ಬೆತ್ತಲೆ ಫೋಟೋಗೆ ಪ್ರತಿಯಾಗಿ ಪಾಕಿಸ್ತಾದ ವ್ಯಕ್ತಿಗೆ ರಹಸ್ಯ ಯುದ್ಧ ಯೋಜನೆ ಮಾಹಿತಿ ಸೋರಿಕೆ: ಐಎಎಫ್ ಅಧಿಕಾರಿ ವಿರುದ್ಧ ಗಂಭೀರ ಆರೋಪ

ಪಾಕಿಸ್ತಾನದ ಗುಪ್ತಚರ ಸಂಪರ್ಕ ಹೊಂದಿದ್ದ ಎನ್ನಲಾದ ವ್ಯಕ್ತಿಗೆ ಐಎಎಫ್‌ನ ರಹಸ್ಯ ಯುದ್ಧ ಯೋಜನೆ, ಡ್ರೋನ್ ಘಟಕ ಹಾಗೂ ಸೇನಾ ನಿಯೋಜನೆಗಳ ಮಾಹಿತಿ ಸೋರಿಕೆ ಮಾಡಿದ ಆರೋಪದಲ್ಲಿ ವಿಂಗ್ ಕಮಾಂಡರ್ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆಯಾಗಿದೆ. ದೆಹಲಿ ಪೊಲೀಸರು ಡಿಜಿಟಲ್ ಸಾಕ್ಷ್ಯಗಳೊಂದಿಗೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ನಗ್ನ ಫೋಟೊಗಳಿಗೆ ಪ್ರತಿಯಾಗಿ ರಹಸ್ಯ ಮಾಹಿತಿ ಸೋರಿಕೆ ಮಾಡುತ್ತಿದ್ದ ಆರೋಪ ಈಗ ಆತಂಕಕ್ಕೆ ಕಾರಣವಾಗಿದೆ.

ಬೆತ್ತಲೆ ಫೋಟೋಗೆ ಪ್ರತಿಯಾಗಿ ಪಾಕಿಸ್ತಾದ ವ್ಯಕ್ತಿಗೆ ರಹಸ್ಯ ಯುದ್ಧ ಯೋಜನೆ ಮಾಹಿತಿ ಸೋರಿಕೆ: ಐಎಎಫ್ ಅಧಿಕಾರಿ ವಿರುದ್ಧ ಗಂಭೀರ ಆರೋಪ
ಸಾಂದರ್ಭಿಕ ಚಿತ್ರ

Updated on: Nov 14, 2026 | 9:51 AM

ಮುಖ್ಯಾಂಶಗಳು

  • ವಿಂಗ್ ಕಮಾಂಡರ್ ವಿರುದ್ಧ ರಹಸ್ಯ ಯುದ್ಧ ಯೋಜನೆ ಸೋರಿಕೆ ಆರೋಪ
  • ಪಾಕಿಸ್ತಾನ ಸಂಪರ್ಕದ ಕುರಿತು ಗಂಭೀರ ತನಿಖೆ
  • ಪಾಕ್ ಹನಿಟ್ರ್ಯಾಪ್ ಖೆಡ್ಡಾಕ್ಕೆ ಬಿದ್ರಾ ಐಎಎಫ್ ಕಮಾಂಡರ್?

ನವದೆಹಲಿ, ನವೆಂಬರ್ 14: ಪಾಕಿಸ್ತಾನದ ಗುಪ್ತಚರ ಸಂಸ್ಥೆಯೊಂದಿಗೆ ನಂಟು ಹೊಂದಿದ್ದ ಎನ್ನಲಾದ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದು, ಭಾರತೀಯ ವಾಯುಪಡೆಯ ಅತ್ಯಂತ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಮೇಲೆ ಐಎಎಫ್‌ನ ವಿಂಗ್ ಕಮಾಂಡರ್ ಒಬ್ಬರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಬಗ್ಗೆ ದೆಹಲಿ ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸಿದ್ದು, ಬೆತ್ತಲೆ ಫೋಟೋಗೆ ಪ್ರತಿಯಾಗಿ ರಹಸ್ಯ ಯುದ್ಧ ಯೋಜನೆಯ ಮಾಹಿತಿಯನ್ನೇ ಹಂಚಿಕೊಂಡ ಆರೋಪ ಮಾಡಲಾಗಿದೆ.

