ಮಧ್ಯಪ್ರದೇಶ: ಉಜ್ಜಯಿನಿಯ ಲೋಕಸಭಾ ಸದಸ್ಯ ಅನಿಲ್ ಫಿರೋಜಿಯಾ (Anil Firojiya) ಅವರ ಹಾಗೆ ಕ್ಷೇತ್ರದ ಅಭಿವೃದ್ಧಿಗೆ (development) ಎನು ಬೇಕಾದರೂ ಮಾಡಲು ಸಿದ್ಧ, ಯಾವುದೇ ತ್ಯಾಗಕ್ಕೂ ರೆಡಿಯೆಂಬ ಮನೋಭಾವ ಪ್ರತಿಯೊಬ್ಬ ಜನ ಪ್ರತಿನಿಧಿಯಿಟ್ಟುಕೊಂಡರೆ ದೇಶ ಹತ್ತು ವರ್ಷಗಳಲ್ಲಿ ಕಾಣುವಷ್ಟು ಪ್ರಗತಿಯನ್ನು ಕೇವಲ ಒಂದು ವರ್ಷದಲ್ಲಿ ಕಾಣವುದು ನಿಸ್ಸಂಶಯ. ಅನಿಲ್ ಫಿರೋಜಿಯಾ ಅವರ ಉದಾಹರಣೆ ನೀಡುವುದಕ್ಕೆ ಕಾರಣವೂ ಇದೆ. ಅಸಲಿಗೆ ವಿಷಯವೇನು ಗೊತ್ತಾ? ಫೆಬ್ರುವರಿಯಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ (Nitin Gadkari) ಮತ್ತು ಫಿರೋಜಿಯಾ ಭೇಟಿಯಾದಾಗ ಸಂಸದರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಬೇಕೆಂದು ಕೋರಿದರು. ಆಗ ಧಡೂತಿ ದೇಹದ ಒಡೆಯರಾಗಿದ್ದ ಫಿರೋಜಿಯಾ ಅವರೆಡೆ ನೋಡಿದ ಗಡ್ಕರಿ ಹಣ ಅನುದಾನ ಪಡೆಯಲು ಅವರ ಮುಂದೆ ಷರತ್ತನ್ನಿಡುತ್ತಾರೆ. ಫಿರೋಜಿಯಾ ತಮ್ಮ ದೇಹದ ತೂಕದಲ್ಲಿ ಕಳೆದುಕೊಳ್ಳುವ ಪ್ರತಿ ಕೆಜಿಗೆ ರೂ. 1000 ಕೋಟಿ ಅನುದಾನ ನೀಡುವುದಾಗಿ ಸಚಿವರು ಆಶ್ವಾಸನೆ ನೀಡುತ್ತಾರೆ!
ದೇಹ ತೂಕ ಕರಗಿಸಲು ಫಿರೋಜಿಯಾಗೆ ಪ್ರೇರಣೆಯಾಗಲು ಗಡ್ಕರಿ ತಮ್ಮ ಹಳೆಯ ಫೋಟೋವೊಂದನ್ನು ತೋರಿಸುತ್ತಾರೆ. ಆ ಫೋಟೋ ಗಡ್ಕರಿಯವರದ್ದೇ ಅಂತ ನಂಬುವುದು ಫಿರೋಜಿಯಾಗೆ ಸಾಧ್ಯವಾಗಲಿಲ್ಲವಂತೆ. ಯಾಕೆಂದರೆ, ಸಚಿವರು ಸಹ ಸ್ಥೂಲದೇಹಿಯಾಗಿದ್ದಾಗ ತೆಗೆದ ಚಿತ್ರವದು. ಅವರಾಗ 135 ಕೆಜಿ ತೂಗುತ್ತಿದ್ದರಂತೆ, ಈಗ ಅವರ ತೂಕ 93 ಕೆಜಿ ಮಾತ್ರ! ಫೋಟೋ ನೋಡಿ ಪ್ರೇರೇಪಣೆ ಹೊಂದುವ ಫಿರೋಜಿಯಾ ಸಚಿವರೊಡ್ಡಿದ ಷರತ್ತನ್ನು ಸವಾಲಾಗಿ ಸ್ವೀಕರಿಸಿ ಫೆಬ್ರುವರಿಯಿಂದ ಇಲ್ಲಿಯವರೆಗೆ ತಮ್ಮ ತೂಕವನ್ನು 32 ಕೆಜಿಗಳಷ್ಟು ಇಳಿಸಿಕೊಂಡಿದ್ದಾರೆ.
