ರತಿಪತಿ ಸುಖ ಕಡ್ಡಾಯ ಎಂದಿದ್ದರು ಬಸವಣ್ಣ: ಪೀಠಾಧಿಪತಿಗಳು ಸಂಸಾರಿಗಳಾಗಿಯೇ ಮಠ ಮುನ್ನೆಡೆಸುವುದು ಸೂಕ್ತ -ರಾಜ್ಯದಲ್ಲಿ ಹೆಚ್ಚಾದ ಚರ್ಚೆ

ಬಸವಣ್ಣನವರ ವಚನಗಳಲ್ಲಿ ರತಿಪತಿ ಸುಖ ಕಡ್ಡಾಯ ಅಂದರೇ, ಮದುವೆ ಕಡ್ಡಾಯ ಎಂದು ಹೇಳಲಾಗಿದೆ ಎಂಬುದನ್ನು ಉಲ್ಲೇಖಿಸುತ್ತಿದ್ದಾರೆ. 12 ನೇ ಶತಮಾನದ ಬಸವಣ್ಣನವರು ಹಾಗೂ ಉಳಿದ ವಚನಕಾರರು ಕೂಡ ಸಂಸಾರಿಗಳಾಗಿದ್ದರು. ಬಸವಣ್ಣ ಕೂಡ ಗಂಗಾಂಬಿಕೆ ಮತ್ತು ನೀಲಾಂಬಿಕೆ ಎಂಬ ಇಬ್ಬರನ್ನು ಮದುವೆಯಾಗಿದ್ದರು.

ರತಿಪತಿ ಸುಖ ಕಡ್ಡಾಯ ಎಂದಿದ್ದರು ಬಸವಣ್ಣ: ಪೀಠಾಧಿಪತಿಗಳು ಸಂಸಾರಿಗಳಾಗಿಯೇ ಮಠ ಮುನ್ನೆಡೆಸುವುದು ಸೂಕ್ತ -ರಾಜ್ಯದಲ್ಲಿ ಹೆಚ್ಚಾದ ಚರ್ಚೆ
ಬಸವಣ್ಣ
Follow us
TV9 Web
| Updated By: ಆಯೇಷಾ ಬಾನು

Updated on:Sep 03, 2022 | 8:52 PM

ಚಿತ್ರದುರ್ಗ: ಜಿಲ್ಲೆಯ ಪ್ರಸಿದ್ದ ಮುರುಘಾ ಮಠದ(Murugha Mutt) ಪೀಠಾಧಿಪತಿ ಶಿವಮೂರ್ತಿ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಕೇಳಿ ಬಂದಿದ್ದು ಪೊಲೀಸರ ವಶದಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ಲಿಂಗಾಯತ ಮಠದ ಪೀಠಾಧಿಪತಿಗಳು ಮದುವೆಯಾಗಿ ಸಂಸಾರಿಗಳಾಗಿಯೇ ಮಠ ಮುನ್ನೆಡೆಸುವುದು ಸೂಕ್ತ ಎಂಬ ಚರ್ಚೆ ಈಗ ಲಿಂಗಾಯತ ಚಿಂತಕರು, ಹಿತೈಷಿಗಳಲ್ಲಿ ನಡೆಯುತ್ತಿದೆ. ಈ ಚರ್ಚೆಗೆ ಬೆಂಬಲವಾಗಿ ಬಸವಣ್ಣನವರ ವಚನಗಳನ್ನು ಉಲ್ಲೇಖಿಸಲಾಗುತ್ತಿದೆ. ಈಗಾಗಲೇ ಕೆಲ ಪೀಠಾಧೀಶರು ಸಂಸಾರಿಗಳಾಗಿಯೇ ಮಠವನ್ನು ಮುನ್ನಡೆಸುತ್ತಿರುವುದನ್ನು ಉದಾಹರಣೆಯಾಗಿ ನೀಡಲಾಗುತ್ತಿದೆ.

