AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾರ್ಮುಜ್ ಜಲಸಂಧಿ ಮೂಲಕ ಸಾಗಲು ಭಾರತ ಸೇರಿ 4 ದೇಶಗಳ ಹಡಗುಗಳಿಗೆ ಇರಾನ್ ಅನುಮತಿ

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಹಾರ್ಮುಜ್ ಜಲಸಂಧಿಯಲ್ಲಿ ವಿಧಿಸಲಾಗಿದ್ದ ಸಂಚಾರ ನಿರ್ಬಂಧಗಳಿಂದ ಭಾರತ ತೀವ್ರ ಸಂಕಷ್ಟಕ್ಕೀಡಾಗಿತ್ತು. ಇದೀಗ ಭಾರತ, ಚೀನಾ, ಇರಾಕ್ ಮತ್ತು ಕತಾರ್ ದೇಶಗಳ ವಾಣಿಜ್ಯ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯ ಮಾರ್ಗದಲ್ಲಿ ಸಂಚರಿಸಲು ಇರಾನ್ ಸಂಪೂರ್ಣ ವಿನಾಯಿತಿ ನೀಡಿದೆ. ಈ ನಿರ್ಧಾರದಿಂದಾಗಿ ಭಾರತದಿಂದ ಅಗತ್ಯ ಔಷಧ ಸರಬರಾಜು ತಲುಪಲು ಬಹಳ ಉಪಯೋಗವಾಗಲಿದೆ. ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಸಮಿತಿಯ ಉಪಾಧ್ಯಕ್ಷ ಅಮೀರ್ ಹಯಾತ್-ಮೊಗದಮ್ ವಿದ್ಯಾರ್ಥಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಹಾರ್ಮುಜ್ ಜಲಸಂಧಿ ಮೂಲಕ ಸಾಗಲು ಭಾರತ ಸೇರಿ 4 ದೇಶಗಳ ಹಡಗುಗಳಿಗೆ ಇರಾನ್ ಅನುಮತಿ
ಹಾರ್ಮುಜ್ ಜಲಸಂಧಿImage Credit source: AP
ಸುಷ್ಮಾ ಚಕ್ರೆ
|

Updated on:Nov 04, 2026 | 6:43 PM

Share

ಟೆಹ್ರಾನ್, ನವೆಂಬರ್ 4: ಜಾಗತಿಕ ಇಂಧನ ಹಾಗೂ ಸರಕು ಸಾಗಣೆಯ ಅತ್ಯಂತ ಆಯಕಟ್ಟಿನ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ವಿಧಿಸಲಾಗಿದ್ದ ಸಂಚಾರ ನಿರ್ಬಂಧಗಳಿಂದ ಭಾರತ, ಚೀನಾ, ಇರಾಕ್ ಮತ್ತು ಖತಾರ್ ದೇಶಗಳ ವಾಣಿಜ್ಯ ನೌಕೆಗಳಿಗೆ ವಿನಾಯಿತಿ ನೀಡಿರುವುದಾಗಿ ಇರಾನ್ ಅಧಿಕೃತವಾಗಿ ಘೋಷಿಸಿದೆ. ಇದು ಭಾರತಕ್ಕೆ ದೊಡ್ಡ ರಿಲೀಫ್ ನೀಡಿದೆ. ಇರಾನ್‌ಗೆ ಭಾರತದಿಂದ ಅಗತ್ಯ ಔಷಧಗಳು ಹಾಗೂ ವೈದ್ಯಕೀಯ ಸಾಮಗ್ರಿಗಳ ಪೂರೈಕೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಭಾರತೀಯ ನೌಕೆಗಳಿಗೆ ಈ ವಿನಾಯಿತಿ ನೀಡಲಾಗಿದೆ.

ಪ್ರಸ್ತುತ ಜಾಗತಿಕ ಸಂಘರ್ಷದ ಸನ್ನಿವೇಶದಲ್ಲಿ ಚೀನಾದಿಂದ ಅಗತ್ಯ ರಾಜತಾಂತ್ರಿಕ ಹಾಗೂ ರಾಜಕೀಯ ಬೆಂಬಲವನ್ನು ಮುಂದುವರಿಸಿಕೊಂಡು ಹೋಗುವ ದೃಷ್ಟಿಯಿಂದ ಈ ವಿನಾಯಿತಿ ನೀಡಲಾಗಿದೆ. ಹಾಗೇ, ನೆರೆಹೊರೆಯ ಕತಾರ್ ಮತ್ತು ಇರಾಕ್ ದೇಶಗಳೊಂದಿಗಿನ ರಾಜತಾಂತ್ರಿಕ ಹಾಗೂ ಪ್ರಾದೇಶಿಕ ಸಂಬಂಧಗಳನ್ನು ಕಾಯ್ದುಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಮಧ್ಯಂತರ ಚುನಾವಣೆ ಬಳಿಕ ಇರಾನ್ ಮೇಲೆ ಮತ್ತೊಂದು ದಾಳಿ? ಟ್ರಂಪ್ ಹೇಳಿಕೆಯಿಂದ ಮಧ್ಯಪ್ರಾಚ್ಯದಲ್ಲಿ ಮತ್ತೆ ಆತಂಕ

4 ದೇಶಗಳ ನೌಕೆಗಳಿಗೆ ಮುಕ್ತ ಸಂಚಾರ:

