ಒಂದೆಡೆ ಮಮತಾ ಬ್ಯಾನರ್ಜಿ ತಮ್ಮ ಟಿಎಂಸಿ ಪಕ್ಷವನ್ನು ಪಶ್ಚಿಮ ಬಂಗಾಳದ ಆಚೆಗೂ ಸದೃಢಗೊಳಿಸಲು ಪ್ರಯತ್ನಿಸುತ್ತಿದ್ದರೆ, ಇತ್ತ ತ್ರಿಪುರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಟಿಎಂಸಿ ಸಂಪೂರ್ಣವಾಗಿ ಸೋತು, ಬಿಜೆಪಿ ವಿಜಯಸಾಧಿಸಿದೆ. ಆದರೆ ಮಮತಾ ಬ್ಯಾನರ್ಜಿ ಬಿಜೆಪಿಯನ್ನು ಸೋಲಿಸಬೇಕು ಎಂದು ಅತ್ಯಂತ ಮಹತ್ವಾಕಾಂಕ್ಷೆಯಿಂದ ಮುನ್ನುಗ್ಗುತ್ತಿದ್ದಾರೆ. ಹಾಗೂ ಟಿಎಂಸಿಯನ್ನು ಪಶ್ಚಿಮ ಬಂಗಾಳ ಹೊರತಾದ ರಾಜ್ಯಗಳಲ್ಲೂ ವಿಸ್ತರಿಸುವ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಾನು ಬಿಜೆಪಿಯನ್ನು ರಾಜಕೀಯವಾಗಿ ಈ ದೇಶದಿಂದ ಹೊರಗಿಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.
ಮುಂಬೈನಲ್ಲಿ ಸಿವಿಲ್ ಸೊಸೈಟಿ ಸದಸ್ಯರೊಂದಿಗೆ ಸಂವಾದದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ನಮ್ಮ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡುತ್ತದೆ ಎಂದಾದ ಮೇಲೆ ನಾವ್ಯಾಕೆ ಗೋವಾದಲ್ಲಿ ಸ್ಪರ್ಧೆಗೆ ಇಳಿಯಬಾರದು ಎಂದು ಪ್ರಶ್ನಿಸಿದ್ದಾರೆ. ಹಾಗೇ, ರಾಜಕೀಯದಲ್ಲಿ ಉಳಿಯುವುದು ಮತ್ತು ಬಿಜೆಪಿ ವಿರುದ್ಧ ಹೋರಾಡುವುದು ತುಂಬ ಮುಖ್ಯ. ಇಲ್ಲದಿದ್ದರೆ ಅವರೇ ಬೌಲ್ ಹಾಕುವ ಮೂಲಕ ನಿಮ್ಮನ್ನು ಔಟ್ ಮಾಡುತ್ತಾರೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಎಲ್ಲ ಪ್ರಾದೇಶಿಕ ಪಕ್ಷಗಳೂ ಒಗ್ಗಟ್ಟಾದರೆ ಬಿಜೆಪಿಯನ್ನು ಸೋಲಿಸಬಹುದು. ನಮಗೆ ಪಶ್ಚಿಮ ಬಂಗಾಳದಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೂ ನಾನು ಇತರ ರಾಜ್ಯಗಳಿಗೆ ಹೋಗುತ್ತಿದ್ದೇನೆ. ನಾನು ಹೀಗೆ ಮಾಡುವುದರಿಂದ ಉಳಿದ ಕೆಲವು ಪಕ್ಷಗಳ ಮುಖಂಡರೂ ಕೂಡ ತಮ್ಮ ವ್ಯಾಪ್ತಿ ಬಿಟ್ಟು ಹೊರಡುತ್ತಾರೆ. ಆಗ ಸ್ಪರ್ಧೆ ಏರ್ಪಡುತ್ತದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇತ್ತೀಚೆಗೆಷ್ಟೇ ಗೋವಾಕ್ಕೆ ಭೇಟಿ ನೀಡಿದ್ದ ಮಮತಾ ಬ್ಯಾನರ್ಜಿ ಇದೀಗ ಮಹಾರಾಷ್ಟ್ರಕ್ಕೆ ತೆರಳಿದ್ದಾರೆ. ಪ್ರತಿಪಕ್ಷಗಳ ನಾಯಕರ ಜತೆ ಒಂದರ ಹಿಂದೆ ಮತ್ತೊಂದರಂತೆ ಸಭೆ ನಡೆಸುತ್ತಿದ್ದಾರೆ. ಇವತ್ತು ಶಿವಸೇನೆ ನಾಯಕರಾದ ಆದಿತ್ಯ ಠಾಕ್ರೆ ಮತ್ತು ಸಂಜಯ್ ರಾವತ್ರನ್ನು ಭೇಟಿಯಾಗಿದ್ದರು.ಹಾಗೇ ಎನ್ಸಿಪಿ ನಾಯಕ ಶರದ್ ಪವಾರ್ರನ್ನೂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಒಟ್ಟಾರೆ ಮುಂಬರುವ ಒಂದಷ್ಟು ವಿಧಾನಸಭೆ ಚುನಾವಣೆಗಳು ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕು ಎಂಬ ಪಣತೊಟ್ಟಿರುವ ದೀದಿ ಬಹಿರಂಗವಾಗಿಯೇ ಸಮರ ಸಾರಿದ್ದಾರೆ.
ಇದನ್ನೂ ಓದಿ: ನಿನ್ನೆ ಸಂಜೆ ನನಗೆ ಕ್ಷಮಾಪಣ ಪತ್ರ ಬಂದಿತ್ತು; ಹತ್ಯೆಗೆ ಸ್ಕೆಚ್ ಆರೋಪ ಸಂಬಂಧಿಸಿ ಎಸ್ಆರ್ ವಿಶ್ವನಾಥ್ ಸುದ್ದಿಗೋಷ್ಠಿ