CDS Bipin Rawat: ಜನರಲ್ ಬಿಪಿನ್ ರಾವತ್ ನಿರ್ವಹಿಸುತ್ತಿದ್ದ ಸಿಡಿಎಸ್ ಹುದ್ದೆಯ ಮಹತ್ವ, ಆ ಸ್ಥಾನದ ಜವಾಬ್ದಾರಿಗಳಿವು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 13, 2021 | 2:43 PM

ಬಿಪಿನ್ ರಾವತ್ ಅವರ ಅಕಾಲ ಮರಣವು ದೇಶದ ಭದ್ರತೆ ಮತ್ತು ದೀರ್ಘಾವಧಿ ಕಾರ್ಯಪದ್ಧತಿಯ ಯೋಜನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ರಕ್ಷಣಾ ವಿದ್ಯಮಾನಗಳನ್ನು ಗಮನಿಸುವವರು ವಿಶ್ಲೇಷಿಸುತ್ತಿದ್ದಾರೆ

CDS Bipin Rawat: ಜನರಲ್ ಬಿಪಿನ್ ರಾವತ್ ನಿರ್ವಹಿಸುತ್ತಿದ್ದ ಸಿಡಿಎಸ್ ಹುದ್ದೆಯ ಮಹತ್ವ, ಆ ಸ್ಥಾನದ ಜವಾಬ್ದಾರಿಗಳಿವು
ಸಿಡಿಎಸ್ ಬಿಪಿನ್ ರಾವತ್
Follow us on

ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ರಕ್ಷಣಾ ಸಚಿವರ ನಂತರದ ಸ್ಥಾನದಲ್ಲಿದ್ದವರು ಬಿಪಿನ್ ರಾವತ್. ದೇಶದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಾಗಿ (Chief of Defence Staff – CDS) ಆಗಿ ನೇಮಕಗೊಂಡಿದ್ದ ಬಿಪಿನ್ ರಾವತ್ ಅವರಿಗೆ ಮಹತ್ವದ ಹೊಣೆಗಾರಿಕೆಯನ್ನು ನೀಡಲಾಗಿತ್ತು. ಬಿಪಿನ್ ರಾವತ್ ಅವರ ಅಕಾಲ ಮರಣವು ದೇಶದ ಭದ್ರತೆ ಮತ್ತು ದೀರ್ಘಾವಧಿ ಕಾರ್ಯಪದ್ಧತಿಯ ಯೋಜನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ರಕ್ಷಣಾ ವಿದ್ಯಮಾನಗಳನ್ನು ಗಮನಿಸುವವರು ವಿಶ್ಲೇಷಿಸುತ್ತಿದ್ದಾರೆ. ರಾವತ್ ಅವರು ನಿರ್ವಹಿಸುತ್ತಿದ್ದ ಕಾರ್ಯಭಾರಗಳ ವಿವರ ಇಲ್ಲಿದೆ.

ಬಿಪಿನ್ ರಾವತ್ ಅವರು ನೌಕಾಪಡೆ, ವಾಯುಪಡೆ ಮತ್ತು ಭೂಸೇನೆ ಮುಖ್ಯಸ್ಥರಿಗಿಂತಲೂ ಉನ್ನತ ಹಂತದ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಭವಿಷ್ಯದ ಸಂಘರ್ಷಗಳಿಗೆ ಭಾರತದ ರಕ್ಷಣಾ ಪಡೆಗಳನ್ನು ಸಜ್ಜುಗೊಳಿಸುವ ಮಹತ್ವಾಕಾಂಕ್ಷಿ ಪ್ರಯತ್ನದ ಭಾಗವಾಗಿ ಭಾರತ ಸರ್ಕಾರ ಮೂರೂ ರಕ್ಷಣಾ ಪಡೆಗಳ ಸಿಬ್ಬಂದಿ ಮುಖ್ಯಸ್ಥರ ಹುದ್ದೆಯನ್ನು (ಸಿಡಿಎಸ್) ಹುದ್ದೆಯನ್ನು ಸೃಷ್ಟಿಸಿತ್ತು. ಈಗಲೂ ಭೂಸೇನೆ, ವಾಯುಸೇನೆ, ನೌಕಾಪಡೆಗಳಿಗೆ ಪ್ರತೇಕ ಮುಖ್ಯಸ್ಥರಿದ್ದಾರೆ. ಈ ಮೂರು ಹುದ್ದೆಗಳಿಗೂ ಮೇಲ್ಪಟ್ಟು ಉನ್ನತವಾದ ಹುದ್ದೆಯನ್ನು 2019ರ ಡಿಸೆಂಬರ್ 30ರಂದು ಹೊಸದಾಗಿ ಸೃಷ್ಟಿಸಲಾಗಿತ್ತು. ಅದೇ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಹುದ್ದೆ.

