ಭಾರತೀಯ ಜಿನೋಮ್ ಡಾಟಾಬೇಸ್, ಐಬಿಡಿಸಿ ಪೋರ್ಟಲ್ ಆರಂಭ; ಬಯೋಟೆಕ್ ಸೂಪರ್​ಪವರ್ ದೇಶವಾಗುವತ್ತ ಭಾರತದ ಹೆಜ್ಜೆ

Indian genome database and IBDC portal: ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 9ರಂದು 10,000 ಭಾರತೀಯರ ಜಿನೋಮ್ ಸೀಕ್ವೆನ್ಸಿಂಗ್ ಡಾಟಾವನ್ನು ಅನಾವರಣಗೊಳಿಸಿದ್ದಾರೆ. ಈ ಡಾಟಾಬೇಸ್ ಹೊಂದಿರುವ ಐಬಿಡಿಸಿ ಪೋರ್ಟಲ್ ಅನ್ನೂ ಆರಂಭಿಸಲಾಗಿದೆ. ಭಾರತೀಯ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಇದು ಹೊಸ ಮೈಲಿಗಲ್ಲಾಗಿದೆ. ಭಾರತ ಬಯೋಟೆಕ್ ಸೂಪರ್ ಪವರ್ ದೇಶವಾಗಲು ಇದು ತಳಹದಿ ಎನಿಸಿದೆ.

ಭಾರತೀಯ ಜಿನೋಮ್ ಡಾಟಾಬೇಸ್, ಐಬಿಡಿಸಿ ಪೋರ್ಟಲ್ ಆರಂಭ; ಬಯೋಟೆಕ್ ಸೂಪರ್​ಪವರ್ ದೇಶವಾಗುವತ್ತ ಭಾರತದ ಹೆಜ್ಜೆ
ಜಿನೋಮ್ ಡಾಟಾಬೇಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 22, 2025 | 3:49 PM

ನವದೆಹಲಿ, ಜನವರಿ 22: ಭಾರತ ಜೈವಿಕ ತಂತ್ರಜ್ಞಾನದಲ್ಲಿ ಗಮನಾರ್ಹ ಹೆಜ್ಜೆಗಳನ್ನು ಇರಿಸುತ್ತಿದೆ. ಈ ಕ್ಷೇತ್ರದಲ್ಲಿ ಭಾರತೀಯರು ನಾವೀನ್ಯತೆ ತೋರುವಲ್ಲಿ ಸಫಲರಾಗುತ್ತಿದ್ದಾರೆ. ತಂತ್ರಜ್ಞಾನ ಅಭಿವೃದ್ಧಿ ಸ್ಥಿರವಾಗಿ ಮುಂದುವರಿಯುತ್ತಿದೆ. ಈ ಮಧ್ಯೆ ಭಾರತದಲ್ಲಿ ಬಯೋಟೆಕ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆಗಳನ್ನು ಇಡಲಾಗಿದೆ. ಬೃಹತ್ತಾದ ಜಿನೋಮ್ ಡಾಟಾಬೇಸ್ ಪ್ರಾಜೆಕ್ಟ್ ಅನ್ನು ಆರಂಭಿಸಲಾಗಿದೆ. ಈ ಡಾಟಾವನ್ನು ಪೋರ್ಟಲ್​ವೊಂದರಲ್ಲಿ ಜೋಡಿಸಲಾಗುತ್ತಿದೆ. ಈ ಐಬಿಡಿಸಿ ಪೋರ್ಟಲ್ ಅನ್ನೂ ಬಿಡುಗಡೆ ಮಾಡಲಾಗಿದೆ. ಇತ್ತೀಚೆಗೆ ಈ ಎರಡು ವಿಶೇಷ ಕಾರ್ಯಗಳು ಭಾರತೀಯ ಜೈವಿಕ ತಂತ್ರಜ್ಞಾನ ಕ್ಷೇತ್ರದತ್ತ ವಿಶ್ವದ ಗಮನ ನೆಡುವಂತೆ ಮಾಡಿವೆ.

ಜಿನೋಮ್ ಡಾಟಾಬೇಸ್ ಪ್ರಾಜೆಕ್ಟ್​ನಲ್ಲಿ ಭಾರತೀಯರ ಜಿನೋಮ್ ಸೀಕ್ವೆನ್ಸಿಂಗ್ ಡೇಟಾ ರೂಪಿಸಲಾಗುತ್ತಿದೆ. ಜನವರಿ 9ರಂದು ಪ್ರಧಾನಿ ನರೇಂದ್ರ ಮೋದಿ ಅವರು 10,000 ಭಾರತೀಯರ ಜಿನೋಮ್ ಸೀಕ್ವೆನ್ಸಿಂಗ್ ಡಾಟಾವನ್ನು ಬಿಡುಗಡೆ ಮಾಡಿದರು.