ಬಸವಣ್ಣನವರ ವಚನಗಳಲ್ಲಿ ರತಿಪತಿ ಸುಖ ಕಡ್ಡಾಯ ಅಂದರೇ, ಮದುವೆ ಕಡ್ಡಾಯ ಎಂದು ಹೇಳಲಾಗಿದೆ ಎಂಬುದನ್ನು ಉಲ್ಲೇಖಿಸುತ್ತಿದ್ದಾರೆ. 12 ನೇ ಶತಮಾನದ ಬಸವಣ್ಣನವರು ಹಾಗೂ ಉಳಿದ ವಚನಕಾರರು ಕೂಡ ಸಂಸಾರಿಗಳಾಗಿದ್ದರು. ಬಸವಣ್ಣ ಕೂಡ ಗಂಗಾಂಬಿಕೆ ಮತ್ತು ನೀಲಾಂಬಿಕೆ ಎಂಬ ಇಬ್ಬರನ್ನು ಮದುವೆಯಾಗಿದ್ದರು. ಹೀಗಾಗಿಯೇ ಬಸವಣ್ಣ ಹಾಗೂ ಪ್ರಮುಖ ವಚನಕಾರರು ಜನರು ಮದುವೆಯಾಗಬೇಕು. ಮದುವೆಯ ಬಳಿಕವೇ ಮೋಕ್ಷ ಸಿಗಲು ಸಾಧ್ಯ ಎಂದು ಪ್ರತಿಪಾದಿಸಿದ್ದರು. ಆದರೆ, ಈ ಅಂಶವನ್ನು ಪ್ರಚಾರ ಮಾಡದೇ, ಜನರಿಂದ ಮರೆಮಾಚಲಾಗಿದೆ. ಈಗಲೂ ಉತ್ತರ ಕರ್ನಾಟಕ ಭಾಗದಲ್ಲಿ ಬೆರಳೆಣಿಕೆಯ ಮಠಗಳ ಪೀಠಾಧಿಪತಿಗಳು ಸಂಸಾರಿಗಳಾಗಿಯೇ ಮಠವನ್ನು ಮುನ್ನಡೆಸುತ್ತಿದ್ದಾರೆ ಎಂದು ಲಿಂಗಾಯತ ಚಿಂತಕರು ಹೇಳಿದ್ದಾರೆ.

ಲೈಂಗಿಕ ಆಸೆಗಳನ್ನು ಹಿಡಿದಿಟ್ಟುಕೊಂಡರೇ, ಜೈವಿಕ ಸಮಸ್ಯೆಗಳು ಎದುರಾಗುತ್ತಾವೆ ಎಂದು 12ನೇ ಶತಮಾನದ ವಚನಕಾರರೇ ಎಚ್ಚರಿಕೆ ನೀಡಿದ್ದರು ಎಂದು ಲಿಂಗಾಯತ ಚಿಂತಕರು ಹೇಳಿದ್ದಾರೆ. ಉತ್ತರ ಕರ್ನಾಟಕ ಭಾಗದ ಸುಲೇಕಲ್, ಅರಳಹಳ್ಳಿ ಮಠಗಳ ಪೀಠಾಧಿಪತಿಗಳು ಈಗಾಗಲೇ ಮದುವೆಯಾಗಿ ಸಂಸಾರಿಗಳಾಗಿದ್ದಾರೆ. ಮಠದ ಪೀಠಾಧಿಪತಿಗಳು ಈ ರೀತಿಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಿಲುಕಿಕೊಂಡು ಮುಜುಗರ, ಅಪಮಾನ ಎದುರಿಸುವುದಕ್ಕಿಂತ ಮದುವೆಯಾಗಿ ಪೀಠಾಧಿಪತಿಗಳಾಗಿ ಮುಂದುವರಿಯುವ ಬಗ್ಗೆ ಲಿಂಗಾಯತ ಮಠಗಳು ಗಂಭೀರವಾಗಿ ಆಲೋಚನೆ ನಡೆಸಬೇಕು ಎಂದು ಹಿರಿಯ ಲೇಖಕ ಅಲ್ಲಮಪ್ರಭು ಬೆಟ್ಟದೂರು ಹೇಳಿದ್ದಾರೆ.

