ನಿನ್ನೆ ಸಂಜೆ ನನಗೆ ಕ್ಷಮಾಪಣ ಪತ್ರ ಬಂದಿತ್ತು; ಹತ್ಯೆಗೆ ಸ್ಕೆಚ್ ಆರೋಪ ಸಂಬಂಧಿಸಿ ಎಸ್ಆರ್ ವಿಶ್ವನಾಥ್ ಸುದ್ದಿಗೋಷ್ಠಿ

TV9 Digital Desk

| Edited By: ganapathi bhat

Updated on: Dec 01, 2021 | 4:47 PM

ರಾಜಾನುಕುಂಟೆ ಪೊಲೀಸ್ ಠಾಣೆಗೂ ದೂರು ನೀಡಿದ್ದೇನೆ. ಸಿಎಂ ಬೊಮ್ಮಾಯಿ ಜೊತೆಯೂ ನಾನು ಮಾತಾಡಿದ್ದೇನೆ. ಸುಪಾರಿ ಕೊಟ್ಟು ಕೊಲೆಗೆ ಯತ್ನಿಸಿದ್ದಾರೆ ಎಂದು ಯಲಹಂಕ ಬಿಜೆಪಿ ಶಾಸಕ ಎಸ್​.ಆರ್. ವಿಶ್ವನಾಥ್ ಕೊಲೆ ಬೆದರಿಕೆ ಪ್ರಕರಣದ ಬಗ್ಗೆ ಹೇಳಿಕೆ ನೀಡಿದ್ದಾರೆ.

ನಿನ್ನೆ ಸಂಜೆ ನನಗೆ ಕ್ಷಮಾಪಣ ಪತ್ರ ಬಂದಿತ್ತು; ಹತ್ಯೆಗೆ ಸ್ಕೆಚ್ ಆರೋಪ ಸಂಬಂಧಿಸಿ ಎಸ್ಆರ್ ವಿಶ್ವನಾಥ್ ಸುದ್ದಿಗೋಷ್ಠಿ
ಎಸ್ಆರ್ ವಿಶ್ವನಾಥ್

ಬೆಂಗಳೂರು: ನಿನ್ನೆ ಸಂಜೆ ನನಗೆ ಕ್ಷಮಾಪಣ ಪತ್ರ ಬಂದಿತ್ತು. ತಾವು ಮಾಡಿದ ತಪ್ಪಿಗೆ ಕ್ಷಮಿಸಿ ಎಂದು ಪತ್ರ ಬಂದಿತ್ತು. ನನ್ನ ಹತ್ಯೆಗೆ ಪ್ಲ್ಯಾನ್ ಮಾಡಿದ್ದ ಬಗ್ಗೆ ಸ್ಕೆಚ್ ಹಾಕಿದ್ದರು. ಇದು ತಪ್ಪೆಂದು ತಿಳಿದು ನಾನು ಕ್ಷಮೆಯಾಚಿಸುತ್ತಿದ್ದೇನೆ ಎಂದು ಕುಳ್ಳ ದೇವರಾಜ್ ನನಗೆ ಕ್ಷಮಾಪಣಾ ಪತ್ರ ಬರೆದಿದ್ದರು. ಕೂಡಲೇ ನಾನು ಗೃಹ ಸಚಿವರಿಗೆ ಕರೆ ಮಾಡಿ ಮಾತಾಡಿದ್ದೆ. ರಾಜಾನುಕುಂಟೆ ಪೊಲೀಸ್ ಠಾಣೆಗೂ ದೂರು ನೀಡಿದ್ದೇನೆ. ಸಿಎಂ ಬೊಮ್ಮಾಯಿ ಜೊತೆಯೂ ನಾನು ಮಾತಾಡಿದ್ದೇನೆ. ಸುಪಾರಿ ಕೊಟ್ಟು ಕೊಲೆಗೆ ಯತ್ನಿಸಿದ್ದಾರೆ ಎಂದು ಯಲಹಂಕ ಬಿಜೆಪಿ ಶಾಸಕ ಎಸ್​.ಆರ್. ವಿಶ್ವನಾಥ್ ಕೊಲೆ ಬೆದರಿಕೆ ಪ್ರಕರಣದ ಬಗ್ಗೆ ಹೇಳಿಕೆ ನೀಡಿದ್ದಾರೆ.

