ಹೈದರಾಬಾದ್: ಘಟ್ಕೇಸರದಲ್ಲಿ ಬಿ. ಫಾರ್ಮಾ ವಿದ್ಯಾರ್ಥಿನಿ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಚಕೊಂಡ ಪೊಲೀಸ್ ಕಮೀಷನರ್ ಮಹೇಶ ಭಾಗವತ್, ಬಿ. ಫಾರ್ಮಾ ವಿದ್ಯಾರ್ಥಿನಿ ಅತ್ಯಾಚಾರ ನಡೆದಿಲ್ಲ ಎಂದಿದ್ದಾರೆ. ಈ ಬಗ್ಗೆ ಮಾತಾನಾಡಿದ ರಾಚಕೊಂಡ ಪೊಲೀಸ್ ಕಮೀಷನರ್ ಮಹೇಶ ಭಾಗವತ್, 100 CCTV ಫೂಟೇಜ್ ಪರಿಶೀಲನೆ ಮಾಡಿದ್ದೇವೆ. ಆದರೆ ಕಿಡ್ನ್ಯಾಪ್, ಅತ್ಯಾಚಾರದ ಬಗ್ಗೆ ನಮಗೆ ಯಾವುದೇ ಸಾಕ್ಷ್ಯ ಸಿಕ್ಲಿಲ್ಲ. ಹೀಗಾಗಿ ಅದೊಂದು ಕಟ್ಟುಕಥೆ. ಪ್ರಕರಣದ ಶಂಕಿತರ ಸಂಪೂರ್ಣ ವಿಚಾರಣೆ ನಡೆಸಿದ್ದೇವೆ. ತನಿಖೆಯಲ್ಲೂ ನಮಗೆ ಅತ್ಯಾಚಾರದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದರು.
ಆಟೋ ಚಾಲಕರಿಗೆ ಸಾರಿ ಎಂದ ಪೊಲೀಸ್ ಕಮೀಷನರ್ ಮಹೇಶ ಭಾಗವತ್
ಆಟೋ ಡ್ರೈವರ್ ಗಳ ಮೇಲಿನ ಸಿಟ್ಟಿನಿಂದ ಅವರ ಮೇಲೆ ವಿದ್ಯಾರ್ಥಿನಿ ಸುಳ್ಳು ಆರೋಪ ಮಾಡಿದ್ದಾಳೆ. ವಿದ್ಯಾರ್ಥಿನಿ ಹೇಳಿದ್ದ ಚಾಲಕರು ಈ ಪ್ರಕರಣದಲ್ಲಿ ಯಾವುದೇ ತಪ್ಪು ಮಾಡಿಲ್ಲ ಎಂದು ಕಮೀಷನರ್ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಯುವತಿ ನೀಡಿದ್ದ ದೂರನ್ನು ಆಧರಿಸಿ, ಚಾಲಕರನ್ನು ಕರೆ ತಂದು ವಿಚಾರಣೆ ಮಾಡಿದ್ದಕ್ಕೆ ಚಾಲಕರ ಸಂಘಕ್ಕೆ ಕ್ಷಮೆಯಾಚಿಸುವುದಾಗಿಯೂ ರಾಚಕೊಂಡ ಪೊಲೀಸ್ ಕಮೀಷನರ್ ಹೇಳಿದ್ದಾರೆ. 100 ಪರ್ಸೆಂಟ್ ಸೈಂಟಿಫಿಕ್ ಇಂಟರಾಗೇಶನ್ ಮಾಡಲಾಗಿದೆ. ಗೂಗಲ್ ಮ್ಯಾಪ್ನಲ್ಲಿ ‘ಸಂತ್ರಸ್ತ’ ವಿದ್ಯಾರ್ಥಿನಿಯ ಅಷ್ಟೂ ವಾಕಿಂಗ್ ಅವಧಿ ದಾಖಲಾಗುದೆ. ಕೃತ್ರಿಮ ಘಟನೆ ಹಳೆಯುವುದಕ್ಕಾಗಿಯೇ ಆಕೆ 4 ಕಿ. ಮೀ. ದೂರ ನಡೆದಿದ್ದಾಳೆ. ಆದರೆ ಅದೆಲ್ಲಾ ಸುಳ್ಳು ಸುಳ್ಳೂ ಎಂಬುದು ಹತ್ತಾರು ಸಿಸಿಟಿವಿ ವೀಕ್ಷಣೆಯಿಂದ ಸ್ಪಷ್ಟಪಟ್ಟಿದೆ. ಹಾಗಾಗಿ ಅನುಮಾನದ ಮೇಲೆ ವಶಕ್ಕೆ ತೆಗೆದುಕೊಂಡಿದ್ದ ಆರೋಪಿ ಆಟೋ ಚಾಲಕರಲ್ಲಿ ಪೊಲೀಸ್ ಕಮೀಷನರ್ ಆಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಮಹೇಶ ಭಾಗವತ್ ಹೇಳಿದ್ದಾರೆ.