ಭಾರತದಲ್ಲಿ ಮೊದಲ ಸಿಡಿಎಸ್ ಆಗಿ ಬಿಪಿನ್ ರಾವತ್ ಅವರನ್ನು 2019ರ ಡಿಸೆಂಬರ್ 30ರಂದು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶಿಸಿತ್ತು. ದೇಶದ ರಕ್ಷಣಾ ಸಚಿವರ ನಂತರದ ಸ್ಥಾನದಲ್ಲಿದ್ದವರೇ ಸಿಡಿಎಸ್ ಬಿಪಿನ್ ರಾವತ್. ಭೂಸೇನಾ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಅವರ ಅನುಭವ, ಜ್ಞಾನ, ಪರಿಣತಿಯನ್ನು ಸಮರ್ಥವಾಗಿ ದೇಶದ ಸೇನೆಗಳ ಆಧುನೀಕರಣ ಹಾಗೂ ಸಮನ್ವಯತೆಗೆ ಬಳಸಿಕೊಳ್ಳಲು ಸಿಡಿಎಸ್ ಆಗಿ ನೇಮಿಸಲಾಗಿತ್ತು.

ಸಿಡಿಎಸ್‌ ಹುದ್ದೆಯಲ್ಲಿದ್ದ ಬಿಪಿನ್ ರಾವತ್ ಕೇಂದ್ರ ರಕ್ಷಣಾ ಸಚಿವರಿಗೆ ದೇಶದ ರಕ್ಷಣೆಗೆ ಸಂಬಂಧಿಸಿದ ವಿಷಯಗಳಲ್ಲಿ ನೇತವಾಗಿ ಸಲಹೆ ನೀಡುತ್ತಿದ್ದರು. ರಕ್ಷಣಾ ಪಡೆಗಳ ಏಕೀಕೃತ ಕಮಾಂಡ್ ರಚನೆ ಹಾಗೂ ಸೇನೆಯ ಪುನರ್ ಸಂಘಟನೆ ಯೋಜನೆ ರೂಪಿಸುವ ಮಹತ್ವದ ಹೊಣೆಗಾರಿಕೆಯನ್ನೂ ಅವರು ಯಶಸ್ವಿಯಾಗಿ ನಿರ್ವಹಿಸುತ್ತಿದ್ದರು. ದೇಶದ ಭವಿಷ್ಯದ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ ಹೊಣೆಗಾರಿಕೆ ಎನಿಸಿದೆ.