15 ದಿನದ ಹಿಂದೆ ಈ ಬಗ್ಗೆ ವಾಸನೆ ಬರುತ್ತಿತ್ತು. ಕುಳ್ಳ ದೇವರಾಜ್-ಗೋಪಾಲಕೃಷ್ಣ ಆಡಿಯೋ ಬಗ್ಗೆ ಹೇಳಿಕೆ, ಇಡೀ ಸಂಭಾಷಣೆ ನನ್ನ ಮೇಲೆ ದ್ವೇಷ ಕಾರುವಂತೆ ಇದೆ. ಆಂಧ್ರದಿಂದ ಸುಪಾರಿ ಕಿಲ್ಲರ್ಸ್‌ ಕರೆಸುವುದಾಗಿ ಚರ್ಚಿಸಿದ್ದಾರೆ. ಕಡಬಗೆರೆ ಶ್ರೀನಿವಾಸ್ ನನ್ನ ಜೊತೆಗೆ ಇದ್ದವರು. ಅವರನ್ನು ಎಪಿಎಂಸಿ ಅಧ್ಯಕ್ಷನಾಗಿ ಮಾಡಿದ್ದು ನಾನೇ. ಕಡಬಗೆರೆ ಶ್ರೀನಿವಾಸ್ ಮೇಲೆ ಶೂಟೌಟ್ ಆಗಿತ್ತು. ನನ್ನ ಏರಿಯಾದಲ್ಲಿ ಶೂಟೌಟ್ ನಡೆದಿತ್ತು. ಈ ಬಗ್ಗೆ ತನಿಖೆ ಮಾಡುವಂತೆ ನಾನು ಕೂಡ ಒತ್ತಾಯಿಸಿದ್ದೆ. ಆದರೆ ಈವರೆಗೆ ಇದರ ಹಿಂದೆ ಯಾರಿದ್ದಾರೆಂದು ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ಇಂತಹದೊಂದು ನಡೆಯುತ್ತಿದೆ ಎಂದು ಸಣ್ಣ ಸುಳಿವು ಇತ್ತು ಕೊಲೆಗೆ ಎಷ್ಟು ದಿನದಿಂದ ಸ್ಕೆಚ್ ಹಾಕಿದ್ದರೆಂದು ಗೊತ್ತಿಲ್ಲ. ಬಹುಶಃ 3 ತಿಂಗಳಿಂದ ನಡೆದಿರಬೇಕೆಂದು ಅನಿಸುತ್ತಿದೆ. ಕುಳ್ಳ ದೇವರಾಜ್ ಕ್ಷಮಾಪಣಾ ಪತ್ರವನ್ನು ಕಳುಹಿಸಿದ್ದಾನೆ. ಬೇರೆಯವರ ಕೈಯಲ್ಲಿ ನನಗೆ ಪತ್ರವನ್ನು ಕೊಟ್ಟು ಕಳಿಸಿರಬೇಕು. ನಿನ್ನೆ ಸಂಜೆ 7.30ರ ಸುಮಾರಿಗೆ ಪತ್ರದ ಬಗ್ಗೆ ಮಾಹಿತಿ ಇತ್ತು. ಇಂತಹದೊಂದು ನಡೆಯುತ್ತಿದೆ ಎಂದು ಸಣ್ಣ ಸುಳಿವು ಇತ್ತು. ನಾನು ಮೊದಲೇ ಗೃಹ ಸಚಿವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೆ. ಆದರೆ ವಿಡಿಯೋ ಇರಲಿಲ್ಲ, ಗೊತ್ತಾದ ಕೂಡಲೇ ಹೇಳಿದ್ದೇನೆ. ನನ್ನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎಂದು ಅವರಿಗೆ ಹೇಳಿದ್ದೆ. ಗೃಹ ಸಚಿವರಿಗೆ ಹೇಳಿದ ತಕ್ಷಣ ಗೃಹ ಸಚಿವರು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಕುಳ್ಳ ದೇವರಾಜ್ ಗೋಪಾಲಕೃಷ್ಣನ ಪರಮಶಿಷ್ಯನಾಗಿದ್ದಾನೆ. ಕುಳ್ಳ ದೇವರಾಜ್ ಕ್ರಿಮಿನಲ್ ಇದ್ದಾನೆ. ಗೋಪಾಲಕೃಷ್ಣನ ಜತೆಗಿನ ವಿಡಿಯೋ ಮಾಡಿಟ್ಟಿದ್ದಾನೆ. ಒಂದಲ್ಲಾ ಒಂದು ದಿನ ಸಿಕ್ಕಿಹಾಕಿಕೊಳ್ಳುವ ಭಯದಿಂದ ವಿಡಿಯೋ ಮಾಡಿಟ್ಟುಕೊಂಡಿದ್ದಾನೆ. ಯಲಹಂಕದಲ್ಲಿ ನನ್ನನ್ನು ಸೋಲಿಸುವುದಕ್ಕೆ ಆಗುವುದಿಲ್ಲ. ಇಂತಹ ಒಂದು ಉದ್ದೇಶದಿಂದ ಸ್ಕೆಚ್ ಹಾಕಿರಬಹುದು ಎಂದು ವಿಧಾನಸೌಧದಲ್ಲಿ ಬಿಜೆಪಿ ಶಾಸಕ ವಿಶ್ವನಾಥ್ ತಿಳಿಸಿದ್ದಾರೆ.

