಜೆ
3:38 PM ದೇಶದ ಮನೆ ಮನೆಯಲ್ಲಿ ರಾಮನಿದ್ದಾನೆ. ಟಾಟಾ, ಬಿರ್ಲಾ ಸೇರಿದಂತೆ ಅನೇಕರು ರಾಮ ಮಂದಿರ ನಿರ್ಮಿಸಿಕೊಡಲು ಮುಂದೆ ಬಂದಿದ್ದಾರೆ. ಜನವರಿ 15ರಿಂದ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಮಾಡೋಣ. ನಾವೆಲ್ಲ ಸೇರಿ ರಾಮ ಮಂದಿರ ನಿರ್ಮಾಣ ಮಾಡೋಣ ಎಂದು ಹಾವೇರಿಯ ನಗರದ ಮಾಗಾವಿ ಕಲ್ಯಾಣ ಮಂಟಪದಲ್ಲಿ ನಡೆದ ಜನಸೇವಕ ಸಮಾವೇಶದಲ್ಲಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ ರಾಮ ಮಂದಿರ ನಮ್ಮ ಕನಸು ಎಂದು ತಿಳಿಸಿದ್ದಾರೆ.
ದೇಶದಲ್ಲಿಂದು 6 ಜನರಿಗೆ ರೂಪಾಂತರಿ ಕೊರೊನಾ
3:31 pm ದೇಶದಲ್ಲಿ ಇವತ್ತು ಆರು ಜನರಿಗೆ ರೂಪಾಂತರಿ ಕೊರೊನಾ ಸೋಂಕು ಇರುವುದು ದೃಢವಾಗಿದ್ದು, ಸೋಂಕಿತರ ಸಂಖ್ಯೆ 96 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.
ಕಾಂಗ್ರೆಸ್ ಸಂಕಲ್ಪ ಸಮಾವೇಶದಲ್ಲಿ ನಿದ್ರೆಗೆ ಜಾರಿದ ಸಿದ್ದು
3:28 pm ಹುಬ್ಬಳ್ಳಿಯ ಲೋಟಸ್ ಗಾರ್ಡನ್ನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಂಕಲ್ಪ ಸಮಾವೇಶದಲ್ಲಿ ಒಂದೆಡೆ ಡಿ.ಕೆ. ಶಿವಕುಮಾರ್ ಭಾಷಣ ಮಾಡುತ್ತಿದ್ದರೆ ಕಾರ್ಯಕ್ರಮದ ಮೊದಲ ಸಾಲಿನಲ್ಲಿ ಕುಳಿತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ನಿದ್ರೆ ಮಾಡುತ್ತಿದ್ದರು.
ಆಫ್‌ಲೈನ್ ಬಿಟೆಕ್ ಎಕ್ಸಾಂ: ವಾಟಾಳ್ ನಾಗರಾಜ್ ಧರಣಿ
3:20 pm ಆಫ್‌ಲೈನ್‌ನಲ್ಲಿ ಪರೀಕ್ಷೆ ನಡೆಸಲು ಮುಂದಾಗಿರುವ ತುಮಕೂರಿನ ಎಸ್‌ಎಸ್ಐಟಿ ಕಾಲೇಜಿನ ಎದುರು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲೇ ಬಿಟೆಕ್ ಎಕ್ಸಾಂ ನಡೆಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
60 ಲಕ್ಷ ಮೌಲ್ಯದ ಗಾಂಜಾ ಜಪ್ತಿ
3:16 pm ಕಂಟೈನರ್ನಲ್ಲಿ ಸಾಗಿಸುತ್ತಿದ್ದ 60 ಲಕ್ಷ ಮೌಲ್ಯದ 650 ಕೆ.ಜಿ ಗಾಂಜಾವನ್ನು ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಲಸಿಕೆ ವಿತರಣೆ ಸಂಬಂಧ ಪ್ರಧಾನಿ ಸಭೆಗೆ ಕ್ಷಣಗಣನೆ
3:08 pm ಕೊರೊನಾ ಲಸಿಕೆ ವಿತರಣೆಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಸಭೆ ನಡೆಸಲಿದ್ದು, ಸಭೆಗೆ ಕ್ಷಣಗಣನೆಯಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಲಿದ್ದಾರೆ.
ಬಿಜೆಪಿಯ ಜನಸೇವಕ ಸಮಾವೇಶ: ದೈಹಿಕ ಅಂತರವನ್ನು ಮರೆತ ಬಿಜೆಪಿ ಕಾರ್ಯಕರ್ತರು
2:59 pm ಮೈಸೂರಿನಲ್ಲಿ ನಡೆಯುತ್ತಿರುವ ಜನಸೇವಕ ಕಾರ್ಯಕ್ರಮದಲ್ಲಿ ಜನ ಸಾಗರವೇ ಹರಿದುಬಂದಿದ್ದು, ಮಾಸ್ಕ್ ಧರಿಸದೆ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಬಿಜೆಪಿ ಮುಖಂಡರನ್ನು ಮಾತನಾಡಿಸಲು ನೂಕುನುಗ್ಗಲು ಉಂಟಾಗಿದೆ.
ತಿರುಮಲಕ್ಕೆ ಭೇಟಿ ನೀಡಿದ ನಟಿ ಕೀರ್ತಿ ಸುರೇಶ್
2:53 pm ಆಂಧ್ರ ಪ್ರದೇಶದ ತಿರುಮಲಕ್ಕೆ ಭೇಟಿ ನೀಡಿ ಟಾಲಿವುಡ್ ನಟಿ ಕೀರ್ತಿ ಸುರೇಶ್ ಬಾಲಾಜಿ ದರ್ಶನ ಪಡೆದರು. ನಟಿಗೆ ಸ್ವಾಗತಿಸಿದ ಅಧಿಕಾರಿಗಳು ಬಾಲಾಜಿ ದರ್ಶನ ಪಡೆಯಲು ವ್ಯವಸ್ಥೆ ಮಾಡಿದ್ದರು.
