ಬೀಜಿಂಗ್​ ಚಳಿಗಾಲದ ಒಲಿಂಪಿಕ್ಸ್​​ಗೆ ಭಾರತದಿಂದ ರಾಜತಾಂತ್ರಿಕ ಬಹಿಷ್ಕಾರ; ಚೀನಾ ನಿರ್ಧಾರಕ್ಕೆ ಛೀಮಾರಿ ಹಾಕಿದ ಯುಎಸ್​

| Updated By: Lakshmi Hegde

Updated on: Feb 03, 2022 | 8:14 PM

ಒಲಿಂಪಿಕ್ಸ್​ನಲ್ಲಿ ಕ್ರೀಡಾಜ್ಯೋತಿ ಹೊತ್ತೊಯ್ಯಲು ಗಲ್ವಾನ್ ಸಂಘರ್ಷದಲ್ಲಿ ಪಾಲ್ಗೊಂಡಿದ್ದ ಕಮಾಂಡರ್​​ನನ್ನು ಆಯ್ಕೆ ಮಾಡಿದ್ದನ್ನು ಯುಎಸ್​ನ ಜನಪ್ರತಿನಿಧಿ, ರಿಪಬ್ಲಿಕನ್ ಪಕ್ಷದ ಸೆನೆಟರ್ ಜಿಮ್ ರಿಶ್ ಖಂಡಿಸಿದ್ದಾರೆ.

ಬೀಜಿಂಗ್​ ಚಳಿಗಾಲದ ಒಲಿಂಪಿಕ್ಸ್​​ಗೆ ಭಾರತದಿಂದ ರಾಜತಾಂತ್ರಿಕ ಬಹಿಷ್ಕಾರ; ಚೀನಾ ನಿರ್ಧಾರಕ್ಕೆ ಛೀಮಾರಿ ಹಾಕಿದ ಯುಎಸ್​
ಸಾಂಕೇತಿಕ ಚಿತ್ರ
Follow us on

ಚೀನಾದಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್​ಗೆ ರಾಜತಾಂತ್ರಿಕ ಬಹಿಷ್ಕಾರವನ್ನು (Diplomatic ban on the Beijing Winter Olympics) ಹೇರಲು ಭಾರತ ನಿರ್ಧರಿಸಿದೆ. 2020ರಲ್ಲಿ ಗಲ್ವಾನ್​ ಕಣಿವೆಯಲ್ಲಿ ಭಾರತದ ಸೈನಿಕರ ಮೇಲೆ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಸೈನಿಕರು(China PLA) ದಾಳಿ ನಡೆಸಿ, ಭಾರತದ 20ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದಾರೆ. ಅಂದಿನಿಂದಲೂ ಭಾರತ ಮತ್ತು ಚೀನಾ ನಡುವಿನ ಸಂಘರ್ಷ ಮತ್ತೊಂದು ಹಂತಕ್ಕೆ ಮೇಲೆರಿದ್ದು, ಈಗಲೂ ಸಹ ಗಡಿಯಲ್ಲಿ ಚೀನಾ ಉಪಟಳಕೊಡುತ್ತಲೇ ಇದೆ. ಈ ಮಧ್ಯೆ ನಾಳೆ (ಫೆ.4)ಯಿಂದ ಬೀಜಿಂಗ್​​ನಲ್ಲಿ ಚಳಿಗಾಲದ ಒಲಿಂಪಿಕ್ಸ್ ನಡೆಯಲಿದೆ. ಆದರೆ ಚೀನಾ ಒಲಿಂಪಿಕ್ಸ್​​ನಲ್ಲಿ ಕ್ರೀಡಾಜ್ಯೋತಿ ಹೊತ್ತೊಯ್ಯಲು (Torch Relay) ಗಲ್ವಾನ್​ ಕಣಿವೆಯಲ್ಲಿ ಭಾರತದ ಸೈನಿಕರ ಮೇಲೆ ದಾಳಿ ಮಾಡಿದವರಲ್ಲಿ ಒಬ್ಬನಾದ ಕಮಾಂಡರ್​  ಚಿ ಫ್ಯಾಬಾವೋ ಎಂಬಾತನನ್ನು ನಿಯೋಜಿಸಿದೆ. ಗಲ್ವಾನ್​ನಲ್ಲಿ ಭಾರತೀಯ ಯೋಧರ ಮೇಲೆ ದಾಳಿ ಮಾಡಿದವನೇ ಕ್ರೀಡಾ ಜ್ಯೋತಿ ಹೊತ್ತೊಯ್ಯುತ್ತಾನೆ ಎಂದಾದ ಮೇಲೆ ನಾವು ಒಲಿಂಪಿಕ್ಸ್​​ಗೆ ರಾಜತಾಂತ್ರಿಕ ಬಹಿಷ್ಕಾರ ಹಾಕುತ್ತೇವೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.

