ಮಧ್ಯಪ್ರದೇಶ: ಅತ್ಯಾಚಾರ ಸಂತ್ರಸ್ತೆಯನ್ನು ಆರೋಪಿಯೊಂದಿಗೆ ಹಗ್ಗದಲ್ಲಿ ಕಟ್ಟಿ ಭಾರತ್ ಮಾತಾ ಕೀ ಜೈ ಎಂದು ಕೂಗಿ ಮೆರವಣಿಗೆ ನಡೆಸಿದ ಗ್ರಾಮಸ್ಥರು

|

Updated on: Mar 29, 2021 | 1:54 PM

Madhya Pradesh: ಮಧ್ಯಪ್ರದೇಶದ ಅಲಿರಾಜ್​ಪುರ್‌ ಜಿಲ್ಲೆಯಲ್ಲಿ ಆರೋಪಿ ಜತೆ ಅತ್ಯಾಚಾರ ಸಂತ್ರಸ್ತೆಯನ್ನ ಹಗ್ಗದಲ್ಲಿ ಕಟ್ಟಿ ಗ್ರಾಮಸ್ಥರು ಮೆರವಣಿಗೆ ನಡೆಸಿದ್ದಾರೆ. ಮೆರವಣಿಗೆ ವೇಳೆ ಸಂತ್ರಸ್ತೆಗೆ ಹೊಡೆಯುತ್ತಿರುವುದು ವಿಡಿಯೊದಲ್ಲಿದೆ. ಅಲ್ಲಿದ್ದ ಕೆಲವು ಗಂಡಸರು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದಾರೆ.

ಮಧ್ಯಪ್ರದೇಶ: ಅತ್ಯಾಚಾರ ಸಂತ್ರಸ್ತೆಯನ್ನು ಆರೋಪಿಯೊಂದಿಗೆ ಹಗ್ಗದಲ್ಲಿ ಕಟ್ಟಿ ಭಾರತ್ ಮಾತಾ ಕೀ ಜೈ ಎಂದು ಕೂಗಿ ಮೆರವಣಿಗೆ ನಡೆಸಿದ ಗ್ರಾಮಸ್ಥರು
ಪ್ರಾತಿನಿಧಿಕ ಚಿತ್ರ
Follow us on

ಭೋಪಾಲ್: ಮಧ್ಯಪ್ರದೇಶದ ಅಲಿರಾಜ್​ಪುರ್‌ ಜಿಲ್ಲೆಯ ಬುಡಕಟ್ಟು ಜನರ ಗ್ರಾಮವೊಂದರಲ್ಲಿ 16 ಹರೆಯದ ಅತ್ಯಾಚಾರ ಸಂತ್ರಸ್ತೆಯನ್ನು ಆರೋಪಿಯೊಂದಿಗೆ ಹಗ್ಗದಲ್ಲಿ ಕಟ್ಟಿ ಮೆರವಣಿಗೆ ನಡೆಸಿದ ಘಟನೆ ಭಾನುವಾರ ನಡೆಸಿದೆ. ಸಂತ್ರಸ್ತೆ ಮತ್ತು ಆರೋಪಿಯನ್ನು ಹಗ್ಗದಲ್ಲಿ ಕಟ್ಟಿ ಗ್ರಾಮಸ್ಥರು ‘ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗಿ ಮೆರವಣಿಗೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಈ ಪ್ರಕರಣದಲ್ಲಿ ಆರೋಪಿ ಸೇರಿದಂತೆ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ವಿಡಿಯೊದಲ್ಲೇನಿದೆ?
ಆರೋಪಿ ಜತೆ ಅತ್ಯಾಚಾರ ಸಂತ್ರಸ್ತೆಯನ್ನು ಹಗ್ಗದಲ್ಲಿ ಕಟ್ಟಿ ಗ್ರಾಮಸ್ಥರು ಮೆರವಣಿಗೆ ನಡೆಸಿದ್ದಾರೆ. ಮೆರವಣಿಗೆ ವೇಳೆ ಸಂತ್ರಸ್ತೆಗೆ ಹೊಡೆಯುತ್ತಿರುವುದು ವಿಡಿಯೊದಲ್ಲಿದೆ. ಇನ್ನು ಕೆಲವು ಗಂಡಸರು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದಾರೆ. ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ದಿಂದ ಸುಮಾರು 400 ಕಿಮೀ ದೂರದಲ್ಲಿರುವ ಅಲಿರಾಜ್ ಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.  ಸಂತ್ರಸ್ತೆಯನ್ನು ಮೆರವಣಿಗೆ ನಡೆಸುವಾಗ ಆಕೆಯ ಕುಟುಂಬದವರೂ ಅದರಲ್ಲಿ ಭಾಗಿಯಾಗಿದ್ದರು. ಘಟನೆ ಬಗ್ಗೆ ತಿಳಿದ ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದಾರೆ. ಈ ಬಗ್ಗೆ ಎರಡು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಅಧಿಕಾರಿ ದಿಲೀಪ್ ಸಿಂಗ್ ಬಿಲ್ವಾಲ್ ಹೇಳಿದ್ದಾರೆ.

ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಆರೋಪದಲ್ಲಿ 21ರ ಹರೆಯದ ವ್ಯಕ್ತಿಯೊಬ್ಬನ ಮೇಲೆ ಪ್ರಕರಣ ದಾಖಲಾಗಿದೆ. ಸಂತ್ರಸ್ತೆಯನ್ನು ಮೆರವಣಿಗೆ ನಡೆಸಿ, ಆಕೆಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಕುಟುಂಬದ ಸದಸ್ಯರು ಮತ್ತು ಗ್ರಾಮಸ್ಥರ ವಿರೋಧ ಎಫ್ಐಆರ್ ದಾಖಲಾಗಿದೆ ಎಂದು ಬಿಲ್ವಾಲ್ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಭಾರತೀಯ ದಂಡ ಸಂಹಿತೆ (IPC) ಮತ್ತು ಪೊಕ್ಸೊ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಲಾಗಿದೆ, ಸಂತ್ರಸ್ತೆಯ ಕುಟುಂಬದ ಸದಸ್ಯರ ವಿರುದ್ಧ ಭಾರತೀಯ ದಂಡ ಸಂಹಿತೆ 294 (ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ಕೃತ್ಯ, 355(ವ್ಯಕ್ತಿಯನ್ನು ಅವಮಾನಿಸುವ ಉದ್ದೇಶದಿಂದ ಹಲ್ಲೆ ಅಥವಾ ಅಪರಾಧ), 323 ( ನೋವನ್ನುಂಟುಮಾಡುವುದು), 342 (ತಪ್ಪಾದ ನಿರ್ಬಂಧ) ಮತ್ತು ಇನ್ನಿತರ ಸೆಕ್ಷನ್​ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ .

ಇದನ್ನೂ ಓದಿ:  ಅತ್ಯಾಚಾರಕ್ಕೆ ಯತ್ನಿಸಿದವನೊಂದಿಗೆ 20 ನಿಮಿಷ ಕಾದಾಡಿ, ನಂತರ ಆತನ ಗುಪ್ತಾಂಗವನ್ನೇ ಕತ್ತರಿಸಿದ ಮಹಿಳೆ

ಮನನೊಂದ ಮಹಿಳೆ ಸಾಬರಮತಿ ನದಿಗೆ ಹಾರಿ ಆತ್ಮಹತ್ಯೆ; ಸಾವಿಗೂ ಮುನ್ನ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

Published On - 1:52 pm, Mon, 29 March 21