“ನಾವು ಪ್ರಸ್ತುತ ಹಾರ್ಮುಜ್ ಜಲಸಂಧಿಯ ಸಂಚಾರ ನಿರ್ಬಂಧಗಳಿಂದ ಭಾರತ, ಚೀನಾ, ಇರಾಕ್ ಮತ್ತು ಖತಾರ್ ದೇಶಗಳಿಗೆ ವಿನಾಯಿತಿ ನೀಡಿದ್ದೇವೆ. ಈ ದೇಶಗಳ ಹಡಗುಗಳು ಮುಕ್ತವಾಗಿ ಸಂಚರಿಸುತ್ತಿದ್ದು, ಅಮೆರಿಕನ್ ಪಡೆಗಳು ಕೂಡ ಇವುಗಳನ್ನು ತಡೆಯುತ್ತಿಲ್ಲ” ಎಂದು ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಸಮಿತಿಯ ಉಪಾಧ್ಯಕ್ಷ  ಅಮೀರ್ ಹಯಾತ್-ಮೊಗದಮ್ ತಿಳಿಸಿದ್ದಾರೆ.

ಸಂಚಾರ ಶುಲ್ಕ ಸಂಗ್ರಹ:

ಹಾರ್ಮುಜ್ ಜಲಸಂಧಿಯನ್ನು ಬಳಸುವ ಭಾರತ ಹಾಗೂ ಚೀನಾದ ಹಡಗುಗಳಿಂದ ಇರಾನ್ ನಿಯಮಿತ ಸಂಚಾರ ಶುಲ್ಕವನ್ನು ಸಂಗ್ರಹಿಸುತ್ತಿದೆ. ಆದರೆ ಕತಾರ್ ದೇಶದ ಹಡಗುಗಳಿಗೆ ಯಾವುದೇ ಶುಲ್ಕವಿಲ್ಲದೆ ಸಂಚರಿಸಲು ಅವಕಾಶ ನೀಡಲಾಗಿದೆ.

ಇರಾನ್‌ನ ಇಸ್ಲಾಮಿಕ್ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ (IRGC) ನೌಕಾಪಡೆಯು ಜಲಸಂಧಿಯಲ್ಲಿ ಹಾದುಹೋಗುವ ಹಡಗುಗಳು ತಮ್ಮ ಗುರುತು, ಸಾಗಿಸುತ್ತಿರುವ ಸರಕು ಮತ್ತು ತಲುಪಬೇಕಾದ ಗಮ್ಯಸ್ಥಾನದ ವಿವರಗಳನ್ನು ನೀಡಿ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿದೆ ಎಂದು ಯುರೋಪಿಯನ್ ಯೂನಿಯನ್ ತಿಳಿಸಿದೆ.

ಇದನ್ನೂ ಓದಿ: ಇರಾನ್‌ನಲ್ಲಿ ಹಾರ್ಮುಜ್ ಜಲಸಂಧಿ ಬಳಿ ಸರಣಿ ಸ್ಫೋಟ: ಅಮೆರಿಕ-ಇರಾನ್ ಸಂಘರ್ಷ ಮತ್ತೆ ತೀವ್ರ

ಭಾರತಕ್ಕೆ ಹಾರ್ಮುಜ್ ಜಲಸಂಧಿ ಏಕೆ ಮುಖ್ಯ?:

ಭಾರತವು ತನ್ನ ಕಚ್ಚಾ ತೈಲ ಅಗತ್ಯದ ಶೇ. 90ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಸುಮಾರು ಶೇ. 30ರಷ್ಟು ಕಚ್ಚಾ ತೈಲವು ಹಾರ್ಮುಜ್ ಜಲಸಂಧಿಯ ಮಾರ್ಗವಾಗಿಯೇ ಸಾಗುತ್ತದೆ. ಈ ಹಿಂದೆ ಶೇ. 70ರಷ್ಟು ತೈಲ ಈ ಮಾರ್ಗದಿಂದಲೇ ಬರುತ್ತಿತ್ತು. ಆದರೆ, ಇತ್ತೀಚೆಗೆ ಭಾರತವು ರಷ್ಯಾ, ಅಮೆರಿಕ, ಪಶ್ಚಿಮ ಆಫ್ರಿಕಾ ಮತ್ತು ಯುಎಇದಿಂದ ತೈಲ ಆಮದು ಮಾಡಿಕೊಳ್ಳುವ ಮೂಲಕ ಪರ್ಯಾಯ ಮೂಲಗಳನ್ನು ಕಂಡುಕೊಂಡಿದೆ.

ಇರಾನ್ ಮತ್ತು ಒಮಾನ್ ನಡುವೆ ಇರುವ ಈ ಜಲಸಂಧಿಯು ಪರ್ಷಿಯನ್ ಕೊಲ್ಲಿಯನ್ನು ಅರೇಬಿಯನ್ ಸಮುದ್ರಕ್ಕೆ ಜೋಡಿಸುತ್ತದೆ. ಜಗತ್ತಿನ ಸಮುದ್ರ ಮಾರ್ಗದ ಒಟ್ಟು ತೈಲ ಪೂರೈಕೆಯ ಕಾಲು ಭಾಗ ಈ ಜಲಸಂಧಿಯ ಮೂಲಕವೇ ಸಾಗುತ್ತದೆ.

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಇರಾನ್ ಕೈಗೊಂಡಿರುವ ಈ ನಿರ್ಧಾರದಿಂದಾಗಿ ಭಾರತಕ್ಕೆ ಇಂಧನ ಸರಬರಾಜಿನಲ್ಲಿ ಎದುರಾಗಬಹುದಾಗಿದ್ದ ಭಾರಿ ಆತಂಕ ದೂರವಾದಂತಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 6:39 pm, Wed, 4 November 26

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More