PM Modi in Varanasi: ತಡರಾತ್ರಿ ವಾರಾಣಸಿಯ ರಸ್ತೆ ಪರಿಶೀಲಿಸಿದ ಪ್ರಧಾನಿ ಮೋದಿ
PM Modi in UP: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ತಡರಾತ್ರಿ ಸ್ವಕ್ಷೇತ್ರ ವಾರಾಣಸಿಯ ಶಿವಪುರ-ಫುಲ್ವಾರಿಯಾ-ಲಹರ್ತಾರಾ ಹೆದ್ದಾರಿಯನ್ನು ಪರಿಶೀಲಿಸಿದರು. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಪ್ರಧಾನಿಗೆ ಸಾಥ್ ನೀಡಿದರು. ಇಂದು (ಶುಕ್ರವಾರ) ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿರುವ ಪ್ರಧಾನಿ ಅನೇಕ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ವಾರಾಣಸಿ, ಫೆಬ್ರವರಿ 23: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗುರುವಾರ ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿ (Varanasi) ತಲುಪಿದ್ದು, ರಾತ್ರಿ 11 ಗಂಟೆ ಸುಮಾರಿಗೆ ಶಿವಪುರ-ಫುಲ್ವಾರಿಯಾ-ಲಹರ್ತಾರಾ ಹೆದ್ದಾರಿಯನ್ನು ಪರಿಶೀಲಿಸಿದರು. ಸುದೀರ್ಘ ಮತ್ತು ಬಿಡುವಿಲ್ಲದ ಗುಜರಾತ್ ಪ್ರವಾಸದ ನಂತರ ವಾರಾಣಸಿಗೆ ಆಗಮಿಸಿದ ಮೋದಿ, ಹೆದ್ದಾರಿಯನ್ನು ಪರಿಶೀಲಿಸಿದರು. ಇತ್ತೀಚೆಗಷ್ಟೇ ಇದು ಉದ್ಘಾಟನೆಗೊಂಡಿತ್ತು. ದಕ್ಷಿಣ ಭಾಗದ ಬಿಹೆಚ್ಯು, ಬಿಎಲ್ಡಬ್ಲ್ಯುವಿನಿಂದ ವಿಮಾನ ನಿಲ್ದಾಣ, ಲಕ್ನೋ, ಆಜಂಗಢ ಮತ್ತು ಘಾಜಿಪುರದ ಕಡೆಗೆ ಹೋಗಲು ಬಯಸುವ ಸುಮಾರು 5 ಲಕ್ಷ ಜನರಿಗೆ ಈ ಹೆದ್ದಾರಿಯಿಂದ ಪ್ರಯೋಜನವಾಗಲಿದೆ ಎನ್ನಲಾಗಿದೆ.
ಈ ಹೆದ್ದಾರಿಯನ್ನು 360 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಸಂಚಾರ ದಟ್ಟಣೆ ಕಡಿಮೆ ಮಾಡಲು ಸಹಕಾರಿಯಾಗಿದೆ. ಅಲ್ಲದೆ, ಬಿಹೆಚ್ಯುನಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣದ ಅವಧಿ 75 ನಿಮಿಷಗಳಿಂದ 45 ನಿಮಿಷಗಳಿಗೆ ಇಳಿಕೆಯಾಗಲಿದೆ. ಅದೇ ರೀತಿ ಲಹರ್ತಾರಾದಿಂದ ಕಚಾರಿಗೆ ತಲುಪುವ ಸಮಯವನ್ನು 30 ನಿಮಿಷದಿಂದ 15 ನಿಮಿಷಕ್ಕೆ ಇಳಿಸಲಿದೆ.
