ಹರ್ಷಿತ್ ರಾಣಾ ವಿರುದ್ಧ ಪಾಕ್ ಕೆಂಡಾಮಂಡಲ; ಮ್ಯಾಚ್ ರೆಫರಿಗೆ ದೂರು
ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ಭಾರತ A ಮತ್ತು ಪಾಕಿಸ್ತಾನ A ತಂಡಗಳ ನಡುವೆ ಕ್ರಿಕೆಟ್ ಮೈದಾನದಲ್ಲಿ ಮಾತಿನ ಚಕಮಕಿ ಮತ್ತು ಸ್ಲೆಡ್ಜಿಂಗ್ ನಡೆದಿತ್ತು. ಭಾರತದ ಹರ್ಷಿತ್ ರಾಣಾ ಸೇರಿದಂತೆ ಕೆಲವು ಆಟಗಾರರ ವಿರುದ್ಧ ಪಾಕಿಸ್ತಾನ ತಂಡ ಮ್ಯಾಚ್ ರೆಫರಿಗೆ ದೂರು ನೀಡಿದೆ. ಭಾರತ-ಪಾಕಿಸ್ತಾನ ಸಂಬಂಧ ಹದಗೆಟ್ಟಿರುವ ನಡುವೆ, ಈ ಘಟನೆ ಟೂರ್ನಿಯಲ್ಲಿ ಹೊಸ ವಿವಾದ ಸೃಷ್ಟಿಸಿದೆ. ಫೈನಲ್‌ನಲ್ಲಿ ಮತ್ತೆ ಮುಖಾಮುಖಿಯಾಗುವ ಸಾಧ್ಯತೆಯೂ ಇದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿರುವ ಬೆನ್ನಲ್ಲೇ, ಕ್ರಿಕೆಟ್ ಮೈದಾನದಲ್ಲೂ ಇದರ ಪರಿಣಾಮ ಕಾಣಿಸುತ್ತಿದೆ. 2025ರ ಏಷ್ಯಾಕಪ್ ಟೂರ್ನಿಯಲ್ಲಿ ಉಂಟಾಗಿದ್ದ ವಿವಾದದ ಬೆನ್ನಲ್ಲೇ, ಇದೀಗ 2026ರ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲೂ ಹೊಸ ವಿವಾದ ಸೃಷ್ಟಿಯಾಗಿದೆ. ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳ ನಡುವಿನ ಪಂದ್ಯದ ವೇಳೆ ಆಟಗಾರರು ಪರಸ್ಪರ ಮಾತಿನ ಚಕಮಕಿ ನಡೆಸಿ, ಆಕ್ರಮಣಕಾರಿ ವರ್ತನೆ ತೋರಿದ್ದರು. ಈ ಘಟನೆ ಇದೀಗ ಮತ್ತೊಂದು ಹಂತಕ್ಕೆ ತಲುಪಿದ್ದು, ಭಾರತ ಎ ತಂಡದ ವೇಗಿ ಹರ್ಷಿತ್ ರಾಣಾ ಸೇರಿದಂತೆ ಕೆಲವು ಆಟಗಾರರ ವಿರುದ್ಧ ಪಾಕಿಸ್ತಾನ ಎ ತಂಡ ದೂರು ನೀಡಿದೆ.
ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳು ಮುಖಾಮುಖಿಯಾಗಿದ್ದವು. ಪಾಕಿಸ್ತಾನ ತಂಡ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಹರ್ಷಿತ್ ರಾಣಾ ಪದೇಪದೆ ಎದುರಾಳಿ ಆಟಗಾರರನ್ನು ಕೆಣಕುವ ಮೂಲಕ ಸ್ಲೆಡ್ಜಿಂಗ್ ನಡೆಸಿದ್ದರು. ಇದಕ್ಕೆ ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳು ಕೂಡ ತಿರುಗೇಟು ನೀಡಿದ್ದರು. ಉಭಯ ತಂಡಗಳ ಆಟಗಾರರ ನಡುವೆ ಮಾತಿನ ಚಕಮಕಿ ಮುಂದುವರಿದಿತ್ತು. ಭಾರತ ಎ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗಲೂ ಇದೇ ರೀತಿಯ ವಾತಾವರಣ ಕಂಡುಬಂದಿತ್ತು. ಹರ್ಷಿತ್ ರಾಣಾ ಔಟಾದ ಬಳಿಕ ಪಾಕಿಸ್ತಾನದ ಹಲವು ಆಟಗಾರರು ಅವರನ್ನು ಕೆಣಕಲು ಮುಂದಾಗಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಅಂಪೈರ್ ಮಧ್ಯಪ್ರವೇಶಿಸಿ ಆಟಗಾರರನ್ನು ನಿಯಂತ್ರಿಸಬೇಕಾಯಿತು.
