ಕೋಡೂರು, ಡಿಸೆಂಬರ್ 20: ದೇಶದಲ್ಲೇ ಪ್ರಥಮ ಬಾರಿಗೆ ಬಾಡಿಗೆ ತಾಯ್ತನದ ಮೂಲಕ ಉತ್ತಮ ಜಾತಿಯ ಪುಂಗನೂರು ಕರು ಜನಿಸಿದೆ. ಅನ್ನಮಯ್ಯ ಜಿಲ್ಲೆಯ ರೈಲ್ವೇ ಕೋಡೂರು ಸಮೀಪದ ಶೆಟ್ಟಿಗುಂಟಾದಲ್ಲಿ ಪಶುವೈದ್ಯರು ಹಸುವಿಗೆ ಪ್ರಸವ ಮಾಡಿಸಿ, ಪುಂಗನೂರು ತಳಿಯ ಕರು ಜನನಕ್ಕೆ ಕಾರಣವಾಗಿದ್ದಾರೆ. ರಾಷ್ಟ್ರೀಯ ಗೋಕುಲ್ ಮಿಷನ್‌ನ ಆಶ್ರಯದಲ್ಲಿ ಚಿಂತಲ ದೇವಿ ಅನಿಮಲ್ ಫಾರ್ಮ್‌ನಲ್ಲಿ ಅಭಿವೃದ್ಧಿಪಡಿಸಲಾದ ಏಳು ದಿನಗಳ ಹೆಪ್ಪುಗಟ್ಟಿದ ಪುಂಗನೂರು ತಳಿಯ ಭ್ರೂಣವನ್ನು ಈ ವರ್ಷದ ಮಾರ್ಚ್ 4 ರಂದು ಶೆಟ್ಟಿಗುಂಟಾ ಗ್ರಾಮದ ರೈತ ಹರಿ ಎಂಬುವವರಿಗೆ ಸೇರಿದ ನಾಟಿ ಹಸುವಿನ ಗರ್ಭದಲ್ಲಿ ಅಳವಡಿಸಲಾಯಿತು. ಮೇ 25ರಂದು ಗರ್ಭ ಧರಿಸಿರುವುದನ್ನು ಸಹಾಯಕ ನಿರ್ದೇಶಕ ಡಾ. ಅಬ್ದುಲ್ ಆರಿಫ್ ಖಚಿತಪಡಿಸಿದ್ದಾರೆ. ಕರು ಹಾಕುವ ಸಮಯದಲ್ಲಿ ಜಾನುವಾರು ಆರೋಗ್ಯ ಕಾಪಾಡಲು ಆರ್ ಬಿಕೆ ವತಿಯಿಂದ ಖನಿಜ ಲವಣಗಳಿರುವ ಮೇವನ್ನು ಉಚಿತವಾಗಿ ನೀಡಲಾಯಿತು.
ತುಂಬುಗರ್ಭಿಣಿ ಹಸು ಭಾನುವಾರ (ಡಿಸೆಂಬರ್ 17) ರಾತ್ರಿ ಪುಂಗನೂರು ತಳಿಯ ಕರುವಿಗೆ ಜನ್ಮ ನೀಡಿದೆ ಎಂದು ಪ್ರಕ್ರಿಯೆಯ ಉಸ್ತುವಾರಿ ವಹಿಸಿದ್ದ ಡಾ.ಪ್ರತಾಪ್ ಮಾಧ್ಯಮಗಳಿಗೆ ತಿಳಿಸಿದರು. ಹುಟ್ಟಿದ ಕರು ಸಂಪೂರ್ಣ ಆರೋಗ್ಯವಾಗಿದೆ ಎಂದು ತಿಳಿಸಿದರು. ಡಾ. ಪ್ರತಾಪ್ ಮಾತನಾಡಿ, ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಇನ್ ವಿಟ್ರೊ ಫರ್ಟಿಲೈಸೇಶನ್ ಮತ್ತು ಭ್ರೂಣ ವರ್ಗಾವಣೆ ಮೂಲಕ ಪುಂಗನೂರಿನ ಕರು ಜನಿಸಿದೆ. 5 ಸಾವಿರದಿಂದ 10 ಸಾವಿರ ವೆಚ್ಚದಲ್ಲಿ ಭ್ರೂಣ ವರ್ಗಾವಣೆ ಮೂಲಕ ನಮಗೆ ಬೇಕಾದ ಜಾನುವಾರುಗಳ ಸಂತತಿಯನ್ನು ಮಾಡಿಸಿಕೊಳ್ಳಬಹುದು ಎಂದು ಅವರು ವಿವರಿಸಿದರು.