ಪ್ರಧಾನಿ ಮೋದಿ ಎಕ್ಸ್ ಸಂದೇಶ
Upon landing in Kashi, inspected the Shivpur-Phulwaria-Lahartara Marg. This project was inaugurated recently and has been greatly helpful to people in the southern part of the city. pic.twitter.com/9W0YkaBdLX
— Narendra Modi (@narendramodi) February 22, 2024
ಹೆದ್ದಾರಿಯನ್ನು ಪರಿಶೀಲನೆ ನಡೆಸಿದ ಬಗ್ಗೆ ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಹಾಗೂ ಫೋಟೊಗಳನ್ನು ಪ್ರಕಟಿಸಿದ್ದಾರೆ. ಇದೇ ವೇಳೆ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಮೋದಿ ಜತೆ ಇದ್ದರು.
ಪ್ರಧಾನಿ ಮೋದಿಯಿಂದ ಹಲವು ಯೋಜನೆಗಳಿಗೆ ಚಾಲನೆ
ಪ್ರಧಾನಿ ಮೋದಿಯವರು ಇಂದು ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಕಾಶಿ ಹಿಂದೂ ವಿಶ್ವವಿದ್ಯಾನಿಲಯದ ಸ್ವತಂತ್ರತಾ ಭವನದಲ್ಲಿ ಸಂಸದ ಜ್ಞಾನ ಸ್ಪರ್ಧೆ, ಸಂಸದ ಛಾಯಾಗ್ರಹಣ ಸ್ಪರ್ಧೆ ಮತ್ತು ಸಂಸದ ಸಂಸ್ಕೃತ ಸ್ಪರ್ಧೆಯಲ್ಲಿ ಭಾಗವಹಿಸುವವರೊಂದಿಗೆ ಪ್ರಧಾನಮಂತ್ರಿ ಸಂವಾದ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ, ಪ್ರಧಾನಮಂತ್ರಿ ಅವರು ಐವರು ಪ್ರಮುಖರನ್ನು ಗೌರವಿಸಲಿದ್ದಾರೆ.
ಇದನ್ನೂ ಓದಿ: ಜಾಗತಿಕ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ಜನಪ್ರಿಯ ನಾಯಕ: ಜೋ ಬಿಡೆನ್ ಹಿಂದಿಕ್ಕಿದ ನಮೋ
ಮೋದಿ ಅವರು ಬೆಳಗ್ಗೆ 11.15 ರ ಸುಮಾರಿಗೆ ಸಂತ ಗುರು ರವಿದಾಸ್ ಅವರ ಜನ್ಮಸ್ಥಳದಲ್ಲಿ ಪೂಜೆ ಮತ್ತು ದರ್ಶನವನ್ನು ಮಾಡಲಿದ್ದಾರೆ. ಬಳಿಕ ಸಂತ ಗುರು ರವಿದಾಸ್ ಅವರ 647ನೇ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ.
ಬನಾಸ್ ಡೈರಿ ಉದ್ಘಾಟನೆ
ಪ್ರಧಾನಿ ನರೇಂದ್ರ ಮೋದಿ ಅವರು ಅಮುಲ್‌ನ ಅತಿದೊಡ್ಡ ಘಟಕವಾದ ಬನಾಸ್ ಡೈರಿಯನ್ನು ಉದ್ಘಾಟಿಸಲಿದ್ದಾರೆ. ಈ ಯೋಜನೆಯಿಂದ ಸುಮಾರು ಒಂದು ಲಕ್ಷ ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗ ದೊರೆಯಲಿದೆ. ಈ ಡೈರಿ ತೆರೆಯುವುದರೊಂದಿಗೆ ಪೂರ್ವಾಂಚಲದ ರೈತರು ಮತ್ತು ಗೋಪಾಲಕರ ಆದಾಯವೂ ದ್ವಿಗುಣಗೊಳ್ಳಲಿದೆ. ವರ್ಷಾಂತ್ಯದಲ್ಲಿ ಕಂಪನಿಯು ತನ್ನ ಲಾಭಾಂಶದ ಕೆಲವು ಶೇಕಡಾವನ್ನು ಹಾಲು ಉತ್ಪಾದಕರಿಗೆ ಪಾವತಿಸುತ್ತದೆ ಎನ್ನಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:44 am, Fri, 23 February 24