ಮೀರಪೇಟ್, ನವೆಂಬರ್ 1: ಮೋಸ ಹೋಗುವವರು ಇದ್ದರೆ ಮೋಸ ಮಾಡುವವರೂ ಇದ್ದೇ ಇರುತ್ತಾರೆ ಎಂಬುದು ಕಾಲಕಾಲಕ್ಕೆ ಸತ್ಯವಾಗುತ್ತಿದೆ. ಸ್ವಾಮೀಜಿಯ ಸೋಗಿನಲ್ಲಿ ಮೋಸಗಾರರು ಅಮಾಯಕರನ್ನು ವಂಚಿಸುತ್ತಲೇ ಇದ್ದಾರೆ. ಹೊಸದಾಗಿ ಕಟ್ಟಿದ್ದ ಮನೆಗೆ (house warming ceremony) ಬಂದ ಸ್ವಾಮೀಜಿಯೊಬ್ಬ ಆ ಮನೆಯಲ್ಲಿದ್ದ ಚಿನ್ನಾಭರಣವನ್ನೆಲ್ಲ ಲಪಟಾಯಿಸಿದ್ದಾನೆ. ಆ ಸ್ವಾಮೀಜಿ ಅಮಾಯಕ ಜನರಿಗೆ ಹೇಗೆ ಮೋಸ ಮಾಡಿದ? 30 ತೊಲ ಚಿನ್ನಾಭರಣ (Gold Ornaments) ಕದ್ದಿದ್ದು ಹೇಗೆ? ಸಿನಿಮಾದಂತೆ ನಡೆದಿರುವ ಈ ವಂಚನೆಯನ್ನು ಪೊಲೀಸರು ಬಯಲಿಗೆಳೆದ ನಂತರ ಸ್ವಾಮೀಜಿಯನ್ನು ಕಂಬಿ ಹಿಂದೆ ಹಾಕಲಾಯಿತು. ಸ್ವಾಮೀಜಿಯ ಮ್ಯಾಜಿಕ್ ಏನೆಂದು ತಿಳಿಯಲು ನೀವು ಈ ಸ್ಟೋರಿ ಓದಲೇಬೇಕು.
ಯಾದಾದ್ರಿ ಜಿಲ್ಲೆಯ ಚೌಟುಪ್ಪಲ ಮಂಡಲದ ದೇವಳಮ್ಮ ನಗರಂ ಗ್ರಾಮದ ಸರಪಂಚ್ ಆಗಿರುವ ಕಲ್ಲೆಂ ಶ್ರೀನಿವಾಸ್ ರೆಡ್ಡಿ ಹೊಸ ಮನೆ ಕಟ್ಟಿದ್ದಾರೆ. ಸಾಮಾನ್ಯವಾಗಿ ಮನೆಯಲ್ಲಿ ಮಾಡುವ ಗೃಹ ಪ್ರವೇಶ ಮತ್ತು ವಾಸ್ತು ಪೂಜೆಗಳನ್ನು ( Vastu Puja) ಮಾಡಿಸಲು ಶ್ರೀನಿವಾಸ್ ರೆಡ್ಡಿ ಅವರು ಹೈದರಾಬಾದ್‌ನ ಎಲ್‌ಬಿ ನಗರದ ಚಿಂತಲಕುಂಟಾದ ಪರುಶರಾಮ್ ಚೈತನ್ಯ ಸ್ವಾಮಿಯನ್ನು ಸಂಪರ್ಕಿಸುತ್ತಾರೆ.
ಮನೆಯಲ್ಲಿ ದೋಷ, ನರದೃಷ್ಟಿ ಇದೆಯೆಂದು, ಏನು ಮಾಡಿದರೂ ಫಲ ಕೂಡುತ್ತಿಲ್ಲಾ ಅಲ್ಲವಾ ಎಂಬ ಆತಂಕದ ವಿಚಾರವನ್ನು ಚೈತನ್ಯ ಸ್ವಾಮಿ ಹೇಳಿದಾಗ ಶ್ರೀನಿವಾಸ್ ರೆಡ್ಡಿ ನಿಜಕ್ಕೂ ಆತಂಕಗೊಂಡರು. ವಾಸ್ತುದೋಷ ಮತ್ತು ನರದೃಷ್ಟಿ ಪರಿಹಾರವಾಗಿ ಶ್ರೀ ಚಕ್ರ ವಾಸ್ತು ಪೂಜೆಯನ್ನು ಮಾಡಬೇಕು ಎಂದು ಚೈತನ್ಯ ಸ್ವಾಮಿ ಸೂಚಿಸಿದರು. ಸ್ವಾಮಿಗಳ ಸೂಚನೆಯಂತೆ ಕಳೆದ ತಿಂಗಳು 26ರಂದು ಹೊಸಮನೆಯಲ್ಲಿ ಪೂಜೆ ಸಲ್ಲಿಸಲು ಆರಂಭಿಸಿದರು. ಎರಡು ಗಂಟೆಗಳ ಕಾಲ ಪೂಜೆ ಸಲ್ಲಿಸಿದ ನಂತರ ಸ್ವಾಮಿ, ಪೂಜೆಯ ಸಮಯದಲ್ಲಿ ಮನೆಯಲ್ಲಿನ ಚಿನ್ನವನ್ನು ತಾಮ್ರದ ಲೋಟದಲ್ಲಿ ಹಾಕಬೇಕು ಎಂದು ಸೂಚಿಸಿದರು.