ದೆಹಲಿ ಪೊಲೀಸರ ಪ್ರಕಾರ, ಆರೋಪಿ ವಿಂಗ್ ಕಮಾಂಡರ್ 2026ರ ಜನವರಿ 12ರಿಂದ ಏಪ್ರಿಲ್ 1ರವರೆಗೆ ವಾಟ್ಸಾಪ್ ಮೂಲಕ ಪಾಕಿಸ್ತಾನದ ಗುಪ್ತಚರ ಸಂಪರ್ಕ ಹೊಂದಿದ್ದ ಎನ್ನಲಾದ ವ್ಯಕ್ತಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಈ ಅವಧಿಯಲ್ಲಿ ಐಎಎಫ್‌ನ ರಹಸ್ಯ ಯುದ್ಧ ಯೋಜನೆಗಳು, ಡ್ರೋನ್ ಘಟಕಗಳ ಸಾಮರ್ಥ್ಯ, ಯುದ್ಧ ವಿಮಾನಗಳ ನಿಯೋಜನೆ, ಸೇನಾ ಸಮಾರಾಭ್ಯಾಸ ಹಾಗೂ ಸೂಕ್ಷ್ಮ ಸೇನಾ ಸ್ಥಾಪನೆಗಳ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

Loading...

ಒಂದು ನಗ್ನ ಫೋಟೊಗೆ ಯುದ್ಧ ಯೋಜನೆಯ ಒಂದು ಪುಟ!

ಚಾರ್ಜ್‌ಶೀಟ್ ಪ್ರಕಾರ, ಪಾಕಿಸ್ತಾನದ ವ್ಯಕ್ತಿ ಆರೋಪಿ ಅಧಿಕಾರಿಗೆ ಬೆತ್ತಲೆ ಫೋಟೋ ಕಳುಹಿಸಿದ್ದ. ಇದಕ್ಕೆ ಪ್ರತಿಯಾಗಿ ಐಎಎಫ್‌ನ ರಹಸ್ಯ ಯುದ್ಧ ಯೋಜನೆಯ ಒಂದು ಪುಟವನ್ನು ಆರೋಪಿ ಹಂಚಿಕೊಂಡಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ. ಅಲ್ಲದೆ, ಪ್ರತಿಯೊಂದು ಇಂತಹ ಫೋಟೋಗೆ ಪ್ರತಿಯಾಗಿ ಯುದ್ಧ ಯೋಜನೆಯ ದಾಖಲೆಗಳ ಒಂದು ಪುಟ ನೀಡುವ ರೀತಿಯ ಒಪ್ಪಂದವನ್ನೂ ಆತ ಪ್ರಸ್ತಾಪಿಸಿದ್ದ ಎಂದು ಆರೋಪಿಸಲಾಗಿದೆ.

ಯಾವ ಮಾಹಿತಿಯ ಸೋರಿಕೆ ಆರೋಪ?

ಆರೋಪಿ ಅಧಿಕಾರಿಯು ಐಎಎಫ್‌ನ ರಹಸ್ಯ ಡ್ರೋನ್ ಘಟಕದ ಸಂಖ್ಯೆ, ಸಂಘಟನಾ ರಚನೆ ಹಾಗೂ ಕಾರ್ಯಾಚರಣೆಯ ಮಾಹಿತಿಯನ್ನು ಹಂಚಿಕೊಂಡಿದ್ದಾನೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಡ್ರೋನ್ ಪ್ರಯೋಗಗಳು, ಕಾರ್ಯಾಚರಣಾ ಸಾಮರ್ಥ್ಯ, ಹಾರಾಟದ ಅವಧಿ ಹಾಗೂ ಗುರಿ ಗುರುತಿಸುವ ವ್ಯವಸ್ಥೆಗಳಿಗೆ ಸಂಬಂಧಿಸಿದ ಮಾಹಿತಿಯೂ ಸೋರಿಕೆಯಾಗಿದೆ ಎಂದು ಆರೋಪಿಸಲಾಗಿದೆ.