ಹೀಗೆ ಗಲ್ವಾನ್​ ಸಂಘರ್ಷದಲ್ಲಿ ಭಾಗವಹಿಸಿದ್ದ ಸೈನಿಕನನ್ನು ಒಲಿಂಪಿಕ್ಸ್​ ಕ್ರೀಡಾಜ್ಯೋತಿ ಹೊತ್ತೊಯ್ಯಲು ನಿಯೋಜಿಸಿದ ಚೀನಾದ ನಿರ್ಧಾರ ನಿಜಕ್ಕೂ ವಿಷಾದನೀಯ. ಇದೇ ಕಾರಣಕ್ಕೆ ಬೀಜಿಂಗ್​​ನಲ್ಲಿರುವ ನಮ್ಮ ರಾಯಭಾರಿ ಒಲಿಂಪಿಕ್ಸ್​​ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಚೀನಾ ಒಲಿಂಪಿಕ್ಸ್​ನ್ನು ರಾಜಕೀಯಗೊಳಿಸಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.

ಯುಎಸ್​ನಿಂದ ಛೀಮಾರಿ: 
ಅಮೆರಿಕ ಈಗಾಗಲೇ ಚೀನಾ ವಿಂಟರ್ ಒಲಿಂಪಿಕ್ಸ್​ಗೆ ರಾಜತಾಂತ್ರಿಕ ಬಹಿಷ್ಕಾರ ಘೋಷಿಸಿದೆ. ಇನ್ನು ಒಲಿಂಪಿಕ್ಸ್​ನಲ್ಲಿ ಕ್ರೀಡಾಜ್ಯೋತಿ ಹೊತ್ತೊಯ್ಯಲು ಗಲ್ವಾನ್ ಸಂಘರ್ಷದಲ್ಲಿ ಪಾಲ್ಗೊಂಡಿದ್ದ ಕಮಾಂಡರ್​​ನನ್ನು ಆಯ್ಕೆ ಮಾಡಿದ್ದನ್ನು ಯುಎಸ್​ನ ಜನಪ್ರತಿನಿಧಿ, ರಿಪಬ್ಲಿಕನ್ ಪಕ್ಷದ ಸೆನೆಟರ್ ಜಿಮ್ ರಿಶ್ ಖಂಡಿಸಿದ್ದಾರೆ. ಹಾಗೇ, ಚೀನಾವನ್ನು ಟೀಕಿಸಿ, ಇಂಥ ನಿರ್ಧಾರ ಕೈಗೊಳ್ಳುವುದು ನಿಜಕ್ಕೂ ನಾಚಿಕೆಗೇಡು. ಯುಎಸ್ ಭಾರತದ ಸಾರ್ವಭೌಮತ್ವವನ್ನು ಸದಾ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.

2020ರ ಜೂನ್​ 15-16ರಂದು ಗಲ್ವಾನ್​ ಕಣಿವೆಯಲ್ಲಿ ಭಾರತದ ಮೇಲೆ ಚೀನಾ ಸೈನಿಕರು ದಾಳಿ ನಡೆಸಿದ್ದರು. ಗುಂಡಿನ ದಾಳಿ ನಡೆಸದೆ, ದೊಡ್ಡದೊಡ್ಡ ಕೋಲು, ಬಡಿಗೆಗಳಿಂದ ಹೊಡೆದೇ ಯೋಧರನ್ನು ಹತ್ಯೆ ಮಾಡಿದ್ದರು. ಚೀನಾ ದಾಳಿಯಿಂದ ಮೃತಪಟ್ಟ ಸೈನಿಕರ ಸಂಖ್ಯೆಯನ್ನು ಭಾರತ ಬಹಿರಂಗಪಡಿಸಿದ್ದರೂ, ಚೀನಾ ತನ್ನ ಸೈನಿಕರು ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿರಲಿಲ್ಲ. ಗಲಾಟೆ ನಡೆದ ಒಂದು ವರ್ಷದ ನಂತರ ಚೀನಾ, ಗಲ್ವಾನ್​ ಸಂಘರ್ಷದಲ್ಲಿ ನಾವು 4 ಯೋಧರನ್ನು ಕಳೆದುಕೊಂಡಿದ್ದೇವೆ ಎಂದು ಹೇಳಿತ್ತು. ಆದರೆ ಇದೀಗ ಆಸ್ಟ್ರೇಲಿಯಾ ಪತ್ರಿಕೆ ಕ್ಲಾಕ್ಸೋನ್​ ಒಂದು ತನಿಖಾ ವರದಿ ಪ್ರಕಟಿಸಿದೆ. ಇದರಲ್ಲಿ, ಗಲ್ವಾನ್​ ಸಂಘರ್ಷದ ಸಮಯಲ್ಲಿ ಚೀನಾದ ಸುಮಾರು 38 ಸೈನಿಕರು ಸತ್ತಿದ್ದಾರೆ. ಇವರಲ್ಲಿ ಬಹುತೇಕರು ಗಲ್ವಾನ್​ ನದಿಯನ್ನು ಕತ್ತಲಲ್ಲಿ ದಾಟಲು ಹೋಗಿ, ಅದರಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ವರದಿ ಮಾಡಿದೆ.

ಇದನ್ನು ಓದಿ: ವೈರಲ್ ಆಗಿರುವ ಸೂಟ್​ಕೇಸ್ ಯುವತಿಯ ವಿಡಿಯೋಗೂ ನಮಗೂ ಸಂಬಂಧವಿಲ್ಲ; ಮಣಿಪಾಲ ವಿವಿ ಸ್ಪಷ್ಟನೆ