ಶಂಕಿತ ಡ್ರಗ್ ಪೆಡ್ಲರ್ ಅತಿವೇಗದಿಂದ ಕಾರನ್ನು ಬೆನ್ನಟ್ಟಿದ್ದೇ ಮಾಜಿ ಮಿಸ್ ಕೇರಳ ಆನ್ಸಿ ಕಬೀರ್ ಕಾರು ಅಪಘಾತಕ್ಕೆ ಕಾರಣವಾಯಿತೇ?
ತನಿಖೆಯ ವೇಳೆ ತಂಗಚ್ಚನ್ ಅವರು ತಮ್ಮ ಆಡಿ ಕಾರಿನಲ್ಲಿ ಆನ್ಸಿ ಅವರಿದ್ದ ಕಾರಿನ ಚಾಲಕ ಅಬ್ದುಲ್ ರೆಹಮಾನ್ ಅವರನ್ನು ಎಚ್ಚರಿಸಲು ಹಿಂಬಾಲಿಸಿದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ . ಅಬ್ಲುಲ್ ರೆಹಮಾನ್ ಮದ್ಯಪಾನ ಮಾಡಿದ್ದರು, ಹಾಗಾಗಿ ಅವರನ್ನು ಎಚ್ಚರಿಸಲು ಬೆನ್ನಟ್ಟಿದೆ ಎಂದು ತಂಗಚ್ಚನ್ ಹೇಳಿದ್ದಾರೆ.
ಕೊಚ್ಚಿ: ಐಷಾರಾಮಿ ಕಾರಿನಲ್ಲಿ ಶಂಕಿತ ಡ್ರಗ್ ಪೆಡ್ಲರ್ (drug peddler) ಅತಿವೇಗದಿಂದ ಬೆನ್ನಟ್ಟಿ ಸಂಭವಿಸಿದ ಅಪಘಾತದಲ್ಲಿ ಮಾಜಿ ಮಿಸ್ ಕೇರಳ ಆನ್ಸಿ ಕಬೀರ್ (Ansi Kabeer) ಮತ್ತು ರನ್ನರ್ ಅಪ್ ಅಂಜನಾ ಶಾಜನ್ (Anjana Shajan) ಸೇರಿದಂತೆ ಮೂವರು ನವೆಂಬರ್ 1 ರಂದು ಸಾವಿಗೀಡಾಗಿದ್ದರು ಎಂದು ಕೊಚ್ಚಿ ಪೊಲೀಸ್ ಕಮಿಷನರ್ ಸಿ.ಎಚ್.ನಾಗರಾಜು (CH Nagaraju) ತಿಳಿಸಿದ್ದಾರೆ. ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್‌ನೊಂದಿಗೆ ಮಾತನಾಡಿದ ನಾಗರಾಜು ಕಾರಿನಲ್ಲಿದ್ದ ಆನ್ಸಿ, ಆಕೆಯ ಗೆಳತಿ ಮತ್ತು ಚಾಲಕ ವೇಗವಾಗಿ ಓಡಿಸಲು ಒತ್ತಾಯಿಸಿದಾಗ ಅಪಘಾತ ಸಂಭವಿಸಿದೆ ಎಂದು ತನಿಖೆಯಿಂದ ಕಂಡು ಬಂದಿದೆ ಎಂದು ಅವರು ಹೇಳಿದ್ದಾರೆ. ಪಾರ್ಟಿಯ ನಂತರ, ಸೈಜು ತಂಗಚ್ಚನ್ (Saiju Thankachan) ಕೆಲವು ಪ್ರಸ್ತಾಪಗಳನ್ನು ಮಾಡಿದ್ದು ಅದನ್ನು ಅವರು ತಿರಸ್ಕರಿಸಿದರು. ಅದು ಈ ರೀತಿ ಬೆನ್ನಟ್ಟುವುದಕ್ಕೆ ಕಾರಣವಾಯಿತು” ಎಂದು ಅವರು ಹೇಳಿದರು. ವಿಶೇಷ ತನಿಖಾ ತಂಡ ಮಂಗಳವಾರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು, ಈ ರೀತಿ ಬೆನ್ನಟ್ಟದೇ ಇದ್ದರೆ ಮೂವರೂ ಬದುಕುತ್ತಿದ್ದರು. ನ್ಯಾಯಾಲಯವು ತಂಗಚ್ಚನ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು ಅವರ ಪೊಲೀಸ್ ಕಸ್ಟಡಿಯನ್ನು ಇನ್ನೂ ಮೂರು ದಿನಗಳವರೆಗೆ ವಿಸ್ತರಿಸಿದೆ. ಅವರು ಮಾದಕ ವ್ಯಸನಿಯಾಗಿದ್ದಾರೆ ಮತ್ತು ಅನೇಕ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಡರಾತ್ರಿ ಪಾರ್ಟಿ ಮಾಡಿ ಹಲವು ಹುಡುಗಿಯರಿಗೆ ಕಿರುಕುಳ ನೀಡುತ್ತಿದ್ದ ಎಂಬ ಮಾಹಿತಿ ನಮಗೆ ಲಭಿಸಿದೆ. ಈ ಬಗ್ಗೆ ದೂರು ಬಂದರೆ ಹೆಚ್ಚಿನ ಪ್ರಕರಣಗಳನ್ನು ದಾಖಲಿಸುತ್ತೇವೆ. ನಾವು ಅವರ ವಿರುದ್ಧ ಕ್ರಿಮಿನಲ್ ಬೆದರಿಕೆ (ಸೆಕ್ಷನ್ 506), ಅಪರಾಧ ನರಹತ್ಯೆ (ಸೆಕ್ಷನ್ 299) ಮತ್ತು ಇತರ ಸೆಕ್ಷನ್‌ಗಳ (IPC) ಎರಡು ಪ್ರಕರಣಗಳನ್ನು ದಾಖಲಿಸಿದ್ದೇವೆ, ”ಎಂದು ಕಮಿಷನರ್ ಹೇಳಿದರು.
