
ನವದೆಹಲಿ, ನವೆಂಬರ್ 17: ಅಂತಾರಾಷ್ಟ್ರೀಯ ಇಂಧನ ಸಾಗಣೆಯ ಅತ್ಯಂತ ನಿರ್ಣಾಯಕ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಒಮಾನ್‌ನ ಖಸಾಬ್ ಕರಾವಳಿ ಸಮೀಪ ಎಲ್‌ಪಿಜಿ ಸಾಗಿಸುತ್ತಿದ್ದ ಟ್ಯಾಂಕರ್ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಈ ದುರ್ಘಟನೆಯಲ್ಲಿ ಹಡಗಿನಲ್ಲಿದ್ದ 21 ಭಾರತೀಯ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಓರ್ವ ಭಾರತೀಯ ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.
ವಾಣಿಜ್ಯ ಹಡಗುಗಳು ಮತ್ತು ಮುಗ್ಧ ನಾವಿಕರ ಜೀವಕ್ಕೆ ಅಪಾಯ ತಂದೊಡ್ಡುವ ಇಂತಹ ದಾಳಿಗಳನ್ನು ಭಾರತವು ಸ್ಪಷ್ಟವಾಗಿ ಖಂಡಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಅಂತಾರಾಷ್ಟ್ರೀಯ ಸಾಗರ ಮಾರ್ಗಗಳಲ್ಲಿ ಹಡಗುಗಳ ಸುರಕ್ಷತೆ ಮತ್ತು ಮುಕ್ತ ಸಂಚಾರವನ್ನು ಖಚಿತಪಡಿಸುವುದು ಅತ್ಯಗತ್ಯ ಎಂದು ಭಾರತ ಪ್ರತಿಪಾದಿಸಿದೆ.
ಇದನ್ನೂ ಓದಿ: ಅಮೆರಿಕ ಷರತ್ತು ಒಪ್ಪಿದರೆ 7 ದಿನಗಳಲ್ಲಿ ಹಾರ್ಮುಜ್ ಜಲಸಂಧಿ ಮುಕ್ತ: ಇರಾನ್‌ನಿಂದ ಹೊಸ ಪ್ರಸ್ತಾವನೆ
21 ಭಾರತೀಯರ ರಕ್ಷಣೆ, ಓರ್ವನಿಗಾಗಿ ತೀವ್ರ ಶೋಧ:
ಹಾರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಟ್ಯಾಂಕರ್ ಹಡಗಿನ ಮೇಲೆ 2 ಬಾರಿ ದಾಳಿ ನಡೆದಿದ್ದು, ಹಡಗಿನಲ್ಲಿದ್ದ 22 ಭಾರತೀಯ ಸಿಬ್ಬಂದಿಯ ಪೈಕಿ 21 ಮಂದಿಯನ್ನು ತುರ್ತು ರಕ್ಷಣಾ ಕಾರ್ಯಾಚರಣೆಯ ಮೂಲಕ ಸುರಕ್ಷಿತವಾಗಿ ರಕ್ಷಿಸಲಾಗಿದೆ. ನಾಪತ್ತೆಯಾಗಿರುವ ಓರ್ವ ಭಾರತೀಯ ನಾವಿಕನ ಪತ್ತೆಗಾಗಿ ಸಮುದ್ರದಲ್ಲಿ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ರಕ್ಷಿಸಲ್ಪಟ್ಟ 21 ಭಾರತೀಯ ಸಿಬ್ಬಂದಿಗೆ ಅಗತ್ಯ ವೈದ್ಯಕೀಯ ನೆರವು, ವಸತಿ ಸೌಲಭ್ಯ ಹಾಗೂ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲು ಭಾರತೀಯ ರಾಯಭಾರ ಕಚೇರಿಯು ಸ್ಥಳೀಯ ಕಡಲ ಭದ್ರತಾ ಅಧಿಕಾರಿಗಳು ಮತ್ತು ಹಡಗು ನಿರ್ವಹಣಾ ಸಂಸ್ಥೆಯೊಂದಿಗೆ ನಿಕಟ ಸಂಪರ್ಕದಲ್ಲಿದೆ.
ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಮುಳುಗಿದ ಹಡಗು; ಸಮುದ್ರದಲ್ಲಿ ತೇಲಾಡಿದ ಐಫೋನ್‌ಗಳು, ಐಷಾರಾಮಿ ಪರ್ಫ್ಯೂಮ್ ಬಾಟಲಿಗಳು!
ವಿಶ್ವದ ಒಟ್ಟು ತೈಲ ಪೂರೈಕೆಯ ಸುಮಾರು ಶೇ. 20ರಷ್ಟು ತೈಲ ಮತ್ತು ಭಾರಿ ಪ್ರಮಾಣದ ಅನಿಲವು ಇದೇ ಹಾರ್ಮುಜ್ ಜಲಸಂಧಿಯ ಮೂಲಕ ಸಾಗಣೆಯಾಗುತ್ತದೆ. ಜಾಗತಿಕ ಇಂಧನ ಮಾರುಕಟ್ಟೆಯ ಜೀವನಾಡಿಯಾಗಿರುವ ಈ ಪ್ರದೇಶದಲ್ಲಿ ವಾಣಿಜ್ಯ ಹಡಗುಗಳ ಮೇಲೆ ನಡೆಯುತ್ತಿರುವ ದಾಳಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