ನನಗೆ ಬೆದರಿಕೆ ಇದೆ, ರಕ್ಷಣೆ ಕೊಡಿ ಎಂದು ಕೇಳಿದ್ದೇನೆ. ಪೊಲೀಸ್ ರಕ್ಷಣೆ ಬೇಕೆಂದು 4 ಬಾರಿ ಪತ್ರ ಬರೆದಿದ್ದೇನೆ. ಕಾಂಗ್ರೆಸ್ ಆಡಳಿತದಲ್ಲಿಯೂ ನನ್ನ ವಿರುದ್ಧ ಪ್ರಕರಣ ದಾಖಲು ಆಗಿತ್ತು. ಅವರು ನನ್ನ ವಿರುದ್ಧ ದ್ವೇಷದ ರಾಜಕಾರಣ ಮಾಡಿದ್ದರು. ಆದರೂ ನಾನು ಎಂದು ಕ್ಷೇತ್ರವನ್ನು ಬಿಟ್ಟು ಹೋಗಿರಲಿಲ್ಲ. ಎಲ್ಲ ಆರೋಪಗಳನ್ನು ಕ್ಷೇತ್ರದಲ್ಲೇ ಇದ್ದು ಎದುರಿಸಿದ್ದೇನೆ. ಯಾರೋ ಪ್ರಭಾವ ಬೀರಿ ಗೋಪಾಲಕೃಷ್ಣನನ್ನ ಬಿಡಿಸಿದ್ದಾರೆ. ಪ್ರಭಾವಿಗಳು ಯಾರೆಂದು ಹೇಳುವುದಕ್ಕೆ ಹೋಗುವುದಿಲ್ಲ. ಮೊದಲು ತನಿಖೆಯಾಗಲಿ, ತಪ್ಪಿತಸ್ಥರ ವಿರುದ್ಧ ಕ್ರಮವಾಗಲಿ ಎಂದು ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ತಿಳಿಸಿದ್ದಾರೆ.

ಪೊಲೀಸರು ಪ್ರಕರಣವನ್ನು ನಿಭಾಯಿಸ್ತಾರೆ; ರಾಜಾನುಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಆ ವಿಡಿಯೋದಲ್ಲಿ ಮಾಡಿದ ಎಲ್ಲ ಆರೋಪಗಳ ಬಗ್ಗೆಯೂ ತನಿಖೆಯಾಗಲೇಬೇಕು. ಕಡಬಗೆರೆ ಸೀನ ಪ್ರಕರಣ ಬಂದ್ರೆ ನನ್ನ ಹೆಸರು ಬರುತ್ತೆ. ಹೀಗಾಗಿ ಎಲ್ಲ ಪ್ರಕರಣಗಳ ಬಗ್ಗೆಯೂ ತನಿಖೆಯಾಗಬೇಕು. ನನಗೆ ಯಾರಿಂದಲೂ ಬೆದರಿಕೆ ಅನ್ನೋದು ಇಲ್ಲ. ಗೋಪಾಲಕೃಷ್ಣನಿಂದಲೂ ನನಗೆ ಯಾವ ಬೆದರಿಕೆ ಇಲ್ಲ. ಗೋಪಾಲಕೃಷ್ಣ ನನಗೆ ಬೆದರಿಕೆ ಹಾಕುವಂತಹ ಸಮರ್ಥನಲ್ಲ. ಪೊಲೀಸರ ಮೇಲೆ ನನಗೆ ಈಗಲೂ ಪೂರ್ಣ ನಂಬಿಕೆ ಇದೆ. ಪೊಲೀಸರು ಈ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸ್ತಾರೆ ಎಂದು ಎಸ್.ಆರ್. ವಿಶ್ವನಾಥ್ ಹೇಳಿದ್ದಾರೆ.

ನಗರದ ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಸ್ಕೆಚ್ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್‌ರಿಂದ ದೂರು ಸಲ್ಲಿಸಲಾಗಿದೆ. ಬೆಂಗಳೂರಿನ ರಾಜಾನುಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ಮಾಡಬೇಕು. ಈ ಬೆಳವಣಿಗೆಗಳು ಸರಿಯಾದದ್ದಲ್ಲ ಎಂದು ವಿಶ್ವನಾಥ್ ಬಳಿಕ ವಿಧಾನಸೌಧದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ಶಾಸಕ ಎಸ್ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಆರೋಪ; ರಾಜಾನುಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲು

ಇದನ್ನೂ ಓದಿ: ಯಲಹಂಕ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್! ವಿಶ್ವನಾಥ್ ವಿರುದ್ಧ ಸ್ಪರ್ಧಿಸಿ ಸೋತಿದ್ದ ಗೋಪಾಲಕೃಷ್ಣ ವಿಡಿಯೋ ಬಹಿರಂಗ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada