ನವದೆಹಲಿ: ದೆಹಲಿಯ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ (Independence Day) ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರ (Corruption) ಮತ್ತು ಕುಟುಂಬ ರಾಜಕಾರಣ (Nepotism) ಭಾರತ ಎದುರಿಸುತ್ತಿರುವ ಎರಡು ಅನಿಷ್ಟಗಳಾಗಿವೆ. ಇವುಗಳನ್ನು ಜಯಿಸಲು ನಾವು ಹೋರಾಡಬೇಕಾಗಿದೆ ಎಂದು ಹೇಳಿದ್ದಾರೆ.
75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೆಂಪುಕೋಟೆಯ ಆವರಣದಿಂದ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, ಸ್ವಜನ ಪಕ್ಷಪಾತವು ದೇಶದ ಸಂಸ್ಥೆಗಳನ್ನು ಅಲುಗಾಡಿಸುತ್ತಿವೆ. ಇವು ಹಲವು ಪ್ರಕರಣಗಳಲ್ಲಿ ಭ್ರಷ್ಟಾಚಾರಕ್ಕೆ ಕಾರಣವಾಗುತ್ತಿವೆ ಎಂದಿದ್ದಾರೆ. “ಭ್ರಷ್ಟಾಚಾರವು ಗೆದ್ದಲಿನ ಹಾಗೆ ದೇಶವನ್ನು ಹಾಳು ಮಾಡುತ್ತಿದೆ. ಭಾರತವು ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕು. ನಾವು ಭ್ರಷ್ಟಾಚಾರವನ್ನು ತೊಡೆದುಹಾಕಬೇಕು” ಎಂದು ಮೋದಿ ಹೇಳಿದ್ದಾರೆ.
Two big challenges we face today – corruption & ‘Parivaarvaad’ or nepotism. Corruption hollowing the country like a termite,we’ve to fight it.We’ve to raise awareness against ‘Parivaarwaad’ to realise strength of our institutions, to take country forward on the basis of merit: PM pic.twitter.com/ciXoJNegcB
— ANI (@ANI) August 15, 2022
ಭಾರತವು ಭ್ರಷ್ಟರ ವಿರುದ್ಧ ಹಾಗೂ ಭ್ರಷ್ಟಾಚಾರದ ವಿರುದ್ಧ ಎಚ್ಚರದಿಂದಿರಬೇಕು. ಭ್ರಷ್ಟಾಚಾರದ ದುಷ್ಟತನವನ್ನು ಪ್ರಚಾರ ಮಾಡುವವರನ್ನು ಶಿಕ್ಷಿಸಲು ನಾವು ಒಗ್ಗೂಡಬೇಕಾಗಿದೆ. ನಾವು ದೇಶದಿಂದ ಓಡಿಹೋದ ಜನರ ಆಸ್ತಿಯನ್ನು ವಶಪಡಿಸಿಕೊಳ್ಳಲು ನಾವು ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಭ್ರಷ್ಟಾಚಾರದ ವಿರುದ್ಧ ಹೋರಾಡಲು ನನಗೆ ಸಹಾಯ ಮಾಡಲು ನಾನು ನಿಮ್ಮೆಲ್ಲರನ್ನು ವಿನಂತಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇದನ್ನೂ ಓದಿ: Independence Day 2022: ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಪ್ರಧಾನಿ ಮೋದಿ! ಇಲ್ಲಿದೆ ಫೋಟೋ
ಸಂಸ್ಥೆಗಳಲ್ಲಿ, ಕ್ರೀಡೆಗಳಲ್ಲಿ ಇದನ್ನು ನಿರುತ್ಸಾಹಗೊಳಿಸಬೇಕಾಗಿದೆ. ಇದರ ವಿರುದ್ಧ ಕ್ರಾಂತಿಯನ್ನು ಆರಂಭಿಸಬೇಕಾಗಿದೆ. ಇದು ನಮ್ಮ ಸಾಮಾಜಿಕ ಜವಾಬ್ದಾರಿಯಾಗಿದೆ. ನಮಗೆ ಪಾರದರ್ಶಕತೆ ಬೇಕು ಎಂದು ಮೋದಿ ಹೇಳಿದ್ದಾರೆ. ವಂಶಾಡಳಿತ ರಾಜಕಾರಣವು ಕಾಂಗ್ರೆಸ್ ವಿರುದ್ಧ ಬಿಜೆಪಿಯ ದೊಡ್ಡ ಆರೋಪಗಳಲ್ಲಿ ಒಂದಾಗಿದೆ. ಈ ವರ್ಷದ ಆರಂಭದಲ್ಲಿ, ರಾಜ್ಯ ಚುನಾವಣೆಗಳ ನಂತರ, ಬಿಜೆಪಿ ಸಂಸದರ ಮಕ್ಕಳಿಗೆ ಚುನಾವಣೆಗೆ ಟಿಕೆಟ್ ನೀಡದಿರುವುದು ನನ್ನ ನಿರ್ಧಾರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.
