ದ್ರೋಹ, ಅವಮಾನ ಅನುಭವಿಸಿದೆ: ದೆಹಲಿ ಬಂಗಲೆಯಿಂದ ಹೊರಹಾಕಿದ ರೀತಿ ಬಗ್ಗೆ ಬೇಸರ ವ್ಯಕ್ತಪಡಿಸಿದ ಚಿರಾಗ್ ಪಾಸ್ವಾನ್

Chirag Paswan ತೆರವು ಮಾಡಲು ಮಾರ್ಚ್ 20 ಗಡುವು ಇದ್ದಾಗ, ಹಿಂದಿನ ದಿನ ಹೊರಡಲು ನಾನು ಸಿದ್ಧನಾಗಿದ್ದೆ. ನಾನು ಹೊರಡುತ್ತಿದ್ದೆ. ಮನೆಯಿಂದ ಹೊರಗೆ ಹೋಗದಂತೆ ತಡೆದು ಆಶ್ವಾಸನೆ ಕೊಟ್ಟಿದ್ದೇಕೆ ಎಂದು ಗೊತ್ತಾಗುತ್ತಿಲ್ಲ ಎಂದಿದ್ದಾರೆ ಚಿರಾಗ್.

ದ್ರೋಹ, ಅವಮಾನ ಅನುಭವಿಸಿದೆ: ದೆಹಲಿ ಬಂಗಲೆಯಿಂದ ಹೊರಹಾಕಿದ ರೀತಿ ಬಗ್ಗೆ ಬೇಸರ  ವ್ಯಕ್ತಪಡಿಸಿದ ಚಿರಾಗ್ ಪಾಸ್ವಾನ್
ಚಿರಾಗ್ ಪಾಸ್ವಾನ್
Updated By: ರಶ್ಮಿ ಕಲ್ಲಕಟ್ಟ

