Lasya Nanditha: ಬಿಆರ್‌ಎಸ್ ಶಾಸಕಿ ಲಾಸ್ಯ ನಂದಿತಾ ರಸ್ತೆ ಅಪಘಾತದಲ್ಲಿ ಸಾವು

|

Updated on: Feb 23, 2024 | 10:09 AM

Lasya Nanditha Passes away: ಬಿಆರ್​ಎಸ್ ಶಾಸಕಿ ಲಾಸ್ಯ ನಂದಿತಾ ಇತ್ತೀಚೆಗೆ ಹಲವು ಬಾರಿ ಅವಘಡಗಳಿಗೆ ಈಡಾಗಿದ್ದರು. ಆದರೆ ಅದೃಷ್ಟವಶಾತ್ ಸ್ವಲ್ಪದರಲ್ಲೇ ಬಚಾವಾಗಿದ್ದರು. ಆದರೆ, ಇಂದು ಹೈದರಾಬಾದ್ ಒಆರ್‌ಆರ್‌ನಲ್ಲಿ ಸಂಭವಿಸಿದ ಭಿಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಶಾಸಕಿಯ ನಿಧನಕ್ಕೆ ಬಿಆರ್​ಎಸ್ ನಾಯಕರು ಹಾಗೂ ತೆಲಂಗಾಣದ ಗಣ್ಯರು ಸಂತಾಪ ಸೂಚಿಸಿದ್ದಾರೆ.

Lasya Nanditha: ಬಿಆರ್‌ಎಸ್ ಶಾಸಕಿ ಲಾಸ್ಯ ನಂದಿತಾ ರಸ್ತೆ ಅಪಘಾತದಲ್ಲಿ ಸಾವು
ಬಿಆರ್‌ಎಸ್ ಶಾಸಕಿ ಲಾಸ್ಯ ನಂದಿತಾ
Follow us on

ಹೈದರಾಬಾದ್, ಫೆಬ್ರವರಿ 23: ತೆಲಂಗಾಣದ ಬಿಆರ್​ಎಸ್​ (BRS) ಪಕ್ಷದ ಶಾಸಕಿ ಲಾಸ್ಯ ನಂದಿತಾ (33) (Lasya Nanditha) ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹೈದರಾಬಾದ್ (Hyderabad) ಒಆರ್‌ಆರ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಆಕೆ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಅತಿವೇಗದಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಲಾಸ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಇತ್ತೀಚೆಗಷ್ಟೇ ಶಾಸಕಿ ಬಿಆರ್‌ಎಸ್ ನಲ್ಗೊಂಡ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ, ಬಳಿಕ ಮನೆಗೆ ಮರಳುತ್ತಿದ್ದಾಗ ಅವರ ಕಾರು ಅಪಘಾತಕ್ಕೀಡಾಗಿತ್ತು. ಆದರೆ ಆಕೆ ಸುರಕ್ಷಿತವಾಗಿ ಅಪಘಾತದಿಂದ ಪಾರಾಗಿದ್ದರು. ಆ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಗೃಹರಕ್ಷಕ ದಳದ ಸಿಬ್ಬಂದಿ ಮೃತಪಟ್ಟಿದ್ದರು. ಆದರೆ ಶುಕ್ರವಾರ ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಆಕೆ ದಾರುಣವಾಗಿ ಸಾವಿಗೀಡಾಗಿದ್ದಾರೆ.

ಸಿಕಂದರಾಬಾದ್​ನ ಕಂಟೋನ್ಮೆಂಟ್ ಶಾಸಕಿ ಲಾಸ್ಯ ನಂದಿತಾ ಅವರ ನಿಧನಕ್ಕೆ ಬಿಆರ್‌ಎಸ್ ನಾಯಕರು ಕಂಬನಿ ಮಿಡಿದಿದ್ದಾರೆ. ಸ್ವಲ್ಪ ಸಮಯದ ನಂತರ, ಮೃತದೇಹವನ್ನು ಚಿಕ್ಕಡಪಲ್ಲಿಯಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಗುತ್ತದೆ.

ಕಳೆದ ವರ್ಷ ಇದೇ ತಿಂಗಳಲ್ಲಿ ಆಕೆಯ ತಂದೆ ಸಾಯಣ್ಣ ಮೃತಪಟ್ಟಿದ್ದರು. ಸಾಯಣ್ಣ 2023 ರ ಫೆಬ್ರವರಿ 19ರಂದು ನಿಧನರಾಗಿದ್ದರು. ಇದೀಗ ಅವರ ಮಗಳು 2024 ರ ಫೆಬ್ರವರಿ 23 ರಂದು ನಿಧನರಾಗಿದ್ದಾರೆ. ಇದು ಕುಟುಂಬದವರನ್ನು ತೀವ್ರ ಆಘಾತಕ್ಕೀಡು ಮಾಡಿದೆ.

ಇದನ್ನೂ ಓದಿ: ತಡರಾತ್ರಿ ವಾರಾಣಸಿಯ ರಸ್ತೆ ಪರಿಶೀಲಿಸಿದ ಪ್ರಧಾನಿ ಮೋದಿ

ಹಲವು ಅವಘಡಗಳು

ಇತ್ತೀಚೆಗಷ್ಟೇ ರಸ್ತೆ ಅಪಘಾತದಲ್ಲಿ ಸ್ವಲ್ಪದರಲ್ಲೇ ಬಚಾವಾಗಿದ್ದ ಶಾಸಕಿ ಲಾಸ್ಯ ನಂದಿತಾ ಅವರನ್ನು ಅವಘಡಗಳು ಕಾಡುತ್ತಿದ್ದವು. ಕಳೆದ ತಿಂಗಳು ಲಿಫ್ಟ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದು ಭಾರಿ ಸುದ್ದಿಯಾಗಿತ್ತು. ಹತ್ತು ದಿನಗಳ ಹಿಂದೆ ಲಾಸ್ಯ ನಂದಿತಾ ಅವರ ಇನ್ನೋವಾ ಕಾರು ಅಪಘಾತಕ್ಕೀಡಾಗಿತ್ತು. ಇದೀಘ ಅವರು ಪ್ರಯಾಣಿಸುತ್ತಿದ್ದ ಡಿವೈಡರ್‌ಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:52 am, Fri, 23 February 24