ಆದರೇ, ಪೀಠಾಧಿಪತಿಗಳು, ಸಂಸಾರಿಗಳಾಗಿ ಮಕ್ಕಳನ್ನು ಪಡೆದ ಬಳಿಕ ಮಠದ ಉತ್ತರಾಧಿಕಾರಿಗಳಾಗಿ ತಮ್ಮ ಮಕ್ಕಳನ್ನು ನೇಮಿಸಬಹುದು. ಇದರಿಂದ ಮಠದ ಉತ್ತರಾಧಿಕಾರಿ ಆಗಿ ಯಾರನ್ನು ನೇಮಿಸಬೇಕು ಎಂಬ ವಿವಾದ, ಜಿಜ್ಞಾಸೆ ತಲೆದೋರಬಹುದು. ಮಠದ ಉತ್ತರಾಧಿಕಾರಿ ಯಾರಾಗಬೇಕು ಎನ್ನುವ ಬಗ್ಗೆ ಸೂಕ್ತ ನಿಯಮ, ಕಾನೂನು ಜಾರಿಗೆ ತರುವುದು ಉತ್ತಮ, ಇದರಿಂದ ಪೀಠಾಧಿಪತಿಗಳ ವಿರುದ್ಧ ಸ್ವಜನಪಕ್ಷಪಾತದ ಆರೋಪ ಬರುವುದನ್ನು ತಪ್ಪಿಸಬಹುದು ಎಂದು ಸಲಹೆ ಕೂಡ ಲಿಂಗಾಯತ ಸಮುದಾಯದಿಂದಲೇ ಕೇಳಿ ಬಂದಿದೆ. ಶರಣ ಪದ್ದತಿಯಲ್ಲಿ ಮಠದ ವ್ಯವಸ್ಥೆ ಬಂದಾಗ, ಪೀಠಾಧಿಪತಿಗಳೇ, ಅವಿವಾಹಿತರಾಗಿ ಇರುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದರು, ಈ ಮೂಲಕ ತಮ್ಮ ವಿರುದ್ಧ ಸ್ವಜನಪಕ್ಷಪಾತದ ಆರೋಪ ಬರದಂತೆ ಎಚ್ಚರ ವಹಿಸಿದ್ದರು. ಆದರೇ, ಈಗ ಬಹಳಷ್ಟು ಲಿಂಗಾಯತ ಮಠಗಳ ಪೀಠಾಧಿಪತಿಗಳು ಮದುವೆಯಾಗಿದ್ದಾರೆ. ತಮ್ಮ ವಂಶಪಾರಂಪರ್ಯ ಉತ್ತರಾಧಿಕಾರಿ ವ್ಯವಸ್ಥೆಯನ್ನು ಪಾಲಿಸಿಕೊಂಡು ಹೋಗುತ್ತಿದ್ದಾರೆ. ಕಲ್ಬುರ್ಗಿಯ ಶರಣ ಬಸವೇಶ್ವರ ಅಪ್ಪ ತಮ್ಮ ಮಗನನ್ನೇ ಮಠದ ಉತ್ತರಾಧಿಕಾರಿಯಾಗಿ ನೇಮಕ ಮಾಡಿದ್ದಾರೆ ಎಂದು ಬಸವಣ್ಣನವರ ವಚನಗಳನ್ನು ಅಧ್ಯಯನ ಮಾಡಿರುವ ಲೇಖಕ, ಚಿಂತಕ ಸರೂಜು ಕಾಟ್ಕರ್ ಹೇಳಿದ್ದಾರೆ.

ಶರಣ ಧರ್ಮದಲ್ಲಿ ಮಠ, ಸ್ವಾಮೀಜಿಗಳ ಪ್ರಸ್ತಾಪವೇ ಇಲ್ಲ!

