ಈಗೀಗ ತೃತೀಯಲಿಂಗಿ (Transgender)ಗಳನ್ನು ಭಾರತದಲ್ಲಿ ಸ್ವಲ್ಪಮಟ್ಟಿಗೆ ಒಪ್ಪಿಕೊಳ್ಳಲಾಗುತ್ತಿದೆ. ಹಾಗಾಗಿ ಒಂದೊಂದೇ ಕ್ಷೇತ್ರದಲ್ಲಿ ಅವರೂ ತಮ್ಮ ಚಾಪು ಮೂಡಿಸುತ್ತಿದ್ದಾರೆ. ಸುದ್ದಿ ನಿರೂಪಣೆ, ಕೊವಿಡ್ 19 ನಿರ್ವಹಣಾ ಕೇಂದ್ರಕ್ಕೂ ತೃತೀಯಲಿಂಗಿಗಳು ಕಾಲಿಟ್ಟು, ಸಾಧನೆ ಮಾಡಿದ್ದಾರೆ. ಜನರೂ ಕೂಡ ಒಪ್ಪಿಕೊಂಡಿದ್ದಾರೆ. ಹಾಗೇ ಇದೀಗ ಹೈದರಾಬಾದ್(Hyderabad)ನಲ್ಲಿ ಮೊದಲ ಬಾರಿಗೆ ಎರಡು ತೃತೀಯಲಿಂಗಿಗಳ ಕ್ಲಿನಿಕ್ಗಳು ಸ್ಥಾಪಿತವಾಗಿವೆ. ವಿವಿಧ ಮೆಟ್ರೋ ನಗರಗಳಲ್ಲಿ ತೃತೀಯಲಿಂಗಿಗಳಿಗೆಂದೇ ಪ್ರತ್ಯೇಕವಾಗಿ ಕ್ಲಿನಿಕ್ಗಳನ್ನು ತೆರೆಯಬೇಕು ಎಂಬ ಕೇಂದ್ರ ಸರ್ಕಾರದ ಯೋಜನೆಯ ಭಾಗವಾಗಿ ಹೈದರಾಬಾದ್ನಲ್ಲಿ ಮೊದಲಬಾರಿಗೆ 2 ಕ್ಲಿನಿಕ್ಗಳನ್ನು ಸ್ಥಾಪಿಸಲಾಗಿದ್ದು. ಉಳಿದ ಮೆಟ್ರೋ ನಗರಗಳಲ್ಲೂ ಶೀಘ್ರವೇ ಕ್ಲಿನಿಕ್ಗಳು ನಿರ್ಮಾಣ ಆಗಲಿವೆ.
ತೃತೀಯಲಿಂಗಿಗಳ ಪರ ಹೋರಾಟಗಾರ್ತಿಯಾದ ರಚನಾ ಮುದ್ರಾಬೊಯಿನಾ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಹೈದರಾಬಾದ್ ನಗರದಲ್ಲಿ ತೃತೀಯಲಿಂಗಿಗಳಲ್ಲಿ ಎಚ್ಐವಿ ಸೋಂಕು ಹರಡುವ ಪ್ರಮಾಣ ಹೆಚ್ಚಿರುವ ಕಾರಣ, ಇಲ್ಲಿಯೇ ಮೊದಲು ಕ್ಲಿನಿಕ್ಗಳನ್ನು ತೆರೆಯಲಾಗಿದೆ ಎಂದು ತಿಳಿಸಿದ್ದಾರೆ. ರಾಷ್ಟ್ರೀಯವಾಗಿ ಎಚ್ಐವಿ ಹರಡುವಿಕೆ ಪ್ರಮಾಣ ಸರಾಸರಿ ಶೇ.3.13ರಷ್ಟಿದ್ದು, ಹೈದರಾಬಾದ್ನಲ್ಲಿ ಶೇ.6.47ರಷ್ಟಿದೆ. 2030ರ ಹೊತ್ತಿಗೆ ಏಡ್ಸ್ನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಮಹದುದ್ದೇಶದಿಂದ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯೊಂದಿಗೆ ಸಹಭಾಗಿತ್ವವನ್ನೂ ಹೊಂದಿದೆ. ಅದರಡಿಯಲ್ಲಿ ಹೈದರಾಬಾದ್ನಲ್ಲಿ ಮೊದಲ ಎರಡು ಆಸ್ಪತ್ರೆಗಳು ನಿರ್ಮಾಣವಾಗಿದ್ದು, ಇಲ್ಲಿ ತೃತೀಯ ಲಿಂಗಿಗಳಿಗೆ ಆಂಟಿರೆಟ್ರೋವೈರಲ್ ಥೆರಪಿ (ART) ಚಿಕಿತ್ಸಾ ಸೇವೆಗಳೂ ಲಭ್ಯವಿರುತ್ತದೆ ಎಂದೂ ರಚನಾ ಹೇಳಿದ್ದಾರೆ. ಕೇವಲ ಇಷ್ಟೇ ಅಲ್ಲ, ತೃತೀಯಲಿಂಗಿ ಸಮುದಾಯದ ಒಟ್ಟಾರೆ ಯೋಗಕ್ಷೇಮ, ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಸುಧಾರಣೆಗೂ ಈ ಕ್ಲಿನಿಕ್ ಶ್ರಮಿಸಲಿದೆ ಎಂದಿದ್ದಾರೆ.
ಎರಡು ಕ್ಲಿನಿಕ್ಗಳು ಈಗಾಗಲೇ ಕಾರ್ಯನಿರ್ವಹಣೆ ಶುರು ಮಾಡಿವೆ. ಅದರಲ್ಲಿ ಮೊದಲನೇದು ನಾರಾಯಣಗುಡಾದಲ್ಲಿ ಜನವರಿಗೆ 29ರಂದು ಮತ್ತು ಎರಡನೇಯದು ಜೀಡಿಮೆಟ್ಲಾದಲ್ಲಿ, ಜುಲೈ 11ರಂದು ಉದ್ಘಾಟನೆಯಾಗಿದೆ. ಈ ಕ್ಲಿನಿಕ್ಗಳಲ್ಲಿ ವೈದ್ಯರು, ಕೌನ್ಸಿಲರ್ಗಳು, ಮನಃಶಾಸ್ತ್ರಜ್ಞರೆಲ್ಲ ತೃತೀಯಲಿಂಗಿ ಸಮುದಾಯದವರೇ ಆಗಿದ್ದು, ಹೆಮ್ಮೆಯ ಸಂಗತಿಯೇ ಆಗಿದೆ.
ಇದನ್ನೂ ಓದಿ: ನಿರೀಕ್ಷಿತ ಪ್ರಮಾಣದಲ್ಲಿ ನಡೆಯದ ಲಸಿಕೆ ಅಭಿಯಾನ; ಖಾಸಗಿ ಆಸ್ಪತ್ರೆಗಳ ಶೇ. 25 ರಷ್ಟು ಲಸಿಕೆ ಕೋಟಾ ತಗ್ಗಿಸುವ ಸಾಧ್ಯತೆ
Hyderabad Gets First Two Transgender Clinics