ಪ್ರಯಾಣಿಕರ ರೈಲು ಸ್ಥಗಿತ
2:50 pm ರೈಲಿನಲ್ಲಿ ಕಾಣಿಸಿಕೊಂಡಿರುವ ಸಾಂಕೇತಿಕ ಲೋಪದ ಹಿನ್ನೆಲೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ಪ್ರಯಾಣಿಕರ ರೈಲನ್ನು ಒಂದು ಗಂಟೆಗೂ ಹೆಚ್ಚು ಸಮಯ ಸ್ಥಗಿತಗೊಳಿಸಿದ್ದು, ಪ್ರಯಾಣಿಕರು ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ಬಿಜೆಪಿ ಪಕ್ಷದ ಜನಸೇವಕ ಸಮಾವೇಶ ಆರಂಭ
1:14 pm ಹಾವೇರಿ ನಗರದ ಮಾಗಾವಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಪಕ್ಷದ ಜನಸೇವಕ ಸಮಾವೇಶ ಆರಂಭವಾಗಿದೆ. ಸಮಾವೇಶದಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಕೃಷಿ ಸಚಿವ ಬಿ.ಸಿ.ಪಾಟೀಲ, ಸಂಸದರಾದ ಶೋಭಾ ಕರಂದ್ಲಾಜೆ, ಶಿವಕುಮಾರ ಉದಾಸಿ ಸೇರಿದಂತೆ ಜಿಲ್ಲೆಯ ಬಿಜೆಪಿ ಶಾಸಕರು ಭಾಗಿಯಾಗಿದ್ದಾರೆ.
ದರ್ಶನ್ ಜೊತೆಗಿರುವ ನಿರ್ದೇಶಕ ಸುಕುಮಾರ್ ಫೊಟೋ ವೈರಲ್
1: 12pm ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುಕುಮಾರ್ ಹುಟ್ಟು ಹಬ್ಬಕ್ಕೆ ಶುಭಕೋರಿ ಒಟ್ಟಿಗೆ ಇರುವ ಫೊಟೋವನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಈ ಮೂಲಕ ಸುಕುಮಾರ್ ಜೊತೆಗೆ ಸಿನಿಮಾ ಮಾಡುವ ಸೂಚನೆಯನ್ನು ದರ್ಶನ್ ನೀಡಿದ್ದಾರೆ.
ಶಿಕ್ಷಣ ಸಚಿವರಿಂದ ಸಾರಿಗೆ ಸಚಿವರಿಗೆ ಪತ್ರ
1:05 pm ಕೆಲವೆಡೆ ಶಾಲಾ ಮಕ್ಕಳಿಗೆ ಕೆಎಸ್ಆರ್ಟಿಸಿ ಬಸ್ ನಿಲ್ಲಿಸದ ಹಿನ್ನೆಲೆ ಸಾರಿಗೆ ಸಚಿವ ಲಕ್ಷ್ಮಣ ಸವದಿಗೆ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಶಾಲಾ ಮತ್ತು ಕಾಲೇಜಿಗೆ ಹೋಗುವ ಮಕ್ಕಳಿಗೆ ಸಮಸ್ಯೆ ಆಗಬಾರದು. ಈ ಬಗ್ಗೆ ಚಾಲಕ ಮತ್ತು ನಿರ್ವಾಹಕರಿಗೆ ನಿರ್ದೇಶಿಸುವಂತೆ ಮನವಿ ಮಾಡಿದ್ದಾರೆ.
ಬಿಜೆಪಿ ಪಕ್ಷದ ಜನಸೇವಕ ಸಮಾವೇಶ
1:02 pm ಇಂದು ಗದಗ ನಗರದಲ್ಲಿ ಮಧ್ಯಾಹ್ನ 4 ಗಂಟೆಗೆ ನಗರದ ಮುನ್ಸಿಪಲ್ ಮೈದಾನದಲ್ಲಿ ಬಿಜೆಪಿ ಪಕ್ಷದ ಜನಸೇವಕ ಸಮಾವೇಶ ನಡೆಯಲಿದ್ದು, ಸಮಾವೇಶಕ್ಕೆ ಡಿಸಿಎಂ ಗೋವಿಂದ ಕಾರಜೋಳ, ವಸತಿ ಸಚಿವ ಸೋಮಣ್ಣ, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ ಭಾಗಿಯಾಗಲಿದ್ದಾರೆ.
ಮತ್ತೆ ವಿದ್ಯುತ್ ದರ ಏರಿಕೆ ಮಾಡುವ ಸಾಧ್ಯತೆ
12:57 pm ಏಪ್ರಿಲ್ 1 ರಿಂದ ರಾಜ್ಯದಲ್ಲಿ ಮತ್ತೆ ವಿದ್ಯುತ್ ದರ ಏರಿಕೆ ಮಾಡುವ ಸಾಧ್ಯತೆಯಿದ್ದು, ಪ್ರತಿ ಯೂನಿಟ್‌ಗೆ 1 ರೂ. 35 ಪೈಸೆ ಏರಿಕೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಪ್ರಸ್ತಾವನೆ ಸಲ್ಲಿಸಿದೆ.