ಜೈವಿಕ ತಂತ್ರಜ್ಞಾನ ಇಲಾಖೆ ಆಯೋಜಿಸಿದ ಜಿನೋಮಿಕ್ಸ್ ಡಾಟಾ ಕಾಂಕ್ಲೇವ್ ಕಾರ್ಯಕ್ರಮದಲ್ಲಿ ಡಾಟಾ ಅನಾವರಣೆ ಮಾಡಲಾಯಿತು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನರ ಅನುವಂಶಿಕ ಹರಿವಿನ ದತ್ತಾಂಶವನ್ನು ಸಂಗ್ರಹಿಸಿದ ದೇಶಗಳ ಸಂಖ್ಯೆ ಬಹಳ ಕಡಿಮೆ. ಈ ಅಪರೂಪ ದೇಶಗಳ ಸಾಲಿಗೆ ಭಾರತ ಸೇರ್ಪಡೆಯಾಗಿದೆ. ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ, ಜಪಾನ್ ಮತ್ತು ಚೀನಾ ದೇಶದ ವಿಜ್ಞಾನಿಗಳು ಜೊತೆಗೂಡಿ ಮನುಷ್ಯರ ಜಿನೋಮ್ ಸೀಕ್ವೆನ್ಸಿಂಗ್ ಯೋಜನೆಯನ್ನು ನಡೆಸಿದ್ದಾರೆ. ಭಾರತ ಸ್ವತಂತ್ರವಾಗಿ ಈ ಕ್ಷೇತ್ರದಲ್ಲಿ ಅಡಿ ಇಡುತ್ತಿದೆ.

ಇದನ್ನೂ ಓದಿ: ರೈತರ ಬದುಕು ಹಸನಾಗಲು ನೆರವಾಗುತ್ತಾ ಈ ಬಾರಿಯ ಬಜೆಟ್; ಏನಿವೆ ಕೃಷಿ ಕ್ಷೇತ್ರದ ನಿರೀಕ್ಷೆಗಳು?

ಇನ್ನು, ಈ ಜಿನೋಮ್ ದತ್ತಾಂಶವನ್ನು ಇಂಡಿಯನ್ ಬಯೋಲಾಜಿಕಲ್ ಡಾಟಾ ಸೆಂಟರ್​​ನಲ್ಲಿ (ಐಬಿಡಿಸಿ) ಸೇರಿಸಲಾಗುತ್ತಿದೆ. ವಿಶೇಷ ಪೋರ್ಟಲ್ ರೂಪಿಸಿದ್ದು, ಇದನ್ನು ವಿಶೇಷ ಅನುಮತಿಗಳೊಂದಿಗೆ ವಿಜ್ಞಾನಿಗಳು, ವೈದ್ಯರು ಪಡೆಯಬಹುದಾಗಿದೆ.

ಜಿನೋಮ್ ಡಾಟಾ ಯಾಕೆ ಮುಖ್ಯ ಗೊತ್ತಾ?

ಬಯೋಟೆಕ್ನಾಲಜಿ ಕ್ಷೇತ್ರಕ್ಕೆ ಈ ಜಿನೋಮಿಕ್ಸ್ ಡಾಟಾ ಬಹಳ ಮುಖ್ಯ. ಭಾರತೀಯರ ವಂಶವಾಹಿಗಳ ಕುರಿತ ಈ ಮಾಹಿತಿಯನ್ನು ಬಳಸಿ ಹಲವು ರೋಗಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಲು ಸಾಧ್ಯ. ರೋಗಕ್ಕೆ ಚಿಕಿತ್ಸೆ ನೀಡುವುದು ಮಾತ್ರವಲ್ಲ, ಒಬ್ಬ ವ್ಯಕ್ತಿಗೆ ಮುಂಬರುವ ಸಾಧ್ಯತೆ ಇರುವ ರೋಗವನ್ನು ಈಗಲೇ ತಡೆಗಟ್ಟಲು ಅವಕಾಶ ಸಿಗುತ್ತದೆ. ಒಬ್ಬ ವ್ಯಕ್ತಿಯ ಜೀನ್ ಮೂಲಕವೇ ಆತನ ಅನಾರೋಗ್ಯದ ನಿವಾರಣೆ ಮಾಡಬಲ್ಲಂತಹ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಲು ಸಾಧ್ಯವಾಗುತ್ತದೆ. ಇದಷ್ಟೇ ಅಲ್ಲ, ಇನ್ನೂ ಹಲವು ಹೊಸ ಆವಿಷ್ಕಾರ, ಸಂಶೋಧನೆಗಳಿಗೆ ಈ ಜಿನೋಮ್ ಸೀಕ್ವೆನ್ಸಿಂಗ್ ಡಾಟಾ ಸಹಾಯವಾಗಬಲ್ಲುದು.

ಇದನ್ನೂ ಓದಿ: ಚನ್ನಪಟ್ಟಣದ ಬೊಂಬೆಗಳಂತೆ ವಿಶೇಷ ಈ ಏಟಿಕೊಪ್ಪಕ ಆಟಿಕೆ; ಪ್ರಧಾನಿ ಪ್ರಶಂಸೆ ಬಳಿಕ ಮರುಜೀವ ಪಡೆದ ಈ ಬೊಂಬೆ ಕಲೆ

ಈ ಕಾರಣಕ್ಕೆ ಈ ಪ್ರಾಜೆಕ್ಟ್ ಅನ್ನು ಭಾರತದ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಎಂದು ಬಣ್ಣಿಸಲಾಗುತ್ತಿದೆ. ಭಾರತೀಯರ ಜೀನೋಮ್ ಡಾಟಾ ಯಾವುದೋ ವಿದೇಶೀ ಕಂಪನಿಗಳ ಕೈಗೆ ಹೋಗುವುದರ ಬದಲು ಭಾರತೀಯರೇ ಇದನ್ನು ಇಟ್ಟುಕೊಂಡು ನಿರ್ವಹಣೆ ಮಾಡಬಹುದು. ಹೊಸ ಸಂಶೋಧನೆಗಳಿಗೆ ಭಾರತವೇ ಅಡ್ಡೆಯಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