ತನಿಖೆಯ ವೇಳೆ ತಂಗಚ್ಚನ್ ಅವರು ತಮ್ಮ ಆಡಿ ಕಾರಿನಲ್ಲಿ ಆನ್ಸಿ ಅವರಿದ್ದ ಕಾರಿನ ಚಾಲಕ ಅಬ್ದುಲ್ ರೆಹಮಾನ್ ಅವರನ್ನು ಎಚ್ಚರಿಸಲು ಹಿಂಬಾಲಿಸಿದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ . ಅಬ್ಲುಲ್ ರೆಹಮಾನ್ ಮದ್ಯಪಾನ ಮಾಡಿದ್ದರು, ಹಾಗಾಗಿ ಅವರನ್ನು ಎಚ್ಚರಿಸಲು ಬೆನ್ನಟ್ಟಿದೆ ಎಂದು ತಂಗಚ್ಚನ್ ಹೇಳಿದ್ದಾರೆ. ಆದಾಗ್ಯೂ, ಚೇಸಿಂಗ್ ಕಾರನ್ನು ತಪ್ಪಿಸಲು ತಾನು ಗರಿಷ್ಠ ವೇಗದಲ್ಲಿ ವಾಹನವನ್ನು (ಫೋರ್ಡ್ ಆಸ್ಪೈರ್) ಓಡಿಸಿದೆ ಎಂದು ರೆಹಮಾನ್ ಪೊಲೀಸರಿಗೆ ತಿಳಿಸಿದ್ದಾರೆ. ಕುಂಡನೂರ್ ಜಂಕ್ಷನ್ ಬಳಿ ತಂಗಚ್ಚನ್ ನಮ್ಮ ಕಾರನ್ನು ತಡೆದು ಹೋಟೆಲ್‌ಗೆ ಹಿಂತಿರುಗುವಂತೆ ಬೆದರಿಕೆ ಹಾಕಿದ್ದರು ಎಂದು ರೆಹಮಾನ್ ಹೇಳಿದ್ದಾರೆ.
ಈ ಅಪಘಾತದಲ್ಲಿ ಮಾಜಿ ಮಿಸ್ ಕೇರಳ ಆನ್ಸಿ ಕಬೀರ್ ಮತ್ತು ರನ್ನರ್ ಅಪ್ ಅಂಜನಾ ಶಾಜನ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಕಾರಿನಲ್ಲಿದ್ದ ಅವರ ಸ್ನೇಹಿತ ಜಾಹೀರಾತು ವೃತ್ತಿಪರರಾದ ಎಂ ಆಶಿಕ್ ಒಂದು ವಾರದ ನಂತರ ನಿಧನರಾದರು. ಅವರ ಚಾಲಕ ರೆಹಮಾನ್ ಸೀಟ್ ಬೆಲ್ಟ್ ಧರಿಸಿದ್ದರಿಂದ ಗಾಯಗಳಿಂದ ಪಾರಾಗಿದ್ದಾರೆ. ಕಬೀರ್ ಮತ್ತು ಶಾಜನ್ ಹೋಟೆಲ್‌ನಲ್ಲಿ ಡಿಜೆ ಪಾರ್ಟಿಯಲ್ಲಿ ಭಾಗವಹಿಸಲು ಹೋಗಿದ್ದರು. ತನಿಖಾ ತಂಡವು ಹೋಟೆಲ್‌ನಲ್ಲಿನ ಸಿಸಿಟಿವಿ ಫೂಟೇಜ್‌ನ ಹಾರ್ಡ್ ಡಿಸ್ಕ್ ಅನ್ನು ವಶಪಡಿಸಿಕೊಂಡರೂ, ಆರಂಭದಲ್ಲಿ ಅವರು ಪಾರ್ಟಿಯ ಯಾವುದೇ ದೃಶ್ಯಗಳನ್ನು ಪಡೆಯಲು ಅವರು ವಿಫಲರಾಗಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ, ಪಾರ್ಟಿ ವೇಳೆ ಅಹಿತಕರ ಘಟನೆ ನಡೆದಿದೆ ಎಂದು ವರದಿಗಳು ಹೇಳಿವೆ. ವಿಷಯವು ಕೆಟ್ಟ ತಿರುವು ಪಡೆಯುವ ಮೊದಲು ಅವರು ಹೋಟೆಲ್‌ನಿಂದ ಹೊರಬಂದರು. ಅಪಘಾತದ ಸಮಯದಲ್ಲಿ ಇಬ್ಬರು ಮಹಿಳೆಯರ ಕಾರನ್ನು ಹಿಂಬಾಲಿಸುತ್ತಿದ್ದರು ಎಂದು ಪೊಲೀಸರು ಪತ್ತೆ ಮಾಡಿದ್ದಾರೆ.