ಸರ್ಜಿಕಲ್ ಸ್ಟ್ರಿಕ್ ರೂವಾರಿ
ಬಿಪಿನ್ ರಾವತ್ ಅವರಿಗೆ ಈ ಮಹತ್ವದ ಜವಾಬ್ದಾರಿ ಹೊರಿಸಲು ಮುಖ್ಯ ಕಾರಣ ಅವರ ಸುದೀರ್ಘ ಸೇವಾ ಅನುಭವ ಮ್ತು ಪರಿಶ್ರಮಿ ವ್ಯಕ್ತಿತ್ವ. 2016ರಲ್ಲಿ ಜಮ್ಮು ಕಾಶ್ಮೀರದ ಉರಿಯಲ್ಲಿ ಸೇನಾ ನೆಲೆಯ ಮೇಲೆ ಪಾಕಿಸ್ತಾನದ ಉಗ್ರರು ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಭಾರತವು ಆಗ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಪಾಕ್ ನೆಲಕ್ಕೆ ನುಗ್ಗಿ ಉಗ್ರರನ್ನು ಸದೆಬಡಿಯು ಈ ಯೋಜನೆ ರೂಪಿಸಿದ್ದು ಬಿಪಿನ್ ರಾವತ್. 1987ರಲ್ಲಿ ಚೀನಾ ಸೇನೆಯನ್ನು ಹಿಮ್ಮೆಟ್ಟಿಸಿದ್ದ ದಾಖಲೆಯೂ ಅವರ ಹೆಸರಿನಲ್ಲಿದೆ. ಸಮದೋರಂಗ್ ಕಣಿವೆಯಲ್ಲಿ ಚೀನಾ ಸೇನೆ ಎದುರಿಸಿ ಹಿಮ್ಮೆಟ್ಟಿಸಿದ್ದರು. ಉತ್ತಮ ಯೋಧ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ಯುದ್ದ ಸೇವಾ ಮೆಡಲ್, ವಿಶಿಷ್ಟ ಸೇವಾ ಮೆಡಲ್, ಸೇನಾ ಮುಖ್ಯಸ್ಥರ ಪ್ರಶಂಸಾ ಪತ್ರ, ಸೇನಾ ಕಮ್ಯಾಂಡರ್‌ ಪ್ರಶಂಸಾ ಪತ್ರದ ಗೌರವಕ್ಕೂ ಪಾತ್ರರಾಗಿದ್ದರು.

ಭಾರತದಲ್ಲಿ ಭೂ ಸೇನೆ, ವಾಯುಸೇನೆ, ನೌಕಾಪಡೆಗಳು ಕಾಲಕ್ಕೆ ತಕ್ಕಂತೆ ಅಪ್​ಗ್ರೇಡ್ ಆಗಿಲ್ಲ, ಇನ್ನೂ ಹಳೆಯ ಕಾಲದ ಶಸ್ತ್ರಾಸ್ತ್ರಗಳೇ ಇವುಗಳ ಬತ್ತಳಿಕೆಯಲ್ಲಿವೆ. ಇವುಗಳನ್ನು ಬದಲಿಸಿ, ಅಪ್​ಗ್ರೇಡ್ ಮಾಡುವ ಹೊಣೆಗಾರಿಕೆಯು ಸಿಡಿಎಸ್ ಬಿಪಿನ್ ರಾವತ್ ಅವರದ್ದಾಗಿತ್ತು. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಗಳಿಗೆ ಸೇರ್ಪಡೆಯಾದ ಹೊಸ ಶಸ್ತ್ರಾಸ್ತ್ರಗಳ ಖರೀದಿ ಪ್ರಕ್ರಿಯೆ, ದೇಶೀ ನಿರ್ಮಾಣದ ಶಸ್ತ್ರಾಸ್ತ್ರಗಳ ಖರೀದಿ ನಿರ್ಧಾರದ ಹಿಂದೆ ರಾವತ್ ಅವರ ಶ್ರದ್ಧೆ ಮತ್ತು ದೂರದೃಷ್ಟಿ ಕೆಲಸ ಮಾಡಿತ್ತು.

