ಇಂದಿನಿಂದ ಪೌರತ್ವದ ಪರ ಬಿಜೆಪಿ ಮೆಗಾ ಜನಜಾಗೃತಿ ಅಭಿಯಾನ

ಇಂದಿನಿಂದ ಪೌರತ್ವದ ಪರ ಬಿಜೆಪಿ ಮೆಗಾ ಜನಜಾಗೃತಿ ಅಭಿಯಾನ

ದೆಹಲಿ: ದೇಶದಲ್ಲಿ ಈಗಲೂ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಹೋರಾಟಗಳು ನಡೆಯುತ್ತಿವೆ. ಬಹುತೇಕ ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಇದು ಕೇಂದ್ರ ಸರ್ಕಾರದ ಚಿಂತೆಗೆ ಕಾರಣವಾಗಿದೆ. ಹೀಗಾಗಿ ಈಗ ಬಿಜೆಪಿ ನಾಯಕರು ಬೀದಿಗಿಳಿದು ನೇರವಾಗಿ ಜನರ ಮನೆ ಮನೆ ಬಾಗಿಲಿಗೆ ಹೋಗಿ ಪೌರತ್ವ ಕಾಯಿದೆಯ ಪರವಾಗಿ ಜನಜಾಗೃತಿ ನಡೆಸಲು ನಿರ್ಧರಿಸಿದ್ದಾರೆ.

ಕೇಂದ್ರ ಸರ್ಕಾರ ಏನೇ ಕ್ರಮ ಕೈಗೊಂಡ್ರೂ ಅದಕ್ಕೆ ತದ್ವಿರುದ್ಧ ಹೋರಾಟ ನಡೆಯುತ್ತಲೇ ಇರುತ್ತೆ. ಮೊದಲು ನೋಟ್ ಬ್ಯಾನ್ ಮಾಡಿದಾಗ ಜನ ಸಾಮಾನ್ಯರಿಗೆ, ವ್ಯಾಪಾರಿಗಳಿಗೆ ಹೊಡೆತ ಬಿದ್ದಿತ್ತು. ಇದ್ರಿಂದ ಮೋದಿ ಸರ್ಕಾರದ ವಿರುದ್ಧ ವಿರೋಧಿ ಅಭಿಪ್ರಾಯ ರೂಪುಗೊಂಡಿತ್ತು. ಈಗ ಮತ್ತದೇ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ, ಕೇಂದ್ರ ಸರ್ಕಾರ ನಿರೀಕ್ಷಿಸದೇ ಇದ್ದ ರೀತಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಯ ದಂಗೆ ಎದ್ದಿದೆ. ಇದ್ರಿಂದ ಕಂಗೆಟ್ಟಿರುವ ಬಿಜೆಪಿ ನಾಯಕರು ಇದಕ್ಕೆ ಮುಲಾಮು ಹುಡುಕಲು ಹೊರಟಿದ್ದಾರೆ.

ಪೌರತ್ವದ ಪರ ಬಿಜೆಪಿ ಮೆಗಾ ಜನಜಾಗೃತಿ ಅಭಿಯಾನ:
ಹೌದು, ಪೌರತ್ವದ ಕಿಚ್ಚು ದೇಶವ್ಯಾಪಿ ವ್ಯಾಪಿಸಿದ್ದು, ಪ್ರತಿಭಟನೆಯ ಆಕ್ರೋಶಕ್ಕೆ ಕಮಲ ಪಡೆ ಕಂಗೆಟ್ಟು ಕೂತಿದೆ. ಈ ಜನಾಕ್ರೋಶಕ್ಕೆ ಪರಿಹಾರ ಕಂಡುಕೊಳ್ಳುವ ಸಲುವಾಗಿ, ದೇಶಾದ್ಯಂತ ಮೆಗಾ ಜನಸಂಪರ್ಕ ಅಭಿಯಾನ ನಡೆಸಲು ನಿರ್ಧರಿಸಿದ್ದಾರೆ. ಈ ಮೆಗಾ ಅಭಿಯಾನದ ಮೂಲಕ ದೇಶದ ಮೂರು ಕೋಟಿ ಜನರನ್ನ ತಲುಪುವುದು ಬಿಜೆಪಿಯ ಪ್ಲ್ಯಾನ್ ಆಗಿದೆ. ಹೀಗಾಗಿ, ಇಂದಿನಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಪೌರತ್ವ ತಿದ್ದುಪಡಿ ಕಾಯಿದೆ ಬಗ್ಗೆ ದೆಹಲಿಯಲ್ಲಿ ಮನೆ ಮನೆಗೆ ತೆರಳಿ ಜನರಿಗೆ ಅರಿವು ಮೂಡಿಸಲಿದ್ದಾರೆ. ಕಾಯಿದೆಯಿಂದ ಭಾರತದ ಮುಸ್ಲಿಮರಿಗೂ ಸಮಸ್ಯೆ ಆಗಲ್ಲ. ಏನಿದ್ದರೂ ಈ ಕಾಯ್ದೆ ಮೂಲಕ ನೆರೆಯ ಮೂರು ರಾಷ್ಟ್ರಗಳಿಂದ ವಲಸೆ ಬಂದಿರುವ 6 ಅಲ್ಪಸಂಖ್ಯಾತ ಧರ್ಮದ ಜನರಿಗೆ ಪೌರತ್ವ ನೀಡಲಾಗುತ್ತೆ ಅನ್ನೋದನ್ನ ಜನರಿಗೆ ವಿವರಿಸಲಿದ್ದಾರೆ.

ಇನ್ನೂ ಕೇಂದ್ರ ಸಚಿವರು ಇವತ್ತು ದೇಶದ ವಿವಿಧ ಲೋಕಸಭಾ ಕ್ಷೇತ್ರಗಳಲ್ಲಿ ಸಿಎಎ ಪರ ಜನಜಾಗೃತಿ ಮೂಢಿಸುವ ಜನಸಂಪರ್ಕ ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಮ್ಮ ಕ್ಷೇತ್ರವಾದ ಲಕ್ನೋ, ಜೆ.ಪಿ.ನಡ್ಡಾ ಗಾಜಿಯಾಬಾದ್, ನಿತಿನ್ ಗಡ್ಕರಿ ನಾಗಪುರ, ಸದಾನಂದಗೌಡ ಬೆಂಗಳೂರು, ನಿರ್ಮಲಾ ಸೀತಾರಾಮನ್ ರಾಜಸ್ತಾನದ ಜೈಪುರ, ನರೇಂದ್ರ ಸಿಂಗ್ ತೋಮರ್ ಮಧ್ಯಪ್ರದೇಶ, ರವಿಶಂಕರ್ ಪ್ರಸಾದ್ ಹರಿಯಾಣದ ಫರೀದಾಬಾದ್ ನಲ್ಲಿ ಜನಸಂಪರ್ಕ ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ.

ಕಾಂಗ್ರೆಸ್ ಹಾಗೂ ಮುಸ್ಲಿಂ ಸಮುದಾಯ ನಡೆಸುತ್ತಿರುವ ಪ್ರತಿಭಟನೆಗಳಿಂದ ಬಿಜೆಪಿಗೆ ಯಾವುದೇ ದಕ್ಕೆಯಾಗಬಾರದು ಅನ್ನೋ ಮುಂಜಾಗ್ರತೆಯಿಂದ ಈ ಜನಸಂಪರ್ಕ ಅಭಿಯಾನ ನಡೆಸಲಾಗುತ್ತಿದೆ.

Click on your DTH Provider to Add TV9 Kannada