ಕೇರಳ ಪೊಲೀಸರು ಡಿಜೆ ಪಾರ್ಟಿ ನಡೆದ ಹೋಟೆಲ್ ಮಾಲೀಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಹಲವು ಬಾರಿ ಸಮನ್ಸ್ ನೀಡಿದರೂ ಹೋಟೆಲ್ ಮಾಲೀಕ ರಾಯ್ ಜೆ.ವಯಲಾಟಿನ್ ಹೇಳಿಕೆ ದಾಖಲಿಸಿಕೊಳ್ಳಲು ಮುಂದಾಗಲಿಲ್ಲ. ರಾಜ್ಯ ಪೊಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಮಧ್ಯಪ್ರವೇಶಿಸಿದ ನಂತರ, ಅವರು ಅಂತಿಮವಾಗಿ ತನಿಖಾ ತಂಡದ ಮುಂದೆ ಹಾಜರಾಗಿದ್ದರು. ಕೇರಳ ಪೊಲೀಸ್ ತನಿಖಾ ತಂಡವು ಅಂತಿಮವಾಗಿ ರಾಯ್ ಜೆ ವಯಲಾಟಿನ್ (ಹೋಟೆಲ್ ಮಾಲೀಕರು) ಮತ್ತು ಅವರ ಐವರು ಸಿಬ್ಬಂದಿಯನ್ನು ಬಂಧಿಸಿತು. ನಂತರ ವಯಲಾಟಿನ್ ಪಾರ್ಟಿಯ ದೃಶ್ಯಗಳನ್ನು ಒಳಗೊಂಡಿರುವ ಸಿಸಿಟಿವಿ ಹಾರ್ಡ್ ಡಿಸ್ಕ್ ಅನ್ನು ನಾಶಪಡಿಸಲಾಗಿದೆ ಎಂದು ಪೊಲೀಸರ ಮುಂದೆ ಒಪ್ಪಿಕೊಂಡರು.
ನಂತರ ಎಸ್‌ಪಿ ಬಿಜಿ ಜಾರ್ಜ್ ನೇತೃತ್ವದ ಅಪರಾಧ ವಿಭಾಗದ ವಿಶೇಷ ತಂಡ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಪಾರ್ಟಿಯ ದೃಶ್ಯಗಳಿದ್ದ ಹಾರ್ಡ್ ಡಿಸ್ಕ್ ಅನ್ನು ನಾಶಪಡಿಸಿ ಸಮೀಪದ ಹಿನ್ನೀರಿಗೆ ಎಸೆದಿರುವುದನ್ನು ಹೋಟೆಲ್ ಸಿಬ್ಬಂದಿಗಳು ವಿಚಾರಣೆ ವೇಳೆ ಬಹಿರಂಗಪಡಿಸಿದ್ದರಿಂದ, ಸೋಮವಾರ (ನವೆಂಬರ್ 22) ಮಧ್ಯಾಹ್ನ ಸ್ಕೂಬಾ ಡೈವರ್ಸ್ ತಂಡವು ಕೊಚ್ಚಿ ಬಳಿ ಹಿನ್ನೀರಲ್ಲಿ ಶೋಧ ನಡೆಸುತ್ತಿದ್ದು. ಹಾರ್ಡ್ ಡಿಸ್ಕ್ ಅನ್ನು ಪತ್ತೆ ಹಚ್ಚಲು ಪ್ರಯತ್ನಿಸಿದೆ.
ಇದನ್ನೂ ಓದಿ: ಕಾರು ಅಪಘಾತದಲ್ಲಿ ಮಿಸ್ ಕೇರಳ 2019 ವಿಜೇತೆ ಆನ್ಸಿ ಕಬೀರ್, ರನ್ನರ್ ಅಪ್ ಅಂಜನಾ ಶಾಜನ್ ದುರ್ಮರಣ