ಈ ಹಿಂದೆ ಇದೇ ‘ಸಂತ್ರಸ್ತ’ ವಿದ್ಯಾರ್ಥಿನಿ ಸ್ಥಳೀಯ ಆಟೋ ಚಾಲಕರೊಬ್ಬರ ಬಳಿ ಚಿಲ್ಲರೆ ವಿಷಯಕ್ಕಾಗಿ ಚಿಲ್ಲರೆ ಜಗಳ ತೆಗೆದಿದ್ದಳು. ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಪ್ರತೀಕಾರವಾಗಿ ಆ ನಿರ್ದಿಷ್ಟ ಆಟೋ ಚಾಲಕನನ್ನು ಪದೇ ಪದೇ ತೋರಿಸುತ್ತಾ ಆತನೂ ಅಪರಾಧಿ ಎಂದು ಪೊಲೀಸರ ಎದುರು ವಿಚಾರಣೆ ವೇಳೆ ‘ಸಂತ್ರಸ್ತ’ ವಿದ್ಯಾರ್ಥಿನಿ ಹೇಳಿದ್ದಾಗಿ ಮಹೇಶ ಭಾಗವತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇಷ್ಟಕ್ಕೂ ಯಾಕಮ್ಮಾ ಇಂಥಾ ಕೆಲಸ ಮಾಡಿದೆ?
ಗಮನಾರ್ಹ ಸಂಗತಿಯೆಂದರೆ ಪೊಲೀಸ್ ವಿಚಾರಣೆ ವೇಳೆ ಮಹಿಳಾ DCP ಎದುರು ‘ಸಂತ್ರಸ್ತ’ ವಿದ್ಯಾರ್ಥಿನಿಯು ನನ್ನ ಮೇಲೆ ಅತ್ಯಾಚಾರ ನಡೆದಿಲ್ಲ. ಇದೆಲ್ಲಾ ನಾನೇ ಹೆಣೆದಿರುವ ಕಟ್ಟುಕತೆ ಎಂದು ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸ್ ಕಮೀಷನರ್ ಮಹೇಶ ಭಾಗವತ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇಷ್ಟಕ್ಕೂ ಯಾಕಮ್ಮಾ ಇಂಥಾ ಕೆಲಸ ಮಾಡಿದೆ? ವೃಥಾ ಆಟೋ ಚಾಲಕರ ಮೇಲೆ ಆರೋಪ ಹೊರಿಸಿದೆ ಎಂದು ಮಹಿಳಾ DCP ವಿಚಾರಣೆ ವೇಳೆ ‘ಸಂತ್ರಸ್ತ’ ವಿದ್ಯಾರ್ಥಿಯನ್ನು ಕೇಳಲಾಗಿ ನನ್ನ ಕುಟುಂಬದವರು ನನ್ನನ್ನು ಹೊರಗೆ ಬಿಡುತ್ತಿರಲಿಲ್ಲ. ನನಗೆ ಸ್ವಚ್ಚಂದ ಬದುಕು ಬೇಕಿತ್ತು. ಹೀಗೆ ಮಾಡಿದರೆ ಬಿಟ್ಟು ಕಳಿಸುತ್ತಾರೆ ಎಂದು ನಾನೇ ಹೀಗೆ ನಾಟಕ ಮಾಡಿದೆ ಎಂದು ತಪ್ಪೊಪ್ಪಿಕೊಂಡಿದ್ದಾಳೆ!
‘ಸಂತ್ರಸ್ತ’ ವಿದ್ಯಾರ್ಥಿಗೆ ಅಪರಾಧ ಮನೋಭಾವವುಳ್ಳವಳಾಗಿದ್ದು, 6 ತಿಂಗಳ ಹಿಂದೆ ಸಹ ತನ್ನ ಕಿಡ್ನ್ಯಾಪ್ ಕಟ್ಟುಕತೆ ಕಟ್ಟಿದ್ದಳು ಎಂದು ಆಕೆಯ ಸ್ನೇಹಿತೆಯನ್ನು ಕೇಳಿದಾಗ ತಿಳಿದುಬಂದಿದೆ ಎಂದು ಪೊಲೀಸ್ ಕಮೀಷನರ್ ಮಹೇಶ ಭಾಗವತ್ ಹೇಳಿದ್ದಾರೆ.
‘ಕಟ್ಟುಕತೆ’.. ನಿಟ್ಟುಸಿರುಬಿಟ್ಟ ನೂರಾರು ಪೊಲೀಸರು!
ಮೂರು ದಿನಗಳಿಂದ ನಮಗೆ ಯಾರಿಗೂ ನಿದ್ದೆಯೇ ಇಲ್ಲ. ನೂರಾರು ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ಮಂದಿ ಅನ್ನಾಹಾರ ಬಿಟ್ಟು ನಿದ್ದೆಗೆಟ್ಟು ಈ ‘ಕಟ್ಟುಕತೆ’ ಬಗ್ಗೆ ಹೋರಾಡಿದೆವು. ಕೊನೆಗೆ ವಿಷಯ ಏನೆಂಬುದು ಈಗ ರುಜುವಾತಾಗಿದೆ ಎಂದು ಪೊಲೀಸ್ ಕಮೀಷನರ್ ಮಹೇಶ ಭಾಗವತ್ ನಿಟ್ಟುಸಿರುಬಿಟ್ಟಿದ್ದಾರೆ.
ಐ.ಟಿ. ಇನ್ಸ್ಪೆಕ್ಟರ್ ಅವರು ಪ್ರಕರಣವನ್ನು ಕೈಗೆತ್ತಿಕೊಳ್ಳುತ್ತಿದ್ದಂತೇ ಒಂದೆರಡು ನಿಮಿಷದಲ್ಲಿಯೇ.. ಸಾರ್ ಇದೆಲ್ಲಾ ಕಟ್ಟು ಕತೆ. ವೈಜ್ಞಾನಿಕವಾಗಿ ನಾವು ಇದನ್ನು ನಿರೂಪಿಸಬಹುದು. ನೀವು ಚಿಂತೆ ಮಾಡಬೇಡಿ ಎಂದು ಹೇಳಿದ್ದಾಗಿ ಪೊಲೀಸ್ ಕಮೀಷನರ್ ಮಹೇಶ ಭಾಗವತ್ ತಿಳಿಸಿದ್ದಾರೆ. ಈ ಸೂಕ್ಷ್ಮ ಪ್ರಕರಣವನ್ನು ಅಲ್ಪಾವಧಿಯಲ್ಲಿ ಬೇಧಿಸಿದ ನನ್ನ ಅಷ್ಟೂ ಸಿಬ್ಬಂದಿಯನ್ನು ನಾನು ಮನಃಪೂರ್ವಕವಾಗಿ ಅಭಿನಂದಿಸುವೆ. ಅಷ್ಟೇ ಅಲ್ಲ; ಅವರಿಗೆ ಕ್ಯಾಷ್ ಬಹುಮಾನವನ್ನೂ ಘೋಷಿಸುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಕಮೀಷನರ್ ಮಹೇಶ ಭಾಗವತ್ ಪ್ರಕಟಿಸಿದರು.
‘ಸಂತ್ರಸ್ತ’ ವಿದ್ಯಾರ್ಥಿನಿಯು ತಾನು ಕಿಡ್ನ್ಯಾಪ್ ಆಗುವುದಕ್ಕೂ ಮುನ್ನ ಆರಾಮವಾಗಿ ಆಟೋದಲ್ಲಿ ಹುಡುಗನೊಬ್ಬನ ಜೊತೆ ಓಡಾಡಿದ್ದಾಳೆ. ವೈಟ್ ಕಾಲರ್ ಕ್ಲೋಸ್ಡ್ ವೈಟ್ ಆಟೋದಲ್ಲಿ ಇಳಿಯುತ್ತಿದ್ದಂತೆ ತನ್ನ ತಾಯಿಗೆ ಫೋನ್ ಮಾಡಿ.. ಅಮ್ಮಾ ನನ್ನನ್ನು ಕಿಡ್ನ್ಯಾಪ್ ಮಾಡಿಬಿಟ್ಟಿದ್ದಾರೆ. ಕಾಪಾಡು ಎಂದು ಮೊಬೈಲ್ ಮೂಲಕ ಹೇಳುತ್ತಾಳೆ. ಅದಾದಮೇಲೆ ಒಬ್ಬಳೇ ಏನೂ ಆಗಿಯೇ ಇಲ್ಲೆ ಎಂಬಂತೆ ರಸ್ತೆ ಪಕ್ಕದಲ್ಲಿ ನಡೆದುಹೋಗುತ್ತಾಳೆ. ನೀವೂ ನೋಡಿ ಎಂದು ಪೊಲೀಸ್ ಕಮೀಷನರ್ ಮಹೇಶ ಭಾಗವತ್ ಅವರು ಸಿಸಿಟಿವಿ ಫೂಟೇಜ್ ಆಧಾರಿತ 3 ನಿಮಿಷಗಳ ವಿಡಿಯೋವನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು.
