BJP vs TRS: ಬಿಜೆಪಿ, ಟಿಆರ್​ಎಸ್​, ಎಐಎಂಐಎಂ ನಡುವೆ ವಾಗ್ಯುದ್ಧಕ್ಕೆ ತೆಲಂಗಾಣ ವಿಮೋಚನಾ ದಿನದ ನೆಪ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 04, 2022 | 10:39 AM

ತನ್ನ ಘೋಷಣೆಗೆ ವ್ಯತಿರಿಕ್ತವಾಗಿ ತೆಲಂಗಾಣದ ಟಿಆರ್​ಎಸ್ ಎಐಎಂಐಎಂ ವಿನಂತಿ ಒಪ್ಪಿಕೊಂಡಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.

BJP vs TRS: ಬಿಜೆಪಿ, ಟಿಆರ್​ಎಸ್​, ಎಐಎಂಐಎಂ ನಡುವೆ ವಾಗ್ಯುದ್ಧಕ್ಕೆ ತೆಲಂಗಾಣ ವಿಮೋಚನಾ ದಿನದ ನೆಪ
ಟಿಆರ್​ಎಸ್​ ನಾಯಕ ಕೆಟಿಆರ್, ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಮತ್ತು ಬಿಜೆಪಿ ನಾಯಕ ಅಮಿತ್ ಮಾಳವೀಯ
Follow us on

ಹೈದರಾಬಾದ್: ತೆಲಂಗಾಣದಲ್ಲಿ (Telangana) ಶನಿವಾರದಿಂದ ಹೊಸದೊಂದು ಚರ್ಚೆ ಕಾವೇರಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ (BJP), ತೆಲಂಗಾಣದ ಅಡಳಿತಾರೂಢ ಟಿಆರ್​ಎಸ್​ (TRS) ಮತ್ತು ಮುಸ್ಲಿಂ ಸಮುದಾಯದಲ್ಲಿ ವ್ಯಾಪಕ ಬೆಂಬಲ ಪಡೆದಿರುವ ಎಐಎಂಐಎಂ (AIMIM) ನಾಯಕರು ಪರಸ್ಪರ ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಹೋರಾಟಗಾರಿಗೆ ಗೌರವ ಸಲ್ಲಿಸಬೇಕಾದ ಸಂದರ್ಭವೊಂದು ಹೀಗೆ ರಾಜಕಾರಿಣಿಗಳ ಕ್ಷುಲ್ಲಕ ರಾಜಕಾರಣದಿಂದ ಸುದ್ದಿಯಾಗುತ್ತಿದೆ.

ನಿಜಾಮನ ಆಡಳಿತದಲ್ಲಿದ್ದ ಹೈದರಾಬಾದ್ ಸಂಸ್ಥಾನವು ಭಾರತಕ್ಕೆ ಸ್ವಾತಂತ್ರ್ಯ ಬಂದು ಸುಮಾರು 1 ವರ್ಷವಾದ ನಂತರ ಭಾರತ ಒಕ್ಕೂಟದಲ್ಲಿ ವಿಲೀನವಾಯಿತು. ಹೈದರಾಬಾದ್ ಸಂಸ್ಥಾನಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಸೆಪ್ಟೆಂಬರ್ 17, 1948ರಂದು. ಒಂದಿಡೀ ವರ್ಷ ‘ಹೈದರಾಬಾದ್ ವಿಮೋಚನಾ ದಿನ’ದ ಸಂಭ್ರಮ ಆಚರಿಸುವುದಾಗಿ ಬಿಜೆಪಿ ಘೋಷಿಸಿತು. ತೆಲಂಗಾಣ ಸರ್ಕಾರವೂ ಇದೇ ರೀತಿಯ ಕಾರ್ಯಕ್ರಮ ಘೋಷಿಸಿದ್ದಲ್ಲದೆ ಕೇಂದ್ರದ ಕ್ರಮವನ್ನು ಪ್ರಶ್ನಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ತೆಲಂಗಾಣದ ಐಟಿ ಸಚಿವ ಕೆ.ತಾರಕ್ ರಾಮರಾವ್ (ಕೆಟಿಆರ್) ‘ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ನಾಯಕರ ಪೈಕಿ ಎಷ್ಟು ಮಂದಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ತಮ್ಮದಲ್ಲದ ವಿಚಾರಗಳಲ್ಲಿ ಮೂಗು ತೂರಿಸಲು ಇವರಿಗೆ ಹೆಚ್ಚ ಇಷ್ಟವಿದ್ದಂತೆ ಇದೆ’ ಎಂದು ಹರಿಹಾಯ್ದಿರುವ ಕೆಟಿಆರ್ ತಮ್ಮ ತಾತ ಜೆ.ಕೇಶವರಾವ್ ಅವರ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.