ಹರ್ಷಿತ್ ವಿರುದ್ಧ ಪಾಕಿಸ್ತಾನ ದೂರು
ಈ ಘಟನೆಯ ಬೆನ್ನಲ್ಲೇ ಪಾಕಿಸ್ತಾನ ಎ ತಂಡದ ಆಡಳಿತ ಮಂಡಳಿ ಮ್ಯಾಚ್ ರೆಫರಿಯನ್ನು ಸಂಪರ್ಕಿಸಿದೆ. ದೋಹಾದಲ್ಲಿ ನಡೆಯುತ್ತಿರುವ ಟೂರ್ನಿಯ ವೇಳೆ ಹರ್ಷಿತ್ ರಾಣಾ ವಿರುದ್ಧ ಮ್ಯಾಚ್ ರೆಫರಿ ನಯೀಮ್-ಉರ್-ರಶೀದ್ ಅವರಿಗೆ ದೂರು ನೀಡಲಾಗಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಹರ್ಷಿತ್ ರಾಣಾ ಮಾತ್ರವಲ್ಲದೆ, ಇತರ ಕೆಲವು ಆಟಗಾರರ ಹೆಸರನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಆದರೆ, ಈ ವಿವಾದದ ಬಗ್ಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಈವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಅಲ್ಲದೆ, ಆಟಗಾರರ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಂಡಿರುವ ಬಗ್ಗೆಯೂ ಮಾಹಿತಿ ಹೊರಬಿದ್ದಿಲ್ಲ.
ಮತ್ತೆ ಮುಖಾಮುಖಿಯಾಗುವ ಸಾಧ್ಯತೆ
ನವೆಂಬರ್ 22ರ ಭಾನುವಾರ ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳ ನಡುವೆ ಈ ಪಂದ್ಯ ನಡೆದಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಎ ತಂಡ 313 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಗುರಿ ಬೆನ್ನಟ್ಟಿದ ಭಾರತ ಎ ತಂಡದ ಪರ ನಾಯಕ ತಿಲಕ್ ವರ್ಮಾ ಶತಕ ಸಿಡಿಸಿದರೂ, ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತ ಎ ತಂಡ 265 ರನ್‌ಗಳಿಗೆ ಆಲೌಟ್ ಆಗಿ ಸೋಲು ಕಂಡಿತ್ತು.
ಆದರೆ ಟೂರ್ನಿಯಲ್ಲಿ ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳು ಮತ್ತೆ ಮುಖಾಮುಖಿಯಾಗುವ ಅವಕಾಶ ಇನ್ನೂ ಇದೆ. ಉಭಯ ತಂಡಗಳು ಫೈನಲ್‌ಗೆ ಅರ್ಹತೆ ಪಡೆದರೆ ಮತ್ತೊಮ್ಮೆ ಕಣಕ್ಕಿಳಿಯಲಿವೆ. ಈಗಾಗಲೇ ಮೈದಾನದಲ್ಲಿ ಕಾವೇರಿರುವ ವಾತಾವರಣದ ನಡುವೆ ಫೈನಲ್‌ನಲ್ಲಿ ಮತ್ತೆ ಎದುರಾದರೆ ಮತ್ತೊಂದು ರೋಚಕ ಹಣಾಹಣಿ ನಡೆಯುವ ಸಾಧ್ಯತೆಯಿದೆ.