Updated on: Apr 05, 2022 | 7:14 PM

ದೆಹಲಿ: ಕಳೆದ ವಾರ ತನ್ನ ತಂದೆ ಕೇಂದ್ರ ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌ಗೆ (Ram Vilas Paswan) ಮಂಜೂರಾಗಿದ್ದ ಸರ್ಕಾರಿ ಬಂಗಲೆಯಿಂದ ಹೊರಹಾಕಲ್ಪಟ್ಟ ಚಿರಾಗ್ ಪಾಸ್ವಾನ್ (Chirag Paswan), ತನ್ನ ಕುಟುಂಬವನ್ನು ಹೊರಹಾಕಿದ ರೀತಿಯಲ್ಲಿ ದ್ರೋಹ, ಅವಮಾನವನ್ನು ಅನುಭವಿಸಿದೆ ಎಂದಿದ್ದಾರೆ.  “ಧೋಖಾ ಹುವಾ ಹೈ (ಇದು ದ್ರೋಹ), ಎಂದು ಎನ್​​ಡಿಟಿವಿ ಜತೆ ಮಾತನಾಡಿದ ಚಿರಾಗ್ ಪಾಸ್ವಾನ್ ಹೇಳಿದರು . ರಾಮ್ ವಿಲಾಸ್ ಪಾಸ್ವಾನ್ ಅವರ ಮರಣದ ನಂತರ ಅವರ ಕುಟುಂಬವು ಇನ್ನು ಮುಂದೆ 12, ಜನಪಥ್ ಬಂಗಲೆಯಲ್ಲಿ ಇರುವುದಕ್ಕೆ ಅರ್ಹವಾಗಿಲ್ಲದ ಕಾರಣ ಅದನ್ನು ಖಾಲಿ ಮಾಡಲು ಸಿದ್ಧವಾಗಿದೆ ಎಂದು ಲೋಕ ಜನಶಕ್ತಿ ಪಾರ್ಟಿ (LJP) ಸಂಸದ ಹೇಳಿದರು. “ಸರ್ಕಾರಕ್ಕೆ ಸೇರಿದ ಯಾವುದೂ ಶಾಶ್ವತವಾಗಿರಲು ಸಾಧ್ಯವಿಲ್ಲ ಮತ್ತು ಅದನ್ನು ನಾವು ಎಂದಿಗೂ ಹೇಳಿಕೊಳ್ಳುವುದಿಲ್ಲ. ಇಷ್ಟು ವರ್ಷಗಳ ಕಾಲ ಇಲ್ಲಿ ಉಳಿಯಲು ನಾನು  ಅದೃಷ್ಟಶಾಲಿಯಾಗಿದ್ದೆ. ನನ್ನ ತಂದೆ ಇಲ್ಲಿ ಸುದೀರ್ಘ ಇನ್ನಿಂಗ್ಸ್ ಆಡಿದರು. ಈ ಮನೆ ಪ್ರಾಯೋಗಿಕವಾಗಿ ಸಾಮಾಜಿಕ ನ್ಯಾಯದ ಚಳುವಳಿಯ ಜನ್ಮಸ್ಥಳವಾಗಿದೆ ಎಂದು ಚಿರಾಗ್ ಪಾಸ್ವಾನ್ ಹೇಳಿದರು. “ಲಾಕ್‌ಡೌನ್ ಸಮಯದಲ್ಲಿ ನನ್ನ ತಂದೆ ಆ ಮನೆಯಿಂದ ರಸ್ತೆಯಲ್ಲಿರುವ ವಲಸಿಗರನ್ನು ನೋಡುತ್ತಿದ್ದರು ಮತ್ತು ಅವರ ಬಗ್ಗೆ ಚಿಂತಿಸುತ್ತಿದ್ದರು. ಅವರು ತಮ್ಮ ಕಳವಳವನ್ನು ವ್ಯಕ್ತಪಡಿಸಲು ಪ್ರಧಾನಿಗೆ ಕರೆ ಮಾಡಿದರು. ಮನೆ ಕಳೆದುಕೊಂಡ ಬಗ್ಗೆ ನನಗೆ ಬೇಸರವಿಲ್ಲ. ಎಂದಾದರೂ ಹೋಗುತ್ತಿತ್ತು. ಅದನ್ನು ಮಾಡಿದ ರೀತಿಯನ್ನು ನಾನು ವಿರೋಧಿಸುತ್ತೇನೆ ಎಂದು ಅವರು ಹೇಳಿದ್ದರು. ತೆರವು ಮಾಡಲು ಮಾರ್ಚ್ 20 ಗಡುವು ಇದ್ದಾಗ, ಹಿಂದಿನ ದಿನ ಹೊರಡಲು ನಾನು ಸಿದ್ಧನಾಗಿದ್ದೆ. ನಾನು ಹೊರಡುತ್ತಿದ್ದೆ. ಮನೆಯಿಂದ ಹೊರಗೆ ಹೋಗದಂತೆ ತಡೆದು ಆಶ್ವಾಸನೆ ಕೊಟ್ಟಿದ್ದೇಕೆ ಎಂದು ಗೊತ್ತಾಗುತ್ತಿಲ್ಲ ಎಂದಿದ್ದಾರೆ ಚಿರಾಗ್.

ತೆರವುಗೊಳಿಸಿದ ಚಿತ್ರಗಳು ಪಾಸ್ವಾನ್ ಕುಟುಂಬದ ವಸ್ತುಗಳನ್ನು ರಸ್ತೆಯ ದೊಡ್ಡ ರಾಶಿಗಳಲ್ಲಿ ಬಿದ್ದಿರುವುದನ್ನು ತೋರಿಸಿವೆ. ರಾಮ್ ವಿಲಾಸ್ ಪಾಸ್ವಾನ್ ಅವರ ಫೋಟೋಗಳನ್ನು ಅವುಗಳ ಮೇಲೆ ಇರಿಸಲಾಗಿದೆ. “ಅವರು ನನ್ನ ತಂದೆಯ ಫೋಟೋವನ್ನು ಎಸೆದರು. ನಮ್ಮಿಷ್ಟದ ಫೋಟೊಗಳವು. ಅವರು ಚಪ್ಪಲಿ ಹಾಕಿ ಫೋಟೋಗಳ ಮೇಲೆ ನಡೆದರು. ಅವರು ಹಾಸಿಗೆಗಳ ಮೇಲೆ ಚಪ್ಪಲಿ ಧರಿಸಿ ಓಡಾಡಿದರು ಎಂದಿದ್ದಾರೆ ಚಿರಾಗ್ ಪಾಸ್ವಾನ್.

