ಅರುಣಾಚಲ ಪ್ರದೇಶ ಗಡಿಯಲ್ಲಿ ಮತ್ತೆ ಭಾರತ-ಚೀನಾ ಸಂಘರ್ಷ: ಮೊದಲ ಬಾರಿಗೆ ಅಧಿಕೃತವಾಗಿ ದೃಢಪಡಿಸಿದ ಐಟಿಬಿಪಿ
ಅರುಣಾಚಲ ಪ್ರದೇಶದ ಗಡಿಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಮತ್ತೆ ಸಂಘರ್ಷ ನಡೆದಿದೆ ಎಂದು ಐಟಿಬಿಪಿ ಮಹಾನಿರ್ದೇಶಕರು ದೃಢಪಡಿಸಿದ್ದಾರೆ. ಚೀನಾದ ಸೇನೆಯು ವಾಸ್ತವಿಕ ನಿಯಂತ್ರಣ ರೇಖೆಯ ಬಳಿ ಟೆಂಟ್‌ಗಳನ್ನು ಹಾಕಿ ಪ್ರಚೋದನೆ ನೀಡಿದೆ. ಇದಕ್ಕೆ ಐಟಿಬಿಪಿಯ ಶೌರ್ಯ ಕಮಾಂಡೋಗಳು ತಕ್ಷಣ ಪ್ರತಿಕ್ರಿಯಿಸಿದ್ದು, ಚೀನಾದ ಉಪಟಳವನ್ನು ಹಿಮ್ಮೆಟ್ಟಿಸಿವೆ. ಭಾರತೀಯ ಸೇನೆ ಮತ್ತು ಐಟಿಬಿಪಿ ಜಂಟಿಯಾಗಿ ಗಡಿಯಲ್ಲಿ ಕಟ್ಟೆಚ್ಚರವಹಿಸಿವೆ.

ಇಟಾನಗರ, ಅಕ್ಟೋಬರ್ 23: ಅರುಣಾಚಲ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆ ಸಮೀಪ ಭಾರತ ಮತ್ತು ಚೀನಾ ಯೋಧರ ನಡುವೆ ಹಲವು ಸೂಕ್ಷ್ಮ ಸ್ಥಳಗಳಲ್ಲಿ ಮುಖಾಮುಖಿ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಪಡೆಯ ಮಹಾನಿರ್ದೇಶಕ ಶತ್ರುಜೀತ್ ಕಪೂರ್ ಈ ಬೆಳವಣಿಗೆಗಳನ್ನು ಅಧಿಕೃತವಾಗಿ ದೃಢಪಡಿಸಿದ್ದು, ಗಡಿಯಲ್ಲಿ ಕಟ್ಟೆಚ್ಚರವಹಿಸಲಾಗಿದೆ ಎಂದು ತಿಳಿಸಿದ್ದಾರೆ. ಈಶಾನ್ಯ ಗಡಿಯಲ್ಲಿ ಮುಂದುವರೆದಿರುವ ಈ ಉದ್ವಿಗ್ನತೆಯ ಕುರಿತು ಭಾರತೀಯ ಭದ್ರತಾ ಪಡೆದ ಉನ್ನತ ಅಧಿಕಾರಿಯೊಬ್ಬರು ನೀಡಿರುವ ಮೊದಲ ಸಾರ್ವಜನಿಕ ಹೇಳಿಕೆ ಇದಾಗಿದೆ. ಐಟಿಬಿಪಿ ಸಿಬ್ಬಂದಿಗೆ ಆಯೋಜಿಸಲಾಗಿದ್ದ ವಾರ್ಷಿಕ ಗೌರವ ಸಮಾರಂಭದಲ್ಲಿ ಮಾತನಾಡಿದ ಡಿಜಿ ಕಪೂರ್, ಕಳೆದ ಕೆಲವು ದಿನಗಳಿಂದ ಅರುಣಾಚಲ ಪ್ರದೇಶದ ಹಲವು ಗಡಿ ಪ್ರದೇಶಗಳಲ್ಲಿ ಎರಡೂ ಕಡೆಯ ಸೈನಿಕರ ನಡುವೆ ಮುಖಾಮುಖಿ ಪರಿಸ್ಥಿತಿ ನಿರ್ಮಾಣವಾಗಿದ್ದು, ಈಗಲೂ ಅದೇ ಸ್ಥಿತಿ ಮುಂದುವರೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಗಡಿಯಲ್ಲಿನ ಪರಿಸ್ಥಿತಿ ಮತ್ತು ಚೀನಾದ ಉಪಟಳ ಟೆಂಟ್‌ಗಳನ್ನು ಹಾಕಿದ ಚೀನಾ ಪಡೆಗಳು: ಜುಲೈ ತಿಂಗಳಿನಿಂದಲೇ ಅರುಣಾಚಲ ಗಡಿಯ ಹಲವು ಆಯಕಟ್ಟಿನ ಸ್ಥಳಗಳಲ್ಲಿ ಉದ್ವಿಗ್ನತೆ ಮಡುಗಟ್ಟಿದೆ. ಮುಖ್ಯವಾಗಿ ಆಸಾಫಿಲಾ ಸೆಕ್ಟರ್‌ನಲ್ಲಿ ಭಾರತದ ವಾಸ್ತವಿಕ ನಿಯಂತ್ರಣ ರೇಖೆಯಿಂದ ಕೇವಲ 6 ರಿಂದ 7 ಕಿಲೋಮೀಟರ್ ದೂರದಲ್ಲೇ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (PLA) ಸೇನೆಯು ಟೆಂಟ್‌ಗಳನ್ನು ನಿರ್ಮಿಸಿಕೊಂಡು ಠಿಕಾಣಿ ಹೂಡಿದೆ. ಚೀನಾದ ಈ ಪ್ರಚೋದನಕಾರಿ ನಡೆಯನ್ನು ತಡೆಯಲು ಐಟಿಬಿಪಿಯ ವಿಶೇಷ ತರಬೇತಿ ಪಡೆದ ‘ಶೌರ್ಯ ಕಮಾಂಡೋ’ ಪ್ಲಟೂನ್‌ಗಳು ತಕ್ಷಣವೇ ರಂಗಕ್ಕಿಳಿದಿದ್ದು, ಎದುರಾಳಿ ಸೈನಿಕರ ಮುನ್ನಡೆಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿವೆ. ಕಮಾಂಡೋಗಳ ಸಮಯೋಚಿತ ಧೈರ್ಯವನ್ನು ಡಿಜಿ ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಝೆಲೆನ್ಸ್ಕಿ ಹೊರಗಿಟ್ಟು ಉಕ್ರೇನ್ ಭವಿಷ್ಯ ನಿರ್ಧಾರ: ರಷ್ಯಾ, ಅಮೆರಿಕ, ಚೀನಾ ಮಹಾ ಶೃಂಗಸಭೆಗೆ ಮಾಸ್ಕೋ ಮುಂದು
ಹೈಟೆಕ್ ಸಿದ್ಧತೆ ಮತ್ತು ರಕ್ಷಣೆ: ನಮ್ಮ ದೇಶದ ‘ಅತಿ ದೊಡ್ಡ ಎದುರಾಳಿ’ಯಾದ ಚೀನಾದ ಬೆದರಿಕೆಗಳನ್ನು ಸಮರ್ಥವಾಗಿ ಎದುರಿಸಲು ಐಟಿಬಿಪಿ ಪಡೆಗಳು ನೂತನ ಡ್ರೋನ್ ಘಟಕಗಳನ್ನು ನಿಯೋಜಿಸಿವೆ. ಅತಿ ಎತ್ತರದ ಹಿಮಾವೃತ ಪ್ರದೇಶಗಳಲ್ಲಿ ಕಠಿಣ ತರಬೇತಿ ಹಾಗೂ ವೈಮಾನಿಕ ಮತ್ತು ಫಿರಂಗಿ ದಾಳಿಗಳಿಂದ ರಕ್ಷಣೆ ಪಡೆಯಲು ಗಡಿಯಲ್ಲಿ ಸುಧಾರಿತ ಭೂಗತ ಶೆಲ್ಟರ್‌ಗಳನ್ನು ನಿರ್ಮಿಸಲಾಗಿದೆ. ಸೆಪ್ಟೆಂಬರ್ ಮಧ್ಯಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾಗವಹಿಸಿದ್ದ ಬ್ರಿಕ್ಸ್ (BRICS) ಶೃಂಗಸಭೆಯ ಅವಧಿಯಲ್ಲೂ ಗಡಿಯಲ್ಲಿ ಈ ಸಂಘರ್ಷದ ವಾತಾವರಣ ಮುಂದುವರಿದಿತ್ತು ಎಂಬುದು ಗಮನಾರ್ಹ.
ಪೋಸ್ಟ್
Face off continues between Indian and Chinese troops in Arunachal Pradesh. ITBP DG says that Shaurya Commando units have has done a brilliant job. Chinese behaviour on border will only change with India’s economic rise. China uses border like stick and has no intention to resolve it in near future. https://t.co/HSLema3bfQ
— Kartikeya Sharma (@kartikeya_1975) October 23, 2026
1962ರ ಭಾರತ-ಚೀನಾ ಯುದ್ಧದ ಪ್ರಮುಖ ಕದನಗಳು ನಡೆದ ಅಕ್ಟೋಬರ್ ತಿಂಗಳ ಐತಿಹಾಸಿಕ ದಿನಗಳಂದೇ ಗಡಿಯಲ್ಲಿ ಮತ್ತೆ ಈ ರೀತಿಯ ಸಂಘರ್ಷಗಳು ವರದಿಯಾಗಿರುವುದು ಉಭಯ ದೇಶಗಳ ಗಡಿ ಭದ್ರತೆಯಲ್ಲಿ ಹೆಚ್ಚಿನ ಕಳವಳಕ್ಕೆ ಕಾರಣವಾಗಿದೆ. ಪೂರ್ವ ಲಡಾಖ್‌ನ ನಂತರ ಈಗ ಅರುಣಾಚಲ ಪ್ರದೇಶದ ಪೂರ್ವ ವಲಯದಲ್ಲೂ ಚೀನಾ ತನ್ನ ತಂಟೆಕೋರ ನಡವಳಿಕೆಯನ್ನು ಮುಂದುವರೆಸಿದ್ದು, ಭಾರತೀಯ ಸೇನೆ ಮತ್ತು ಐಟಿಬಿಪಿ ಜಂಟಿಯಾಗಿ ಇಡೀ ಈಶಾನ್ಯ ಗಡಿಯಲ್ಲಿ ಹೆಚ್ಚಿನ ಸೈನ್ಯವನ್ನು ಜಮಾವಣೆಗೊಳಿಸಿ ಬಿಗಿ ನಿಗಾ ವಹಿಸಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




