Tamil Nadu: ಡಿಎಂಕೆ ಅಧ್ಯಕ್ಷ ಎಂ.ಕೆ ಸ್ಟಾಲಿನ್ ಅವರ ಅಳಿಯ ಶಬರೀಶನ್ ನಿವಾಸದ ಮೇಲೆ ಐಟಿ ದಾಳಿ

|

Updated on: Apr 02, 2021 | 12:24 PM

ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರ ಅಳಿಯ ಶಬರೀಶನ್ ಅವರ ನಿವಾಸ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಇದು ರಾಜಕೀಯ ಪ್ರೇರಿತ ಎಂದು ಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಆರೋಪಿಸಿದ್ದಾರೆ.

Tamil Nadu: ಡಿಎಂಕೆ ಅಧ್ಯಕ್ಷ ಎಂ.ಕೆ ಸ್ಟಾಲಿನ್ ಅವರ ಅಳಿಯ ಶಬರೀಶನ್ ನಿವಾಸದ ಮೇಲೆ ಐಟಿ ದಾಳಿ
ಎಂ.ಕೆ. ಸ್ಟಾಲಿನ್
Follow us on

ಚೆನ್ನೈ: ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರ ಅಳಿಯ ಶಬರೀಶನ್ ಅವರ ನಿವಾಸ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಆದಾಯ ತೆರಿಗೆ ಇಲಾಖೆ (IT) ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ. ಸ್ಟಾಲಿನ್ ಅವರ ತಂಡದಲ್ಲಿ ಪ್ರಭಾವಿ ಆಗಿರುವ ಶಬರೀಶನ್, ಸಂಪನ್ಮೂಲ ವ್ಯಕ್ತಿಗಳನ್ನು ಕಲೆಹಾಕಲು, ಗೆಳೆಯರು ಮಾತ್ರವಲ್ಲ ಶತ್ರುಗಳನೊಡನೆಯೂ ಮಾತುಕತೆ, ಸಂಧಾನ ನಡೆಸುವ ಕಾರ್ಯದಲ್ಲಿ ಪ್ರವೀಣರಾಗಿದ್ದಾರೆ. ಬಲ್ಲಮೂಲಗಳ ಪ್ರಕಾರ ಅಣ್ಣಾ ನಗರ್​ನಲ್ಲಿ ಡಿಎಂಕೆ ಅಭ್ಯರ್ಥಿಯಾಗಿರುವ ಎಂ.ಕೆ.ಮೋಹನ್ ಅವರ ಪುತ್ರ ಕಾರ್ತಿಕ್ ಮೋಹನ್ ಅವರ ನಿವಾಸದ ಮೇಲೆಯೂ ಐಟಿ ದಾಳಿ ನಡೆದಿದೆ.

ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಉಳಿದಿರುವ ಹೊತ್ತಲ್ಲಿ ಡಿಎಂಕೆ ಅಧ್ಯಕ್ಷರ ಮಗಳ ಮನೆ ಮೇಲೆ ಐಟಿ ದಾಳಿ ರಾಜಕೀಯ ಪ್ರೇರಿತ ಎಂದು ಡಿಎಂಕೆ ಪ್ರಧಾನ ಕಾರ್ಯದರ್ಶಿ ದುರೈಮುರುಗನ್ ಹೇಳಿದ್ದಾರೆ. ವೆಲ್ಲೂರ್​ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ರೀತಿಯ ಅವಿವೇಕದ ಚಟುವಟಿಕೆಗಳಿಗೆ ನಮ್ಮ ಪಕ್ಷ ಹೆದರುವುದಿಲ್ಲ. ಇದು ಪ್ರಜಾಪ್ರಭುತ್ವ ಅಲ್ಲ. ಕೇಂದ್ರ ಸರ್ಕಾರದ ಈ ಕೃತ್ಯವನ್ನು ನಾನು ಖಂಡಿಸುತ್ತೇನೆ. ಈ ರೀತಿಯ ಕೃತ್ಯಗಳು ನಮ್ಮನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ ಎಂದಿದ್ದಾರೆ.

ಡಿಎಂಕೆ ಪಕ್ಷದ ಮಿತ್ರ ಪಕ್ಷಗಳೂ ಕೂಡಾ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿವೆ. ಡಿಎಂಕೆ ನಾಯಕ ಮಗಳ ಮನೆ ಮೇಲೆ ಐಟಿ ಅಧಿಕಾರಿಗಳು ದಿಢೀರ್ ದಾಳಿ ನಡೆಸುತ್ತಾರೆ. ಬಿಜೆಪಿ ಮೈತ್ರಿಕೂಟ ಸೋಲಿನ ಭಯದಿಂದ ಇದನ್ನೆಲ್ಲ ಮಾಡುತ್ತಿದ್ದಾರೆ. ಜನರು ಈ ರಾಜಕೀಯ ಬೆದರಿಕೆಗಳನ್ನು ನೋಡುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಅವರು ಇದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಸಿಕೆ ನಾಯಕ, ಸಂಸದ ಥೋಲ್ ತಿರುಮಾವನಲ್ ಟ್ವೀಟ್ ಮಾಡಿದ್ದಾರೆ.

ಐಟಿ ಅಧಿಕಾರಿಗಳಿಂದ ದಾಳಿ ಮಾಡಿಸುವ ಮೂಲಕ ಡಿಎಂಕೆ ಪಕ್ಷವನ್ನು ತುಳಿಯಲು ಸಾಧ್ಯವಿಲ್ಲ ಎಂದು ಅರಿಯಲೂರ್ ನಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಎಂ.ಕೆ.ಸ್ಟಾಲಿನ್ ಹೇಳಿರುವುದಾಗಿ ಡೈಲಿ ತಂತಿ ಪತ್ರಿಕೆ ಟ್ವೀಟ್ ಮಾಡಿದೆ.

ವಾರದ ಹಿಂದೆ ಡಿಎಂಕೆ ಪಕ್ಷದ ತಿರುವಣ್ಣಾಮಲೈ (ದಕ್ಷಿಣ) ಜಿಲ್ಲಾ ಕಾರ್ಯದರ್ಶಿ ಮತ್ತು ತಿರುವಣ್ಣಾಮಲೈ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಇ.ವಿ ವೇಲು ಅವರ ನಿವಾಸದ ಮೇಲೆಯೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಸ್ಟಾಲಿನ್ ಅವರ ಪುತ್ರ ಉದಯನಿಧಿ ಅವರು ಮಾಜಿ ಸಚಿವರಾದ ಅರುಣ್ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್ ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿಯೇ ಕಾರಣ ಎಂದು ಶನಿವಾರ ಹೇಳಿಕೆಯೊಂದನ್ನು ನೀಡಿದ್ದರು. ಇದರ ಬೆನ್ನಲ್ಲೇ ಸ್ಟಾಲಿನ್ ಮಗಳ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ.

ಇದನ್ನೂ ಓದಿ:  ತಮಿಳುನಾಡು ಮುಖ್ಯಮಂತ್ರಿ ಇಪಿಎಸ್ ಬಗ್ಗೆ ಅವಹೇಳನಕಾರಿ ಹೇಳಿಕೆ: ಡಿಎಂಕೆ ನಾಯಕ ಎ.ರಾಜಾಗೆ 2 ದಿನ ಚುನಾವಣಾ ಪ್ರಚಾರದಿಂದ ನಿರ್ಬಂಧ

( Income Tax department searches four premises of DMK president MK Stalin son in law Sabareesan in Chennai)

 

Published On - 11:54 am, Fri, 2 April 21