ಭಗವಂತ್​ ಮಾನ್​​​ಗೆ ಕೃತಜ್ಞತೆ ಸಲ್ಲಿಸಿದ ಮನೀಶ್ ತಿವಾರಿ; ಹಿಂದಿನ ಸಿಎಂ ಛನ್ನಿ ಮಾಡದ್ದನ್ನು ನೀವು ಮಾಡಿದಿರಿ ಎಂದು ಟ್ವೀಟ್​

| Updated By: Lakshmi Hegde

Updated on: Mar 16, 2022 | 5:17 PM

ಮನೀಶ್​ ತಿವಾರಿ ಕಾಂಗ್ರೆಸ್​​ನಿಂದ ಒಂದು ಹೆಜ್ಜೆ ಹೊರಗಿಟ್ಟಿದ್ದಾರಾ? ಹೀಗೊಂದು ಪ್ರಶ್ನೆ ಹುಟ್ಟುವಂತೆ ಇತ್ತೀಚೆಗೆ ಕೆಲವು ಬಾರಿ ಅವರು ಮಾತನಾಡಿದ್ದಾರೆ. ಈ ಸಲ ಪಂಜಾಬ್​​ನಲ್ಲಿ ಕಾಂಗ್ರೆಸ್ ಸ್ಟಾರ್​ ಪ್ರಚಾರಕರ ಪಟ್ಟಿಯಲ್ಲೂ ಮನೀಶ್​ ತಿವಾರಿ ಇರಲಿಲ್ಲ.

ಭಗವಂತ್​ ಮಾನ್​​​ಗೆ ಕೃತಜ್ಞತೆ ಸಲ್ಲಿಸಿದ ಮನೀಶ್ ತಿವಾರಿ; ಹಿಂದಿನ ಸಿಎಂ ಛನ್ನಿ ಮಾಡದ್ದನ್ನು ನೀವು ಮಾಡಿದಿರಿ ಎಂದು ಟ್ವೀಟ್​
ಮನೀಶ್ ತಿವಾರಿ
Follow us on

ಪಂಜಾಬ್​ ನೂತನ ಮುಖ್ಯಮಂತ್ರಿ ಭಗವಂತ್ ಮಾನ್​ ಅವರಿಗೆ ಕಾಂಗ್ರೆಸ್ ನಾಯಕರ ಮನೀಶ್​ ತಿವಾರಿ ಕೃತಜ್ಞತೆ ಸಲ್ಲಿಸಿದ್ದಾರೆ. ಇಂದು ಪಂಜಾಬ್ 17ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಮಾನ್​, ಈ ಸಮಾರಂಭಕ್ಕೆ ಮನೀಶ್​ ತಿವಾರಿಯವರನ್ನು ಆಹ್ವಾನಿಸಿದ್ದರು. ಅದಕ್ಕಾಗಿ ತಿವಾರಿ ಧನ್ಯವಾದ ಸಲ್ಲಿಸಿದ್ದಾರೆ. ಕಳೆದ ವರ್ಷ ಕ್ಯಾಪ್ಟನ್​ ಅಮರಿಂದರ್ ಸಿಂಗ್​ ಸಿಎಂ ಹುದ್ದೆಯಿಂದ ಕೆಳಗಿಳಿದು ಚರಣಜಿತ್​ ಸಿಂಗ್ ಛನ್ನಿ ಪಂಜಾಬ್​ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಆದರೆ ಈ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಇರಲಿಲ್ಲ. ನಮ್ಮದೇ ಪಕ್ಷದ ಸಮಾರಂಭಕ್ಕೆ ನನಗೆ ಆಮಂತ್ರಣ ಕೊಟ್ಟಿರಲಿಲ್ಲ, ಆದರೆ ಭಗವಂತ್​ ಮಾನ್​ ಆಹ್ವಾನ ನೀಡಿದ್ದು ಖುಷಿಯಾಯಿತು ಎಂದು ಹೇಳಿಕೊಂಡಿದ್ದಾರೆ.