ಬ್ಯಾಂಕ್ ಹಗರಣ: ಠೇವಣಿದಾರರಿಂದ ಪ್ರತಿಭಟನೆ
12:44 pm ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿ ಆರ್ಬಿಐ ಅಧಿಕಾರಿಗಳು ಯಾವುದೇ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿ ಠೇವಣಿದಾರಿಂದ ಬೆಂಗಳೂರಿನ ನೆಟ್ಕಲಪ್ಪ ಸರ್ಕಲ್ ಬಳಿ ಶಾಂತಿಯುತ ಪ್ರತಿಭಟನೆ ನಡೆಯುತ್ತಿದೆ.
ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ‘ಸುಪ್ರೀಂ’
12:36 pm ಕೃಷಿ ತಿದ್ದುಪಡಿ ಕಾಯ್ದೆ ಖಂಡಿಸಿ ರೈತರ ಹೋರಾಟ ವಿಚಾರದ ಹಿನ್ನೆಲೆ ಕೇಂದ್ರ ಸರ್ಕಾರವನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಪರಿಸ್ಥಿತಿ ದಿನೇದಿನೇ ಬಿಗಡಾಯಿಸುತ್ತಿದೆ. ಜನ ಸಾಯುತ್ತಿದ್ದಾರೆ. ಆದರೂ ಪರಿಹಾರ ಕಂಡುಹಿಡಿಯುತ್ತಿಲ್ಲ. ನಿಮ್ಮ ನಡೆಯಿಂದ ನಾವು ನಿರಾಸೆಗೊಂಡಿದ್ದೇವೆ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಲ್ಲದೇ 41 ಸಂಘಟನೆಗಳು ಕೃಷಿ ಕಾಯ್ದೆ ವಾಪಸ್‌ಗೆ ಆಗ್ರಹಿಸಿವೆ. ಕೃಷಿ ತಿದ್ದುಪಡಿ ಕಾಯ್ದೆ ತಡೆಹಿಡಿಯದಿದ್ದರೇ ನಾವೇ ಕಾಯ್ದೆ ತಡೆಹಿಡಿಯುತ್ತೇವೆ ಎಂದು ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದೆ.
ವೈದ್ಯರಿಂದ ಡಿಸಿಎಂಗೆ ಆರೋಗ್ಯ ತಪಾಸಣೆ
12:28 pm ಗದಗ ಪ್ರವಾಸಿ ಮಂದಿರದಲ್ಲಿ ಡಿಸಿಎಂ ಗೋವಿಂದ ಕಾರಜೋಳರವರಿಗೆ ಆರೋಗ್ಯ ತಪಾಸಣೆ ಮಾಡಿದ್ದು, ತಪಾಸಣೆಯಲ್ಲಿ ಸ್ವಲ್ಪ ಬಿಪಿ ಜಾಸ್ತಿಯಾಗಿರುವುದು ತಿಳಿದುಬಂದಿದೆ.
ರಾಷ್ಟ್ರ ರಾಜಧಾನಿ ಚಲೋ ಕಾರ್ಯಕ್ರಮಕ್ಕೆ ಡಿ.ಕೆ.ಶಿವಕುಮಾರ್ ಕರೆ
12:21 pm ಇದೇ ತಿಂಗಳ 20 ರಂದು ರಾಷ್ಟ್ರ ರಾಜಧಾನಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಾಗಿದೆ ಎಂದು ಹುಬ್ಬಳ್ಳಿಯ ಕಾಂಗ್ರೆಸ್ ಸಂಕಲ್ಪ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ತಿಳಿಸಿದ್ದು, ಎಲ್ಲಾ ಕ್ಷೇತ್ರದಿಂದಲೂ ಜನ ಮತ್ತು ರೈತರನ್ನು ಕರೆದುಕೊಂಡು ಬರಬೇಕೆಂದು ಎಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಸೂಚನೆ ನೀಡಿದ್ದಾರೆ. ಬೆಂಗಳೂರಿನ ಫ್ರೀಡಂ ಪಾಕ್೯ಗೆ ಬರಬೇಕು. ಅಲ್ಲಿಂದ ದೆಹಲಿಯಲ್ಲಿ ನಡೆಯುತ್ತಿರೋ ರೈತರ ಪ್ರತಿಭಟನೆಗೆ ಬೆಂಬಲವಾಗಿ ರಾಷ್ಟ್ರ ರಾಜಧಾನಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ: ಎಂ.ಪಿ.ರೇಣುಕಾಚಾರ್ಯ
12:13 pm ಸಚಿವ ಸ್ಥಾನದ ವಿಚಾರದಲ್ಲಿ ಸಿಎಂ ಯಡಿಯೂರಪ್ಪರವರದ್ದೇ ಪರಮಾಧಿಕಾರವಾಗಿದೆ. ಎರಡೂವರೆ ವರ್ಷ ಕಾಲ ಬಿಎಸ್‌ವೈ ಸಿಎಂ ಆಗಿರುತ್ತಾರೆ. ಇದನ್ನು ಯಾರು ಕೂಡ ಪ್ರಶ್ನೆ ಮಾಡುವಂತೆಯೇ ಇಲ್ಲ ಎಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಹೇಳಿಕೆ ನೀಡಿದ ಶಾಸಕ ಎಂ.ಪಿ.ರೇಣುಕಾಚಾರ್ಯ, ನಾನು ಕೂಡಾ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದಿದ್ದಾರೆ.
ನಿರ್ಣಾಯಕ ಕೊನೆಯ ಒಂದು ಗಂಟೆ ಆಟ ನಡೆದಿದೆ
12:06 pm ಮೂರನೆಯ ಟೆಸ್ಟ್ ಗೆಲ್ಲಲು ಭಾರತ ತಂಡಕ್ಕೆ 88 ರನ್ ಬೇಕಿದೆ; ಆಸ್ಟ್ರೇಲಿಯಾಗೆ 5 ವಿಕೆಟ್ ಬೇಕಿದೆ.
