ಕಾದು ಸುಸ್ತಾಗಿದೆ: ಟ್ವೀಟ್ ಮೂಲಕ ಅತೃಪ್ತಿ ಹೊರಹಾಕಿದ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಪುತ್ರ
ಫೈಸಲ್ ಪಟೇಲ್ ಅವರ ತವರು ರಾಜ್ಯವಾದ ಗುಜರಾತ್‌ನಲ್ಲಿ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿರುವ ಮುನ್ನ ಅವರು ಬೇರೆ ಪಕ್ಷದಲ್ಲಿ ರಾಜಕೀಯ ಪಾದಾರ್ಪಣೆ ಮಾಡಲಿದ್ದಾರೆಯೇ ಎಂಬುದರ ಬಗ್ಗೆ ಈ ಟ್ವೀಟ್ ಚರ್ಚೆ ಹುಟ್ಟು ಹಾಕಿದೆ.
ದೆಹಲಿ: ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ (Ahmed Patel) ಅವರ ಪುತ್ರ ಫೈಸಲ್ ಪಟೇಲ್ (Faisal Patel) ಅವರು ಮಂಗಳವಾರ ತಮ್ಮದೇ ದಾರಿಯಲ್ಲಿ ಹೋಗುವ ಸಾಧ್ಯತೆ ಬಗ್ಗೆ ದೊಡ್ಡ ಸುಳಿವು ಬಿಟ್ಟುಕೊಟ್ಟಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರ ಆಪ್ತ ಸಹಾಯಕ ಮತ್ತು ಅವರ ರಾಜಕೀಯ ಕಾರ್ಯದರ್ಶಿ ಆಗಿದ್ದ ಅಹ್ಮದ್ ಪಟೇಲ್ 2020 ರಲ್ಲಿ ನಿಧನ ಹೊಂದಿದ್ದರು. 41 ವರ್ಷದ ಫೈಸಲ್ ಪಟೇಲ್ ಅವರು ಔಪಚಾರಿಕವಾಗಿ ಕಾಂಗ್ರೆಸ್ ಸೇರುವ ಬಗ್ಗೆ ಖಚಿತವಾಗಿಲ್ಲ ಎಂದು ಇತ್ತೀಚೆಗೆ ಹೇಳಿದ್ದರು. ” ಕಾದು ಸುಸ್ತಾಗಿದ್ದೇನೆ. ಉನ್ನತ ಅಧಿಕಾರಿಗಳಿಂದ ಯಾವುದೇ ಪ್ರೋತ್ಸಾಹವಿಲ್ಲ. ನನ್ನ ಆಯ್ಕೆಗಳನ್ನು ತೆರೆದಿಟ್ಟುಕೊಳ್ಳುತ್ತಿದ್ದೇನೆ” ಎಂದು ಅವರು ಇಂದು ಟ್ವೀಟ್ ಮಾಡಿದ್ದಾರೆ. ಫೈಸಲ್ ಪಟೇಲ್ ಅವರ ತವರು ರಾಜ್ಯವಾದ ಗುಜರಾತ್‌ನಲ್ಲಿ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿರುವ ಮುನ್ನ ಅವರು ಬೇರೆ ಪಕ್ಷದಲ್ಲಿ ರಾಜಕೀಯ ಪಾದಾರ್ಪಣೆ ಮಾಡಲಿದ್ದಾರೆಯೇ ಎಂಬುದರ ಬಗ್ಗೆ ಈ ಟ್ವೀಟ್ ಚರ್ಚೆ ಹುಟ್ಟು ಹಾಕಿದೆ. ಗುಜರಾತಿನ ಕೆಲವು ಭಾಗಗಳಲ್ಲಿ ಪ್ರವಾಸ ಮಾಡುವುದಾಗಿಯೂ ಅವರ ಟ್ವೀಟ್ ಮಾಡಿದ್ದರು. “ಏಪ್ರಿಲ್ 1 ರಿಂದ ನಾನು ಭರೂಚ್ ಮತ್ತು ನರ್ಮದಾ ಜಿಲ್ಲೆಗಳ 7 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿದ್ದೇನೆ. ನನ್ನ ತಂಡವು ಪ್ರಸ್ತುತ ರಾಜಕೀಯ ಪರಿಸ್ಥಿತಿಯ ವಾಸ್ತವತೆಯನ್ನು ಮೌಲ್ಯಮಾಪನ ಮಾಡುತ್ತದೆ. ನಮ್ಮ ಪ್ರಮುಖ ಗುರಿಯನ್ನು ಸಾಧಿಸಲು ಅಗತ್ಯವಿದ್ದರೆ ಪ್ರಮುಖ ಬದಲಾವಣೆಗಳನ್ನು ಮಾಡುತ್ತದೆ. ದೇವರು ಒಪ್ಪಿದರೆ ಎಲ್ಲಾ 7 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಅವರು ಮಾರ್ಚ್ 27 ರಂದು ಟ್ವೀಟ್ ಮಾಡಿದ್ದರು.
ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರೊಂದಿಗಿನ ಅವರ ಇತ್ತೀಚಿನ ಭೇಟಿಯು ಊಹಾಪೋಹವನ್ನು ತೀವ್ರಗೊಳಿಸಿದೆ. ಎಎಪಿ ಗುಜರಾತ್‌ನಲ್ಲಿ ಕಾಲಿಡಲು ಪ್ರಯತ್ನಿಸುತ್ತಿದೆ.
Tired of waiting around. No encouragement from the top brass. Keeping my options open
— Faisal Patel (@mfaisalpatel) April 5, 2022
ಗುಜರಾತ್‌ನ ರಾಜ್ಯಸಭಾ ಸದಸ್ಯರಾದ ಅಹ್ಮದ್ ಪಟೇಲ್ ಅವರು ಕಾಂಗ್ರೆಸ್‌ನ ಟ್ರಬಲ್ ಶೂಟರ್‌ಗಳಲ್ಲಿ ಒಬ್ಬರು ಮತ್ತು ಗಾಂಧಿ ಕುಟುಂಬದ ಆಪ್ತರಾಗಿದ್ದರು. ಅವರು ಕೊವಿಡ್ನಿಂದ ನಿಧನರಾಗಿದ್ದರು. ಅವರ ಪುತ್ರ ಫೈಸಲ್ ಅವರ ಟ್ವೀಟ್ ಪಕ್ಷದಲ್ಲಿನ ಸಾಮಾನ್ಯ ಅಸಮಾಧಾನ ಮತ್ತು ಅಲೆಯನ್ನು ಪ್ರತಿಬಿಂಬಿಸಿದೆ.
ಕಳೆದ ಎರಡು ವರ್ಷಗಳಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ, ಜಿತಿನ್ ಪ್ರಸಾದ, ಅಶ್ವನಿ ಕುಮಾರ್ ಮತ್ತು ಆರ್‌ಪಿಎನ್ ಸಿಂಗ್ ಸೇರಿದಂತೆ ಹಲವಾರು ನಾಯಕರು ಪಕ್ಷವನ್ನು ತೊರೆದಿದ್ದಾರೆ. ಐದು ರಾಜ್ಯಗಳಲ್ಲಿ ತನ್ನ ಇತ್ತೀಚಿನ ಚುನಾವಣಾ ಸೋಲಿನ ನಂತರ ಪಕ್ಷವು ಹೆಚ್ಚು ನಾಯಕರು ತೊರೆಯುವ ಭಯದಲ್ಲಿದೆ. ಈಗಾಗಲೇ, ಕಾಂಗ್ರೆಸ್‌ನ ಗುಜರಾತ್ ಘಟಕದಲ್ಲಿ ಅಸಮಾಧಾನ ಇರುವುದಾಗಿ ವರದಿ ಆಗಿದೆ.
ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್ ಗುಜರಾತ್ ಭೇಟಿ ಬೆನ್ನಲ್ಲೇ 150 ಆಪ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