“ಹಲವು ಸಂಸದರು ಮತ್ತು ಬಿಜೆಪಿ ಪಕ್ಷದ ಮುಖಂಡರು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ತಮ್ಮ ಮಕ್ಕಳಿಗೆ ಟಿಕೆಟ್ ಬಯಸಿದ್ದರು. ಆದರೆ, ಅವರಲ್ಲಿ ಹಲವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಬಿಜೆಪಿ ಸಂಸದರ ಮಕ್ಕಳಿಗೆ ಸ್ಪರ್ಧಿಸಲು ಟಿಕೆಟ್ ಸಿಕ್ಕಿಲ್ಲ. ಏಕೆಂದರೆ, ಅದು ವಂಶಪಾರಂಪರ್ಯ ರಾಜಕಾರಣಕ್ಕೆ ಬರುತ್ತದೆ. ಅವರಿಗೆ ನಾನು ಟಿಕೆಟ್ ನೀಡಿಲ್ಲ ಎಂದು ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಗೋವಾದಲ್ಲಿ ಪಕ್ಷದ ಗೆಲುವಿನ ನಂತರ ಪ್ರಧಾನಿ ಮೋದಿ ಹೇಳಿದ್ದರು.
ಇದನ್ನೂ ಓದಿ: Independence Day 2022: ಮಹಿಳೆಯರನ್ನು ಗೌರವಿಸಿ, ನಾರಿ ಶಕ್ತಿಯನ್ನು ಪ್ರೋತ್ಸಾಹಿಸಿ; ಭಾಷಣದ ವೇಳೆ ಭಾವುಕರಾದ ಪ್ರಧಾನಿ ಮೋದಿ
ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಝಲ್ಕರಿ ಬಾಯಿ, ರಾಣಿ ಚೆನ್ನಮ್ಮ, ಬೇಗಂ ಹಜರತ್ ಮಹಲ್ ಮುಂತಾದ ಭಾರತದ ಮಹಿಳೆಯರ ಶಕ್ತಿಯನ್ನು ನೆನಪಿಸಿಕೊಂಡಾಗ ಭಾರತ ಹೆಮ್ಮೆಯಿಂದ ಬೀಗುತ್ತದೆ ಎಂದು ನರೇಂದ್ರ ಮೋದಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರ ಕೊಡುಗೆ, ಬಲಿದಾನವನ್ನು ಪ್ರಧಾನಿ ನರೇಂದ್ರ ಮೋದಿ ನೆನಪಿಸಿಕೊಂಡಿದ್ದಾರೆ. ಗಂಡು ಮತ್ತು ಹೆಣ್ಣು ಮಕ್ಕಳನ್ನು ಸಮಾನವಾಗಿ ಕಾಣಬೇಕು ಎಂದು ಮೋದಿ ಒತ್ತಿ ಹೇಳಿದ್ದಾರೆ. ‘ನಾರಿ ಶಕ್ತಿ’ಯನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಮಹಿಳೆಯರಿಗೆ ಗೌರವ ನೀಡುವುದು ಭಾರತದ ಬೆಳವಣಿಗೆಗೆ ಪ್ರಮುಖ ಆಧಾರಸ್ತಂಭವಾಗಿದೆ. ನಮ್ಮ ‘ನಾರಿ ಶಕ್ತಿ’ಯನ್ನು ನಾವು ಬೆಂಬಲಿಸಬೇಕಾಗಿದೆ. ನಮ್ಮ ನಡವಳಿಕೆಯಲ್ಲಿ ಬದಲಾವಣೆ ಆಗುತ್ತಲೇ ಇರುತ್ತದೆ. ನಾವು ಕೆಲವೊಮ್ಮೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಮಹಿಳೆಯರನ್ನು ಅವಮಾನಿಸುತ್ತೇವೆ. ಇನ್ನೆಂದೂ ಮಹಿಳೆಯರ ಜೊತೆ ತಪ್ಪಾಗಿ ವರ್ತಿಸದಂತೆ ನಾವು ಪ್ರತಿಜ್ಞೆ ತೆಗೆದುಕೊಳ್ಳಬಹುದಲ್ಲವೇ? ಎಂದು ಪ್ರಧಾನಿ ಹೇಳಿದ್ದಾರೆ.