ಸ್ವಾಮಿಯವರ ಸೂಚನೆ ಮೇರೆಗೆ ಕುಟುಂಬಸ್ಥರು ತಾಮ್ರದ ಬಟ್ಟಲಿನಲ್ಲಿ ಚಿನ್ನಾಭರಣಗಳನ್ನು ಹಾಕಿದರು. ಪೂಜೆಯ ಮಧ್ಯದಲ್ಲಿ ವಿಶ್ರಾಂತಿಯ ಹೆಸರಿನಲ್ಲಿ ಹತ್ತು ನಿಮಿಷ ಹೊರಗೆ ಹೋಗುವಂತೆ ಸ್ವಾಮೀಜಿ ಹೇಳಿದರು. ಕುಟುಂಬಸ್ಥರೆಲ್ಲ ಮನೆಯಿಂದ ಹೊರಬಂದಾಗ ಚೈತನ್ಯ ಸ್ವಾಮೀಜಿ ತಾಮ್ರದ ಬಟ್ಟಲಿನಲ್ಲಿದ್ದ ಚಿನ್ನಾಭರಣಗಳನ್ನು ತಮ್ಮ ಚೀಲದಲ್ಲಿ ಹಾಕಿಕೊಂಡರು.
ಅದಾದ ಮೇಲೆ ಇನ್ನೂ ಒಂದು ಗಂಟೆಯ ಕಾಲ ಪೂಜೆ ಅದೂ ಇದೂ ಅಂತಾ ಚೈತನ್ಯ ಸ್ವಾಮಿ ಮಾಡಿದ್ದಾರೆ. ನಂತರ ಪೂಜೆಗಳನ್ನು ಮುಗಿಸಿದ ಸ್ವಾಮೀಜಿ ತಾಮ್ರದ ಬಟ್ಟಲನ್ನು ಪೂಜಾ ಕೊಠಡಿಯಲ್ಲಿಟ್ಟು 20 ದಿನ ಪೂಜೆ ಮಾಡಬೇಕು. ಹಾಗೆ ಪೂಜೆ ಮಾಡಿದ 20 ದಿನಗಳ ನಂತರವೇ ತಾಮ್ರದ ಬಟ್ಟಲಿನಲ್ಲಿರುವ ಆಭರಣಗಳನ್ನು ಮುಟ್ಟಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಕೆಡುಕುಂಟಾಗುತ್ತದೆ ಎಂದು ಹೇಳಿ ಹೈದರಾಬಾದ್‌ಗೆ ತೆರಳಿದರು. 27ರಂದು ಪೂಜೆಯ ಮರುದಿನ ಶ್ರೀನಿವಾಸ್ ರೆಡ್ಡಿಗೆ ಅನುಮಾನ ಬಂದು ತಾಮ್ರದ ಚೆಂಬು ಪರೀಕ್ಷಿಸಿದ್ದರು. ತಾಮ್ರದ ಚೆಂಬಿನಲ್ಲಿ ಚಿನ್ನಾಭರಣದ ಬದಲು ತಾಮ್ರದ ವಸ್ತುಗಳು ಪತ್ತೆಯಾಗಿದ್ದು, ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಆಂದ್ರದ ಎನ್‌ಟಿಆರ್ ಜಿಲ್ಲೆಯ ನಂದಿಗಾಮ ಮಂಡಲದ ಸೋಮವಾರಂ ಗ್ರಾಮದವರಾದ ತಮ್ಮ ಸ್ನೇಹಿತ ವೆಂಕಟ ನಾಗೇಶ್ವರರಾವ್‌ಗೆ ವಾಸ್ತು ಪೂಜೆ ಹೆಸರಿನಲ್ಲಿ ಶ್ರೀನಿವಾಸ್ ರೆಡ್ಡಿ ಮನೆಯ ಆ ಚಿನ್ನಾಭರಣಗಳನ್ನು ಸ್ವಾಮೀಜಿ ನೀಡಿದ್ದ. ನಾಗೇಶ್ವರ ರಾವ್ ಖಾಸಗಿ ಅಂಗಡಿಯಲ್ಲಿ ಚಿನ್ನಾಭರಣವನ್ನು ಗಿರವಿ ಇಟ್ಟಿದ್ದ. ತನಿಖೆ ಕೈಗೆತ್ತಿಕೊಂಡ ಪೊಲೀಸರು ಸ್ವಾಮೀಜಿ ಹಾಗೂ ಮತ್ತೊಬ್ಬನನ್ನು ಬಂಧಿಸಿ ಕಂಬಿ ಹಿಂದೆ ಹಾಕಿದ್ದಾರೆ. ಆರೋಪಿಗಳಿಂದ ಕಾರು ಮತ್ತು ಚಿನ್ನಾಭರಣಗಳ ಅಡಮಾನದ ರಸೀದಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇನ್ಸ್ ಪೆಕ್ಟರ್ ಎಸ್.ದೇವೇಂದ್ರ ತಿಳಿಸಿದ್ದಾರೆ. ಪೂಜೆಯ ಹೆಸರಿನಲ್ಲಿ ಸ್ವಾಮೀಜಿಗಳ ಕುತಂತ್ರಕ್ಕೆ ಬಲಿಯಾಗಬೇಡಿ ಎಂದು ಪೊಲೀಸರು ಇದೇ ವೇಳೆ ಜನರಲ್ಲಿ ಮನವಿ ಮಾಡುತ್ತಿದ್ದಾರೆ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