ಶರಣ ಮೌಲ್ಯ ಆಳವಡಿಸಿಕೊಂಡು ಪಾಲಿಸುವುದು ಮುಖ್ಯ. ಶರಣ ಧರ್ಮದಲ್ಲಿ ಮತೀಯ ವ್ಯವಸ್ಥೆ ಇಲ್ಲ. ಮಹಾಮನೆ ವ್ಯವಸ್ಥೆ ಮಾತ್ರ ಇತ್ತು. ಸ್ವಾಮೀಜಿ ವ್ಯವಸ್ಥೆಯೂ ಇರಲಿಲ್ಲ. ದೇವರು ಮಾತ್ರ ಸ್ವಾಮಿ, ಅರಿವೇ ಗುರು ಎಂದು ವಚನಕಾರರು ಪ್ರತಿಪಾದಿಸಿದ್ದರು. 12ನೇ ಶತಮಾನದಲ್ಲಿ ಬಸವಣ್ಣನವರಾಗಲೀ, ಉಳಿದ ವಚನಕಾರರಾಗಲೀ ಮಠದ ವ್ಯವಸ್ಥೆ ಪ್ರತಿಪಾದಿಸಿರಲಿಲ್ಲ. ಆಗ ಮಠಗಳೂ ಇರಲಿಲ್ಲ. ಈಗಿನ ವಿರಕ್ತ ಮಠಗಳಿಗೂ 12ನೇ ಶತಮಾನಕ್ಕೂ ಯಾವುದೇ ಸಂಬಂಧ ಇಲ್ಲ. 12ನೇ ಶತಮಾನದಲ್ಲಿ ವಿರಕ್ತ ಮಠಗಳೇ ಇರಲಿಲ್ಲ. 16ನೇ ಶತಮಾನದಲ್ಲಿ ವಿರಕ್ತ ಮಠಗಳು ಹುಟ್ಟಿಕೊಂಡವು. ಬಸವ ಧರ್ಮಕ್ಕೂ ಮಠಗಳಿಗೂ, ಸ್ವಾಮೀಜಿಗಳಿಗೂ ಸಂಬಂಧ ಇಲ್ಲ. ವಚನಗಳಲ್ಲಿ ಖಾವಿ ಬಟ್ಟೆಯ ಪ್ರಸ್ತಾಪವೂ ಇಲ್ಲ ಎಂದು ಬಸವಣ್ಣ ವಚನ ಅಧ್ಯಯನ ಮಾಡಿರುವ ರಂಜಾನ್ ದರ್ಗಾ ಹೇಳಿದ್ದಾರೆ. 12ನೇ ಶತಮಾನದ ಶರಣ ಧರ್ಮವನ್ನು ಈಗ ಯಾವ ಮಠಗಳು ಪಾಲಿಸುತ್ತಿಲ್ಲ. ಬಸವಣ್ಣನವರೇ ಎನಗಿಂತ ಕಿರಿಯರಿಲ್ಲ ಎಂದಿದ್ದರು ಎಂದು ಬಸವ ಜ್ಞಾನಿ ಹಾಗೂ ಬಸವಣ್ಣನವರ ವಚನಗಳ ಅಧ್ಯಯನ ಮಾಡಿರುವ ಲೇಖಕ, ಚಿಂತಕ ರಂಜಾನ್ ದರ್ಗಾ ಅವರು ಟಿವಿ9ಗೆ ತಿಳಿಸಿದ್ದಾರೆ.