“ಈ ವರ್ಷ ನೀವು ಪದ್ಮಭೂಷಣ ನೀಡಿದ ವ್ಯಕ್ತಿಗೆ ಈ ರೀತಿಯ ಅವಮಾನ ಮಾಡುತ್ತೀರಾ. ನೀವು ಅವರ ಸ್ಮರಣೆಯನ್ನು ಅವಮಾನಿಸುತ್ತಿದ್ದೀರಿ ಎಂದು ಚಿರಾಗ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಶ್ರೀರಾಮನಿಗೆ ನೀವು “ಹನುಮಾನ್” ಎಂಬಂತೆ ನೀವು ಭಾವಿಸುವುದನ್ನು ಮುಂದುವರಿಸುತ್ತೀರಾ ಎಂಬ ಪ್ರಶ್ನೆಗೆ ಪಾಸ್ವಾನ್, “ಕಳೆದ ಒಂದೂವರೆ ವರ್ಷಗಳಲ್ಲಿ ನಾನು ನನ್ನದೇ ಆದ ಹಾದಿಯಲ್ಲಿದ್ದೇನೆ, ಪರಸ್ಪರ ಗೌರವ ಇಲ್ಲದಿರುವಲ್ಲಿ ಮೈತ್ರಿಯಿಂದ ಯಾವುದೇ ಅರ್ಥವಿಲ್ಲ ಎಂದಿದ್ದಾರೆ.
ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ಭಾಗವಾಗಿದ್ದ ಪಾಸ್ವಾನ್, 2020 ರ ಬಿಹಾರ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ ವಿಫಲರಾದರು. ಕಳೆದ ವರ್ಷ, ಅವರ ಚಿಕ್ಕಪ್ಪ ಪಶುಪತಿ ಪರಾಸ್ ಅವರು ಬೇರ್ಪಟ್ಟು ತಮ್ಮದೇ ಆದ ಪಕ್ಷವನ್ನು ರಚಿಸಿದರು. “ಅವರು ಮೊದಲು ನನ್ನ ಕುಟುಂಬವನ್ನು ವಿಭಜಿಸಿದರು. ಅವರು ನನ್ನನ್ನು ನನ್ನ ಸ್ವಂತ ಪಕ್ಷದಿಂದ ಹೊರಹಾಕಿದರು, ನಂತರ ಮನೆ. ಆದರೆ ನಾನು ಹುಲಿಯ ಮಗ, ನಾನು ನನ್ನ ‘ಬಿಹಾರ ಮೊದಲು, ಬಿಹಾರಿ ಮೊದಲು’ ಮಿಷನ್ ಗಾಗಿ ಕೆಲಸ ಮಾಡುತ್ತೇನೆ. ನಾನು ಹೆಚ್ಚಿನ ಸ್ಪಷ್ಟತೆಯೊಂದಿಗೆ ಕೆಲಸ ಮಾಡುತ್ತೇನೆ” ಎಂದು ಅವರು ಹೇಳಿದರು. ಆದಾಗ್ಯೂ ಪ್ರಧಾನಿ ಮೋದಿ ಅವರೊಂದಿಗಿನ ಸಂಬಂಧದ ಸ್ಥಿತಿಯ ಬಗ್ಗೆ ಮಾತನಾಡಲು ಚಿರಾಗ್ ನಿರಾಕರಿಸಿದರು.

ಇದನ್ನೂ ಓದಿ: ಸುಳ್ಳು ಸುದ್ದಿಗಳ ಮೇಲೆ ಸರ್ಕಾರದ ಪ್ರಹಾರ; ಪಾಕಿಸ್ತಾನ ಮೂಲದ 4 ಯೂಟ್ಯೂಬ್ ಸೇರಿದಂತೆ 22 ಯೂಟ್ಯೂಬ್ ಚಾನೆಲ್​​ಗಳಿಗೆ ನಿರ್ಬಂಧ