ನವದೆಹಲಿ: ದೇಶಾದ್ಯಂತ 62 ನಗರಗಳಲ್ಲಿ 2,600 ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ಗಳನ್ನು ಆರಂಭಿಸಲು ಕೇಂದ್ರ ಸರ್ಕಾರದಿಂದ ಒಪ್ಪಿಗೆ ದೊರೆತಿದೆ. ಫೇಮ್-2 ಯೋಜನೆಯಡಿ ಚಾರ್ಜಿಂಗ್ ಸ್ಟೇಷನ್ಗಳು ಆರಂಭಗೊಳ್ಳಲಿವೆ. ನಗರಗಳಲ್ಲಿ ಪ್ರತಿ 4 ಕಿಲೋಮೀಟರ್ ಗೆ ಒಂದರಂತೆ ಚಾರ್ಜಿಂಗ್ ಸ್ಟೇಷನ್ ಆರಂಭಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ‘ನೀತಿ’ ಆಯೋಗದ ಸಿಇಓ ಅಮಿತಾಬ್ ಕಾಂತ್ ಟ್ವೀಟ್ ಮಾಡಿದ್ದಾರೆ.
ಗಮನಾರ್ಹವೆಂದ್ರೆ ಬೆಂಗಳೂರಿನಲ್ಲಿ ವಿಧಾನಸೌಧ ಸೇರಿದಂತೆ ಈಗಾಗಲೇ ಕೆಲವೆಡೆ ಇಂತಹ ಕೇಂದ್ರಗಳು ಇವೆಯಾದ್ರೂ ವಾಹನಗಳ ವಿದ್ಯುತ್ ಚಾಲಿತ ವಾಹನಗಳ ಕೊರತೆಯಿಂದಾಗಿ ಅವು ಕಾರ್ಯಗತವಾಗದೆ ಧೂಳು ಹಿಡಿದಿವೆ. ಇನ್ನು ವಿಧಾನಸೌಧದ ಬಳಿ ಕಳೆದ ವರ್ಷ ಜನವರಿಯಲ್ಲಿ ಆರಂಭಗೊಂಡ ಇ.ವಿ. ಚಾರ್ಜಿಂಗ್ ಸ್ಟೇಷನ್ ಸಹ ಅನುಪಯೋಗಿ ಆಗಿದೆ. ಏಕೆಂದ್ರೆ ಜನಪ್ರತಿನಿಧಿಗಳಾಗಲಿ ಅಥವಾ ವಿಧಾನಸೌಧದಲ್ಲಿ ಸಿಬ್ಬಂದಿಯಾಗಲಿ ವಿದ್ಯುತ್ ಚಾಲಿತ ವಾಹನಗಳನ್ನು ಬಳಕೆ ಮಾಡಿ, ಮಾದರಿಯಾಗೋಣ ಎಂಬ ಸದುದ್ದೇಶ ಹೊಂದಿಲ್ಲ. ಹಾಗಾಗಿ ಇಲ್ಲಿನ ಕೇಂದ್ರಕ್ಕೆ ವಾಹನಗಳು ಬಾರದೆ ಕೇಂದ್ರವು ಕಾರ್ಯಸ್ಥಗಿತವಾಗಿದೆ.