ರೈತರಿಗೆ ಅನುಕೂಲವಾಗುವ ಬಜೆಟ್ ಮಂಡಿಸುವೆ: ಬಿಎಸ್‌ವೈ
12:05 pm ಈ ವರ್ಷದ ರಾಜ್ಯ ಬಜೆಟ್ ಮಂಡನೆ ವಿಚಾರಕ್ಕೆ ಸಂಬಂಧಿಸಿ ರಾಜ್ಯದ ಹಣಕಾಸು ಪರಿಸ್ಥಿತಿ ಸರಿಯಿಲ್ಲ. ಆದರೂ ಪರಿಸ್ಥಿತಿ ನೋಡಿಕೊಂಡು ಒಳ್ಳೆಯ ಬಜೆಟ್ ಮಂಡಿಸುತ್ತೇನೆ.ಅಲ್ಲದೇ ರೈತರಿಗೆ ಅನುಕೂಲವಾಗುವ ಬಜೆಟ್ ಮಂಡಿಸುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಚಿವ ಸಂಪುಟ ಸೇರುತ್ತೇನೆಂಬುದು ಊಹಾಪೋಹ : ಎನ್.ಮಹೇಶ್
12:00 pm ನನಗೆ ಸಿಎಂ ಸೇರಿದಂತೆ ಯಾರೂ ಕೂಡ ಕರೆ ಮಾಡಿಲ್ಲ. ನಾನು ಸಚಿವ ಸಂಪುಟ ಸೇರುತ್ತೇನೆ ಎನ್ನುವುದು ಕೇವಲ ಉಹಾಪೋಹಾ ಅಷ್ಟೆ. ಸಂಪುಟ ಸೇರುವುದರ ಬಗ್ಗೆ ನನಗೆ ಯಾವ ಮಾಹಿತಿಯು ಇಲ್ಲ ಎಂದು ಕೊಳ್ಳೇಗಾಲ ಕ್ಷೇತ್ರದ ಪಕ್ಷೇತರ ಶಾಸಕ ಎನ್.ಮಹೇಶ್ ಟಿವಿ9 ಗೆ ತಿಳಿಸಿದ್ದಾರೆ.
ಚೀನಾದ ಪಿಎಲ್‌ಎ ಸೈನಿಕರ ಬಿಡುಗಡೆ
11:54 am ಜನವರಿ 8 ರಂದು ಬಂಧಿಸಲ್ಪಟ್ಟ ಚೀನಾದ ಪಿಎಲ್‌ಎ ಸೈನಿಕರನ್ನು ಇಂದು ಬೆಳಿಗ್ಗೆ 10.10 ಗಂಟೆಗೆ ಚೀನಾಕ್ಕೆ ಹಿಂತಿರುಗಿಸಲಾಯಿತು ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.
ಚಾಲಕನ ಮೇಲೆ ಬಿಜೆಪಿ ಮಹಿಳಾ ಉಪಾಧ್ಯಕ್ಷೆಯಿಂದ ಹಲ್ಲೆ
11:50 am ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಾರು ಚಾಲಕನ ಮೇಲೆ ಬಿಜೆಪಿ ಮಹಿಳಾ ಉಪಾಧ್ಯಕ್ಷೆ ಚಪ್ಪಲಿಯಿಂದ ಹಲ್ಲೆ ಮಾಡಿರುವ ಘಟನೆ ಕೊಪ್ಪಳದ ಜಿಲ್ಲಾ ಆಡಳಿತ ಭವನದ ಕಚೇರಿಯಲ್ಲಿ ನಡೆದಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಆರೋಪಿಸಿರುವ ಉಪಾಧ್ಯಕ್ಷೆ ಸುಜಾತಾ ಚಾಲಕನಾದ ವಿಜಯ್ ಮೇಲೆ ಹಲ್ಲೆ ನಡೆಸಿದ ದ್ರಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬಿಜೆಪಿ ಸರ್ಕಾರ ಬಂದ ಬಳಿಕ ಯೋಜನೆಗೆ ತಡೆ: ಎಚ್.ಡಿ.ರೇವಣ್ಣ
11:44 am ಕುಮಾರಸ್ವಾಮಿಯ ಮುಖ್ಯಮಂತ್ರಿ ಕಾಲದಲ್ಲಿ ಜಾರಿಗೆ ಬಂದಿದ್ದ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ರಣಘಟ್ಟ ಯೋಜನೆಗೆ ಬಜೆಟ್‌ನಲ್ಲಿ ನೂರು ಕೋಟಿ ಹಣ ಮೀಸಲಿಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ಬಳಿಕ ಈ ಯೋಜನೆಗೆ ತಡೆ ನೀಡಲಾಗಿತ್ತು. ಈಗ ಆಯೋಜನೆಗೆ ಅನುಮೋದನೆ ನೀಡಿದ್ದಾರೆ ಅಷ್ಟೇ, ಇದರಲ್ಲಿ ಅವರ ಕೊಡುಗೆ ಏನೂಯಿಲ್ಲ. ಬಿಜೆಪಿ ಸರ್ಕಾರ ಜಿಲ್ಲೆಗೆ ಮಾಡಿರುವ ಅನ್ಯಾಯವನ್ನು ಸಮಯ ಬಂದಾಗ ಹೇಳುತ್ತೇನೆ ಎಂದು ತಿಳಿಸಿದ ರೇವಣ್ಣ, ಸಾಮಾನ್ಯ ಜ್ಞಾನ ಇಲ್ಲದೆ ಯೋಜನೆಗಳನ್ನು ಜಾರಿಮಾಡಿದ್ದರು ಎಂಬ ಶಾಸಕ ಪ್ರೀತಂಗೌಡ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ತಕ್ಷಣ ಪ್ರತಿಭಟನೆ ನಿಲ್ಲಿಸಿ: ರಜನಿಕಾಂತ್
11:34 am ನನ್ನ ಅಭಿಮಾನಿಗಳು ತಕ್ಷಣ ಪ್ರತಿಭಟನೆಗಳನ್ನು ನಿಲ್ಲಿಸಬೇಕು. ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ರಜನಿಕಾಂತ್ ಪ್ರಕಟಣೆ ಮೂಲಕ ಟ್ವಿಟ್ಟರ್ನಲ್ಲಿ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.