Also Read: Surrogacy – ಬಾಡಿಗೆ ತಾಯ್ತನದಿಂದ ನಯನತಾರಾ ಮಗು ಪಡೆದ ಪ್ರಕರಣ; ಆಸ್ಪತ್ರೆ ಬಂದ್ ಮಾಡಿಸಲು ಶಿಫಾರಸ್ಸು
ಪುಂಗನೂರು ತಳಿಯ ಹಸುಗಳ ವಿಶೇಷತೆಯೂ ಅದೇ..
ಪುಂಗನೂರು ಹಸುಗಳು ವಿಶ್ವದ ಅತ್ಯಂತ ಚಿಕ್ಕ ಗಾತ್ರದ ಹಸುಗಳಾಗಿವೆ. ಅವು ಸಾಮಾನ್ಯ ಹಸುಗಳಿಗಿಂತ ಗಾತ್ರದಲ್ಲಿ ತುಂಬಾ ಚಿಕ್ಕದಾಗಿದೆ. ಅವು ಕೇವಲ 3 ಅಡಿ ಎತ್ತರದವರೆಗೆ ಬೆಳೆಯುತ್ತವೆ. ಈ ತಳಿಯಲ್ಲಿ 180 ರಿಂದ 200 ಹಸುಗಳು ಮಾತ್ರ ಉಳಿದಿವೆ ಎಂದು ಅಂದಾಜಿಸಲಾಗಿದೆ. ಡೈರಿ ಉದ್ಯಮದ ತಜ್ಞರು ಈ ತಳಿಯ ಹಸುಗಳನ್ನು ಸಂರಕ್ಷಿಸಲು ಶ್ರಮಿಸುತ್ತಿದ್ದಾರೆ. ಒಂದು ಲೀಟರ್ ಪುಂಗನೂರು ಹಸುವಿನ ಹಾಲು 300 ರೂ.ವರೆಗೆ ಮಾರಾಟ ವಾಗುತ್ತದೆ. ಈ ಅಪರೂಪದ ತಳಿಯ ಹಸುಗಳನ್ನು ತಲಾ 20 ಲಕ್ಷ ರೂ. ವರೆಗೆ ಮಾರಾಟ ಮಾಡಬಹುದು. ಇವು ಕಡಿಮೆ ಪ್ರಮಾಣದಲ್ಲಿ ಮಾತ್ರವೇ ಹುಲ್ಲು ತಿನ್ನುತ್ತವೆ. ದಿನಕ್ಕೆ 3 ಲೀಟರ್ ಹಾಲು ಕೊಡುತ್ತವೆ.
ಕಳೆದ ವರ್ಷ ಬಾಡಿಗೆ ತಾಯ್ತನದ ಮೂಲಕ ಮೊದಲ ಬಾರಿಗೆ ಸಾಹಿವಾಲ್ ಕರುವಿಗೆ ಜನ್ಮ ನೀಡಿದ ಹಸು..
ಕಳೆದ ವರ್ಷ ಇದೇ ರೀತಿಯಲ್ಲಿ ಒಂಗೋಲ್ ಹಸುವಿಗೆ ಸಾಹಿವಾಲ್ ಕರು ಜನಿಸಿತ್ತು. ತಿರುಪತಿ ಎಸ್ ವಿ ಗೋ ಕೇರ್ ಸೆಂಟರ್ ನಲ್ಲಿ ಈ ಉತ್ತಮ ತಳಿಯ ಹಸುಗಳ ಅಂಡಾಣುವನ್ನು ಸಂಗ್ರಹಿಸಿ ಎಸ್ ವಿ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಐವಿಎಫ್ ಲ್ಯಾಬ್ ನಲ್ಲಿ ಕೃತಕವಾಗಿ ಭ್ರೂಣಗಳನ್ನು ಅಭಿವೃದ್ಧಿಪಡಿಸಲಾಗಿದೆ. ದೇಶದಲ್ಲೇ ಪ್ರಥಮ ಬಾರಿಗೆ ಒಂಗೋಲೆಯ ಹಸು ಸಾಹಿವಾಲ್ ಕರುವಿಗೆ ಜನ್ಮ ನೀಡಿದೆ. ಈ ವರ್ಷ ರೈತರೊಬ್ಬರಿಗೆ ಸೇರಿದ ನಾಟಿ ಹಸುವನ್ನು ಬಾಡಿಗೆ ತಾಯ್ತನದ ಮೂಲಕ ಗರ್ಭ ಧರಿಸಿ, ಮೇಲುಜಾತಿಯ ಪುಂಗನೂರು ಕರುವಿಗೆ ಜನ್ಮ ನೀಡಿತ್ತು. ದೇಶಿ ಹಸುಗಳ ತಳಿಯನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರದ ಸಹಕಾರದೊಂದಿಗೆ ಈ ಕೆಲಸ ಮಾಡುತ್ತೇವೆ ಎನ್ನುತ್ತಾರೆ ಚಿಂತಲದೇವಿ ಗೋಶಾಲೆಯ ತಜ್ಞರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