ಜೂನ್ ಹೊತ್ತಿಗೆ ಫಿರೋಜಿಯಾ ದೇಹತೂಕದಲ್ಲಿ 15 ಕೆಜಿಗಳಷ್ಟು ಕಡಿಮೆ ಮಾಡಿಕೊಂಡಾಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಫಿಟ್ ಇಂಡಿಯ’ ಚಳುವಳಿಯನ್ನು ಪ್ರಾರಂಭಿಸಿದ್ದರು. ‘ನಾನು ಕರಗಿಸಿಕೊಳ್ಳುವ ಪ್ರತಿ 1 ಕೆಜಿ ತೂಕಕ್ಕೆ ಉಜ್ಜಯಿನಿ ಕ್ಷೇತ್ರದ ಅಭಿವೃದ್ಧಿಗೆಂದು ರೂ. 1000 ಕೋಟಿ ಅನುದಾನ ನೀಡುವುದಾಗಿ ಸಾರ್ವಜನಿಕ ಸಭೆಯೊಂದರಲ್ಲಿ ಸಚಿವ ಗಡ್ಕರಿ ಹೇಳಿದ್ದರು. ನಾನು ಇದುವರೆಗೆ 15 ಕೆಜಿಗಳಷ್ಟು ತೂಕವನ್ನು ಕಮ್ಮಿ ಮಾಡಿಕೊಂಡಿದ್ದೇನೆ. ತೂಕವನ್ನು ಮತ್ತಷ್ಟು ಕಡಿಮೆ ಮಾಡಿಕೊಂಡು ನನಗೆ ಪ್ರಾಮಿಸ್ ಮಾಡಿದ ಹಾಗೆ ಹಣ ಬಿಡುಗಡೆ ಮಾಡುವಂತೆ ಅವರನ್ನು ವಿನಂತಿಸಿಕೊಳ್ಳುತ್ತೇನೆ,’ ಎಂದು ಫಿರೋಜಿಯಾ ಜೂನಲ್ಲಿ ಎ ಎನ್ ಐ ಸುದ್ದಿಸಂಸ್ಥೆಗೆ ಹೇಳಿದ್ದರು.
‘ತೂಕ ಕಡಿಮೆ ಮಾಡಿಕೊಳ್ಳುವುದು ಉಜ್ಜಯಿನಿ ಕ್ಷೇತ್ರಕ್ಕೆ ಹೆಚ್ಚುವರಿ ಅನುದಾನ ಒದಗಿಸುವುದಾದರೆ, ನಾನು ಫಿಟ್ನೆಸ್ ರೆಜೀಮ್ ಮತ್ತಷ್ಟು ಮುಂದುವರಿಸಲು ತಯಾರಿದ್ದೇನೆ,’ ಎಂದು ಫಿರೋಜಿಯಾ ಹೇಳಿದ್ದರು.
ತೂಕ ಕಡಿಮೆ ಮಾಡಿಕೊಳ್ಳಲು ತಾನು ಕಟ್ಟುನಿಟ್ಟಿನ ಆಹಾರ ಕ್ರಮ ಪಾಲಿಸಿದ್ದಾಗಿ ಉಜ್ಜಯಿನಿಯ ಬಿಜೆಪಿ ಸಂಸದ ಹೇಳಿದ್ದಾರೆ. ಅವರು ತಮ್ಮ ವ್ಯಾಯಾಮ ದಿನಚರಿಯನ್ನೂ ವಿವರಿಸಿದ್ದಾರೆ. ಬೆಳಗ್ಗೆ 5.30 ಕ್ಕೆ ಎದ್ದು ಅವರು ವಾಕ್ ಗೆ ಹೋಗುತ್ತಾರೆ. ವಾಕ್ ಮುಗಿಸಿಕೊಂಡು ಬಂದ ಬಳಿಕ ಯೋಗ, ಏರೋಬಿಕ್ಸ್ ನಲ್ಲಿ ತೊಡಗಿ ಟ್ರೆಡ್ ಮಿಲ್ ಮೇಲೆ ಓಡುತ್ತಾರೆ.
ತನ್ನ ಬೆಳಗಿನ ಉಪಹಾರ ಬಹಳ ಹಗುರವಾಗಿರುತ್ತದೆ ಎಂದು ಎಂದು ಹೇಳುವ ಫಿರೋಜಿಯಾ ಆಯುರ್ವೇದ ಆಹಾರಕ್ರಮವನ್ನು ಅನುಸರಿಸುತ್ತಾರೆ. ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕಾಗಿ ಸಲಾಡ್, ಒಂದು ಬೋಲ್ ನಷ್ಟು ಹಸಿರು ತರಕಾರಿ ಮತ್ತು ಬೇರೆ ಬೇರೆ ಕಾಳುಗಳಿಂದ ತಯಾರಿಸಿದ ಒಂದು ರೋಟಿ ಸೇವಿಸುತ್ತಾರೆ. ಆಗಾಗ್ಗೆ ಊಟದ ನಂತರ ಡ್ರೈ ಫ್ರುಟ್ಸ್ ಇಲ್ಲವೇ ಗೆಜ್ಜರಿಯ ಸೂಪ್ ಸೇವಿಸುತ್ತಾರಂತೆ.
ಅಕ್ಟೋಬರ್ 17ರಂದು ಎಎನ್ ಐಗೆ ನೀಡಿರುವ ಸಂದರ್ಶನವೊಂದರಲ್ಲಿ ಫಿರೋಜಿಯಾ ತಾನು ಸಚಿವ ಗಡ್ಕರಿ ಅವರು ಷರತ್ತನ್ನು ಸವಾಲಾಗಿ ಸ್ವೀಕರಿಸಿ ಹೆಚ್ಚುಕಡಿಮೆ 32 ಕೇಜಿಯಷ್ಟು ತೂಕ ಇಳಿಸಿರುವುದಾಗಿ ಹೇಳಿದ್ದಾರೆ. ಫಿರೋಜಿಯಾ ಅವರ ಹೊಸರೂಪ ನೋಡಿ ಸಚಿವರು ದಿಗ್ಬ್ರಾಂತರಾದರಂತೆ! ತಾವು ಪ್ರಾಮಿಸ್ ಮಾಡಿದ ಗಡ್ಕರಿ ಅವರು ಉಜ್ಜಯಿನಿ ಕ್ಷೇತ್ರದ ಅಭಿವೃದ್ಧಿಗೆ ರೂ. 2300 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ನೀಡಿದ್ದಾರಂತೆ.
Published On - 1:24 pm, Tue, 18 October 22