ರಾಜಕೀಯಕ್ಕೆ ನನ್ನನ್ನು ತಳ್ಳಬೇಡಿ: ರಜನಿಕಾಂತ್
11:32 am ಈಗಾಗಲೇ ನನ್ನ ಸಮಸ್ಯೆಗಳನ್ನು ಸ್ಪಷ್ಟವಾಗಿ ತಿಳಿಸಿದ್ದೇನೆ. ಪ್ರತಿಭಟನೆ ನಡೆಸುವ ಮೂಲಕ ರಾಜಕೀಯಕ್ಕೆ ನನ್ನನ್ನು ತಳ್ಳಬೇಡಿ ಎಂದು ಸೂಪರ್ ಸ್ಟಾರ್ ರಜನಿಕಾಂತ್ ತಿಳಿಸಿದ್ದಾರೆ.
ಏರಿಕೆ ಹಾದಿ ಹಿಡಿದ ಭಾರತದ ಷೇರು ಮಾರುಕಟ್ಟೆ
11:30 am ಭಾರತದಲ್ಲಿ ಕೊರೊನಾ ವೈರಸ್ ಔಷಧ ಬಳಕೆ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇವೆ. ಅಲ್ಲದೆ, ಕೊರೊನಾ ಎರಡನೇ ಅಲೆ ಬಗ್ಗೆ ಇದ್ದ ಭೀತಿ ಕೂಡ ದೂರವಾಗಿದೆ. ಹೀಗಾಗಿ, ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟ ಮುಂದುವರಿದಿದ್ದು, ಇಂದು ಮುಂಜಾನೆಯೇ ಭಾರತದ ಷೇರು ಮಾರುಕಟ್ಟೆ ಏರಿಕೆ ಹಾದಿ ಹಿಡಿದಿದೆ. ಸೋಮವಾರ ಮಾರುಕಟ್ಟೆ ಸಾರ್ವಕಾಲಿಕ ದಾಖಲೆಯೊಂದಿಗೆ ಆರಂಭಕಂಡಿತು. ಸೆನ್ಸೆಕ್ಸ್ ಶೇ. 0.67 ಅಥವಾ 327 ಅಂಶ ಏರಿಕೆ ಕಂಡು, 49,109 ಅಂಕಕ್ಕೆ ತಲುಪಿತು. ಷೇರು ಮಾರುಕಟ್ಟೆಯ ಇತಿಹಾಸದಲ್ಲೇ ಸೆನ್ಸೆಕ್ 49 ಸಾವಿರದ ಗಡಿ ದಾಟಿದ್ದು ಇದೇ ಮೊದಲು. ಇನ್ನು ನಿಫ್ಟಿ ಶೇ. 0.58 ಅಥವಾ 83 ಅಂಶ ಏರಿಕೆ ಕಂಡು 14, 430 ಅಂಕ ತಲುಪಿದೆ.
ರಾಜ್ಯ ಕಾಂಗ್ರೆಸ್ನಿಂದ ಮತ್ತೊಂದು ಬೃಹತ್ ಹೋರಾಟ
11:21 am ರಾಜ್ಯ ಕಾಂಗ್ರೆಸ್ ಸಂಕ್ರಾತಿ ಬಳಿಕ ಕೃಷಿ ಮಸೂದೆ ವಿರುದ್ದ ಬೃಹತ್ ಹೋರಾಟ ಮಾಡಲು ನಿರ್ಧರಿಸಿದೆ. ರೈತರೊಂದಿಗೆ ರಾಜ್ಯಪಾಲರ ಕಚೇರಿಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ನಿರ್ಧರಿಸಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಇಂದು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ್ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಹಿರಿಯ ನಾಯಕರು ಹಾಗೂ ಶಾಸಕರು ಭಾಗಿಯಾಗಿದ್ದರು.
ನಡುರಸ್ತೆಯಲ್ಲಿ ಓರ್ವನ ಲೈವ್ ಮರ್ಡರ್
11:14 am ಹೈದರಾಬಾದ್‌ನ ಅತ್ತಾಪುರದ ನಡುರಸ್ತೆಯಲ್ಲೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದು, ಎಂಐಎಂ ಪಕ್ಷದ ಮುಖಂಡ ಮಹಾಮದ್ ಖಲೀಲ ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ. ರಾಜೇಂದ್ರನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿಯಿಂದ ತಿರುಪತಿಗೆ ವಿಮಾನ ಹಾರಾಟ ಪ್ರಾರಂಭ
11:07 am ಇಂದಿನಿಂದ ಕಲಬುರಗಿಯಿಂದ ತಿರುಪತಿಗೆ ವಿಮಾನ ಹಾರಾಟ ಪ್ರಾರಂಭವಾಗಿದ್ದು, 620 ಕಿ.ಮೀ ದೂರದ ಪ್ರಯಾಣವನ್ನು ಕೇವಲ 1 ಗಂಟೆಯಲ್ಲಿ ತುಲುಪಬಹುದು. ವಾರದಲ್ಲಿ 4 ದಿನ ಅಂದರೆ ಸೋಮವಾರ, ಬುಧವಾರ, ಶುಕ್ರವಾರ, ಭಾನುವಾರ ವಿಮಾನ ಸಂಚಾರಿಸುತ್ತದೆ. ಕಲಬುರಗಿಯಿಂದ ತಿರುಪತಿಗೆ ಬೆಳಗ್ಗೆ 9. 55ಕ್ಕೆ ಹೊರಡಲಿದ್ದು, ಬೆಳಗ್ಗೆ 11 ಗಂಟೆಗೆ ತಿರುಪತಿ ತಲುಪುತ್ತದೆ. ಅದೇ ರೀತಿ ತಿರುಪತಿಯಿಂದ ಮಧ್ಯಾಹ್ನ 2.25 ಗಂಟೆಗೆ ಹೊರಡುವ ವಿಮಾನ ಕಲಬುರಗಿಗೆ 03.30 ಗಂಟೆಗೆ ಬಂದು ತಲುಪಲಿದೆ.