ಲೋಕಸಭೆ ಅಧಿವೇಶನದ ನಿಮಿತ್ತ ಮನೀಶ್ ತಿವಾರಿ ಭಗವಂತ್​ ಮಾನ್​ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಅವರಿಗೆ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಭಗವಂತ್ ಮಾನ್​ ಕಳಿಸಿದ ಆಮಂತ್ರಣ ಪತ್ರಿಕೆಯ ಫೋಟೋ ಶೇರ್​ ಮಾಡಿದ ಮನೀಶ್​ ತಿವಾರಿ, ಪಂಜಾಬ್​ ನೂತನ ಸಿಎಂ ಭಗವಂತ್ ಮಾನ್​​ರಿಗೆ ಶುಭ ಹಾರೈಕೆಗಳು. ಅದರಲ್ಲೂ ಸಮಾರಂಭಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕೆ ಧನ್ಯವಾದ. ಆದರೆ ವಿಪರ್ಯಾಸವೆಂದರೆ ಕಳೆದ ವರ್ಷ ನನ್ನದೇ ಪಕ್ಷದ ಚರಣಜಿತ್​ ಸಿಂಗ್​ ಛನ್ನಿ ಪ್ರಮಾಣ ವಚನ ಸ್ವೀಕಾರಕ್ಕೆ ನನಗೆ ಆಹ್ವಾನ ಇರಲಿಲ್ಲ. ಪಾರ್ಲಿಮೆಂಟ್​​ನಲ್ಲಿ ಸೆಷನ್ಸ್ ನಡೆಯುತ್ತಿರುವ ಕಾರಣ ನನಗೆ ಪಂಜಾಬ್​ಗೆ ಹೋಗಲು ಸಾಧ್ಯವಾಗಲಿಲ್ಲ ಎಂದು ಬರೆದುಕೊಂಡಿದ್ದಾರೆ.

ಮನೀಶ್​ ತಿವಾರಿ ಕಾಂಗ್ರೆಸ್​​ನಿಂದ ಒಂದು ಹೆಜ್ಜೆ ಹೊರಗಿಟ್ಟಿದ್ದಾರಾ? ಹೀಗೊಂದು ಪ್ರಶ್ನೆ ಹುಟ್ಟುವಂತೆ ಇತ್ತೀಚೆಗೆ ಕೆಲವು ಬಾರಿ ಅವರು ಮಾತನಾಡಿದ್ದಾರೆ. ಈ ಸಲ ಪಂಜಾಬ್​​ನಲ್ಲಿ ಕಾಂಗ್ರೆಸ್ ಸ್ಟಾರ್​ ಪ್ರಚಾರಕರ ಪಟ್ಟಿಯಲ್ಲೂ ಮನೀಶ್​ ತಿವಾರಿ ಇರಲಿಲ್ಲ. ಆ ಬಗ್ಗೆ ವ್ಯಂಗ್ಯ ಮಾಡಿದ್ದ ತಿವಾರಿ, ಪಟ್ಟಿಯಲ್ಲಿ ನನ್ನ ಹೆಸರಿದ್ದರೇ ಆಶ್ಚರ್ಯವಾಗುತ್ತಿತ್ತು ಎಂದು ವ್ಯಂಗ್ಯವಾಡಿದ್ದರು. 2020ರಲ್ಲಿ ಮನೀಶ್​ ತಿವಾರಿ, ಗುಲಾಂ ನಬಿ ಆಜಾದಿ ಸೇರಿ ಜಿ-23 ನಾಯಕರು ಕಾಂಗ್ರೆಸ್​ ನಾಯಕತ್ವದ ವಿರುದ್ಧ ರೆಬಲ್ ಆಗಿದ್ದರು. ಅದನ್ನು ಸೋನಿಯಾ ಗಾಂಧಿಗೆ ಬಹಿರಂಗವಾಗಿ ಪತ್ರ ಬರೆಯುವ ಮೂಲಕ ವ್ಯಕ್ತಪಡಿಸಿದ್ದರು. ಕಾಂಗ್ರೆಸ್​ನ್ನು ತುರ್ತಾಗಿ ನವೀಕರಿಸುವ ಅಗತ್ಯವಿದೆ. ಅದಕ್ಕಾಗಿ ಪಕ್ಷದ ನಾಯಕತ್ವವನ್ನು ಪೂರ್ಣಾವಧಿಗೆ ಯಾರಾದರೂ ವಹಿಸಿಕೊಳ್ಳಬೇಕು ಎಂದು ಪತ್ರದಲ್ಲಿ ಹೇಳಿದ್ದರು. ಆಗಿನಿಂದಲೂ ಪಕ್ಷದ ಬಗ್ಗೆ ಅಸಮಾಧಾನವನ್ನು ಅಲ್ಲಲ್ಲಿ, ಸೂಕ್ಷ್ಮವಾಗಿಯೇ ಹೊರಹಾಕುತ್ತಿದ್ದಾರೆ.

ಇದನ್ನೂ ಓದಿ: ಅತ್ಯಾಚಾರ ಆರೋಪಿಗಳ ಎನ್​ಕೌಂಟರ್​​: ಅಸ್ಸಾಂನಲ್ಲಿ 24 ಗಂಟೆಯಲ್ಲಿ ಇಬ್ಬರು ರೇಪಿಸ್ಟ್​​ಗಳಿಗೆ ಗುಂಡಿಕ್ಕಿ ಕೊಂದ ಪೊಲೀಸರು