ಸಿಡಿಎಸ್ ಹುದ್ದೆಯ ಜವಾಬ್ದಾರಿಗಳು
ಭವಿಷ್ಯದ ಭದ್ರತಾ ಅನಿಶ್ಚಿತತೆಗಳಿಗೆ ರಕ್ಷಣಾ ಪಡೆಗಳನ್ನು ಸಜ್ಜುಗೊಳಿಸುವ ಯೋಜನೆಗಳನ್ನು ರೂಪಿಸಿ, ಅನುಷ್ಠಾನದ ಬಗ್ಗೆ ರಕ್ಷಣಾ ಸಚಿವರೊಂದಿಗೆ ನಿಯಮಿತ ಚರ್ಚೆ ನಡೆಸುವುದು ಸಿಡಿಎಸ್​ನ ಮುಖ್ಯ ಹೊಣೆಗಾರಿಕೆ. ಇದರ ಜೊತೆಗೆ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಮಾನವೀಯ ನೆರವು ಒದಗಿಸುವುದರ ಜೊತೆಗೆ ವಿಪತ್ತು ಪರಿಹಾರ ಕಾರ್ಯಾಚರಣೆಗಳನ್ನು ನಿರ್ವಹಿಸುವುದು. ಸಮಗ್ರ ಸಾಮರ್ಥ್ಯ ಅಭಿವೃದ್ಧಿ ಯೋಜನೆ (Integrated Capability Development Plan – ICDP) ಜಾರಿಗೊಳಿಸುವುದು. 5 ವರ್ಷಗಳ ಅವದಿಯ ರಕ್ಷಣಾ ಬಂಡವಾಳ ಸ್ವಾಧೀನ ಯೋಜನೆ, 2 ವರ್ಷದ ರೋಲ್-ಆನ್ ವಾರ್ಷಿಕ ಸ್ವಾಧೀನ ಯೋಜನೆ (AAP) ಜಾರಿ, ಕೇಂದ್ರ ಸರ್ಕಾರದೊಂದಿಗೆ ಬಜೆಟ್​ ರೂಪಿಸಲು ನಿರಂತರ ಚರ್ಚೆ, ರಕ್ಷಣಾ ಪಡೆಗಳ ಯುದ್ಧೋಪಕರಣ ಸ್ವಾಧೀನ ಪ್ರಕ್ರಿಯೆಯಲ್ಲಿ ಆದ್ಯತೆ ನಿರ್ವಹಿಸುವ ಜವಾಬ್ದಾರಿಗಳು ಸಿಡಿಎಸ್​ ಮೇಲಿರುತ್ತವೆ. ಸಿಡಿಎಸ್ ತೆಗೆದುಕೊಳ್ಳುವ ನಿರ್ಧಾರಗಳು ದೇಶದ ಭದ್ರತೆಯನ್ನು ಹಲವು ವರ್ಷಗಳ ಅವಧಿಗೆ ಪ್ರಭಾವಿಸಬಲ್ಲದು.

ಕಮಾಂಡ್​ಗಳ ಪುನರ್​ರಚನೆ ಹಾಗೂ ಸಶಸ್ತ್ರಪಡೆಗಳ ಯುದ್ಧೋಪಕರಣಗಳ ಆಧುನೀಕರಣ ಪ್ರಕ್ರಿಯೆಗೆ ವೇಗ ನೀಡಿದ್ದ ಸಿಡಿಎಸ್ ಬಿಪಿನ್ ರಾವತ್​ರ ಸಾವು ದೇಶಕ್ಕಾದ ನಷ್ಟ. ಮುಂದಿನ ದಿನಗಳಲ್ಲಿ ಮತ್ತೊಬ್ಬರು ಅವರ ಸ್ಥಾನಕ್ಕೆ ನೇಮಕವಾಗಿ ಈ ಎಲ್ಲ ಪ್ರಕ್ರಿಯೆಗಳನ್ನು ಮತ್ತೆ ಒಂದು ಹಂತಕ್ಕೆ ತರಲು ಸಾಕಷ್ಟು ಸಮಯ ಬೇಕಾಗುತ್ತದೆ.

ಇದನ್ನೂ ಓದಿ: ಬಿಪಿನ್ ರಾವತ್ ಸಾವಿನ ಬಗ್ಗೆ ಆಕ್ಷೇಪಾರ್ಹ ಪೋಸ್ಟ್; ಮೈಸೂರು ಮೂಲದ ಟಿಕೆ ವಸಂತ್ ಕುಮಾರ್ ಬಂಧನ
ಇದನ್ನೂ ಓದಿ: ನಮ್ಮ ಸೇನೆಗಳ ಬಗ್ಗೆ ಹೆಮ್ಮೆ ಇದೆ; ಸ್ವರ್ಣಿಮ್ ವಿಜಯ್ ಪರ್ವ್​​ನಲ್ಲಿ ಸಿಡಿಎಸ್ ಬಿಪಿನ್ ರಾವತ್​​ರ ರೆಕಾರ್ಡ್ ಮಾಡಿದ ಸಂದೇಶ ಪ್ರಸಾರ

Published On - 10:56 am, Mon, 13 December 21