ಚಿತ್ರದುರ್ಗ ಜಿಲ್ಲೆಗೆ ಮನ್ನಣೆ ಸಿಕ್ಕಿಲ್ಲ: G.H.ತಿಪ್ಪಾರೆಡ್ಡಿ ಹೇಳಿಕೆ
11:00 am ಬಿಜೆಪಿ ಸರ್ಕಾರದಲ್ಲಿ ಚಿತ್ರದುರ್ಗ ಜಿಲ್ಲೆಗೆ ಮನ್ನಣೆ ಸಿಕ್ಕಿಲ್ಲ ಎಂದು ಹೇಳಿಕೆ ನೀಡಿದ ಚಿತ್ರದುರ್ಗದ ಬಿಜೆಪಿ ಶಾಸಕ G.H.ತಿಪ್ಪಾರೆಡ್ಡಿ, ಹೊರ ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಕಾಳಜಿಯೇ ಇಲ್ಲ. ಈ ಸಲ ನಮ್ಮ ಹಿರಿತನಕ್ಕೆ ಗೌರವ ಸಿಗುವ ವಿಶ್ವಾಸವಿದೆ. ಮಂತ್ರಿಗಿರಿ ಕೇಳಿದವರಿಗೆ ಮನ್ನಣೆ ಎಂಬುದು ಬಿಜೆಪಿಯಲ್ಲಿಲ್ಲ. ಸಚಿವ ಸ್ಥಾನಕ್ಕಾಗಿ ವರಿಷ್ಠರು ಮತ್ತು ಸಿಎಂ ಬಳಿ ನಾನು ಪ್ರಯತ್ನಿಸಿಲ್ಲ ಎಂದು ತಿಳಿಸಿದ್ದಾರೆ.
ಲವ್ ಜಿಹಾದ್: ಆರೋಪಿಗಳು ಬಂಧನ
10:55 am 2018ರಲ್ಲಿ ಹಿಂದೂ ಯುವತಿಯನ್ನು ಪರಿಚಯಿಸಿಕೊಂಡಿದ್ದ ರಿಲ್ವಾನ್ ಎಂಬುವವನು 2020ರ ನವೆಂಬರ್‌ನಲ್ಲಿ ವಿವಾಹವಾಗಿದ್ದನು. ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಹಿಂದೂ ಯುವತಿಗೆ ಮೊಹಮ್ಮದ್ ರಿಲ್ವಾನ್ ಮತ್ತು ಈತನ ಸಹೋದರ ಕಿರುಕುಳ ನೀಡಿದ್ದು, ಇಬ್ಬರ ವಿರುದ್ಧ ಯುವತಿ ಮೇಲೆ ಅತ್ಯಾಚಾರಗೈದ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಸಿ.ಕೆ.ಅಚ್ಚುಕಟ್ಟು ಪೊಲೀಸರಿಂದ ತನಿಖೆ ನಡೆಯುತ್ತಿದೆ.
ಕಲ್ಯಾಣ ಕರ್ನಾಟಕ ಭಾಗದ ಶಾಸಕರಿಂದ ಒತ್ತಡ
10:46 am
ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಒಪ್ಪಿಗೆ ನೀಡಿದ ಹಿನ್ನೆಲೆ ಈ ಬಾರಿಯಾದರೂ ಸಚಿವ ಸ್ಥಾನ ನೀಡುವಂತೆ ಕಲ್ಯಾಣ ಕರ್ನಾಟಕ ಭಾಗಸ ಶಾಸಕರು ಒತ್ತಡ ಹೇರಿದ್ದಾರೆ. 6 ಜಿಲ್ಲೆಗಳ ಪೈಕಿ ಕೇವಲ ಇಬ್ಬರು ಮಾತ್ರ ಸಚಿವರಾಗಿದ್ದಾರೆ. ಹೀಗಾಗಿ ಈ ಬಾರಿ ಕಲ್ಯಾಣ ಕರ್ನಾಟಕಕ್ಕೆ ಒತ್ತು ನೀಡಬೇಕು ಎಂದು ಒತ್ತಾಯಿಸಿದ್ದಾರೆ.ರಾಜಕೀಯಕ್ಕೆ ಬರಲು ರಜನಿಕಾಂತ್ ಅಭಿಮಾನಿಗಳ ಒತ್ತಾಯ
10:41 am ಈ ಹಿಂದೆ ಭರವಸೆ ನೀಡಿದಂತೆ ಸೂಪರ್ ಸ್ಟಾರ್ ರಾಜಕೀಯಕ್ಕೆ ಸೇರಬೇಕು ಎಂದು ರಜನಿಕಾಂತ್ ಅಭಿಮಾನಿಗಳು ಭಾನುವಾರ ಚೆನ್ನೈನಲ್ಲಿ ಒತ್ತಾಯಿದ್ದಾರೆ. ರಜಿನಿ ಮಕ್ಕಲ್ ಮಂದಿರದ ಪದಾಧಿಕಾರಿಯಾದ ಸುಧಾಕರ್ ಯಾವುದೇ ರೀತಿಯ ಪ್ರದರ್ಶನದಲ್ಲಿ ಭಾಗವಹಿಸದಂತೆ ಸದಸ್ಯರಿಗೆ ಎಚ್ಚರಿಕೆ ನೀಡಿದ್ದರೂ ಸಹ 1,000 ಕ್ಕೂ ಹೆಚ್ಚು ಜನರು ಭಾಗವಹಿಸಿ ರಜನಿಕಾಂತ್ ರಾಜಕೀಯಕ್ಕೆ ಬರಲು ಒತ್ತಾಯ ಹೇರಿದ್ದಾರೆ.