‘ಗಾಂಧೀಜಿಯಿಂದ ಸ್ಫೂರ್ತಿ ಪಡೆದ ನನ್ನ ತಾತ ನಿಜಾಮರ ವಿರುದ್ಧ ಹೋರಾಡಿದ್ದರು. 1940ರಲ್ಲಿ ನಡೆದ ತೆಲಂಗಾಣ ದಂಗೆಯಲ್ಲಿ ಸಕ್ರಿಯರಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರಾದ ಅವರನ್ನು ಭಾರತ ಸರ್ಕಾರ ಗೌರವಿಸಿತ್ತು. ನಾನು ಓರ್ವ ಹೆಮ್ಮೆಯ ಭಾರತೀಯ / ತೆಲಂಗಾಣದ ಪ್ರಜೆ. ನಮ್ಮ ಕುಟುಂಬವು ಸಾರ್ವಜನಿಕ ಹಿತಾಸಕ್ತಿಗಾಗಿ ಹೋರಾಟ ಮಾಡಿದ ಇತಿಹಾಸ ಹೊಂದಿದೆ’ ಎಂದು ಅವರು ತಿಳಿಸಿದ್ದರು.

ಕೇಂದ್ರ ಸರ್ಕಾರವು ‘ತೆಲಂಗಾಣ ವಿಮೋಚನಾ ದಿನ’ ಆಚರಿಸುವುದಾಗಿ ಘೋಷಿಸಿದ ನಂತರ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ, ‘ಇದನ್ನು ನಾವು ವಿಮೋಚನಾ ದಿನದ ಬದಲು ಏಕತೆಯ ದಿನವನ್ನಾಗಿ ಆಚರಿಸಬೇಕು’ ಎಂದು ಸಲಹೆ ಮಾಡಿದ್ದರು. ಓವೈಸಿ ಸಲಹೆಯ ನಂತರ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಸೆಪ್ಟೆಂಬರ್ 17ರಿಂದ 20ರವರೆಗೆ ‘ತೆಲಂಗಾಣ ರಾಷ್ಟ್ರೀಯ ಏಕತಾ ದಿನ’ ಆಚರಿಸುವುದಾಗಿ ಘೋಷಿಸಿದ್ದರು.

ತನ್ನ ಘೋಷಣೆಗೆ ವ್ಯತಿರಿಕ್ತವಾಗಿ ತೆಲಂಗಾಣದ ಟಿಆರ್​ಎಸ್ ಎಐಎಂಐಎಂ ವಿನಂತಿ ಒಪ್ಪಿಕೊಂಡಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ‘ಇದು ಭಾರತ ದೇಶ, ಕೆಸಿಆರ್ ಅವರ ತೋಟದ ಮನೆ ಅಲ್ಲ. ರಾಷ್ಟ್ರೀಯ ಏಕತಾ ದಿನದ ಪ್ರಸ್ತಾವ ಒಪ್ಪಿಕೊಳ್ಳಲು ಅಥವಾ ಅನುಮತಿಸಲು ಯಾವುದೇ ಅಧಿಕಾರ ಕೆಸಿಆರ್​ಗೆ ಇಲ್ಲ. ಎಐಎಂಐಎಂ ಪಕ್ಷಕ್ಕೆ ಟಿಆರ್​ಎಸ್​ ಮೇಲೆ ಅಧಿಕಾರ ಇರಬಹುದು, ತೆಲಂಗಾಣದ ಮೇಲೆ ಇಲ್ಲ. ರಜಾಕಾರರು ನಡೆಸಿದ ಹತ್ಯಾಕಾಂಡಗಳ ನೆನಪುಗಳನ್ನು ಅಳಿಸಿ ಹಾಕಲು ನಿಮ್ಮಿಂದ ಸಾಧ್ಯವಿಲ್ಲ. ಇದು ಹೈದರಾಬಾದ್ ವಿಮೋಚನಾ ದಿನವಾಗಿಯೇ ಇರುತ್ತದೆ’ ಎಂದು ಬಿಜೆಪಿ ನಾಯಕ ಅಮಿತ್ ಮಾಳವೀಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Published On - 10:39 am, Sun, 4 September 22