ಮಣಿಪುರದ ರಾಜಧಾನಿ ಇಂಫಾಲ್(Imphal)ನಲ್ಲಿರುವ ಬೀರ್ ಟಿಕೇಂದ್ರಜಿತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಾಯು ಪ್ರದೇಶದಲ್ಲಿ ಅಪರಿಚಿತ ಡ್ರೋನ್ಗಳ ಹಾರಾಟ ಕಂಡುಬಂದಿರುವ ಹಿನ್ನೆಲೆಯಲ್ಲಿ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಭಾನುವಾರ ಮಧ್ಯಾಹ್ನ 2.30ರ ಸುಮಾರಿಗೆ ವಾಯು ಪ್ರದೇಶದಲ್ಲಿ ಡ್ರೋನ್ಗಳ ಹಾರಾಟ ಕಂಡುಬಂದಿತ್ತು.
ಇಂಫಾಲ್‌ಗೆ ಮತ್ತು ಅಲ್ಲಿಂದ ಹೊರಡುವ ಕೆಲವು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ಇತರ ಒಳಬರುವ ವಿಮಾನಗಳು ಇಂಫಾಲ್ ಏರ್‌ಫೀಲ್ಡ್‌ನಿಂದ ಹಿಂತಿರುಗಿದವು ಮತ್ತು ಇತರ ಸ್ಥಳಗಳಿಗೆ ತಿರುಗಿಸಲಾಯಿತು.
ಹಿಂಸಾಚಾರ ಪೀಡಿತ ರಾಜ್ಯವಾದ ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿಲ್ಲ. ಈ ಹಿನ್ನೆಲೆಯಲ್ಲಿ ಮಣಿಪುರ ಸರ್ಕಾರವು ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧವನ್ನು ನವೆಂಬರ್ 23 ರವರೆಗೆ 5 ದಿನಗಳವರೆಗೆ ವಿಸ್ತರಿಸಿದೆ. ಇದಾದ ಬೆನ್ನಲ್ಲೇ ಈ ಘಟನೆ ಬೆಳಕಿಗೆ ಬಂದಿದೆ.
ಮತ್ತಷ್ಟು ಓದಿ: Manipur Violence: ಮಣಿಪುರ ಹಿಂಸಾಚಾರ ವಿಚಾರ: ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳಿಂದ ಅವಿಶ್ವಾಸ ನಿರ್ಣಯ ಮಂಡನೆ
ತಮಗೆ ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನ ನೀಡಬೇಕೆಂಬ ಮೈಥಿ ಸಮುದಾಯದ ಬೇಡಿಕೆಯನ್ನು ವಿರೋಧಿಸಿ ಮಣಿಪುರದ ಗುಡ್ಡಗಾಡು ಜಿಲ್ಲೆಗಳಲ್ಲಿ ಕುಕಿ ಬುಡಕಟ್ಟು ಐಕ್ಯತಾ ಮೆರವಣಿಗೆ ಬಳಿಕ ರಾಜ್ಯದಲ್ಲಿ ಹಿಂಸಾಚಾರ ನಡೆಯುತ್ತಲೇ ಇದೆ. ಮೇ 3 ರಿಂದ ಆರಂಭವಾದ ಸಂಘರ್ಷದಲ್ಲಿ ಇಲ್ಲಿಯವರೆಗೆ 200 ಮಂದಿ ಸಾವನ್ನಪ್ಪಿದ್ದಾರೆ.
ಏತನ್ಮಧ್ಯೆ, ಮಣಿಪುರದಲ್ಲಿ ಗಸ್ತು ತಿರುಗುತ್ತಿದ್ದ ಅಸ್ಸಾಂ ರೈಫಲ್ಸ್ ಯೋಧರ ಮೇಲೆ ಕಳೆದ ಗುರುವಾರ (ನವೆಂಬರ್ 16) ಹೊಂಚು ಹಾಕಿ ದಾಳಿ ನಡೆಸಿದ್ದರು. ಈ ಹಿಂದೆ ಉಗ್ರರು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಅಳವಡಿಸಿ ಸ್ಫೋಟ ನಡೆಸಿದ್ದರು. ಆಗ ಅಸ್ಸಾಂ ರೈಫಲ್ಸ್‌ನ ತುಕಡಿಯ ಮೇಲೂ ದಾಳಿಗಳು ನಡೆದಿವೆ.
ರಾಜ್ಯದ ತೆಂಗನೋಪಾಲ್ ಜಿಲ್ಲೆಯ ಸೈಬೋಲ್ ಪ್ರದೇಶದಲ್ಲಿ ಉಗ್ರರು ಈ ದಾಳಿ ನಡೆಸಿದ್ದಾರೆ. ಭಾರತೀಯ ಸೇನೆಯ ಅಸ್ಸಾಂ ರೈಫಲ್ಸ್ ಯೋಧರು ನಿಯಮಿತವಾಗಿ ಗಸ್ತು ತಿರುಗುತ್ತಿದ್ದಾಗ ದಾಳಿ ನಡೆಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