ವಾಲ್ಮೀಕಿ ಮಠದಲ್ಲಿ ಇಂದು ಮಹತ್ವದ ಸಭೆ
10:17 am ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಇರುವ ವಾಲ್ಮೀಕಿ ಮಠದಲ್ಲಿ ಇಂದು ಮಹತ್ವದ ಸಭೆ ನಡೆಯಲಿದೆ. ಸಭೆಗೆ ಸಚಿವರಾದ ಶ್ರೀರಾಮುಲು, ರಮೇಶ ಜಾರಕಿಹೊಳಿ ಸೇರಿದಂತೆ ವಾಲ್ಮೀಕಿ ಸಮಾಜದ ಹತ್ತಕ್ಕೂ ಹೆಚ್ಚು ಜನ ಶಾಸಕರು ಆಗಮಿಸಲಿದ್ದು,ಫೆಬ್ರವರಿಯಲ್ಲಿ ನಡೆಯುವ ವಾಲ್ಮೀಕಿ ಜಾತ್ರೆ ಹಾಗೂ ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಹೆಚ್ಚಳದ ಬಗ್ಗೆ ನಿರ್ಧಾರವಾಗುವ ಸಾದ್ಯತೆಯಿದೆ. ವಾಲ್ಮೀಕಿ ಗುರುಪೀಠದ ಪ್ರಸನಾನಂದಪುರಿ ಸ್ವಾಮೀಜಿಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.
ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾಗಲ್ಲ: ಕೆ.ಎಸ್.ಈಶ್ವರಪ್ಪ
10:12 am ಮುಖ್ಯಮಂತ್ರಿ ಬದಲಾವಣೆ ಅಂತ ಸುಮ್ಮನೆ ಮಾತನಾಡುತ್ತಾರೆ. ಇದು ಕೇಲವ ಸೃಷ್ಟಿ ಮಾಡಿರುವ ಸಂಗತಿ. ಕೇಂದ್ರ ನಾಯಕರು, ಶಾಸಕರು ಯಾರು ಈವರಗೆ ಹೇಳಿಲ್ಲ. ಆದರೆ ಮುಖ್ಯಮಂತ್ರಿ ಸ್ಥಾನ ಬದಲಾವಣೆಯಾಗುತ್ತದೆ ಎಂದು ಹೇಳುತ್ತಿರುವುದು ಸಿದ್ದರಾಮಯ್ಯನವರು ಒಬ್ಬರೆ. ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ನಂತರ ಅವರಿಗೆ ಕಣ್ಣುಬಿದ್ದಿದೆ. ಪದೇ ಪದೇ ಈ ರೀತಿ ಹೇಳುವುದರಿಂದ ಜನರು ನಂಬುತ್ತಾರೆ ಎಂದು ಸಿದ್ದರಾಮಯ್ಯರವರು ಈ ರೀತಿ ಹೇಳುತ್ತಿದ್ದಾರೆ ಎಂದು ಮೈಸೂರಿನಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಮಂತ್ರಿಯಾಗಲ್ಲ ಅಂತ ಯತ್ನಾಳ್ ಹೇಳಿದ್ದಾರೆ: ಸಚಿವ ಈಶ್ವರಪ್ಪ ಹೇಳಿಕೆ
10:05 am ಯಡಿಯೂರಪ್ಪನವರ ಸಂಪುಟದಲ್ಲಿ ಮಂತ್ರಿಯಾಗಲ್ಲವೆಂದು ಈ ಮೊದಲು ಯತ್ನಾಳ್ ತಿಳಿಸಿದ್ದರು. ಆದರೆ ಮಂತ್ರಿ ಮಾಡುವುದು ಬಿಡುವುದು ಮುಖ್ಯಮಂತ್ರಿಗೆ ಬಿಟ್ಟಿರುವ ವಿಚಾರ. ಒಂದು ವೇಳೆ ಕೇಂದ್ರ ನಾಯಕರು ಹಾಗೂ ಮುಖ್ಯಮಂತ್ರಿ ಮಂತ್ರಿ ಮಾಡುತ್ತೇವೆ ಎಂದರೆ ಅದನ್ನು ಅವರು ಒಪ್ಪಿಕೊಳ್ಳಬೇಕು ಎಂದು ಮೈಸೂರಿನಲ್ಲಿ ಸಚಿವ ಈಶ್ವರಪ್ಪ ಹೇಳಿದ್ದಾರೆ.
ಟ್ರಂಪ್ ಪದಚ್ಯುತಿಗೆ ಮುಂದಾದ ಡೆಮಾಕ್ರಟಿಕ್ ಸದಸ್ಯರು
9:57 am ಅಮೆರಿಕ ಸಂಸತ್ ಮೇಲೆ ಟ್ರಂಪ್ ಬೆಂಬಲಿಗರ ದಾಳಿ ನಡೆಸಿದ ವಿಚಾರಕ್ಕೆ ಸಂಬಂಧಿಸಿ ಟ್ರಂಪ್ನನ್ನು ಅವಧಿಯ ಒಳಗೆ ಅಧಿಕಾರದಿಂದ ಪದಚ್ಯುತಿಗೊಳಿಸಲು ಡೆಮಾಕ್ರಟಿಕ್ ಸದಸ್ಯರು ಮುಂದಾಗಿದ್ದಾರೆ.
