ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಕಪಾಳಕ್ಕೆ ಹೊಡೆಯುತ್ತಿದ್ದೆ ಎಂದು ಹೇಳಿ, ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಇದೀಗ ಜಾಮೀನು ಪಡೆದಿರುವ ನಾರಾಯಣ್ ರಾಣೆ (Union Minister Narayan Rane) ಇಂದು ಸುದ್ದಿಗೋಷ್ಠಿ ನಡೆಸಿದರು. ನಾನು ಉದ್ಧವ್ ಠಾಕ್ರೆ(Uddhav Thackeray) ಬಗ್ಗೆ ಮಾತನಾಡಿದ್ದು, ಅಸಂಸದೀಯ ಭಾಷೆಯಾಗಿರಬಹುದು. ಆದರೆ ನಾನೇನು ಹೇಳಿದ್ದೇನೋ ಅದಕ್ಕೆ ಈಗಲೂ ಬದ್ಧವಾಗಿದ್ದೇನೆ ಎಂದಿದ್ದಾರೆ. ಶಿವಸೇನೆ ನನ್ನ ವಿರುದ್ಧ ದಾಖಲಿಸಿರುವ ಪ್ರಕರಣದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದೇನೆ. ಸದ್ಯ ಜಾಮೀನು ನೀಡಿದೆ. ತೀರ್ಪು ನನ್ನ ಪರ ಆಗಿರುವುದನ್ನು ನೋಡಿದ ಮೇಲೆ ದೇಶದಲ್ಲಿ ಕಾನೂನು ಇದೆ ಎಂಬ ನಂಬಿಕೆ ಇದೆ ಎಂದು ಅವರು ಹೇಳಿದ್ದಾರೆ.
ಒಂದಷ್ಟು ಜನರು ನನ್ನ ಒಳ್ಳೆಯ ಗುಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಆದರೆ ಈ ಬಗ್ಗೆ ನಾನೀಗ ಮಾತನಾಡುವುದಿಲ್ಲ. ಯಾಕೆಂದರೆ ನಾನೀಗ, ಕಳೆದ ಏಳುವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳು, ಅಭಿವೃದ್ಧಿ ಕ್ರಮಗಳನ್ನು ಜನರಿಗೆ ತಿಳಿಸುವ ಯಾತ್ರೆಯಲ್ಲಿ ತೊಡಗಿದ್ದೇನೆ. ಈ ಎಲ್ಲ ವಿವಾದಗಳಿಂದಾಗಿ ಯಾತ್ರೆಗೆ ಎರಡು ದಿನ ತಡೆಯಾಯಿತು. ಅದನ್ನೀಗ ಮುಂದುವರಿಸಬೇಕಿದೆ ಎಂದು ಹೇಳಿದರು.
ಹಳೇ ವಿಡಿಯೋ ಉಲ್ಲೇಖ
ಒಬ್ಬ ಮುಖ್ಯಮಂತ್ರಿಗೆ ಈ ದೇಶದ ಸ್ವಾತಂತ್ರ್ಯದ ಬಗ್ಗೆ ಗೊತ್ತಿಲ್ಲ ಎಂದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ನನ್ನ ಹೇಳಿಕೆಗೆ ಶಿವಸೇನೆ ಇಷ್ಟು ಆಕ್ರೋಶ ವ್ಯಕ್ತಪಡಿಸುತ್ತಿದೆ. ಅದೇ ಉದ್ಧವ್ ಠಾಕ್ರೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎನ್ನಿಸುತ್ತದೆ ಎಂದು ಹೇಳಿದ್ದು ಸರಿಯೇ? ಎಂದೂ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು. ಇನ್ನು ಇದೇ ವೇಳೆ ಮಮತಾ ಬ್ಯಾನರ್ಜಿ ಆಡಳಿತದ ಬಗ್ಗೆ ಕೂಡ ಪ್ರಸ್ತಾಪಿಸಿದ ಅವರು, ಮಹಾರಾಷ್ಟ್ರ, ಪಶ್ಚಿಮ ಬಂಗಾಳದಂತೆ ಆಗಲು ಬಿಡುವುದಿಲ್ಲ ಎಂದಿದ್ದಾರೆ.
ಉದ್ಧವ್ ಠಾಕ್ರೆ ಸ್ವಾತಂತ್ರ್ಯೋತ್ಸವದ ದಿನ ಭಾಷಣ ಮಾಡುವಾಗ, ಇದು ಎಷ್ಟನೇ ಸ್ವಾತಂತ್ರ್ಯೋತ್ಸವ ಎಂದು ಕೇಳಲು ಹಿಂದೆ ಬಾಗಿದ್ದರು. ಅದನ್ನು ತೀವ್ರವಾಗಿ ವ್ಯಂಗ್ಯ ಮಾಡಿದ್ದ ಸಚಿವ ನಾರಾಯಣ್ ರಾಣೆ, ನಾನು ಅಲ್ಲಿದ್ದಿದ್ದರೆ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ಹೇಳಿದ್ದರು. ಅದು ವಿವಾದ ಸೃಷ್ಟಿಸಿತ್ತು. ಹಾಗೇ, ಮೂರು ಕಡೆಗಳಲ್ಲಿ ಎಫ್ಐಆರ್ ದಾಖಲಾಗಿತ್ತು. ನಂತರ ನಾಸಿಕ್ ಪೊಲೀಸರು ಅವರನ್ನು ಬಂಧಿಸಿ, ಮಹದ್ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹಾಜರು ಪಡಿಸಿದ್ದರು. ನಿನ್ನೆ ರಾತ್ರಿ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು, ನಿಮ್ಮ ಬಂಧನವಾಗಿದ್ದರಲ್ಲಿ ತಪ್ಪಿಲ್ಲ. ಆದರೆ ನಿಮ್ಮನ್ನು ನ್ಯಾಯಾಂಗ ಬಂಧನಕ್ಕೆ ನೀಡುವುದಿಲ್ಲ ಎಂದು ಹೇಳಿ, ಷರತ್ತು ಬದ್ಧ ಜಾಮೀನು ನೀಡಿದ್ದರು. ಮತ್ತೆ ಇಂಥ ವಿವಾದಾತ್ಮಕ ಹೇಳಿಕೆಗಳನ್ನು ನೀಡದಂತೆ ಸೂಚಿಸಿದ್ದರು.
Published On - 5:19 pm, Wed, 25 August 21