#WATCH | PM says, “…Be it education or science, women of the country are at top…Be it sports or battlefield, India’s women are stepping forward with a new capability&confidence. I see immense contribution by women in 25 yrs to come, much more than that in the 75-yr journey..” pic.twitter.com/X78THbXAHs
— ANI (@ANI) August 15, 2022
ಭಾರತದಲ್ಲಿ ಏಕತೆಯನ್ನು ಸಾಧಿಸಲು ಲಿಂಗ ಸಮಾನತೆಯನ್ನು ಉತ್ತೇಜಿಸಬೇಕು. “ಭಾರತ ಮೊದಲು” ಎಂಬ ಘೋಷಣೆಯ ಮೂಲಕ ನಾವು ಒಗ್ಗಟ್ಟಾಗಿದ್ದೇವೆ. ಈ ಮೂಲಕ ಜಾತಿ, ಧರ್ಮ, ಲಿಂಗವನ್ನೆಲ್ಲ ಬದಿಗಿಟ್ಟು ಭಾರತೀಯರೆಂಬ ಒಗ್ಗಟ್ಟಿನಿಂದ ನಾವು ಮುನ್ನಡೆಯಬೇಕು. ಮಾತು ಮತ್ತು ನಡತೆಯಲ್ಲಿ ಮಹಿಳೆಯರ ಘನತೆಗೆ ಕುಂದು ತರುವ ಯಾವುದನ್ನೂ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕೆಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಶಿಕ್ಷಣವಿರಲಿ, ಕ್ರೀಡೆಯಿರಲಿ ಅಥವಾ ವಿಜ್ಞಾನವಿರಲಿ ಎಲ್ಲ ವಲಯದಲ್ಲೂ ಭಾರತದ ಮಹಿಳೆಯರು ಉನ್ನತ ಸ್ಥಾನದಲ್ಲಿದ್ದಾರೆ. ಯುದ್ಧಭೂಮಿಯಲ್ಲೂ ಭಾರತದ ಮಹಿಳೆಯರು ಸಾಮರ್ಥ್ಯ ಮತ್ತು ಹೊಸ ಆತ್ಮವಿಶ್ವಾಸದೊಂದಿಗೆ ಮುನ್ನಡೆಯುತ್ತಿದ್ದಾರೆ. ಈ 75 ವರ್ಷಗಳಲ್ಲಿ ಮಹಿಳೆಯರು ಎಷ್ಟು ಸಾಧನೆ ಮಾಡಿದ್ದರೋ ಅದಕ್ಕಿಂತಲೂ ಹೆಚ್ಚು ಸಾಧನೆಯನ್ನು ಮುಂಬರುವ 25 ವರ್ಷಗಳಲ್ಲಿ ಮಾಡಲಿದ್ದಾರೆ. ಮುಂಬರುವ ದಿನಗಳಲ್ಲಿ ಮಹಿಳೆಯರ ಅಪಾರ ಕೊಡುಗೆಯನ್ನು ನಾನು ನೋಡುತ್ತೇನೆ. ಅದಕ್ಕೆ ಮಹಿಳೆಯರಿಗೆ ನಿಮ್ಮೆಲ್ಲರ ಪ್ರೋತ್ಸಾಹದ ಅಗತ್ಯವಿದೆ ಎಂದು ಮೋದಿ ಹೇಳಿದ್ದಾರೆ.