ಮಠದ ಸಂಸ್ಕೃತಿಯು ಶರಣ ಪದ್ದತಿಯ ಭಾಗವಾಗಿರಲಿಲ್ಲ. ಆದರೇ, 16ನೇ ಶತಮಾನದ ಅಂತ್ಯದಲ್ಲಿ ಯಡಿಯೂರಿನ ತೋಂಟದಾರ್ಯರು ಮಠ ಸಂಸ್ಕೃತಿಯನ್ನು ಪ್ರಾರಂಭಿಸಿದ್ದರು ಎಂದು ಲಿಂಗಾಯತ ಚಿಂತಕ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಎಸ್‌.ಎಂ. ಜಾಮ್ ದಾರ್ ಹೇಳಿದ್ದಾರೆ. ಬಸವಣ್ಣ ಮದುವೆ ಮತ್ತು ಕುಟುಂಬ ಜೀವನದ ಪರವಾಗಿದ್ದರು. ಗಂಡ-ಹೆಂಡತಿ ಜೊತೆಯಾಗಿ ಇರೋದೇ ನಿಜವಾದ ಭಕ್ತಿ ಎಂದು ಬಸವಣ್ಣ ಹೇಳಿದ್ದರು. 12ನೇ ಶತಮಾನದ ಶರಣರ ಪೈಕಿ ಐದಾರು ಮಂದಿ ಮಾತ್ರ ಅವಿವಾಹಿತರಾಗಿದ್ದರು. ಉಳಿದವರೆಲ್ಲಾ ವಿವಾಹಿತರು. ಯಡಿಯೂರಿನ ತೋಂಟದಾರ್ಯರು ಮತ್ತು ಹಿಂಬಾಲಕರು ಮಠ ಪರಂಪರೆಯನ್ನು ಆರಂಭಿಸಿದ್ದರು. ಈ ಮಠಗಳು ಧರ್ಮವನ್ನು ಹರಡುವ ಸೆಂಟರ್ ಗಳಾದವು. ಶರಣರು ಪ್ರತಿಮೆಯನ್ನು ಸ್ಥಾಪಿಸಿ ಪೂಜಿಸಿ, ಆರಾಧಿಸುವುದನ್ನು ವಿರೋಧಿಸಿದ್ದರು. ಆದರೇ, ಈ ಮಠಗಳು ಶರಣರ ಸಂಪ್ರದಾಯಕ್ಕೆ ವಿರುದ್ಧವಾಗಿ ನಡೆದುಕೊಂಡು ಜನರನ್ನು ತಪ್ಪು ದಾರಿಗೆಳೆದವು ಎಂದು ಎಸ್.ಎಂ.ಜಾಮದಾರ್ ಹೇಳಿದ್ದಾರೆ. ಇದು ಗುಂಪುಗಾರಿಕೆಗೆ ಕಾರಣವಾಯಿತು, ವಚನಗಳನ್ನು ಗೌಪ್ಯವಾಗಿ ಇಟ್ಟರು. ಜಂಗಮರನ್ನು ಜಾತಿಯಾಗಿ ಪ್ರವರ್ಧಮಾನಕ್ಕೆ ತಂದರು. ಜಂಗಮರು ಎನ್ನುವುದು 12ನೇ ಶತಮಾನದಲ್ಲಿ ನೈತಿಕತೆಯನ್ನು ಎತ್ತಿ ಹಿಡಿಯುವ ಪದವಾಗಿತ್ತು. ಸನ್ಯಾಸ, ಖಾವಿ ಧರಿಸುವುದು ಶರಣ ಪದ್ದತಿಗೆ ವಿರುದ್ಧವಾದುದು. ಆದರೇ, ಪಟ್ಟಭದ್ರ ಹಿತಾಸಕ್ತಿಗಳು ಇವುಗಳನ್ನು ಮಠ ಸಂಸ್ಕೃತಿಗೆ ಸೇರ್ಪಡೆ ಮಾಡಿವೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ.ಜಾಮದಾರ್ ಹೇಳಿದ್ದಾರೆ.

ಈಗ ಲಿಂಗಾಯತ ಸಮುದಾಯದ ಹಾಗೂ ಬಸವಣ್ಣ ವಚನಗಳನ್ನು ಪಾಲಿಸುತ್ತಿದ್ದ ಚಿತ್ರದುರ್ಗದ ಮುರುಘಾ ಮಠದ ಪೀಠಾಧಿಪತಿಗಳ ವಿರುದ್ಧವೇ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಆರೋಪ ಕೇಳಿ ಬಂದಿದೆ. ಹೀಗಾಗಿ ಲಿಂಗಾಯತ ಮಠ ನಡೆಸುವ ಮಠಾಧೀಶರು ಕೂಡ ಬಸವಣ್ಣನವರ ಜೀವನ ಹಾಗೂ ವಚನಗಳಿಗೆ ಅನುಗುಣವಾಗಿ ಮದುವೆಯಾಗಿ ಸಂಸಾರಿಗಳಾಗಿಯೇ ಮಠವನ್ನು ಮುನ್ನಡೆಸುವುದು ಸೂಕ್ತ ಎಂಬ ಅಭಿಪ್ರಾಯ ಲಿಂಗಾಯತ ಸಮುದಾಯದ ಹಿತಚಿಂತಕರು, ವಿದ್ವಾಂಸರಲ್ಲೇ ನಡೆಯುತ್ತಿದೆ.

ವರದಿ: ಚಂದ್ರಮೋಹನ್, ನ್ಯಾಷನಲ್ ಬ್ಯೂರೋ

Published On - 6:54 pm, Sat, 3 September 22