ಮಧ್ಯಪ್ರದೇಶ: ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಕಂದಾಯ ಇಲಾಖೆ ಸಿಬ್ಬಂದಿ, ಸಾಕ್ಷ್ಯ ನಾಶ ಮಾಡಲು ಹಣವನ್ನೇ ನುಂಗಿದ!
ಬರ್ಖೇಡಾ ಗ್ರಾಮದ ವ್ಯಕ್ತಿಯೊಬ್ಬರು ಸಿಂಗ್ ಲಂಚ ಕೇಳುತ್ತಿದ್ದಾರೆ ಎಂದು ನಮಗೆ ದೂರು ನೀಡಿದ್ದರು. ಹಣವನ್ನು ಸ್ವೀಕರಿಸಿದ ಪಟ್ವಾರಿ ಎಸ್‌ಪಿಇ ತಂಡವನ್ನು ಕಂಡೊಡನೇ ಹಣವನ್ನು ನುಂಗಿದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಆರೋಗ್ಯವಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಭೋಪಾಲ್ ಜುಲೈ 25: ಮಧ್ಯಪ್ರದೇಶದ (Madhya Pradesh) ಕಟ್ನಿಯಲ್ಲಿ ಕಂದಾಯ ಇಲಾಖೆಯ ಪಟ್ವಾರಿ (ಕಡತಗಳ ದಾಖಲೆ ಇಟ್ಟುಕೊಳ್ಳುವವರು) ಲಂಚ (Bribe) ಸ್ವೀಕರಿಸುತ್ತಿರುವಾಗ ಲೋಕಾಯುಕ್ತ ವಿಶೇಷ ಪೊಲೀಸ್ (SPE) ತಂಡ ರೆಡ್ ಹ್ಯಾಂಡ್ ಆಗಿ ಹಿಡಿದಿದೆ. ಈ ವೇಳೆ ಸಾಕ್ಷ್ಯ ನಾಶಪಡಿಸಲು ಈ ವ್ಯಕ್ತಿ ಲಂಚವಾಗಿ ತೆಗೆದುಕೊಂಡ ಹಣವನ್ನು ನುಂಗಿರುವ ಘಟನೆ ಸೋಮವಾರ ನಡೆದಿದೆ.
ಪಟ್ವಾರಿ ಗಜೇಂದ್ರ ಸಿಂಗ್ ಅವರು ತಮ್ಮ ಖಾಸಗಿ ಕಚೇರಿಯಲ್ಲಿ 4,500 ರೂಪಾಯಿಗಳನ್ನು ಲಂಚವಾಗಿ ಸ್ವೀಕರಿಸುತ್ತಿರುವಾಗ ಎಸ್‌ಪಿಇಯ ಬಲೆಗೆ ಬಿದ್ದಿದ್ದಾರೆ. ಪೊಲೀಸ್ ತಂಡವು ಅವರನ್ನು ಕಚೇರಿಯಿಂದ ಹೊರಗೆ ಕರೆದೊಯ್ಯುವಾಗ ಸಿಂಗ್ ಬ್ಯಾಂಕ್ ನೋಟುಗಳನ್ನು ಜಗಿದು ನುಂಗಿದ್ದಾರೆ. ಈ ಘಟನೆಯ ಹಲವಾರು ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
A patwari in Katni, allegedly swallowed money he had accepted as a bribe after noticing a team of the Lokayukta’s Special Police Establishment pic.twitter.com/AgsOyDsnGM
— Anurag Dwary (@Anurag_Dwary) July 24, 2023
ಸಿಂಗ್ ಹಣವನ್ನು ನುಂಗಿದ ನಂತರ, ಪೊಲೀಸರು ಅವರನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯರ ಸಹಾಯದಿಂದ ಸಾಕ್ಷ್ಯವನ್ನು ಸಂಗ್ರಹಿಸಿದರು.
ಬರ್ಖೇಡಾ ಗ್ರಾಮದ ವ್ಯಕ್ತಿಯೊಬ್ಬರು ಸಿಂಗ್ ಲಂಚ ಕೇಳುತ್ತಿದ್ದಾರೆ ಎಂದು ನಮಗೆ ದೂರು ನೀಡಿದ್ದರು. ಹಣವನ್ನು ಸ್ವೀಕರಿಸಿದ ಪಟ್ವಾರಿ ಎಸ್‌ಪಿಇ ತಂಡವನ್ನು ಕಂಡೊಡನೇ ಹಣವನ್ನು ನುಂಗಿದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಎಸ್‌ಪಿಇ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಸಾಹು ತಿಳಿಸಿದ್ದಾರೆ.
ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