ಯುದ್ಧದಂತಹ ಪರಿಸ್ಥಿತಿ ಎದುರಾದರೆ ಡ್ರೋನ್ ಘಟಕವನ್ನು ನಿಯೋಜಿಸಬಹುದಾದ ಸ್ಥಳಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಲೇಹ್‌ನಲ್ಲಿ ಯುದ್ಧ ವಿಮಾನಗಳ ನಿಯೋಜನೆ, ರಾಜಸ್ಥಾನದ ಸುರತ್‌ಗಢದಲ್ಲಿರುವ ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ನಡೆದ ಸೇನಾ ಸಮರಾಭ್ಯಾಸದ ಮಾಹಿತಿಯನ್ನೂ ಹಂಚಿಕೊಳ್ಳಲಾಗಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಅಧಿಕಾರಿಗಳ ಎಲೆಕ್ಟ್ರಾನಿಕ್ ಡಿವೈಸ್​ಗಳಿಗೆ ಮಾಲ್‌ವೇರ್ ಅಳವಡಿಸಿದ ಆರೋಪ

ಈ ಪ್ರಕರಣದಲ್ಲಿ ಮತ್ತೊಂದು ಗಂಭೀರ ಆರೋಪವೂ ಕೇಳಿಬಂದಿದೆ. ಪಾಕಿಸ್ತಾನದ ಸಂಪರ್ಕ ಹೊಂದಿದ್ದ ಎನ್ನಲಾದ ವ್ಯಕ್ತಿ ವಿವಿಧ ಆ್ಯಪ್‌ಗಳು ಮತ್ತು ಲಿಂಕ್‌ಗಳನ್ನು ಆರೋಪಿಗೆ ಕಳುಹಿಸಿದ್ದು, ಅವುಗಳಲ್ಲಿ ಮಾಲ್‌ವೇರ್ ಅಥವಾ ಸ್ಪೈವೇರ್ ಇರಬಹುದೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ತನ್ನ ಅಧೀನದಲ್ಲಿದ್ದ ಐವರು ಅಧಿಕಾರಿಗಳ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ನಿರ್ದಿಷ್ಟ ಮಾಲ್‌ವೇರ್ ಮತ್ತು ಸ್ಪೈವೇರ್ ಅಳವಡಿಸಲು ಸಹಕರಿಸಿದ್ದಾನೆ ಎಂಬ ಆರೋಪವೂ ಇದೆ.

ಇದರ ಮೂಲಕ ಅಧೀನ ಅಧಿಕಾರಿಗಳ ಸಾಧನಗಳಲ್ಲಿದ್ದ ಸೂಕ್ಷ್ಮ ಮಾಹಿತಿ ಹಾಗೂ ಅವರ ಹಿರಿಯ ಅಧಿಕಾರಿಗಳೊಂದಿಗಿನ ಸಂವಹನವನ್ನು ಪಡೆಯುವ ಪ್ರಯತ್ನ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಬೆಂಗಾವಲು ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ: ಮೈಸೂರಿನಲ್ಲೇ ಬಾಕಿ

ಡಿಜಿಟಲ್ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ಮುಂದುವರಿಸಿರುವ ಪೊಲೀಸರು, ಆರೋಪಿ ಮತ್ತು ಪಾಕಿಸ್ತಾನದ ವ್ಯಕ್ತಿಯ ನಡುವೆ 3,008 ಟೆಕ್ಷ್ಟ್ ಮೆಸೇಜ್​ಗಳು, 65 ಫೋಟೋಗಳು, 42 ಧ್ವನಿ ಕರೆಗಳು, ನಾಲ್ಕು ವಿಡಿಯೋ ಕರೆಗಳು ಹಾಗೂ ಆರು ಯುಆರ್‌ಎಲ್‌ಗಳ ವಿನಿಮಯ ನಡೆದಿರುವುದನ್ನು ಪತ್ತೆಹಚ್ಚಿರುವುದಾಗಿ ತಿಳಿಸಿದ್ದಾರೆ. ಕಳೆದ ಐದು ತಿಂಗಳಿಂದ ಅಧಿಕಾರಿ ಬಂಧನದಲ್ಲಿದ್ದು, ಅಧಿಕೃತ ರಹಸ್ಯಗಳ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಸಂಚಿನಲ್ಲಿ ಬೇರೆ ಯಾರಾದರೂ ಶಾಮೀಲಾಗಿದ್ದಾರೆಯೇ ಹಾಗೂ ಎಷ್ಟು ಪ್ರಮಾಣದ ಸೂಕ್ಷ್ಮ ಮಾಹಿತಿ ಸೋರಿಕೆಯಾಗಿದೆ ಎಂಬ ಕುರಿತು ತನಿಖೆ ಮುಂದುವರಿದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us