ಕೊನೆಗೆ ‘ಬಾಧಿತ’ ಯುವತಿ ತನ್ನ ಮೇಲೆ ಅತ್ಯಾಚಾರವಾಗಿದೆ ಎಂಬುದನ್ನು ನಿರೂಪಿಸಲು ಸ್ವತಃ ತಾನೇ ಮುಳ್ಳು ಪೊದೆಗಳ ಮೇಲೆ ಹೊರಳಾಡಿ ತರಚಿದ ಗಾಯಗಳನ್ನು ಮಾಡಿಕೊಂಡಿದ್ದಳು. ತನ್ನ ಟಾಪ್ ಅನ್ನು ಹರಿದುಕೊಂಡಿದ್ದಳು. ಘಟನೆ ಬಗ್ಗೆ ಮಾಹಿತಿ ಪಡೆದು ಪೊಲೀಸರು ಸ್ಥಳಕ್ಕೆ ಹೋದಾಗ ‘ಬಾಧಿತ’ ಯುವತಿ ಇಂತಹ ದುಃಸ್ಥಿತಿಯಲ್ಲಿ ಪತ್ತೆಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಅತ್ಯಾಚಾರ ಪ್ರಕರಣ?
ಫೆಬ್ರವರಿ 12 ರಂದು ಸಂಜೆ ಮನೆಗೆ ಹೋಗಲು ಯುವತಿ ಆಟೋ ಹತ್ತಿದ್ದಳು. ಆಟೋ ಹತ್ತಿದ ಯುವತಿಯನ್ನು ಮನೆಗೆ ಕರೆದೊಯ್ಯಬೇಕಿದ್ದ ಆಟೋ ಚಾಲಕ ವಿದ್ಯಾರ್ಥಿನಿಯನ್ನು ಓಮ್ನಿಗೆ ಶಿಫ್ಟ್ ಮಾಡಿಕೊಂಡಿದ್ದ. ಬಳಿಕ ತನ್ನ ಮೂವರು ಸಂಗಡಿಗರ ಜೊತೆಗೆ ಯಾನಂಪೇಟೆಯ ನಿರ್ಜನ ಪ್ರದೇಶಕ್ಕೆ ಯುವತಿಯನ್ನು ಕೊಂಡೊಯ್ದು ಅತ್ಯಾಚಾರ ನಡೆಸಿದ್ದ ಎಂಬ ಆರೋಪ ಕೇಳಿಬಂದಿತ್ತು.
ಅಲ್ಲದೆ ಆ ವೇಳೆ ವಿದ್ಯಾರ್ಥಿನಿಯ ಮೇಲೆ ದೊಣ್ಣೆ, ಕಲ್ಲುಗಳಿಂದ ಹಲ್ಲೆ ನಡೆಸಿ. ಬಳಿಕ ನೀಚರು, ನಿರ್ಜನ ಪ್ರದೇಶದಲ್ಲೇ ಆಕೆಯನ್ನ ಬೆತ್ತಲೆಯಾಗಿ ಬಿಟ್ಟು ಪರಾರಿಯಾಗಿದ್ದರು ಎಂದು ಆರೋಪಿಸಲಾಗಿತ್ತು. ಹಾಗೂಹೀಗೂ ಮಾಡಿ ಪೊಲೀಸರು 7.30ರ ಸುಮಾರಿಗೆ ಯುವತಿಯನ್ನ ಪತ್ತೆ ಹಚ್ಚಿ ಹತ್ತಿರದಲ್ಲೇ ಇದ್ದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
Published On - 2:29 pm, Sat, 13 February 21