ಎಂಟಿಬಿ ನಾಗರಾಜ್‌ಗೆ ಸಚಿವ ಸ್ಥಾನ ಬಹುತೇಕ ಪಕ್ಕಾ
9:52 am ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಒಪ್ಪಿಗೆ ನೀಡಿದ ಹಿನ್ನೆಲೆ ಎಂಟಿಬಿ ನಾಗರಾಜ್‌ಗೆ ಸಚಿವ ಸ್ಥಾನ ನೀಡುವುದು ಬಹುತೇಕ ಖಚಿತವಾಗಿದ್ದು, ಬೆಳ್ಳಂಬೆಳಗ್ಗೆ ಕುಟುಂಬ ಸಮೇತರಾಗಿ ಎಂಟಿಬಿ ದೇವರ ದರ್ಶನಕ್ಕೆ ತೆರಳಿದ್ದಾರೆ.
ಯುವರಾಜ್ ವಿರುದ್ಧ ಮತ್ತೊಂದು ದೂರು ದಾಖಲು
9:46 am ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ B.L.ಸಂತೋಷ್ ಹೆಸರಿನಲ್ಲಿ ಬಿಲ್ಡರ್ ಇನಿತ್‌ಕುಮಾರ್ ಎಂಬುವವರಿಗೆ ವಂಚನೆ ಮಾಡಿದ ಆರೋಪ ಕೇಳಿಬಂದಿದ್ದು, ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಗೆ ಇನಿತ್‌ಕುಮಾರ್ ಯುವರಾಜ್ ವಿರುದ್ಧ ದೂರು ನೀಡಿದ್ದಾರೆ. ಸಂತೋಷ್ ಅಣ್ಣನ ಮಗನೆಂದು ಪರಿಚಯಿಸಿಕೊಂಡಿದ್ದ ಯುವರಾಜ್ ರಾಷ್ಟ್ರಮಟ್ಟದಲ್ಲಿ ಯೂತ್ ಐಕಾನ್ ಮಾಡುವುದಾಗಿ ನಂಬಿಸಿ 3 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರಂತೆ. ಬಳಿಕ 30 ಲಕ್ಷ ರೂಪಾಯಿ ಪಡೆದು ವಂಚಿಸಿರುವ ಆರೋಪ ಕೇಳಿಬಂದಿದೆ.
ಎಲ್ಲ ರಾಜ್ಯಗಳ ಸಿಎಂಗಳ ಜತೆ ಪ್ರಧಾನಿ ಮೋದಿ ಮಾತುಕತೆ
09:44 am ಕೊರೊನಾ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಇಂದು ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಂಜೆ 4 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಲಿದ್ದಾರೆ.
ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್
09:40 am ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಸಚಿವ ಸಂಪುಟಕ್ಕೆ 7 ಶಾಸಕರ ಸೇರ್ಪಡೆಗೆ ಒಪ್ಪಿಗೆ ನೀಡಲಾಗಿದೆ. ಜ.13ರ ಮಧ್ಯಾಹ್ನ ನೂತನ ಸಚಿವರ ಪ್ರಮಾಣವಚನ ಇರುವ ಹಿನ್ನೆಲೆ ಸಂಪುಟಕ್ಕೆ ಸೇರುವವರ ಹೆಸರು ಇಂದು ಪ್ರಕಟ ಸಾಧ್ಯತೆಯಿದೆ.
ಜಗತ್ತಿನೆಲ್ಲೆಡೆಯ ಸುದ್ದಿ ಕ್ಷಣಾರ್ಧದಲ್ಲಿ ಹರಿದು ಬಂದು ಅಂಗೈ ಸೇರುವಾಗ ಯಾವುದರತ್ತ ಕಣ್ಣು ಹಾಯಿಸಬೇಕು ಎಂಬ ಗೊಂದಲ ಸಹಜ.. ಎಷ್ಟೋ ಬಾರಿ ಸುದ್ದಿಯ ಹೆಸರಿನಲ್ಲಿ ಅಸಂಗತ ಸಂಗತಿಗಳೂ ತೇಲಿ ಬರುತ್ತವೆ. ಅವುಗಳನ್ನು ಸೋಸುವುದೇ ಹರಸಾಹಸ. ನಮ್ಮ ಓದುಗರನ್ನು ಇಂತಹ ಗೊಂದಲಗಳಿಂದ ಪಾರು ಮಾಡಲೆಂದೇ ಪ್ರತಿನಿತ್ಯ Live Blog ಮೂಲಕ ಆಯಾ ಕ್ಷಣದ ಮುಖ್ಯಾಂಶಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಇದು ನಿಮಗಿಷ್ಟವಾಗಿದೆ ಎನ್ನುವ ನಂಬಿಕೆ ನಮ್ಮದು.. ಬನ್ನಿ ಇಂದಿನ ಸುದ್ದಿಯ ಹರಿವನ್ನು ನೋಡೋಣ. ಸುದ್ದಿಯ ಸಂಪೂರ್ಣ ವಿವರ ವೆಬ್ಸೈಟ್ನ ವಿವಿಧ ವಿಭಾಗಗಳಲ್ಲಿ ಲಭ್ಯವಿರುತ್ತವೆ. ಓದಲು ಮರೆಯದಿರಿ.
Published On - Jan 12,2021 9:24 AM